ADVERTISEMENT

ಮೀಸಲಾತಿ ಬದಲಾವಣೆ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಮೇ 2017, 6:42 IST
Last Updated 21 ಮೇ 2017, 6:42 IST
ಕೆಂಭಾವಿ ಹಿರೇಮಠದ ಚೆನ್ನಬಸವ ಶಿವಾಚಾರ್ಯರು ಹಾಗೂ ಕಂಠಿ ಮಠದ ಮಲ್ಲಿಕಾರ್ಜುನ ದೇವರ ನೇತೃತ್ವದಲ್ಲಿ ಉಪ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು
ಕೆಂಭಾವಿ ಹಿರೇಮಠದ ಚೆನ್ನಬಸವ ಶಿವಾಚಾರ್ಯರು ಹಾಗೂ ಕಂಠಿ ಮಠದ ಮಲ್ಲಿಕಾರ್ಜುನ ದೇವರ ನೇತೃತ್ವದಲ್ಲಿ ಉಪ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು   

ಕೆಂಭಾವಿ: ‘ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಸಾಮಾನ್ಯ ವರ್ಗಕ್ಕೆ ಇದ್ದ ಶೇ 85 ಮೀಸಲಾತಿ ಮುಂದುವರಿಸಬೇಕು’ ಎಂದು ಮುದನೂರ ಕಂಠಿ ಮಠದ ಮಲ್ಲಿಕಾರ್ಜುನ ದೇವರು ಆಗ್ರಹಿಸಿದರು.

ಪಟ್ಟಣದ ನಾಡಕಚೇರಿಯಲ್ಲಿ ಶನಿವಾರ ಉಪ ತಹಶೀಲ್ದಾರ್‌ ಆರ್.ಆನಂದ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ‘ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ನಡೆಯುತ್ತಿರುವ ರಾಜ್ಯದ 24 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ಸಾಮಾನ್ಯ ವರ್ಗಕ್ಕೆ ಸೇರಿದ 6ನೇ ತರಗತಿ ವಿದ್ಯಾರ್ಥಿಗಳ ಪ್ರವೇಶ ಮೀಸಲಾತಿ ತಿದ್ದುಪಡಿ ಕೈಬಿಡಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಈಗಾಗಲೇ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿಯ 545 ಶಾಲೆಗಳು ಇವೆ. 1994ರಲ್ಲಿ ಆಗಿನ ಜನತಾದಳ ಸರ್ಕಾರ ಸಾಮಾಜಿಕ ನ್ಯಾಯಕ್ಕನುಗುಣವಾಗಿ ಸಾಮಾನ್ಯ ವರ್ಗಕ್ಕೆ ಶೇ 85 ಮೀಸಲಾತಿ ನೀಡಿ 24 ವಸತಿ ಶಾಲೆಗಳನ್ನು ಪ್ರಾರಂಭಿಸಿತ್ತು.

ADVERTISEMENT

ಆದರೆ, ಇದೀಗ ಕಾಂಗ್ರೆಸ್ ಸರ್ಕಾರ ಸಾಮಾನ್ಯ ವರ್ಗದ ಮೀಸಲಾತಿಯನ್ನು ರದ್ದುಗೊಳಿಸಿ, ಸಾಮಾನ್ಯ ವರ್ಗದ ಶಾಲೆಗಳಲ್ಲಿ ಪರಿಶಿಷ್ಠ ಜಾತಿಗೆ ಶೇ 75, ಪರಿಶಿಷ್ಟ ಪಂಗಡಕ್ಕೆ ಶೇ 10 ಹಾಗೂ ಹಿಂದುಳಿದ ವರ್ಗಕ್ಕೆ ಶೇ 15 ಮೀಸಲಾತಿಯನ್ನು ನಿಗದಿಪಡಿಸುವುದರ ಮೂಲಕ ಸಾಮಾನ್ಯ ವರ್ಗದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲು ಹೊರಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇನ್ನೂ ಹೆಚ್ಚಿನ ಶಾಲೆಗಳನ್ನು ತೆರೆದು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಇಡಲಿ. ಇದಕ್ಕೆ ಅಭ್ಯಂತರವಿಲ್ಲ. ಆದರೆ, ಸಾಮಾನ್ಯ ವರ್ಗಕ್ಕೆ ಇದ್ದ ಮೀಸಲಾತಿಯನ್ನು ಕಿತ್ತುಕೊಂಡರೆ ಸಾಮಾನ್ಯ ವರ್ಗದಲ್ಲಿ ಹುಟ್ಟಿದ ಬಡ ಮಕ್ಕಳ ಭವಿಷ್ಯವೇನಾಗುತ್ತದೆ ಎಂಬ ಬಗ್ಗೆ ಚಿಂತಿಸಬೇಕು’ ಎಂದು ಹೇಳಿದರು.

ಕೆಂಭಾವಿ ಹಿರೇಮಠದ ಚೆನ್ನಬಸವ ಶಿವಾಚಾರ್ಯರು ಮಾತನಾಡಿ, ‘ಪ್ರಸ್ತುತ 2017-18 ಸಾಲಿನ 6ನೇ ತರಗತಿ ಪ್ರವೇಶ ಬಯಸಿ ಸಾಮಾನ್ಯ ವರ್ಗದ ಸಾವಿರಾರು ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಸರ್ಕಾರ ಏ.24ರಂದು ಮೀಸಲಾತಿ ರದ್ದುಪಡಿಸಿ ಸುತ್ತೋಲೆ ಹೊರಡಿಸಿದೆ. ಹಾಗಾದರೆ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಗತಿ ಏನು? ಹಿಂದೆ ಪರೀಕ್ಷೆ ನಡೆಸಿದ್ದಾದರೂ ಏಕೆ?’ ಎಂದು ಪ್ರಶ್ನಿಸಿದರು.

ಮಲ್ಲನಗೌಡ ಪಾಟೀಲ, ಚಂದ್ರಕಾಂತ ಧನ್ನೂರ, ಯಂಕನಗೌಡ ಪಾಟೀಲ, ಶಿವರೆಡ್ಡಿ ಯಡಹಳ್ಳಿ, ರಾಮನಗೌಡ ಯಾಳಗಿ, ಗಿರೀಶರೆಡ್ಡಿ, ಸಂತೋಷ ಸಜ್ಜನ್, ಚೆನ್ನಪ್ಪ ಹೂಗಾರ, ವೀರಣ್ಣ ಕಲಕೇರಿ, ಗುರುರಾಜ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.