ADVERTISEMENT

ಸುರಕ್ಷಿತ ಹೆರಿಗೆ: ಮರಣ ಪ್ರಮಾಣ ನಿಯಂತ್ರಣ

ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಸರಸ್ವತಿ ಸುಭಾಶ್ಚಂದ್ರ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 6:24 IST
Last Updated 18 ಫೆಬ್ರುವರಿ 2017, 6:24 IST
ಯಾದಗಿರಿ: ‘ಸುರಕ್ಷಿತ ಹೆರಿಗೆಯಿಂದ ತಾಯಿ, ಮಗುವಿನ ಮರಣ ಪ್ರಮಾಣವನ್ನು ನಿಯಂತ್ರಿಸಬಹುದು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸರಸ್ವತಿ ಸುಭಾಶ್ಚಂದ್ರ ಹೇಳಿದರು.
 
ಸಮೀಪದ ಕಂದಕೂರು ಗ್ರಾಮದ ಪ್ರೌಢಶಾಲೆಯಲ್ಲಿ ಜಿಲ್ಲಾ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಣಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ವಿಶೇಷ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
‘ತಾಯಿ ಮತ್ತು ಮಗುವಿನ ರಕ್ಷಣೆಗಾಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಬೇಕು. ಸರ್ಕಾರಿ ಸಮುದಾಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಗುರುವಾರ ಮತ್ತು ಶನಿವಾರ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಹದಿಹರೆಯದವರ ಸಮಸ್ಯೆ ಬಗ್ಗೆ ಸ್ನೇಹಾ ಕ್ಲಿನಿಕ್‌ನಲ್ಲಿ ಆಪ್ತ ಸಮಾಲೋಚನೆ ಏರ್ಪಡಿಸಲಾಗುತ್ತಿದೆ. ಎಲ್ಲರೂ ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು. 
 
ತಾಲ್ಲೂಕು ಪಂಚಾಯಿತಿ ಸದಸ್ಯ ಈಶ್ವರ ಕೆ.ನಾಯಕ್ ಮಾತನಾಡಿ,‘ಅಸುರಕ್ಷಿತ ಹೆರಿಗೆ ಪದ್ಧತಿಯಿಂದ ತಾಯಿ–ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೇ ಅನೇಕ ಸೋಂಕಿಗೆ ತಾಯಿ–ಮಗು ತುತ್ತಾಗುತ್ತಿದ್ದಾರೆ. ಇದನ್ನು ತಪ್ಪಿಸಬೇಕು ಎಂದರೆ ಹೆರಿಗೆಯನ್ನು ಮನೆಗಳಲ್ಲಿಯೇ ಮಾಡಿಸುವುದನ್ನು ತಪ್ಪಿಸಬೇಕು’ ಎಂದು ಹೇಳಿದರು.
 
ಗುರುಮಿಠಕಲ್ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವನಜಾಕ್ಷಿ ಮಾತನಾಡಿ,ಇಲಾಖೆ ವತಿಯಿಂದ ತಾಯಿ ಮತ್ತು ಮಗುವಿಗೆ  ಹಾಗೂ ಹದಿಯಹರೆಯದವರಿಗೆ ಜಾರಿಯಲ್ಲಿರುವ  ಕಾರ್ಯಕ್ರಮಗಳ ಕುರಿತು ವಿವರಿಸಿದರು. ವೈದ್ಯಾಧಿಕಾರಿ ಡಾ.ನಾಗಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ರೆಡ್ಡಿ ಶಿವಣ್ಣನವರ್ ಇತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.