ADVERTISEMENT

ಯಾದಗಿರಿ ನಗರಸಭೆಯಿಂದ ನಿತ್ಯ ನೀರು ಪೂರೈಕೆ

ನೀರು ಜಾಗೃತಿ ಕಾರ್ಯಕ್ರಮದಲ್ಲಿ ಲಲಿತಾ ಅನಪೂರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 12:20 IST
Last Updated 19 ಮಾರ್ಚ್ 2018, 12:20 IST
ಯಾದಗಿರಿಯಲ್ಲಿ ಗುರುವಾರ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಮಾತನಾಡಿದರು
ಯಾದಗಿರಿಯಲ್ಲಿ ಗುರುವಾರ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಮಾತನಾಡಿದರು   

ಯಾದಗಿರಿ: ‘ಇಡೀ ಜಿಲ್ಲೆಯಲ್ಲಿ ಯಾದಗಿರಿ ನಗರಸಭೆ ಮಾತ್ರ ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದ’ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಹೇಳಿದರು.

ಇಲ್ಲಿನ 4ನೇ ವಾರ್ಡ್‌ನ  ಶಾಂತಿ ನಗರದಲ್ಲಿ ಗುರುವಾರ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಹಾಗೂ ಉತ್ತರ ಕರ್ನಾಟಕ ವಲಯ ಬಂಡವಾಳ ಹೂಡಿಕಾ ಸಂಸ್ಥೆ, ಗ್ರಾಮೀಣ ಮಹಿಳಾ ಅಭಿವೃದ್ಧಿ ಶಿಕ್ಷಣ ಸಂಸ್ಥೆ , ನಗರಸಭೆ ಆಶ್ರಯದಲ್ಲಿ ವಿವಿಧ ಮಹಿಳಾ ಸಂಘಗಳ ಸದಸ್ಯೆಯರಿಗೆ ‘ನಿರಂತರ ನೀರು ಸಂರಕ್ಷಣೆ ಮತ್ತು ವೈಯಕ್ತಿಕ ಶೌಚಾಲಯ ಮಹತ್ವ’ ಕುರಿತು ಏರ್ಪಡಿಸಲಾಗಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸುರಪುರ, ಶಹಾಪುರ ಸೇರಿದಂತೆ ಯಾವುದೇ ನಗರಸಭೆ ವ್ಯಾಪ್ತಿಯಲ್ಲಿ ನಿತ್ಯ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ. ಆದರೆ, ಯಾದಗಿರಿಯ ನಗರಸಭೆ ನಿತ್ಯ ನೀರು ಪೂರೈಸುತ್ತಿದೆ. ಇದಕ್ಕೆ ಸಿಬ್ಬಂದಿ ದಕ್ಷತೆ ಹಾಗೂ ಆಡಳಿತ ಮಂಡಳಿಯ ಶ್ರಮವೇ ಕಾರಣ’ ಎಂದು ಹೇಳಿದರು.

ADVERTISEMENT

‘ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವ ಮೂಲಕ ನಗರ ಸ್ವಚ್ಛತೆ ಹಾಗೂ ನೈರ್ಮಲ್ಯ ರಕ್ಷಣೆಗೆ ಜನರು ಮುಂದಾಗಬೇಕು. ಅದಕ್ಕಾಗಿ ಸರ್ಕಾರ ₹15 ಸಾವಿರ ಪ್ರೋತ್ಸಾಹಧನ ನೀಡುತ್ತಿದೆ. ಪ್ರೋತ್ಸಾಹಧನ ಬಳಸಿಕೊಂಡು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಎಲ್ಲೆಡೆ ಸ್ವಚ್ಛತೆ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು’ ಎಂದರು.

ಪೌರಾಯುಕ್ತ ಸಂಗಪ್ಪ ಉಪಾಸೆ ಮಾತನಾಡಿ, ‘ನೀರು ಅತ್ಯಮೂಲ್ಯ. ಹಿತ ಮಿತ ಬಳಕೆ ಜೊತೆಗೆ ನೀರು ಪೋಲಾಗದಂತೆ ಎಚ್ಚರವಹಿಸುವುದು ಕೂಡ ತುಂಬಾ ಮುಖ್ಯ. ವಿಶ್ವದ ಪ್ರಸಿದ್ಧ ನಗರ ಕೇಪ್‌ ಟೌನ್‌ನಂತಹ ನಗರಗಳಲ್ಲೂ ಹನಿ ನೀರಿಗಾಗಿ ಹಾಹಾಕಾರ ಎದ್ದಿದೆ. ಜಲ ಸಂಪನ್ಮೂಲ ಮನಬಂದಂತೆ ಬಳಕೆ ಮಾಡುವುದರಿಂದ ಅದರ ಕೊರತೆ ಅನುಭವಿಸಬೇಕಾಗಿ ಬರುತ್ತದೆ. ಆದ್ದರಿಂದ, ನೀರಿನ ಬಳಕೆ ಕುರಿತು ಅರಿವು ಪಡೆದುಕೊಳ್ಳಬೇಕು’ ಎಂದು ಹೇಳಿದರು.

‘ಇಲ್ಲಿನ ಭೀಮಾನದಿಗೆ ₹15 ಕೋಟಿ ವೆಚ್ಚದಲ್ಲಿ ನೂತನ ಜಾಕ್‌ವೆಲ್ ಅಳವಡಿಸಲಾಗಿದೆ. ಅಲ್ಲದೇ ಹೊಸದಾಗಿ ಎರಡು ಶುದ್ಧೀಕರಣ ಘಟಕಗಳನ್ನು ಅಳವಡಿಲಾಗುತ್ತಿದೆ. ಸಂಪೂರ್ಣ ನಗರಕ್ಕೆ ನೀರು ಪೂರೈಕೆಗೆ ನಗರಸಭೆ ಶ್ರಮಿಸುತ್ತಿದೆ’ ಎಂದು ಹೇಳಿದರು.

ಸಿಎಒ ಬಸಪ್ಪ ತಳವಡಿ ಪ್ರಾಸ್ತಾವಿಕ ಮಾತನಾಡಿದರು.ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ಚಟ್ಟರಕಿ,

ಸಂಗೀತಾ ಹಪ್ಪಳ, ಶಂಕ್ರಮ್ಮ, ರವೀಂದ್ರ ಪಾಟೀಲ ಇದ್ದರು. ಸಾಬಮ್ಮ ಪ್ರಾರ್ಥಿಸಿದರು. ದೇವಮ್ಮ ಅಬ್ಬೆತುಮಕೂರು ಸ್ವಾಗತಿಸಿದರು. ದೇವಿಂದ್ರಪ್ಪ ಚಿಂತಕುಂಟಾ ಕಾರ್ಯಕ್ರಮ ನಿರೂಪಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.