ADVERTISEMENT

‘ಸಾಲಮನ್ನಾ ಮಾಡಿ, ರೈತರ ಜೀವ ಉಳಿಸಿ’

ಕಕ್ಕೇರಾ ತಾಲ್ಲೂಕು ಕೇಂದ್ರ ಘೋಷಣೆಗಾಗಿ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 25 ಮೇ 2017, 7:00 IST
Last Updated 25 ಮೇ 2017, 7:00 IST

ಕಕ್ಕೇರಾ: ‘ರೈತರು ಯಾವತ್ತೂ ಸಾಲಗಾರರಾಗಿ ಬದುಕುವುದಿಲ್ಲ. ಬದಲಾಗಿ ಸರ್ಕಾರವೇ ರೈತರಿಗೆ ಬಾಕಿದಾರ ಆಗಿದೆ. ಕಾರಣ ಸರ್ಕಾರ ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ವಿಭಾಗಿಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಆಗ್ರಹಿಸಿದರು.

ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಕಕ್ಕೇರಾ ತಾಲ್ಲೂಕು ಘೋಷಣೆ ಹಾಗೂ ರೈತರ ಸಾಲ ಮನ್ನಾ ಮಾಡಲು ಆಗ್ರಹಿಸಿ ಬುಧವಾರ ನಡೆಸಿದ ಧರಣಿಯಲ್ಲಿ ಅವರು ಮಾತನಾಡಿದರು.

‘ರಾಜ್ಯವು ಹಿಂದೆಂದೂ ಕಾಣದ ರೀತಿಯಲ್ಲಿ ಭೀಕರ ಬರಗಾಲ ಎದುರಿಸುತ್ತಿದೆ. ಇದನ್ನು ಕಂಡರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಅನಾವೃಷ್ಟಿಯಿಂದ ಹಳ್ಳ–ಕೊಳ್ಳ, ನದಿಗಳ ಒಡಲು ಬರಿದಾಗಿದ್ದು, ಕುಡಿಯುವ ನೀರಿಗಾಗಿ ಜನ–ಜಾನುವಾರು ಪರದಾಡುವಂತಾಗಿದೆ. ಅಧಿಕಾರಿಗಳು ಮಾತ್ರ ಸಂಬಂಧವಿಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಆದಯ್ಯ ಗುರಿಕಾರ ಮಾತನಾಡಿ, ‘ಕಕ್ಕೇರಾ ಪಟ್ಟಣವನ್ನು ತಾಲ್ಲೂಕು ಕೇಂದ್ರ ಮಾಡುವುದಕ್ಕೆ ಎಲ್ಲಾ ಅರ್ಹತೆ ಮತ್ತು ಎಲ್ಲಾ ಮಾನದಂಡಗಳನ್ನು ಹೊಂದಿದೆ. ಕೂಡಲೇ ಸಂಬಂಧಪಟ್ಟ ತಾಲ್ಲೂಕು ರಚನೆಗೆ ನೇಮಕವಾಗಿದ್ದ ಆಗಿನ ಸಮೀಕ್ಷಾ ತಂಡಗಳ ವರದಿಗಳನ್ನು ಮರುಪರಿಶೀಲಿಸಿ ಕಕ್ಕೇರಾ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಕೊಡಬೇಕು’ ಎಂದು ಒತ್ತಾಯಿಸಿದರು.

‘ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಒಗ್ಗಟ್ಟಿನ ಹೋರಾಟ ಅಗತ್ಯವಾಗಿದೆ’ ಎಂದು ಹೇಳಿದರು. ಮುಂಗಾರು ಬಿತ್ತನೆಗಾಗಿ ಕೃಷಿ ಇಲಾಖೆಯು ರೈತರಿಗೆ ಬೀಜ, ಗೊಬ್ಬರ, ಕೀಟನಾಶಕ ಒದಗಿಸಬೇಕು.

ಕಕ್ಕೇರಾ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಾಣ, ನಿರ್ಮಾಣ ಹಂತದಲ್ಲಿರುವ ಶೌಚಾಲಯಗಳನ್ನು ಶೀಘ್ರವಾಗಿ ಕಾರ್ಯಗತಗೊಳಿಸಬೇಕು ಇನ್ನಿತರ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಗ್ರೇಡ್ 2 ತಹಶೀಲ್ದಾರ್‌ ಸುಫಿಯಾ ಸುಲ್ತಾನಾ ಅವರ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದರು.


ರಾಜ್ಯ ರೈತ ಸಂಘ (ಹಸಿರು ಸೇನೆ)ಯ ಅಯ್ಯಣ್ಣ ಹಾಲಭಾವಿ, ಬಸವರಾಜಪ್ಪಗೌಡ, ಚಂದ್ರಶೇಖರ ವಜ್ಜಲ್, ಚಂದ್ರಕಾಂತ ಸಕ್ರಿ, ಗೋವಿಂದ ಪತ್ತಾರ ಸೇರಿದಂತೆ ರೈತ ಮುಖಂಡರು ಹಾಗೂ ಮಹರ್ಷಿ ವಾಲ್ಮೀಕಿ ನಾಯಕ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.