ADVERTISEMENT

ಮಾನಸಿಕ ಆರೋಗ್ಯ ವೃದ್ಧಿಸುವ ಸಂಗೀತ

​ಪ್ರಜಾವಾಣಿ ವಾರ್ತೆ
Published 21 ಮೇ 2017, 6:36 IST
Last Updated 21 ಮೇ 2017, 6:36 IST

ಯಾದಗಿರಿ: ‘ಸಂಗೀತದಿಂದ ಜನರು ದೂರಾಗುತ್ತಿದ್ದಾರೆ. ಇದರ ಪರಿಣಾಮವಾಗಿ ಮಾನಸಿಕ ಸಾಮರ್ಥ್ಯ ಕುಸಿಯುತ್ತದೆ. ಪರಿಣಾಮವಾಗಿ ಮಾನಸಿಕ ಸ್ವಾಸ್ಥ್ಯ ಕಳೆದುಕೊಳ್ಳುವಂತಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶರಣಪ್ಪ ಪಾಟೀಲ ಕ್ಯಾತನಾಳ ಕಳವಳ ವ್ಯಕ್ತಪಡಿಸಿದರು.

ನಗರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಸಂಗೀತ ಕಲೆಗೆ ಸರಿಸಾಟಿ ಯಾವುದೇ ಕಲೆ ಇಲ್ಲ. ತನ್ಮಯತೆ, ಶ್ರದ್ಧೆ, ಶ್ರಮದಿಂದ ಮಾತ್ರ ಈ ಕಲೆ ಮೈಗೂಡಲು ಸಾಧ್ಯ. ಸಂಗೀತ ಆಲಾಪನೆಯಿಂದ ಮಾನಸಿಕ ಆರೋಗ್ಯ ವೃದ್ಧಿಸುವುದಾಗಿ ವೈಜ್ಞಾನಿಕವಾಗಿ ದೃಢಪಟ್ಟಿದೆ. ಆದ್ದರಿಂದ ಸಂಗೀತದಿಂದ ಹೊರತಾದ ಬದುಕಿನಲ್ಲಿ ಬರೀ ಶೂನ್ಯ ಇರುತ್ತದೆ. ಸಂಗೀತದ ಜತೆಜತೆಗೆ ಹೆಜ್ಜೆಹಾಕಿದರೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

‘ಇಂದು ಜಗತ್ತು ಸಂಪೂರ್ಣ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಶರಣಾಗಿದೆ. ಹುಟ್ಟುವ ಮಕ್ಕಳು ಸಹ ತಂತ್ರಜ್ಞಾನದ ಜತೆಗೆ ಹುಟ್ಟುತ್ತಿವೆ. ಇದರ ಮಧ್ಯೆ ಮೊಬೈಲ್‌ ಕ್ರಾಂತಿ ಮಾನವ ಜೀವಿಯ ಅವಿಭಾಜ್ಯ ಅಂಗ ಅನ್ನುವಷ್ಟರ ಮಟ್ಟಿಗೆ ಆಗಿದೆ. ಈ ಎಲ್ಲಾ ತಾಂತ್ರಿಕ ಕ್ರಾಂತಿಯಿಂದ ಮಾನವನ ಆಯುಷ್ಯ ಕುಂಠಿತಗೊಂಡಿದೆ. ಆಯುಷ್ಯ, ಭವಿಷ್ಯ ಇಲ್ಲದ ತಾಂತ್ರಿಕಕ್ರಾಂತಿಯಿಂದ ವಿಶ್ವ ಸಂಕುಚಿತಗೊಂಡಿದೆಯೇ ವಿನಾ ನಮ್ಮ ಬೌದ್ಧಿಕಮಟ್ಟ ಬೆಳವಣಿಗೆಗೆ ಸಹಕಾರಿಯಾಗಿಲ್ಲ’ ಎಂದು ಹೇಳಿದರು.

ADVERTISEMENT

ಶಿವಶರಣೆ ಹೇಮರೆಡ್ಡಿ ಶಾಲಾ ಟ್ರಸ್ಟ್ ಅಧ್ಯಕ್ಷ ರುದ್ರಗೌಡ ಪಾಟೀಲ ಮಾತನಾಡಿ, ‘ಕಲಾವಿದರ ಪರಂಪರೆಗೆ ಪೆಟ್ಟು ಬಿದ್ದಿದೆ. ಬದಲಾದ ಕಾಲಮಾನ, ಹುಟ್ಟಿಕೊಂಡ ತಂತ್ರಜ್ಞಾನದಿಂದ ಮಾನವನ ರಸಮಯ ಕ್ಷಣಗಳೇ ಮಾಯವಾಗಿವೆ. ಪ್ರಗತಿಯ ವೇಗಕ್ಕೆ ತನ್ನನ್ನು ಒಡ್ಡಿಕೊಂಡು ಮನುಷ್ಯ ಓಡುತ್ತಿದ್ದಾನೆ. ಇದರಿಂದ ಆಯುಷ್ಯ ಕುಸಿದಿದೆ. ಹೃದಯ ತಾಂತ್ರಿಕತೆಯ ವೇಗಕ್ಕೆ ಸ್ಪಂದಿಸದೇ ಹೃದಯಾಘಾತ ಸಂಭವಿಸುತ್ತಿವೆ’ ಎಂದರು.

‘ಕೆಲವೇ ದಶಕಗಳ ಹಿಂದೆ ಭಾರತದಲ್ಲಿ ಮಾನವ ಆಯುಷ್ಯ 100 ವರ್ಷಗಳಷ್ಟಿತ್ತು. ಅದು ಈಗ 50ಕ್ಕೆ ಕುಸಿದಿದೆ. ಹಿಂದೆ ಉಳ್ಳವರು ಕೂಡ ದೇಹದಂಡಿಸುತ್ತಿದ್ದರು. ಪ್ರಕೃತಿಯೇ ದೇವರು ಎಂದು ಮರ–ಗಿಡ–ಬಳ್ಳಿಗಳನ್ನು ಪೂಜಿಸುತ್ತಿದ್ದರು. ಉದಯಕ್ಕೆ ಸೂರ್ಯನನ್ನು ದೇವರನ್ನೇ ಕಂಡಂತೆ ಕೈಜೋಡಿಸುತ್ತಿದ್ದರು. ವಾಯು, ಶಬ್ದ, ಜಲಮಾಲಿನ್ಯ ಇರಲಿಲ್ಲ. ಕೂಡಿಡುವ ಸಂಸ್ಕೃತಿ ಇಲ್ಲದ ನಿಸ್ವಾರ್ಥ ಎಲ್ಲರಲ್ಲೂ ಮನೆಮಾಡಿತ್ತು. ಈಗೆಲ್ಲವೂ ವಿರುದ್ಧ. ಬದುಕುವ 50 ವರ್ಷಗಳಿಗಾಗಿ ನಿರಂತರ ಬಡಿದಾಟ ನಡೆಯುತ್ತಿದೆ’ ಎಂದು ಮಾರ್ಮಿಕವಾಗಿ ನುಡಿದರು.

ಅಲ್ಲಮಪ್ರಭು ಅಕಾಡೆಮಿ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸೋಮಶೇಖರ ಮಣ್ಣೂರು, ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಘಟಕ ಅಧ್ಯಕ್ಷ ಸೈದಪ್ಪ ಕೆ.ಗುತ್ತೇದಾರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಭೀಮರೆಡ್ಡಿ ಪಾಟೀಲ ಮುದ್ನಾಳ, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಶರಣು ನಾಟೇಕಾರ, ವಾಲ್ಮೀಕಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ದೇವರಾಜ ನಾಯಕ್, ಸಂಗೀತ ಶಿಕ್ಷಕ ಚಂದ್ರಶೇಖರ ಗುರೂಜೀ ಹಾಜರಿದ್ದರು.

ಮಾಂತಯ್ಯಾ ಸ್ವಾಮಿ ಖಾನಾಪುರ, ಭಾಸ್ಕರ, ವಿರೂಪಣ್ಣ ನಾಯಕ್ ಅಬ್ಬೆತುಮಕೂರು, ಶರಣಪ್ಪ ಗುರಸಣಗಿ ಭಾಗವಹಿಸಿದ್ದರು. ವಿಥೇಶಕುಮಾರ ಸಂಗಡಿಗರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ಆರ್.ವಿಶ್ವನಾಥರೆಡ್ಡಿ ಅಬ್ಬೆತುಮಕೂರು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.