ಸುರಪುರ: ಆಧ್ಯಾತ್ಮ ಸಿಂಚಕರು, ಭಾವೈಕ್ಯದ ಹರಿಕಾರರು, ಸಮಾಜ ಸುಧಾರಕರು, ಲೋಕ ಕಲ್ಯಾಣಕ್ಕೆ ಜೀವನವನ್ನೇ ಮುಡಿಪಾಗಿಟ್ಟವರಿಗೆ ಯಾವ ಉರಾದರೇನು? ಗುರಿಯೊಂದೆ ಅವರ ಧ್ಯೇಯವಾಗಿರುತ್ತದೆ.
ಇದಕ್ಕೆ ಉತ್ತಮ ನಿದರ್ಶನ ಹೆಬ್ಬಾಳದ ಪರಮಾನಂದ ಪ್ರಭುಗಳು. ತಮಿಳುನಾಡಿನ ಶಿವಕಂಚಿ ಅವರ ಹುಟ್ಟಿದ ಊರು. 15ನೇ ಶತಮಾನದ ಮಧ್ಯಭಾಗ. ಮಲ್ಲಮಾಂಬೆ, ಮಲ್ಲಿನಾಥ ತಾಯಿ ತಂದೆ.
ಬಾಲ್ಯ ಮತ್ತು ಯೌವ್ವನದ ದಿನಗಳನ್ನು ಶಿವಕಂಚಿಯಲ್ಲಿ ಕಳೆದರೂ ಅಧ್ಯಾತ್ಮದ ಸೆಳೆತ ಅವರನ್ನು ಹೆಬ್ಬಾಳ ಕೆ. (ಈಗ ಹುಣಸಗಿ ತಾಲ್ಲೂಕಿಗೆ ಒಳಪಡುತ್ತದೆ) ಕರೆ ತಂದಿತು. ಇಲ್ಲಿನ ಅಪೂರ್ವ ನಿಸರ್ಗ ಹೇಳಿ ಮಾಡಿಸಿದ ತಾಣವಾಯಿತು.
ಅಧ್ಯಾತ್ಮದ ಸಾಧನೆಯನ್ನು ಇಲ್ಲಿಯೇ ಮಾಡಿದರು. ಕಾಲಿನ ಹೆಬ್ಬೆರೆಳಿನ ಮೇಲೆ ನಿಂತು ಹಲವು ವರ್ಷ ತಪಸ್ಸು ಮಾಡಿದರು. ಅಂತೆಯೇ ಈ ಊರು ಹಬ್ಬೆಳ್ಳು ಕ್ರಮೇಣ ಹೆಬ್ಬಾಳ ಎಂದು ಕರೆಯಲ್ಪಡುತ್ತದೆ.
ಅಲ್ಲಮಪ್ರಭುಗಳ ಅವತಾರವೆಂದು ಕರೆಯಲ್ಪಡುವ ಪರಮಾನಂದ ಪ್ರಭುಗಳು ಅನನ್ಯ ತತ್ವ ಪದಗಳನ್ನು ರಚಿಸಿದರು. ಆ ಮೂಲಕ ಮೌಢ್ಯ, ಸಾಮಾಜಿಕ ಅನಿಷ್ಟಗಳನ್ನು ನಿವಾರಿಸಲು ಯತ್ನಿಸಿದರು.
ಅವರ ನಿಸ್ವಾರ್ಥ ಜೀವನ, ಸಮಾಜ ಸುಧಾರಣೆಯ ತುಡಿತ, ಜೀವನದ ರಹಸ್ಯ, ಅಧ್ಯಾತ್ಮಕ್ಕೆ ಮನಸೋತ ಹಲವಾರು ಜನ ಶಿಷ್ಯರಾದರು. ಪರಮಾನಂದರು ತಿರುಗಾಡಿದಲೆಲ್ಲ ದೇಗುಲ ನಿರ್ಮಿಸಿದರು.
ಯಾದಗಿರಿ ಜಿಲ್ಲೆಯ ಕೊಡೇಕಲ್ಲ, ಹೆಬ್ಬಾಳ, ದೋರನಹಳ್ಳಿ, ಗುರುಸುಣಗಿ, ಕಲಬುರಗಿ ಜಿಲ್ಲೆಯ ಮಳಖೇಡ, ರಾಯಚೂರು ಜಿಲ್ಲೆಯ ಲಿಂಗದಳ್ಳಿ, ನವಲಕಲ್, ವಿಜಯಪುರ ಜಿಲ್ಲೆಯ ನಾಗರಬೆಟ್ಟ, ಹೂವಿನ ಹಿಪ್ಪರಗಿ, ದಿಂಡವಾರ, ಮಸಬಿನಾಳ, ಚಾಂದಕವಟೆ, ಹರನಾಳ, ದೇವೂರ, ಉಕ್ಕಲಿ, ಬಾಬಾನಗರ, ಹಲಸಂಗಿ, ಬೆಳಗಾವಿ ಜಿಲ್ಲೆಯ ಕೋಟೂರ, ಅಲ್ಲದೇ ಬಾಗಲಕೋಟ, ಗದಗ, ಹಾವೇರಿ, ಕೊಡಗು, ಮೈಸೂರ, ಚಾಮರಾಜನಗರ ಮತ್ತು ಹೊರ ರಾಜ್ಯಗಳಲ್ಲಿ ಪರಮಾನಂದರ ದೇಗುಲಗಳಿವೆ.
‘ಪರಮ ಪ್ರಭುವೆ’ ಎಂಬ ಅಂಕಿತನಾಮದಿಂದ ಅನೇಕ ತತ್ವ ಪದಗಳನ್ನು ರಚಿಸಿದ್ದಾರೆ. ಭಾವೈಕ್ಯವನ್ನು ಪ್ರತಿಪಾದಿಸಿದ್ದಾರೆ. ಇಸ್ಲಾಂ ಧರ್ಮದ ಖಾದರಸಾಬ ಅವರಿಗೆ ಶಿಷ್ಯತ್ವ ನೀಡಿದ್ದಾರೆ. ಅವರ ಎಲ್ಲ ಶಿಷ್ಯರು ಭಾವೈಕ್ಯತೆಯ ಹರಿಕಾರರೇ ಆಗಿದ್ದಾರೆ.
ಕೊಡೇಕಲ್ಲ ಬಸವಣ್ಣ, ಮಂಟೆಸ್ವಾಮಿಯಂತಹ ನಾಡಿನ ಖ್ಯಾತ ಶಿಷ್ಯ ಪರಂಪರೆ ಹೊಂದಿರುವ ಪರಮಾನಂದರ ಮೂಲ ದೇಗುಲ ಹೆಬ್ಬಾಳ. ರಾಜ್ಯ, ಹೊರರಾಜ್ಯದ ಅಸಂಖ್ಯೆ ಭಕ್ತ ಗಣವನ್ನು ದೇಗುಲ ಹೊಂದಿದೆ.
ಕಳೆದ 5 ಶತಮಾನಗಳಿಂದ ನಮ್ಮ ಮನೆತನದವರು ಪರಮಾನಂದ ಪ್ರಭುಗಳ ಪೂಜೆ ಮಾಡುತ್ತಾ ಬಂದಿದ್ದಾರೆ. ಪರಮಾನಂದರು ಭಕ್ತರನ್ನು ಹರಸುವ ಕಲ್ಪತರುವಾಗಿದ್ದಾರೆ – ಕಾಮರಾಯಗೌಡ ಪೂಜಾರಿ ಅರ್ಚಕ
ಪರಮಾನಂದರ ತತ್ವ ಪದಗಳು ನಿರ್ವಾಣ ಸ್ವರೂಪ ನಿರಾಕಾರ ನೆಲೆಯನ್ನು ಬೋಧಿಸುತ್ತವೆ. ಅವರ ತತ್ವಾದರ್ಶಗಳು ಹೆಚ್ಚು ಪ್ರಸ್ತುತವಾಗಿವೆ. ಅವರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕು– ಕನಕಪ್ಪ ವಾಗಣಗೇರಿ ಸಾಹಿತಿ
ಶಿಷ್ಯ ಪರಂಪರೆ ಪರಮಾನಂದರು ಅನೇಕ ಜನರಿಗೆ ಶಿಷ್ಯತ್ವ ನೀಡಿದ್ದಾರೆ. ಅವರಲ್ಲಿ ಪ್ರಮುಖರು ದಿಗ್ಗಿಯ ಸಂಗಮನಾಥ (ಇವರ ದೇಗುಲ ಶಹಾಪುರ ತಾಲ್ಲೂಕಿನ ದಿಗ್ಗಿಯಲ್ಲಿದ್ದು ಅಪಾರ ಖ್ಯಾತಿ ಪಡೆದಿದೆ). ಬರಿಗಾಲ ಸಿದ್ದಪ್ಪ ಮತ್ತು ಖಾದರಲಿಂಗ. ದಿಗ್ಗಿ ಸಂಗಮನಾಥರ ಶಿಷ್ಯರೇ ಕಾಲಜ್ಞಾನ ಬರೆದು ಖ್ಯಾತಿ ಹೊಂದಿದ ಕೊಡೇಕಲ್ ಬಸವಣ್ಣ. ಬಸವಣ್ಣವರ ಶಿಷ್ಯ ಬಳಗದವರಲ್ಲಿ ತಿಂಥಣಿ ಮೌನೇಶ್ವರ ಮಂಟೆಸ್ವಾಮಿ ಸಿದ್ದಪ್ಪಾಜಿ ರಾಚಪ್ಪಾಜಿ ಸಾಲೋಟಗಿ ಶಿವಯೋಗಿಶ್ವರ ನಾಗಾವಿ ಈರಪ್ಪಯ್ಯ ವಡಬಾಳ ನಾಗನಾಥ ಮಳೆಯ ಪ್ರಭು.
ಎರಡು ಬಾರಿ ಜಾತ್ರೆ ಶಿವರಾತ್ರಿ ಮತ್ತು ಶ್ರಾವಣ ಮಾಸದಲ್ಲಿ ಜಾತ್ರೆ ನಡೆಯುತ್ತದೆ. ಈ ಬಾರಿಯ ಜಾತ್ರೆ ಮಾ. 10 (ಭಾನುವಾರ) ನಡೆಯಲಿದೆ. ಬೆಳಿಗ್ಗೆ ಅಭಿಷೇಕ ವಿಶೇಷ ಪೂಜೆ ಜಾವಳ ಕಾರ್ಯಕ್ರಮಗಳು ಸಂಜೆ 5 ಗಂಟೆಗೆ ಪಲ್ಲಕ್ಕಿ ಉತ್ಸವ ರಥೋತ್ಸವ ಜರುಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ದನಗಳ ಸುಪ್ರಸಿದ್ಧ ಜಾತ್ರೆ ನಡೆಯುತ್ತದೆ. ಫೆ. 18 ರಂದು ಕಳಸ ಅವರೋಹಣದೊಂದಿಗೆ ಜಾತ್ರೆ ಸಂಪನ್ನವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.