ADVERTISEMENT

ಶಿಥಿಲಾವಸ್ಥೆಯಲ್ಲಿ ಹಗರಟಗಿ ಪಂಚಾಯಿತಿ ಕಟ್ಟಡ

​ಪ್ರಜಾವಾಣಿ ವಾರ್ತೆ
Published 20 ಮೇ 2017, 6:01 IST
Last Updated 20 ಮೇ 2017, 6:01 IST

ಹುಣಸಗಿ: ಯಾದಗಿರಿ ಜಿಲ್ಲೆಯ ಗಡಿ ಭಾಗದ ಹಗರಟಗಿಯ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಹೊಸ ಕಟ್ಟಡ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಹಗರಟಗಿ ಗ್ರಾಮವು ನೂರೊಂದು ಬಾವಿ ಮತ್ತು ಅಷ್ಟೇ ಪ್ರಮಾಣದ ದೇಗುಲಗಳನ್ನು ಹೊಂದಿ ತನ್ನದೇ ಆದ ಪುರಾತನ ಇತಿಹಾಸ ಹೊಂದಿದೆ. ಐದು ದಶಕಗಳ  ಹಿಂದೆ ಪಂಚಾಯಿತಿ ಕಟ್ಟಡವನ್ನು ನಿರ್ಮಿಸಲಾಗಿದ್ದು, ಮಳೆ ಬಂದರೆ ಎಲ್ಲೆಂದರಲ್ಲಿ ಸೋರುತ್ತದೆ’ ಎಂದು ಪಂಚಾಯಿತಿ ಸದಸ್ಯ ಹನುಮಂತ ಚಲವಾದಿ ಹೇಳುತ್ತಾರೆ.

ಈ ಗ್ರಾಮ ಪಂಚಾಯಿತಿಯು ಹೊರಹಟ್ಟಿ, ಬೂದಿಹಾಳ, ಕರೇಕಲ್ಲ ಸೇರಿದಂತೆ ನಾಲ್ಕು ಗ್ರಾಮಗಳ ವ್ಯಾಪ್ತಿಯ 19 ಸದಸ್ಯರನ್ನು ಹೊಂದಿದೆ. ಆದರೆ, ಕಟ್ಟಡ ಶಿಥಿಲದಿಂದ ಸಭೆ,  ಸಮಾರಂಭಗಳನ್ನು ನಡೆಸಲು ಸಹ ತೊಂದರೆ ಆಗಿದೆ.

ADVERTISEMENT

ಆಗಾಗ ಕಟ್ಟಡದ ಚಾವಣಿ ಸಿಮೆಂಟ್ ಕಾಂಕ್ರಿಟ್ ಕಿತ್ತು ಬೀಳುತ್ತದೆ. ಅಲ್ಲದೇ ಕಿಟಕಿ ಬಾಗಿಲುಗಳು ಸಹ ಕಿತ್ತು ಹೋಗಿವೆ. ಅಧ್ಯಕ್ಷರ ಕೊಠಡಿಯು ಕೂಡಾ ಇದಕ್ಕೆ ಹೊರತಾಗಿಲ್ಲ. ಇದರಿಂದ ಆ ಕೋಣೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದು, ಇನ್ನೊಂದು ಕೋಣೆಯಲ್ಲಿ ಮಾತ್ರ ಕಚೇರಿಯ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.

‘ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ತೆರವುಗೋಳಿಸಬೇಕು ಅಥವಾ ಇರುವ ಕಟ್ಟಡವನ್ನೇ ನವೀಕರಿಸಿ ಸುಗಮ ಕಾರ್ಯ ಚಟುವಟಿಕೆಗೆ ಅನುಕೂಲ ಮೂಡಿಕೊಡಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕಿದೆ’ ಎಂದು ಶಂಕರಗೌಡ ಜೇವರ್ಗಿ, ರಮೇಶ ಪೀರಾಪುರ ಹಾಗೂ ಪಂಚಾಯಿತಿ ಸದಸ್ಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.