ADVERTISEMENT

ಮೈಸೂರು ದಸರಾ ನೆನಪಿಸಿದ ಜಟ್ಟಿಗಳ ಕಾಳಗ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 6:45 IST
Last Updated 16 ಸೆಪ್ಟೆಂಬರ್ 2017, 6:45 IST
ಸುರಪುರದ ಇತಿಹಾಸ ಪ್ರಸಿದ್ಧ ವೇಣುಗೋಪಾಲಸ್ವಾಮಿ ಜಾತ್ರೆಯ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಕುಸ್ತಿ ಪಂದ್ಯಗಳು ಜನರ ಮನಸೆಳೆದವು
ಸುರಪುರದ ಇತಿಹಾಸ ಪ್ರಸಿದ್ಧ ವೇಣುಗೋಪಾಲಸ್ವಾಮಿ ಜಾತ್ರೆಯ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಕುಸ್ತಿ ಪಂದ್ಯಗಳು ಜನರ ಮನಸೆಳೆದವು   

ಸುರಪುರ:‘ಹಾ, ಹಿಡಿ, ಬಿಡಬೇಡ, ಚಿತ್ತ ಹಾಕು, ಶಬ್ಬಾಷ್, ಥೋ, ಪಟ್ಟು ಬಿಡಬೇಡ...., ಮುಗಿಲು ಮುಟ್ಟಿದ ಕರತಾಡನ, ಕೇಕೆ, ಸಿಳ್ಳೆ, ಹರ್ಷೋದ್ಘಾರ’....ಇವು ನಗರದಲ್ಲಿ ಶುಕ್ರವಾರ ವೇಣುಗೋಪಾಲಸ್ವಾಮಿ ಜಾತ್ರೆ ಅಂಗವಾಗಿ ಏರ್ಪಡಿಸಿದ್ದ ಕುಸ್ತಿ ಪಂದ್ಯ ವೀಕ್ಷಿಸಲು ಸೇರಿದ್ದ ಜನ ಬಾಯಿಂದ ಹೊರಟ ಉದ್ಘೋಷಗಳು.

ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಜನಸಾಗರವೇ ಹರಿದು ಬಂದಿತ್ತು. ಕುಸ್ತಿಯಲ್ಲಿ ಭಾಗವಹಿಸಲು ಖ್ಯಾತ ಜಟ್ಟಿಗಳು ಬಂದಿದ್ದರು. ಅಚ್ಚುಕಟ್ಟಾಗಿ ಹಾಕಿದ್ದ ಕುಸ್ತಿ ಅಂಗಣದಲ್ಲಿ ಜಟ್ಟಿಗಳ ಕಾಳಗ ಆಕರ್ಷಕವಾಗಿತ್ತು.

ರಾಜ್ಯವಲ್ಲದೆ ಹೊರ ರಾಜ್ಯಗಳಿಂದಲೂ ಜಟ್ಟಿಗಳು ಆಗಮಿಸಿದ್ದರು. ವಿಜಯಪುರ, ಬೆಳಗಾವಿ, ಚಡಚಣ, ಜಳಕಿ ಜತ್ತ, ಇಂಡಿ, ಸೊಲ್ಲಾಪುರ, ಹುಲಿಜಂತ್ತಿ, ಚಾಂದಕವಟೆ, ಕೊಲ್ಲಾಪುರ, ತಾಳಿಕೋಟ, ಇಲಕಲ್, ಜೇವರ್ಗಿ, ಬೆಳಗಾವಿ, ಶಹಾಪುರ ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳ 100ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದರು.

ADVERTISEMENT

₹500 ರಿಂದ ₹ 5,000 ವರೆಗಿನ ಬಹುಮಾನದ ಕುಸ್ತಿಗಳನ್ನು ಆಡಿಸಲಾಯಿತು. ಅಂತಿಮ ಪಂದ್ಯಕ್ಕೆ ಬೆಳ್ಳಿ ಕಡಗ ಬಹುಮಾನ ಇಡಲಾಗಿತ್ತು. ಗೆದ್ದ ಜಟ್ಟಿಗಳಿಗೆ ಸಂಸ್ಥಾನಿಕ ರಾಜಾ ಕೃಷ್ಣಪ್ಪನಾಯಕ ಗೌರವಿಸುತ್ತಿದ್ದರು. ಪ್ರೇಕ್ಷಕರ ಪ್ರೋತ್ಸಾಹ ಜಟ್ಟಿಗಳನ್ನು ಹುರಿದುಂಬಿಸುತ್ತಿತ್ತು.

ಜಟ್ಟಿಗಳು ಛಲದಂಕಮಲ್ಲರಂತೆ ಆಡಿದರು. ಬಿಗಿ ಸಡಿಸಲಿಸದೆ ಗೆಲ್ಲಬೇಕೆಂಬ ಛಲದಿಂದ ಎದುರಾಳಿಯನ್ನು ಚಿತ್ತಮಾಡಲು ಹರಸಾಹಸಪಟ್ಟರು. ತಮ್ಮ ಅನೇಕ ವರಸೆಗಳನ್ನು ತೋರಿ ನೆರೆದಿದ್ದ ಜನರ ಉತ್ಸಾಹ ಇಮ್ಮಡಿಗೊಳೀಸಿದರು. ಪ್ರೇಕ್ಷಕರು ತಮ್ಮ ಇಷ್ಟವಾದ ಜಟ್ಟಿಗಳನ್ನು ಪ್ರೋತ್ಸಾಹಿಸಿ ಅವರಲ್ಲಿ ಉತ್ಸಾಹ ಮೂಡಿಸಿದರು. ಕುಸ್ತಿ ಪಂದ್ಯಾವಳಿ ಮೈಸೂರು ದಸರಾವನ್ನು ನೆನಪಿಗೆ ತಂದಿತು.

ಸೋಲಾಪುರದ ಪೈಲವಾನ ಸೂರ್ಯ ಮತ್ತು ಶಹಾಪುರ ತಾಲ್ಲೂಕಿನ ಗೋಗಿಯ ಜಟ್ಟಿ ಹಣಮಂತರಾಯ ನಡುವೆ ನಡೆದ ಅಂತಿಮ ಹಣಾಹಣಿ ರೋಚಕತೆಯಿಂದ ಕೂಡಿತ್ತು. ಪ್ರೇಕ್ಷಕರು ಉಸಿರು ಬಿಗಿ ವೀಕ್ಷಿಸಿದರು. ಸಹಜವಾಗಿ ನಮ್ಮ ಭಾಗದವರೆಂದು ಹಣಮಂತರಾಯ ಅವರಿಗೆ ಪ್ರೇಕ್ಷಕರ ಪ್ರೋತ್ಸಾಹ ಹೆಚ್ಚಾಗಿತ್ತು.

ಹಣಮಂತರಾಯ ಜನರ ನಿರೀಕ್ಷೆ ಹುಸಿ ಮಾಡದೆ ಹಸಿದ ಹುಲಿಯಂತೆ ಕಾದಾಡಿದರು. ಹೊಸ ಹೊಸ ಪಟ್ಟು ಹಾಕಿ ಎದುರಾಳಿಯನ್ನು ದಂಗು ಬಡಿಯುವಂತೆ ಮಾಡಿದರು. ಇನ್ನೇನು ಹಣಮಂತರಾಯ ಗದ್ದೇಬಿಟ್ಟರು ಎನ್ನುವಂತೆ ಸೂರ್ಯ ಫಿನಿಕ್ಸ್‌ನಂತೆ ತಿರುಗೇಟು ನೀಡಿದರು.

ಇಬ್ಬರು ಜಟ್ಟಿಗಳು ಸಮಬಲದ ಹೋರಾಟ ನೀಡಿದರು. ಪರಸ್ಪರ ಸಾಕಷ್ಟು ವರಸೆಗಳನ್ನು ಪ್ರದರ್ಶನ ಮಾಡಿದರು. ಅರ್ಧ ಗಂಟೆಗೂ ಕಾದಾಡಿದ ನಂತರ ಕೊನೆಯಲ್ಲಿ ಸೂರ್ಯ ಅವರ ಕೈ ಮೇಲಾಯಿತು. ಅವರು ಹಾಕಿದ ಎರಡುಮೂರು ಅದ್ಭುತ ಪಟ್ಟುಗಳಿಗೆ ಹಣಮಂತರಾಯ ಅವರಲ್ಲಿ ಉತ್ತರ ಇರಲಿಲ್ಲ.

ಸೋಲೊಪ್ಪಿಕೊಂಡರೂ ಹಣಮಂತರಾಯ ಅನನ್ಯ ಸೆಣಸಾಟದಿಂದ ಜನರ ಮನಸೂರೆಗೊಂಡರು. ಸೂರ್ಯ ಅವರನ್ನು ಬಿಗಿದಪ್ಪಿ ಅಭಿನಂದಿಸಿ ಕ್ರೀಡಾಸ್ಪೂರ್ತಿ ಮೆರೆದರು. ಗೆದ್ದ ಸೂರ್ಯ ಅವರಿಗೆ ಬೆಳ್ಳಿ ಕಡಗ ತೊಡೆಸಿ, ಸನ್ಮಾನಿಸಿ ಗೌರವಿಸಲಾಯಿತು.

ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ, ರಾಜಾ ಲಕ್ಷ್ಮೀನಾರಾಯಣನಾಯಕ, ಮುಖಂಡರಾದ ರಾಜಾ ವೇಣುಗೋಪಾಲನಾಯಕ, ರಾಜಾ ರೂಪಕುಮಾರನಾಯಕ, ರಾಜಾ ಕೃಷ್ಣದೇವರಾಜ ರತ್ನಗಿರಿ, ವಾಸುದೇವನಾಯಕ ಸರ್‌ಹವಾಲ್ದಾರ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.