ADVERTISEMENT

ರೈತರ ಸಮಸ್ಯೆ: ಕುಮಾರಸ್ವಾಮಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 11:00 IST
Last Updated 29 ಜನವರಿ 2015, 11:00 IST

ಸುರಪುರ: ಹಿಂಗಾರು ಹಂಗಾಮಿಗೆ ತಾಲ್ಲೂಕಿನ ರೈತರಿಗೆ ಸಮರ್ಪಕ ನೀರು ಒದಗಿಸುವುದೂ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಫೆ. 2 ರಂದು ನಡೆಯುವ ವಿಧಾನಸಭೆ ಅಧಿವೇಶನ­ದಲ್ಲಿ ಗಮನಸೆಳೆಯುವಂತೆ ಆಗ್ರಹಿಸಿ ಸುರಪುರ ಜೆಡಿಎಸ್‌ ವತಿಯಿಂದ ಬುಧವಾರ ಜೇವರ್ಗಿಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪಕ್ಷದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್‌ ಹುಸೇನ್‌ ಮತ್ತು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ ಸುರಪುರ ತಾಲ್ಲೂಕಿನ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ನಾರಾಯಣಪುರ ಎಡದಂಡೆ ಕಾಲುವೆಗೆ 12 ದಿನಕ್ಕೊಮ್ಮೆ ನೀರು ಹರಿಸುವ ಅವೈಜ್ಞಾನಿಕ ಪದ್ಧತಿ ಅಳವಡಿಸಿ ರೈತರನ್ನು ಶೋಷಣೆ ಮಾಡಲಾಗುತ್ತಿದೆ. ಈ ಪದ್ಧತಿಯನ್ನು ರದ್ದುಪಡಿಸಿ ಮಾರ್ಚ್‌ 30ರ ವರೆಗೆ ಕಾಲುವೆಗೆ ನೀರು ಹರಿಸುವಂತೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.

ಅತಿವೃಷ್ಟಿಯಿಂದ ಹಾಳಾಗಿರುವ ರೈತರ ಬೆಳೆಗೆ ಸಮರ್ಪಕ ಪರಿಹಾರ ದೊರಕಿಲ್ಲ. ಖುಷ್ಕಿ ಪ್ರತಿ ಎಕರೆಗೆ ರೂ. 20 ರಿಂದ 25 ಸಾವಿರ, ನೀರಾವರಿಗೆ ರೂ. 30 ರಿಂದ 40 ಸಾವಿರ ಪರಿಹಾರ ಒದಗಿಸಲು ಯತ್ನಿಸಬೇಕು. ಅತಿವೃಷ್ಟಿ­ಯಿಂದ ಹಾಳಾಗಿರುವ ರಸ್ತೆ, ಸೇತುವೆ ಪುನರ್‌ನಿರ್ಮಿಸಬೇಕು. ಹಳ್ಳಕ್ಕೆ ತಡೆ­ಗೋಡೆ ನಿರ್ಮಿಸಿ ಬೆಳೆ ಹಾಳಾಗು­ವುದನ್ನು ತಡೆಯವಂತೆ ವಿನಂತಿಸಿದರು.

ನಗರ ಮತ್ತು ಗ್ರಾಮಗಳಿಗೆ ಸಮ­ರ್ಪಕ ಕುಡಿಯುವ ನೀರು ಪೂರೈಕೆ ಮಾಡ­ಬೇಕು. ನಗರಕ್ಕೆ ಮಂಜೂರಾ­ಗಿರುವ ನಿರಂತರ ನೀರು ಪೂರೈಕೆ ಯೋಜನೆ ಪ್ರಕ್ರಿಯೆ ಶೀಘ್ರದಲ್ಲಿ ಕೈಗೆತ್ತಿಕೊಳ್ಳಬೇಕು. ಸುರಪುರ ಬಸ್‌ ಘಟಕ್ಕೆ ಹೊಸ ಬಸ್‌ಗಳನ್ನು ಒದಗಿಸ­ಬೇಕು. ನಗರದ ಬಸ್‌ನಿಲ್ದಾಣವನ್ನು ಹೈಟೆಕ್‌ಕ್ಕೆ ನವೀಕರಿಸಬೇಕು ಎಂದು ಮನವಿ ಮಾಡಿದರು.

ಬೋನ್ಹಾಳ, ಗೋಡಿಹಾಳ ಏತ ನೀರಾವರಿ ಯೋಜನೆ ಸಂಪೂರ್ಣಗೊಳಿಸಬೇಕು. ಕಾಲುವೆ ನವೀಕರಣ ಕಾಮಗಾರಿ ರೈತರಿಗೆ ತೊಂದರೆಯಾಗದಂತೆ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವಂತೆ ಮತ್ತು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.