ADVERTISEMENT

ವೈಜ್ಞಾನಿಕ ಪರಿಹಾರ ವಿತರಿಸಲು ಒತ್ತಾಯ

ನಾಯ್ಕಲ್‌ಗೆ ಬಿಜೆಪಿ ಮುಖಂಡರ ಭೇಟಿ: ಬೆಳೆ ಹಾನಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 14:42 IST
Last Updated 19 ಏಪ್ರಿಲ್ 2015, 14:42 IST

ಯಾದಗಿರಿ:ಭೀಮಾ ನದಿ ತೀರದ ನಾಯ್ಕಲ್ ವ್ಯಾಪ್ತಿಯಲ್ಲಿ ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದ ಜಮೀನಿಗೆ ಬಿಜೆಪಿ ನಾಯಕರು ಶನಿವಾರ ಬೆಳಿಗ್ಗೆ ಭೇಟಿ ನೀಡಿ, ಪರಿಶೀಲಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಸಂಸದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಷಿ, ಮಾಜಿ ಸಚಿವ ರಾಜುಗೌಡ, ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ, ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಮುಂತಾದ ಮುಖಂಡರು, ನೇರವಾಗಿ ರೈತರ ಜಮೀನಿಗೆ ತೆರಳಿ, ಹಾನಿಯಾದ ಬೆಳೆಯನ್ನು ವೀಕ್ಷಿಸಿದರು.

ಲಕ್ಷಾಂತರ ಸಾಲ ಮಾಡಿ ಬೆಳೆದ ಭತ್ತದ ಬೆಳೆ ಅಕಾಲಿಕ ಮಳೆಗೆ ಹಾಳಾಗಿದೆ. ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕಚ್ಚಿದೆ ಎಂದು ಅನೇಕ ರೈತರು ಅಳಲು ತೋಡಿಕೊಂಡರು. ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ರೈತರಿಗೆ ಅನ್ಯಾಯವಾಗದಂತೆ ಕೃಷಿ ಇಲಾಖೆ ಬೆಳೆ ಹಾನಿಯ ಸರಿಯಾದ ಸಮೀಕ್ಷೆ ಮಾಡಿ, ಸರ್ಕಾರಕ್ಕೆ ವರದಿ ನೀಡಬೇಕು. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತಂದು, ರೈತರಿಗೆ ಬೆಳೆಹಾನಿ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ವೈಜ್ಞಾನಿಕ ರೀತಿಯಲ್ಲಿ ರೈತರಿಗೆ ಬೆಳೆ ಪರಿಹಾರ ನೀಡಲು ಒತ್ತಾಯಿಸುವುದಾಗಿ ತಿಳಿಸಿದರು.

ಉಪವಿಭಾಗಾಧಿಕಾರಿ ದುರ್ಗೇಶ ರುದ್ರಾಕ್ಷಿ, ಶಹಾಪುರ ತಹಶೀಲ್ದಾರ್‌್ ರಮೇಶ ಕೆ. ಹಾಲು, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ್, ಸಹಾಯಕ ಕೃಷಿ ನಿರ್ದೇಶಕ ಎಲ್.ಬಿ.ಸುರಪುರ, ಜಿಲ್ಲಾ ಪಂಚಾಯಿತಿ ಸದಸ್ಯ ದೇವರಾಜ ನಾಯಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶರಣಭೂಪಾಲರಡ್ಡಿ, ಉಮಾರೆಡ್ಡಿ ಪಾಟೀಲ್, ಸಿದ್ದಣಗೌಡ ಕಾಡಂನೋರ್, ಚಂದ್ರಶೇಖರಗೌಡ ಮಾಗನೂರ, ರೈತರಾದ ಸಿದ್ದಲಿಂಗರೆಡ್ಡಿ ಹಳಮನಿ, ಮಲ್ಲಿಕಾರ್ಜುನ ಅನಸುಗೂರ, ಮಲ್ಲಣ್ಣಗೌಡ ದೇಸಾಯಿ, ಚಂದ್ರಶೇಖರರೆಡ್ಡಿ ಮೊಕಾಶಿ, ವೆಂಕಟರೆಡ್ಡಿ ಗೋಸ್ವಾಮಿ, ಮಲ್ಲಣ್ಣಗೌಡ ಗೋಸ್ವಾಮಿ, ಬಸವರಾಜ್ ವಿಶ್ವಕರ್ಮ, ಗೋವಿಂದಪ್ಪ ಕೊಂಚೆಟ್ಟಿ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಜೇಶ್ವರಿ ನಾಡಗೌಡ, ಕಂದಾಯ ನಿರೀಕ್ಷಕ ವಿಜಯಸಿಂಗ್, ಗ್ರಾಮ ಲೆಕ್ಕಿಗ ದೇವರಾಜ್ ಪಾಟೀಲ್ ಇದ್ದರು.

*
ಮುಖ್ಯಾಂಶಗಳು
* ಹೊಲಗಳಿಗೆ ಭೇಟಿ ನೀಡಿದ ಬಿಜೆಪಿ ನಾಯಕರ ದಂಡು
* ಅಳಲು ತೋಡಿಕೊಂಡ ರೈತರಿಗೆ ನೆರವಿನ ಭರವಸೆ
* ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಬಿಜೆಪಿ ಆಕ್ರೋಶ
*
ರಾಜ್ಯದಲ್ಲಿ ಮಳೆಯಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ರೈತರಿಗೆ ನೆರವಿನ ಅವಶ್ಯಕತೆ ಇದೆ. ಸರ್ಕಾರ ಕೂಡಲೇ ರೈತರಿಗೆ ಸಹಾಯ ಹಸ್ತ ನೀಡಬೇಕು.
ಜಗದೀಶ ಶೆಟ್ಟರ್‌, ವಿಧಾನಸಭೆ ವಿರೋಧಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT