ADVERTISEMENT

19 ದೌರ್ಜನ್ಯ ಪ್ರಕರಣಗಳಿಗೆ ಸಿಗದ ನ್ಯಾಯ

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 12:13 IST
Last Updated 7 ಏಪ್ರಿಲ್ 2018, 12:13 IST
ಯಾದಿಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘಟನೆ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು
ಯಾದಿಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘಟನೆ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು   

ಯಾದಗಿರಿ: ಕೊಲೆ, ಅತ್ಯಾಚಾರ, ವಂಚನೆ, ದೌರ್ಜನ್ಯ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 19 ಪ್ರಕರಣಗಳು ದಾಖಲಾಗಿದ್ದರೂ, ಪೊಲೀಸರು ಇದುವರೆಗೂ ಆರೋಪಿಗಳನ್ನು ಬಂಧಿಸಿ ಸಮರ್ಪಕ ತನಿಖೆ ನಡೆಸಿಲ್ಲ. ಪರಿಶಿಷ್ಟರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿ ಶುಕ್ರವಾರ ದಲಿತ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ದಲಿತ ಸಂಘಟನೆಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ‘ಜಿಲ್ಲೆಯಲ್ಲಿ ಮಾದಿಗ ಜನಾಂಗದ ಮೇಲೆ ನಿರಂತರ ಕೊಲೆ, ಅತ್ಯಾಚಾರ, ಹಲ್ಲೆ ಪ್ರಕರಣಗಳು ನಡೆಯುತ್ತಿವೆ. ಪ್ರಕರಣಗಳು ದಾಖಲಾಗಿದ್ದರೂ ಪೊಲೀಸರು ಸೂಕ್ತ ಕ್ರಮ ಜರುಗಿಸದೇ ಇರುವುದಿಂದ ಪ್ರಕರಣಗಳು ಹೆಚ್ಚುತ್ತಲೇ ಇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘2015ರಿಂದ ಇಲ್ಲಿಯವರೆಗೆ ಒಟ್ಟು19 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯ ಶಹಾಪುರ, ಸುರಪುರ, ಸೈದಾಪುರ ಠಾಣೆಗಳಲ್ಲಿ ಮಾದಿಗ ಜನಾಂಗದ ಹಲವು ಮಹಿಳೆ ಹಾಗೂ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವ ಕುರಿತು ಪ್ರಕರಣಗಳು ಹೆಚ್ಚಿವೆ. ಕೊಲೆ ಪ್ರಕರಣಗಳನ್ನೂ ಕೂಡ ಪೊಲೀಸರು ಭೇದಿಸಿಲ್ಲ. ಪೊಲೀಸರು ಆಮಿಷಕ್ಕೆ ಒಳಗಾಗಿ ಆರೋಪಿಗಳನ್ನು ಬಂಧಿಸಿಲ್ಲ. ಇದರಿಂದ ಬಡ ಮಾದಿಗ ಜನರು ಆರೋಪಿಗಳ ಕಿರುಕುಳವನ್ನು ನಿರಂತರ ಅನುಭವಿಸುವಂತಾಗಿದೆ’ ಎಂದು ಆರೋಪಿಸಿದರು.

ADVERTISEMENT

ಸಜ್ಜನ ಮಲ್ಲೇಶ್, ಮುಖಂಡ ಅರ್ಜುನ ಭದ್ರೆ ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.