ADVERTISEMENT

‘ಮಹಿಳಾ ಸಬಲೀಕರಣ ಅಗತ್ಯ’

ದಿವಳಗುಡ್ಡದಲ್ಲಿ 51 ಸ್ವಸಹಾಯ ಸಂಘಗಳ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2016, 7:19 IST
Last Updated 13 ಫೆಬ್ರುವರಿ 2016, 7:19 IST

ಸುರಪುರ: ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಸಬಲಗೊಳಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ವಿವಿಧ ಸೌಲಭ್ಯಗಳನ್ನು ಪಡೆದು ಪ್ರಗತಿ ಸಾಧಿಸಬೇಕು. ಆರ್ಥಿಕ ನೆರವಿಗೆ ಸಹಕಾರಿಯಾಗುವ ಸಂಘದ ದಾಖಲೆ ಪುಸ್ತಕ ನಿಮ್ಮ ಜೀವ ಇದ್ದಂತೆ. ಅದನ್ನು ಜೋಪಾನವಾಗಿ ಇಟ್ಟುಕೊಳ್ಳುವಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ ಹೇಳಿದರು.

ತಾಲ್ಲೂಕಿನ ದಿವಳಗುಡ್ಡ ಬಳಿಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ 51ನೇ ಸ್ವ ಸಹಾಯ ಸಂಘಗಳ ಉದ್ಘಾಟನೆ ಹಾಗೂ ದಾಖಲೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಿಮಗೆ ನೀಡಿರುವ ಪುಸ್ತಕದಲ್ಲಿ ಸದಸ್ಯರ ಭಾವಚಿತ್ರದೊಂದಿಗೆ ಸಂಪೂರ್ಣ ಮಾಹಿತಿ ನಮೂದಿಸಬೇಕು. ಷೇರು ಮತ್ತು ಸಾಲದ ಮೊತ್ತ ಪಡೆದ ಬಗ್ಗೆ ದಾಖಲೆ ಪುಸ್ತಕದಲ್ಲಿ ಸದಸ್ಯರ ಸಮ್ಮುಖದಲ್ಲಿಯೇ ಬರೆಯಬೇಕು.

ಯಾವುದೇ ಕಾರಣಕ್ಕೆ ಕಾರ್ಯಕರ್ತರ ಕೈಯಲ್ಲಿ ಹಣ ನೀಡಬಾರದು. ಸದಸ್ಯರು ಖುದ್ದಾಗಿ ಸಂಸ್ಥೆಯ ಕಚೇರಿಗೆ ಬಂದು ಹಣ ಪಾವತಿಸಿ, ರಸೀದಿ ಪಡೆದುಕೊಳ್ಳಬೇಕು’ ಎಂದು ಹೇಳಿದರು.

‘ರಾಜ್ಯದಲ್ಲಿಯೇ ನಮ್ಮದು ಅತ್ಯಂತ ದೊಡ್ಡ ಸಮಾಜ ಸೇವಾ ಸಂಸ್ಥೆ. ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಸಂಸ್ಥೆಯ ಮುಖ್ಯಸ್ಥರು. ರಾಜ್ಯದ ಜನತೆಯ ಬಡತನ ನಿವಾರಣೆ ಮಾಡಬೇಕು. ಸ್ವಾವಲಂಬಿ ಕುಟುಂಬಗಳನ್ನು ನಿರ್ಮಿಸಬೇಕು’ ಎಂದರು.

ಈಗಾಗಲೆ ನಮ್ಮ ಸಂಸ್ಥೆಯು ರಾಜ್ಯದಲ್ಲಿ 3.40 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಸಂಘಗಳನ್ನು ರಚಿಸಿದೆ. ತಾಲ್ಲೂಕಿನಲ್ಲಿ 3 ಸಾವಿರ ಸಂಘಗಳನ್ನು ರಚಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 201 ಸಂಘಗಳನ್ನು ರಚಿಸಲಾಗಿದೆ.

ಲಾಭ ಪಡೆದುಕೊಳ್ಳುವ, ವ್ಯವಹಾರ ವಿನಿಮಯ, ಷೇರು, ಸಾಲ ನಮೂದಿಸುವುದು ಸೇರಿದಂತೆ ಎಲ್ಲ ಮಾಹಿತಿಯನ್ನು ನಮ್ಮ ಕಾರ್ಯಕರ್ತರು ನೀಡಲಿದ್ದಾರೆ. ಸರಿಯಾದ ಮಾಹಿತಿ ಪಡೆದು ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಎಲ್ಲ ಸ್ವಸಹಾಯ ಸಂಘಗಳಿಗೆ ದಾಖಲೆ ಪುಸ್ತಕ ಮತ್ತು ಬ್ಯಾಗ್‌ಗಳನ್ನು ವಿತರಿಸಲಾಯಿತು. ಯಾದಗಿರಿ ಜಿಲ್ಲಾ ನಿರ್ದೇಶಕ ದಿನೇಶ, ಸಮಾಜ ಸೇವಕಿ ಮಾಧುರಿ ಕಲಕೊಂಡ ಮಾತನಾಡಿದರು. ಪುರಸಭೆ ಮಾಜಿ ಸದಸ್ಯೆ ಜಿ. ಸರೋಜಾ, ವಿಜಯಲಕ್ಷ್ಮೀ ವೇದಿಕೆಯಲ್ಲಿದ್ದರು. ಶಾಖಾ ವ್ಯವಸ್ಥಾಪಕಿ ಮಂಜುಶ್ರೀ ಸ್ವಾಗತಿಸಿದರು. ಮೇಲ್ವಿಚಾರಕ ಸಂತೋಷ ನಿರೂಪಿಸಿದರು. ಮೇಲ್ವಿಚಾರಕಿ ಶಿಲ್ಪಾ ವಂದಿಸಿದರು.

***
ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವ ಮೂಲಕ ರಾಜ್ಯದ ಆರ್ಥಿಕ ಕ್ಷೇತ್ರ ಸದೃಢಗೊಳಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
-ದುಗ್ಗೆಗೌಡ,
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.