ADVERTISEMENT

371ಜೆ ಅನುಷ್ಠಾನಗೊಂಡರೂ ಸಿಗದ ಉದ್ಯೋಗ

​ಪ್ರಜಾವಾಣಿ ವಾರ್ತೆ
Published 18 ಮೇ 2017, 9:20 IST
Last Updated 18 ಮೇ 2017, 9:20 IST
371ಜೆ ಅನುಷ್ಠಾನಗೊಂಡರೂ ಸಿಗದ ಉದ್ಯೋಗ
371ಜೆ ಅನುಷ್ಠಾನಗೊಂಡರೂ ಸಿಗದ ಉದ್ಯೋಗ   

ಯಾದಗಿರಿ: ‘ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಜನರ ಬಹುಬೇಡಿಕೆಯಾಗಿದ್ದ ಸಂವಿಧಾನದ 371 (ಜೆ) ಕಲಂ ಅನುಷ್ಠಾನಗೊಂಡು ಮೂರು ವರ್ಷಗಳು ಕಳೆದರೂ ಈ ಭಾಗದ ನಿರುದ್ಯೋಗಿಗಳಿಗೆ ಇದುವರೆಗೂ ಉದ್ಯೋಗ ಸಿಕ್ಕಿಲ್ಲ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ನಗರದಲ್ಲಿ ಬುಧವಾರ ನಡೆದ ಯಾದಗಿರಿ ಮತಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 2.3 ಲಕ್ಷ ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಲು ಮುಂದಾಗಿಲ್ಲ. ಇದರಿಂದ 371 (ಜೆ) ಕಲಂ ಅನುಷ್ಠಾನಗೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ದಲಿತ, ಹಿಂದುಳಿದವರ, ಅಲ್ಪಸಂಖ್ಯಾತರ ಹಿತ ಕಾಪಾಡುವ ಸರ್ಕಾರ ಇಷ್ಟೊಂದು ಹುದ್ದೆಗಳನ್ನು ಏಕೆ ಭರ್ತಿ ಮಾಡಿಲ್ಲ’ ಎಂದು ಪ್ರಶ್ನಿಸಿದ ಅವರು, ‘ಇಷ್ಟು ಹುದ್ದೆಗಳನ್ನು ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಮಕ್ಕಳಿಗೆ 371 (ಜೆ) ಕಲಂ ಮೀಸಲಾತಿ ಆಧಾರದ ಮೇಲೆ ಭರ್ತಿ ಮಾಡಿ ಬಡ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬಹುದಿತ್ತು. ಯಾವುದೇ ಪ್ರಗತಿಪರ, ಆರ್ಥಿಕ ಯೋಜನೆಗಳನ್ನು ಅನುಷ್ಠಾನಗೊಳಿಸದೇ ಸರ್ಕಾರ ಜನರ ಹಣವನ್ನು ಯೋಜನೆಗಳ ಹೆಸರಿನಲ್ಲಿ ಲೂಟಿ ಮಾಡುತ್ತಿದೆ’ ಎಂದರು.

ADVERTISEMENT

‘ರೈತರ ಬೆಳೆನಷ್ಟ ಪರಿಹಾರ ನೀಡಿದ್ದೇವೆ ಎಂದು ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಹೇಳುತ್ತಿದೆ. ಇತ್ತ ರಾಜ್ಯ ಸರ್ಕಾರ ಕೇಂದ್ರ ರೈತರ ಬೆಳೆನಷ್ಟ ಪರಿಹಾರವನ್ನು ಬಿಡಿಗಾಸೂ ನೀಡಿಲ್ಲ ಎಂದು ಆರೋಪಿಸುತ್ತಿದೆ. ಇವರ ಜಗಳದಲ್ಲಿ ರೈತರು ಹೈರಾಣಾಗಿದ್ದಾರೆ. ಎರಡೂ ಸರ್ಕಾರಗಳಿಗೆ ರೈತರ ಬಗ್ಗೆ ಕಾಳಜಿ ಎಷ್ಟಿದೆ ಎಂಬುದನ್ನು ತೋರಿಸುತ್ತದೆ’ ಎಂದು ಹೇಳಿದರು.

‘ಕೇಂದ್ರದತ್ತ ಬೊಟ್ಟು ಮಾಡುವ ಬದಲು ರಾಜ್ಯ ಸರ್ಕಾರ ಸಾಧ್ಯವಾದಷ್ಟು ಬೆಳೆಸಾಲ ಮನ್ನಾ, ಬೆಳೆನಷ್ಟ ಪರಿಹಾರ ನೀಡಿ ರೈತರ ನೆರವಿಗೆ ನಿಲ್ಲಬಹುದಿತ್ತು. ಆದರೆ, ನೀರಾವರಿ ಯೋಜನೆಗಳಿಗೆ ಅನುದಾನ ಇಲ್ಲ, ಯುವಕರಿಗೆ ಉದ್ಯೋಗ ನೀಡಲು ಹಣವಿಲ್ಲ, ರೈತರ ಬೆಳೆನಷ್ಟ ಪರಿಹಾರಕ್ಕೂ ದುಡ್ಡಿಲ್ಲ ಎಂದು ಸಬೂಬು ಹೇಳುವ ಸರ್ಕಾರ ಖಜಾನೆಯನ್ನು ಲೂಟಿ ಮಾಡುತ್ತಿದೆಯೇ’ ಎಂದು ಟೀಕಿಸಿದರು.

ಮುಖಂಡ ಬಂಡೆಪ್ಪ ಕಾಶಂಪೂರ ಮಾತನಾಡಿ, ‘2004ರಲ್ಲೇ ಸರ್ಕಾರ ₹ 3ನಂತೆ ಪಡಿತರ ಫಲಾನುಭವಿಗಳಿಗೆ 30 ಕೆ.ಜಿ ಅಕ್ಕಿ ನೀಡುತ್ತಿತ್ತು. ಆಗ ಜನರು
₹ 90ರಲ್ಲಿ ಇಡೀ ತಿಂಗಳಷ್ಟು ಕಾಲ ಅನ್ನ ಉಣ್ಣುವಷ್ಟು ಅಕ್ಕಿ ಪಡೆಯುತ್ತಿದ್ದರು. ಆದರೆ, ಈಗಿನ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ ಪಡಿತರದಾರರಿಗೆ 15 ಕೆ.ಜಿ ಅಕ್ಕಿ ಉಚಿತವಾಗಿ ನೀಡುತ್ತಿದೆ. ಆದರೆ, ಜನರು ಇನ್ನು 15 ಕೆ.ಜಿ ಅಕ್ಕಿಯನ್ನು ಮಾರುಕಟ್ಟೆಯಿಂದ ದುಪ್ಪಟ್ಟು ಬೆಲೆಗೆ ಕೊಂಡು ತಿನ್ನಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಹೇಳಿದರು.

ಜೆಡಿಎಸ್ ಮುಖಂಡ ಎ.ಸಿ.ಕಾಡ್ಲೂರು ಮಾತನಾಡಿ, ‘ಇಡೀ ಜಿಲ್ಲೆ ಜೆಡಿಎಸ್ ಹಿರಿಯ ಮುಖಂಡ ಎಚ್‌್.ಡಿ.ದೇವೇಗೌಡ ಅವರ ಋಣದಲ್ಲಿ ಇದೆ. ಕೃಷ್ಣಾ ಮೇಲ್ದಂಡೆ ಜಾರಿಗೆ ದೇವೇಗೌಡರ ಪಾತ್ರ ಪ್ರಮುಖವಾಗಿದ್ದು, ಅವರನ್ನು ಇಲ್ಲಿನ ರೈತರು ನಿತ್ಯ ಸ್ಮರಿಸಬೇಕು. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಿ ಋಣ ತೀರಿಸಬೇಕಿದೆ’ ಎಂದು ಹೇಳಿದರು.

ಮುಖಂಡ ಮಹಾಂತೇಶ್ ಪಾಟೀಲ, ಮುಕ್ರಂ ಖಾನ್‌ ಮಾತನಾಡಿದರು.

**

‘ನೀರಾವರಿ ಹೆಸರಲ್ಲಿ ₹40 ಸಾವಿರ ಕೋಟಿ ಲೂಟಿ’

ಯಾದಗಿರಿ: ‘ರಾಜ್ಯ ಆಳುವವರು ನೀರಾವರಿ ಯೋಜನೆ ಹೆಸರಿನಲ್ಲಿ ₹40 ಸಾವಿರ ಕೋಟಿ ಲೂಟಿ ಮಾಡಿದ್ದಾರೆ. ಧೈರ್ಯವಿದ್ದರೆ ತನಿಖೆ ಎದುರಿಸಲಿ’ ಎಂದು ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯಾದಗಿರಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷ್ಣ ‘ಎ’ ಸ್ಕೀಂ ನಲ್ಲಿ 720 ಟಿಎಂಸಿ, ‘ಬಿ’ಸ್ಕೀಂ ನಲ್ಲಿ 120 ಟಿಎಂಸಿ ನೀರು ಪಡೆದು ಉತ್ತರ ಕರ್ನಾಟಕವನ್ನು ಸಮಗ್ರ ಶಾಶ್ವತ ನೀರಾವರಿ ಯೋಜನೆಗೆ ಒಳಪಡಿಸಬಹುದಿತ್ತು. ರಾಜ್ಯದಲ್ಲಿ ಯಾವುದೇ ನೀರಾವರಿ ಯೋಜನೆಗಳಿಗೂ ಹಣ ಮೀಸಲಿಟ್ಟಿಲ್ಲ. ಆದರೂ ಸರ್ಕಾರದ ₹40 ಸಾವಿರ ಕೋಟಿ ಏನಾಯಿತು’ ಎಂದು ಪ್ರಶ್ನಿಸಿದರು.

‘ಜಂತಕಲ್‌ ಗಣಿ ಪ್ರಕರಣದಂತೆ ಈ ಹಿಂದೆಯೂ ಕುಮಾರಸ್ವಾಮಿ ಗಣಿಧಣಿಗಳಿಂದ ₹150 ಕೋಟಿ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅದನ್ನೂ ಕೂಡ ಸಮಗ್ರವಾಗಿ ತನಿಖೆಗೊಳಪಡಿಸಲಿಲ್ಲ. ಈಗಾಗಲೇ ಒಂದು ವರ್ಷದಿಂದ ಜಂತಕಲ್ ಗಣಿಗಾರಿಕೆ ನವೀಕರಣ ಹಾಗೂ ಅದಿರು ಸಾಗಣೆ ಆರೋಪ ಮಾಡಿದ್ದಾರೆ. ಹಣ ತಿಂದಿರುವ ಅಧಿಕಾರಿ ಈಗಾಗಲೇ ಸೆರೆಯಾಗಿದ್ದಾರೆ. ಸುಳ್ಳು ಆರೋಪ ಮಾಡಿ ಕುಮಾರಸ್ವಾಮಿಯನ್ನು ಕೆಣಕುವ ಕೆಲಸ ಮಾಡಬೇಡಿ’ ಎಂದು ಎಚ್ಚರಿಸಿದರು.

ಗಾಳಿಗೆ ತಲೆಗುದ್ದುವ ಮೂರ್ಖ ನಾನಲ್ಲ: ‘ನೋಟಿಸ್ ನೀಡಿರುವ ಎಸ್‌ಐಟಿಗೆ ವಿವರಣೆ ನೀಡಬೇಕಿದೆ. ಆದರೆ, ವಿಚಾರಣೆ ನಡೆಸುವಾಗ ಆಡಳಿತ ನಡೆಸುವವರ ಕುತಂತ್ರದಿಂದ ಬಂಧನದ ಸಾಧ್ಯತೆ ಇದ್ದರೂ ಇರಬಹುದು ಎಂಬ ಕಾರಣಕ್ಕೆ ಕಾನೂನು ಸಲಹೆಗಾರರು ನೀಡಿದ ಮುಂಜಾಗ್ರತೆಯಿಂದ ನಿರೀಕ್ಷಣಾ ಜಾಮೀನು ಪಡೆದಿದ್ದೇನೆಯೇ ಹೊರತು, ತಪ್ಪು ಮಾಡಿದ್ದೇನೆ ಎಂಬ ಕಾರಣಕ್ಕಲ್ಲ’ ಎಂದು ಸ್ಪಷ್ಟಪಡಿಸಿದರು.

‘ಶಕ್ತಿ ಇದೆ ಎಂದು ಗಾಳಿಯಲ್ಲಿ ತಲೆ ಗುದ್ದುವ ಮೂರ್ಖ ನಾನಲ್ಲ. ಸ್ವೇಚ್ಛಾಚಾರದ ಆಡಳಿತ ನಡೆಸುವವರು ಕಾನೂನನ್ನು ಬಳಸಿಕೊಂಡು ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ. ಹಾಗಾಗಿ, ನಿರೀಕ್ಷಣಾ ಜಾಮೀನಿನ ಮೊರೆ ಹೋಗಬೇಕಾಗಿ ಬಂತು’ ಎಂದರು.

**

₹ 2.27 ಲಕ್ಷ ಕೋಟಿ ಸಾಲದ ಹೊರೆ

‘ಅನುದಾನದ ಕೊರತೆ ಇದೆ ಎನ್ನುವ ಕಾರಣಕ್ಕೆ ಸರ್ಕಾರ ₹ 2.27 ಲಕ್ಷ ಕೋಟಿ ಸಾಲ ಮಾಡಿದೆ. ಇದನ್ನು ಸರ್ಕಾರ ತೀರಿಸುವುದಿಲ್ಲ. ಅದರ ಹೊಣೆ ನಮ್ಮ ತಲೆ ಮೇಲಿದೆ. ಇದು ರೈತರಿಗೆ, ಈ ರಾಜ್ಯದ ಜನರಿಗೆ ಸರ್ಕಾರ ನೀಡಿರುವ ದೊಡ್ಡ ಕೊಡುಗೆ’ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

‘ಪ್ರಸಕ್ತ ವರ್ಷದಲ್ಲಿ ರೈತರು ಬೆಳೆದಿರುವ ತೊಗರಿಗೆ ಸರಿಯಾದ ಬೆಂಬಲ ಬೆಲೆ ಸಿಗಲಿಲ್ಲ. ಸರ್ಕಾರದ ಬೇಜವಾಬ್ದಾರಿತನದಿಂದಾಗಿ ಎಪಿಎಂಸಿಗಳಲ್ಲೂ ಖರೀದಿ ಕೇಂದ್ರಗಳು ಕದ ತೆರೆಯಲಿಲ್ಲ. ಹಾಗಾಗಿ, ತೊಗರಿ ಬೆಳೆದ ರೈತರಿಗೆ ವೈಜ್ಞಾನಿಕ ದರದಿಂದ ವಂಚಿತರಾಗುವಂತೆ ಸರ್ಕಾರ ನೋಡಿಕೊಂಡಿತು. ಇದೇ ಪರಿಸ್ಥಿತಿ ವಿಜಯಪುರ, ಬಾಗಲಕೋಟೆಯಲ್ಲಿನ ದ್ರಾಕ್ಷಿ, ದಾಳಿಂಬೆ ಬೆಳೆಗಾರರಿಗೂ ಆಗಿದೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.