ADVERTISEMENT

ಹತ್ತಿ ಕಾಯಿಕೊರಕಕ್ಕೆ ನಿರ್ವಹಣೆ ಮದ್ದು

ವಿಜ್ಞಾನಿಗಳ ಸಮಾಲೋಚನಾ ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 7:11 IST
Last Updated 6 ಡಿಸೆಂಬರ್ 2017, 7:11 IST
ಹತ್ತಿ ಕಾಯಿಕೊರಕಕ್ಕೆ ನಿರ್ವಹಣೆ ಮದ್ದು
ಹತ್ತಿ ಕಾಯಿಕೊರಕಕ್ಕೆ ನಿರ್ವಹಣೆ ಮದ್ದು   

ಯಾದಗಿರಿ: ‘ಹತ್ತಿಗೆ ಗುಲಾಬಿ ಕಾಯಿಕೊರಕ ಬಾಧೆ ಕಾಣಿಸಿಕೊಂಡಿದ್ದು, ರೋಗ ನಿರ್ಮೂಲನೆಗೆ ಕೀಟನಾಶಕ ಬಳಕೆಗಿಂತ ಅದರ ನಿರ್ವಹಣೆಯೇ ಸೂಕ್ತ ಮದ್ದಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಸಲಹೆ ನೀಡಿದರು.

ಜಿಲ್ಲಾಡಳಿತ ಭವನದ ಕೃಷಿ ಕಚೇರಿಯಲ್ಲಿ ಸೋಮವಾರ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ‘ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ಬಾಧೆ’ ಕುರಿತು ಕೃಷಿ ವಿಜ್ಞಾನಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

‘ಈ ಸಲ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಪ್ರತಿ ವರ್ಷಕ್ಕಿಂತ ಶೇ 20ರಷ್ಟು ಹೆಚ್ಚುವರಿ ಹತ್ತಿ ಬಿತ್ತನೆಯಾಗಿತ್ತು. ಆದರೆ, ಅಕಾಲಿಕ ಮಳೆ ಕಾರಣ ಹತ್ತಿಗೆ ಗುಲಾಬಿ ಕಾಯಿಕೊರಕ ಬಾಧೆ ಕಾಣಿಸಿಕೊಂಡಿತು. ಬೆಳೆಗೆ ಈ ಕೀಟಬಾಧೆ ಕಾಣಿಸಿಕೊಂಡರೆ ಹತ್ತಿ ಸಮಯಕ್ಕೆ ಹಾಗೂ ಸಮರ್ಪಕವಾಗಿ ಹೂ ಅರಳುವುದಿಲ್ಲ. ಜಿಗುಟಿನಂತಹ ಗಂಟುಕಟ್ಟಿಕೊಂಡು ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ’ ಎಂದು ಹೇಳಿದರು.

ADVERTISEMENT

‘ಗುಲಾಬಿ ಕಾಯಿಕೊರಕ ನಿವಾರಣೆಗೆ ರೈತರು ಹಲವು ಕೀಟನಾಶಕಗಳನ್ನು ಸಿಂಪರಣೆ ಮಾಡುತ್ತಾ ಬಂದಿದ್ದಾರೆ. ಆದರೆ, ಸಂಪೂರ್ಣವಾಗಿ ನಿರ್ಮೂ ಲನೆ ಆಗಿಲ್ಲ. ಆದರೆ, ಗುಲಾಬಿ ಕಾಯಿ ಕೊರಕದ ಸಂತಾನವನ್ನೇ ನಾಶ ಮಾಡು ವಂತಹ ನಿರ್ವಹಣೆಯೇ ಇದಕ್ಕೆ ಮದ್ದು ಎಂಬುದು ಸಂಶೋಧನೆಯಿಂದ ದೃಢ ಪಟ್ಟಿದೆ. ಹತ್ತಿ ಬೆಳೆ ಕಟಾವು ಆದ ನಂತರ ಹತ್ತಿಗಿಡಗಳನ್ನು ಹೊಲದಲ್ಲಿಯೇ ಬಿಡಬಾರದು. ಅಲ್ಲದೇ ಹತ್ತಿಕಡ್ಡಿಗಳನ್ನು ಸಂಗ್ರಹಿಸಬಾರದು. ಅವುಗಳೊಟ್ಟಿಗೆ ಇರುವ ಗುಲಾಬಿ ಕಾಯಿಕೊರಕ ಕೀಟ ಗಳು ಮುಂದಿನ ಬಿತ್ತನೆ ಸಂದರ್ಭ ದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿಸುತ್ತದೆ. ಆದ್ದರಿಂದ ಕಟಾವು ನಂತರ ಹತ್ತಿಕಡ್ಡಿಯನ್ನು ಬೇರು ಸಹಿತ ನಾಶಪಡಿಸಬೇಕು’ ಎಂದು ವಿವರಿಸಿದರು.

‘ಬಿತ್ತನೆ ಪ್ರದೇಶ ವಿಸ್ತರಣೆಗೊಂಡಿರು ವುದು ಹಾಗೂ ಗುಲಾಬಿ ಕೀಟಬಾಧೆಯಿಂದ ಹತ್ತಿ ಗುಣಮಟ್ಟ ಕಳೆದುಕೊಂಡಿರುವುದರಿಂದ ಪ್ರಸ್ತುತ ಮಾರುಕಟ್ಟೆಯಲ್ಲಿ ಹತ್ತಿ ದರ ಕುಸಿದಿದೆ. ಗುಣಮಟ್ಟದ ಹತ್ತಿ ಬೆಳೆಯಲು ರೈತರು ಕಾಯಿಕೊರಕ ಕೀಟ ನಿರ್ವಹಣೆಯನ್ನು ಕಡ್ಡಾಯವಾಗಿ ಅನುಸರಿಸಬೇಕು. ಕಾಲಮಾನಕ್ಕೆ ತಕ್ಕಂತೆ ಬಿತ್ತನೆ ಆಗಬೇಕು. ಬಿತ್ತನೆ ಮುಂದೂಡುವುದರಿಂದಲೂ ಕೀಟ, ರೋಗಬಾಧೆಗೆ ಸಿಲುಕುತ್ತದೆ. ಬಿ.ಟಿ ಹತ್ತಿಯ ಜತೆಗೆ ಎಕರೆಗೆ ಐದು ಸಾಲಿನಂತೆ ಆಶ್ರಯ ಬೆಳೆಯಾಗಿ ಇತರೆ ಹತ್ತಿ ತಳಿಯನ್ನು ಬೆಳೆಯಬೇಕು’ ಎಂದು ಸಲಹೆ ನೀಡಿದರು.

ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮಲ್ಲಿಕಾರ್ಜುನ ಕೆಂಗನಾಳ, ತಾಂತ್ರಿಕ ಕೃಷಿ ಅಧಿಕಾರಿ ಎಂ.ಪ್ರೇಮಿ ಚಂದ್ರಪ್ಪ, ಕೀಟನಾಶಕ, ರಸಗೊಬ್ಬರ ಉತ್ಪಾದನಾ ಹಾಗೂ ಮಾರಾಟ ಕಂಪೆನಿಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.