ADVERTISEMENT

22 ಹಳ್ಳಿ ಸೇರ್ಪಡೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 6:49 IST
Last Updated 16 ಡಿಸೆಂಬರ್ 2017, 6:49 IST

ಯಾದಗಿರಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಬೂದಿಹಾಳ-ಪೀರಾಪುರ ಏತನೀರಾವರಿ ಯೋಜನೆಯಲ್ಲಿ 22 ಹಳ್ಳಿಗಳನ್ನು ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಶಹಾಪುರ ಶಾಸಕ ಗುರು ಪಾಟೀಲ ಶಿರವಾಳ ನೇತೃತ್ವದಲ್ಲಿ ಆ ಗ್ರಾಮಗಳ ರೈತರು ಶುಕ್ರವಾರ ಇಲ್ಲಿನ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.

ಶಾಸಕ ಗುರು ಪಾಟೀಲ ಶಿರವಾಳ ಮಾತನಾಡಿ, ‘ಬೂದಿಹಾಳ-ಪೀರಾಪುರ ಏತನೀರಾವರಿ ಯೋಜನೆಯಲ್ಲಿ 22 ಹಳ್ಳಿಗಳನ್ನು ಸೇರ್ಪಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರನ್ನು ಅನೇಕ ಬಾರಿ ಮನವಿ ಸಲ್ಲಿಸಿದ್ದೇನೆ. ಭೇಟಿ ಮಾಡಿದಾಗಲೆಲ್ಲ ಸೇರ್ಪಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಇದುವರೆಗೂ ಭರವಸೆ ಈಡೇರಿಸಿಲ್ಲ’ ಎಂದು ಆರೋಪಿಸಿದರು.

‘ಶಹಾಪುರ ವಿಧಾನಭಾ ಕ್ಷೇತ್ರದ ಯಕ್ತಾಪುರ, ತಳ್ಳಳ್ಳಿ, ದೇವನಾಳ, ಚಿಂಚೋಳಿ, ವಂದಗನೂರು, ಹೂವಿನಳ್ಳಿ, ಐನಾಪುರ, ಮಲ್ಕಾಪುರ, ಕಾಚಾಪುರ, ಆಲ್ದಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಬಗ್ಗೆ ಸರ್ಕಾರ ಗಮನ ನೀಡುತ್ತಿಲ್ಲ. ಈ ಏತ ನೀರಾವರಿ ಯೋಜನೆಯಡಿ  ಗ್ರಾಮಗಳು ಸೇರ್ಪಡೆಯಾದರೆ ರೈತರ ಬದುಕು ಹಸನಾಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಹಾಗೂ ಕೆಬಿಜೆಎನ್‌ಎಲ್ ನಿಗಮ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರು ತಮ್ಮ ಕ್ಷೇತ್ರದಲ್ಲಿನ ನೀರಾವರಿ ಕ್ಷೇತ್ರ ಅಭಿವೃದ್ಧಿಯಾಗಬೇಕು ಎಂಬ ಕಾರಣ ಬೇರೆ ಜಿಲ್ಲೆಗಳ ರೈತರ ನೆಮ್ಮದಿ ಬಲಿ ಕೊಡುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಇರಕಲ್, ಮಲಗಾಂವ್, ವಿಜಯಪುರದಲ್ಲಿ ಈಗಾಗಲೇ ಸರ್ಕಾರದ ಅಧಿಸೂಚನೆ ಇಲ್ಲದೇ ಕಾಲುವೆಗಳನ್ನು ನಿರ್ಮಾಣ ಮಾಡಿ ಕೆರೆಗಳಿಗೆ ನೀರು ಹರಿಸಲಾಗಿದೆ. ಇದು ಅಕ್ರಮ’ ಎಂದು ದೂರಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ, ಬಸರಾಜ ಆನೆಗುಂದಿ, ವಸಂತ ಸುರಪುರಕರ್, ರವಿ ಬೊಮ್ಮನಳ್ಳಿ, ಸಾಹೇಬಗೌಡ, ಪ್ರಶಾಂತ ದೊಡ್ಡಮನಿ, ಪ್ರಕಾಶ ಚೌಧರಿ, ಬಸವರಾಜಪ್ಪಗೌಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

* * 

ಆಲಮಟ್ಟಿ ಜಲಾಶಯದಲ್ಲಿ ಸಂಗ್ರಹವಿರುವ 6 ಟಿಎಂಸಿ ಅಡಿ ನೀರಿನಲ್ಲಿ ನಮಗೂ 1 ಟಿಎಂಸಿ ಕೊಡಬೇಕು. ಮುಖ್ಯಮಂತ್ರಿಯವರು ರೈತ ಹಿತ ಕಾಪಾಡಬೇಕು.
ಗುರು ಪಾಟೀಲ ಶಿರವಾಳ ಶಾಸಕ, ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.