ADVERTISEMENT

ಚರಂಡಿ ಅವ್ಯವಸ್ಥೆ: ಅಧಿಕಾರಿಗಳ ನಿರ್ಲಕ್ಷ್ಯ

ಮಲ್ಲೇಶ್ ನಾಯಕನಹಟ್ಟಿ
Published 19 ಫೆಬ್ರುವರಿ 2018, 7:15 IST
Last Updated 19 ಫೆಬ್ರುವರಿ 2018, 7:15 IST
ಯಾದಗಿರಿಯ ಚಿತ್ತಾಪುರ ರಸ್ತೆಯಲ್ಲಿನ ನಗರಸಭೆ ಮಳಿಗೆಗಳ ಸಂಕೀರ್ಣದ ಮುಂದೆ ಹರಿಯುತ್ತಿರುವ ತೆರೆದ ಚರಂಡಿ
ಯಾದಗಿರಿಯ ಚಿತ್ತಾಪುರ ರಸ್ತೆಯಲ್ಲಿನ ನಗರಸಭೆ ಮಳಿಗೆಗಳ ಸಂಕೀರ್ಣದ ಮುಂದೆ ಹರಿಯುತ್ತಿರುವ ತೆರೆದ ಚರಂಡಿ   

ಯಾದಗಿರಿ: 2017–18ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹59.51ಕೋಟಿ ವೆಚ್ಚದ ಆಯವ್ಯಯ ಮಂಡಿಸಿರುವ ನಗರಸಭೆ ಕೇವಲ ₹53.9 ಕೋಟಿ ಅನುದಾನವನ್ನಷ್ಟೇ ವೆಚ್ಚ ಮಾಡಿದೆ.

ನಗರದಲ್ಲಿನ ತೆರೆದ ಚರಂಡಿಗಳು ದುರ್ವಾಸನ ಬೀರುತ್ತಿದ್ದು, ನಿವಾಸಿಗಳು ತೊಂದರೆಪಡುವಂತಾಗಿದೆ. ಒಳ ಚರಂಡಿ ನಿರ್ಮಿಸಿ ನಗರದಲ್ಲಿ ನೈರ್ಮಲ್ಯ ಕಾಪಾಡಿ ಎಂದು ಜನರು ಹಲವು ಬಾರಿ  ಹೋರಾಟ ನಡೆಸಿದ್ದರೂ, ನಗರಸಭೆಯ ಪುರಪ್ರಭುಗಳ ಕಣ್ಣಿಗೆ ತೆರೆದ ಚರಂಡಿಗಳು  ಕಾಣುತ್ತಿಲ್ಲ.

‘ತಿಂಗಳು ಕಳೆದರೂ ಸ್ವಚ್ಛಗೊಳ್ಳದ ಚರಂಡಿಗಳಿಂದ ರೋಗ ಭೀತಿ ಎದುರಾಗಿದೆ. ಇದರಿಂದಾಗಿ ನಗರದ ನಿವಾಸಿಗಳು ನಗರಸಭೆಗೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ, ನಿವಾಸಿಗಳ ಸಂಕಷ್ಟಕ್ಕೆ ನಗರಸಭೆ ಸ್ಪಂದಿಸುತ್ತಿಲ್ಲ’ ಎಂದು ಇಲ್ಲಿನ ಬಸವೇಶ್ವರ ನಗರದ ನಿವಾಸಿಗಳಾದ ಸರೋಜಮ್ಮ, ಸುರೇಶ್ ಹೇಳುತ್ತಾರೆ.

ADVERTISEMENT

ಜಿಲ್ಲೆಯಲ್ಲಿನ ಕೆಲವು ನಗರಸಭೆಗಳು ತಮ್ಮ ಮೂಲ ಆದಾಯದ ಜತೆಗೆ ಹಲವು ಅಭಿವೃದ್ಧಿ ಕಾಮಗಾರಿಗಳ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಿ ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿವೆ. ಆದರೆ, ಯಾದಗಿರಿ ನಗರಸಭೆ ಇರುವ ಅನುದಾನವನ್ನೂ ಬಳಕೆ ಮಾಡದೇ ಅಭಿವೃದ್ಧಿಯನ್ನೇ ಮರೆತಿದೆ ಎಂಬುದು ನಿವಾಸಿಗಳ ದೂರು.

2017–18ನೇ ಸಾಲಿನಲ್ಲಿ ಎಸ್‌ಎಫ್‌ಸಿ ಅನುದಾನ (ರಾಜ್ಯ ಹಣಕಾಸು ಆಯೋಗದ ಅನುದಾನ) ಯೋಜನೆಯಲ್ಲಿ ಸರ್ಕಾರ ₹20ಲಕ್ಷ ಅನುದಾನ ಒದಗಿಸಿದೆ. ಅದರಲ್ಲಿ ನಗರಸಭೆ ಕೇವಲ ₹6 ಲಕ್ಷ ಮಾತ್ರ ವೆಚ್ಚ ಮಾಡಿದೆ. 14ನೇ ಹಣಕಾಸು ಯೋಜನೆಯಲ್ಲಿ ₹1.20 ಕೋಟಿ ಅನುದಾನ ಬಂದಿದೆ. ಅದರಲ್ಲಿ ಕೇವಲ ₹9.38 ಲಕ್ಷ ವೆಚ್ಚ ಮಾಡಿದೆ. ನಗರೋತ್ಥಾನ ಯೋಜನೆಯಲ್ಲಿ ಒಟ್ಟು ₹40ಲಕ್ಷ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ಕೇವಲ ₹6.63 ಲಕ್ಷ ಮಾತ್ರ ನಗರಸಭೆ ಬಳಕೆ ಮಾಡಿರುವ ಬಗ್ಗೆ ನಗರಸಭೆಯ ಆಯವ್ಯಯ ಪಟ್ಟಿ ತಿಳಿಸುತ್ತದೆ.

ಅಚ್ಚರಿ ಅಂದರೆ ಸರ್ಕಾರ ನಗರದ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ₹18.63 ಲಕ್ಷ ಅನುದಾನ ಒದಗಿಸಿದೆ. ಆದರಲ್ಲಿ ನಗರಸಭೆ ಕೇವಲ ₹2.93 ಲಕ್ಷ ಮಾತ್ರ ಬಳಕೆ ಮಾಡಿರುವುದು ನಗರಸಭೆಯ ಆಡಳಿತ ವೈಖರಿಗೆ ಕನ್ನಡಿ ಹಿಡಿದಂತಿದೆ.

ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಕೂಡ ಸಮರ್ಪಕವಾಗಿಲ್ಲ. ಬೆರಳೆಣಿಕೆಯಷ್ಟು ಪೌರಕಾರ್ಮಿಕರಿಂದ ಇಡೀ ನಗರದ ನೈರ್ಮಲ್ಯ ಕಾಪಾಡಲು ಸಾಧ್ಯವಾಗುತ್ತಿಲ್ಲ. ಅಗತ್ಯದಷ್ಟು ಪೌರ ಕಾರ್ಮಿಕರನ್ನು ನಗರಸಭೆ ನೇಮಿಸಿಕೊಳ್ಳದಿರುವುದು ಈ ಅವ್ಯವಸ್ಥೆಗೆ ಕಾರಣ ಎಂದು ನಗರಸಭೆ ಸದಸ್ಯ ಮರೆಪ್ಪ ಚಟ್ಟರ್‌ಕರ್‌ ಹೇಳುತ್ತಾರೆ.

‘ಪೌರಾಯುಕ್ತರೇ ನೇರ ಹೊಣೆ’

‘ನಗರಸಭೆ ನಿಷ್ಕ್ರಿಯವಾಗಲು ಪೌರಾಯುಕ್ತರೇ ನೇರ ಹೊಣೆಗಾರರು. ಇದರಿಂದ ಸದಸ್ಯರು ಭ್ರಮನಿರಸರಾಗಿದ್ದಾರೆ. ಪೌರಾಯುಕ್ತರ ಆಡಳಿತ ವೈಖರಿ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ, ಯಾವುದೇ ಕ್ರಮ ಅನುಸರಿಸದಿರುವುದು ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಗಳ ಬಗ್ಗೆ ಇರುವ ನಿಷ್ಕಾಳಜಿ ಎತ್ತಿ ತೋರಿಸುತ್ತದೆ’ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ತಿಳಿಸಿದರು.

* * 

ಒಂದು ವರ್ಷದಿಂದ ಒಂದೂ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಇದು ಪೌರಾಯುಕ್ತರ ಅದಕ್ಷ ಆಡಳಿತಕ್ಕೆ ಸಾಕ್ಷಿಯಾಗಿದೆ
ಮರೆಪ್ಪ ಚಟ್ಟರ್‌ಕರ್, ನಗರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.