ADVERTISEMENT

ಗ್ರಾಮೀಣ ಪ್ರತಿಭೆಗಳಿಗೆ ‘ಹೊಸ ಬೆಳಕು’

​ಪ್ರಜಾವಾಣಿ ವಾರ್ತೆ
Published 14 ಮೇ 2017, 19:30 IST
Last Updated 14 ಮೇ 2017, 19:30 IST
ಗ್ರಾಮೀಣ ಪ್ರತಿಭೆಗಳಿಗೆ ‘ಹೊಸ ಬೆಳಕು’
ಗ್ರಾಮೀಣ ಪ್ರತಿಭೆಗಳಿಗೆ ‘ಹೊಸ ಬೆಳಕು’   
ಅವರಿಬ್ಬರೂ ಹುಟ್ಟಿದ್ದು ಗ್ರಾಮೀಣ ಬಡಕುಟುಂಬದಲ್ಲಿ. ಕಷ್ಟಪಟ್ಟು ಓದಿ ಗಳಿಸಿದ ಉಪನ್ಯಾಸಕ ಹುದ್ದೆಯಲ್ಲಿ ಉಳಿದಿದ್ದು ಕೇವಲ ನಾಲ್ಕೈದು ತಿಂಗಳು. ಕೆ.ಎ.ಎಸ್‌. ಅಧಿಕಾರಿಯಾಗಬೇಕೆಂಬ ತೀವ್ರಾಕಾಂಕ್ಷೆ ಅದಕ್ಕೆ ಕಾರಣ. ಕೆ.ಎ.ಎಸ್. ಕನಸನ್ನು ಹೊತ್ತು ಬೆಂಗಳೂರಿಗೆ ಬಂದ ಅವರು ಕಡೆಗೂ ಗುರಿ ಸಾಧಿಸಿದರು.
 
ಆದರೆ, ಈ ಸಾಧನೆಯ ಹಾದಿಯಲ್ಲಿ ಕಂಡುಕೊಂಡು ಸತ್ಯಗಳು ಹೊಸದೊಂದು ಪ್ರಯತ್ನಕ್ಕೆ ಅವರನ್ನು ಅಣಿಗೊಳಿಸಿದವು. ಅದರ ಫಲವೇ ‘ಸ್ಪರ್ಧಾರ್ಥಿಗೊಂದು ಸರ್ಕಾರಿ ಉದ್ಯೋಗ’ ಎಂಬ ಅಡಿಬರಹ ಹೊತ್ತ ‘ಹೊಸ ಬೆಳಕು’ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ. 
 
ಗ್ರಾಮೀಣ ಬಡ ಅಭ್ಯರ್ಥಿಗಳ ಉದ್ಯೋಗದ ಕನಸಿಗೆ ಮೆಟ್ಟಿಲಾದ ಈ ಕೇಂದ್ರದ ರೂವಾರಿ ಆರ್‌.ಸಿ. ಶಿವಕುಮಾರ್ ಹಾಗೂ ಅವರ ಸಹೋದರ ಸಿನಿಮಾ ನಿರ್ದೇಶಕ ಮಂಜು ಮಿತ್ರ.  
 
‘ಉದ್ಯೋಗದ ಕನಸು ಹೊತ್ತು, ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗಾಗಿ ನಗರಗಳಿಗೆ ಬರುವ ಯುವಕ–ಯುವತಿಯರು ಪ್ರತಿಭಾವಂತರಿದ್ದರೂ ಗುರಿಸಾಧನೆಯಲ್ಲಿ ಹಿಂದೆ ಬೀಳುತ್ತಾರೆ. ಎಷ್ಟೋ ಮಂದಿ ಜಾಹೀರಾತುಗಳಿಗೆ ಮಾರುಹೋಗಿ, ಕೇವಲ ಬೋರ್ಡ್‌ಗಷ್ಟೇ ಸೀಮಿತವಾಗಿರುವ ಕೋಚಿಂಗ್ ಕೇಂದ್ರಗಳಿಗೆ ಹಣ ತೆತ್ತು ಬರಿಗೈಲಿ ಊರಿಗೆ ವಾಪಸಾಗುತ್ತಾರೆ’ ಎನ್ನುತ್ತಾರೆ, ಸದ್ಯ ಆನೇಕಲ್‌ನಲ್ಲಿ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್.
 
‘ಕೆ.ಎ.ಎಸ್‌. ಬೆನ್ನತ್ತಿ ನಾನು ಬೆಂಗಳೂರಿಗೆ ಬಂದಾಗ, ಇಂತಹ ತರಬೇತಿ ಕೇಂದ್ರಗಳ ಅವ್ಯವಸ್ಥೆಯನ್ನು ಕಣ್ಣಾರೆ ಕಂಡಿದ್ದೇನೆ. ಆಗಲೇ ಬಡವರು ಅದರಲ್ಲೂ, ಗ್ರಾಮೀಣ ಭಾಗದವರಿಗಾಗಿಯೇ ಯಾಕೆ ಒಂದು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆರಂಭಿಸಬಾರದು ಎಂಬ ಆಲೋಚನೆ ಮೂಡಿದ್ದು. ಈ ನನ್ನ ಕನಸಿಗೆ ರೂಪ ಕೊಟ್ಟಿದ್ದು ಸಹೋದರ ಮಂಜುಮಿತ್ರ.
 
‘ಗೀತಾ ಬ್ಯಾಂಗಲ್ಸ್ ಸ್ಟೋರ್’ ಎಂಬ ಚಿತ್ರ ನಿರ್ದೇಶಿಸಿದ್ದ ಆತ, ಸಿನಿಮಾ ಕ್ಷೇತ್ರದಲ್ಲಿದ್ದರೂ ನನ್ನ ಆಲೋಚನೆಗಳಿಗೆ ಮಿಡಿಯಬಲ್ಲ. ಬೆಂಗಳೂರಿನ ಹೊಸಕೆರೆಹಳ್ಳಿಯ ಒಂದು ಅಂತಸ್ತಿನ ಕಟ್ಟಡದಲ್ಲಿ 2014ರ ಡಿಸೆಂಬರ್ 26ರಂದು ‘ಹೊಸ ಬೆಳಕು’ ಹುಟ್ಟಿ ಹಾಕಿದೆವು’ ಎಂದು ತಮ್ಮ ಕನಸಿಕ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆರಂಭದ ಹಿನ್ನೆಲೆಯನ್ನು ಶಿವಕುಮಾರ್ ವಿವರಿಸುತ್ತಾರೆ. 
 
ಪ್ರತಿಭಾ ಶೋಧ ಕಾರ್ಯಾಗಾರ ವಾರಾಂತ್ಯದಲ್ಲಿ ನಗರ–ಪಟ್ಟಣಗಳಿಗೆ ಭೇಟಿ ನೀಡುವ ‘ಹೊಸ ಬೆಳಕು’ ತಂಡ, ಅಲ್ಲಿ ಒಂದು ದಿನದ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ ನಡೆಸುತ್ತದೆ.  ಕಾರ್ಯಾಗಾರದ ಕೊನೆಯಲ್ಲಿ ನಡೆಯುವ ಕಿರುಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಗರಿಷ್ಠ ಮೂವರು ಬಡ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತದೆ. ಆ ವಿದ್ಯಾರ್ಥಿಗಳ ಕೌಟುಂಬಿಕ ಹಿನ್ನೆಲೆಯನ್ನು ಪರಿಶೀಲಿಸಿ, ಅಂತಿಮವಾಗಿ ಉಚಿತ ತರಬೇತಿಗೆ ಆಯ್ಕೆ ಮಾಡುತ್ತದೆ.
 
‘ಬಡವಿದ್ಯಾರ್ಥಿಗಳ ಈ ಉಚಿತ ತರಬೇತಿಗಾಗಿ ಸಂಸ್ಥೆಯು ತೆಗೆದುಕೊಳ್ಳುವ ಶುಲ್ಕ ಕೇವಲ ಒಂದು ರೂಪಾಯಿ. ಉಚಿತವಾಗಿ ದೊರೆಯುವುದನ್ನು ಸಾಮಾನ್ಯವಾಗಿ  ಗಂಭೀರವಾಗಿ ತೆಗೆದುಕೊಳ್ಳದ ಕಾರಣ, ಒಂದು ರೂಪಾಯಿಯನ್ನು ಶುಲ್ಕವಾಗಿ ಪಡೆಯುವ ಜೊತೆಗೆ, ಅದರ ಮೌಲ್ಯವನ್ನು ತಿಳಿ ಹೇಳುವುದು ಇದರ ಉದ್ದೇಶವಾಗಿದೆ’ ಎನ್ನುತ್ತಾರೆ, ಮಂಜು ಮಿತ್ರ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಸೇರಿದಂತೆ ರಾಜ್ಯದಾದ್ಯಂತ ಇಂತಹ ಪ್ರತಿಭಾ ಶೋಧ ಕಾರ್ಯಾಗಾರಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.
 
ಕನ್ನಡ ಮಾಧ್ಯಮದಲ್ಲಿ ಐ.ಎ.ಎಸ್. ತರಬೇತಿ:  ಗ್ರಾಮೀಣ ಪ್ರದೇಶ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಐ.ಎ.ಎಸ್‌ ಮತ್ತು ಐ.ಪಿ.ಎಸ್‌.ನಂತಹ ಪರೀಕ್ಷೆಗಳತ್ತ ಗಮನಹರಿಸದಿರುವುದಕ್ಕೆ ಮುಖ್ಯ ಕಾರಣ – ಇಂಗ್ಲಿಷ್ ಮತ್ತು ಹಿಂದಿಬಲ್ಲವರಿಗಷ್ಟೆ ಈ ಪರೀಕ್ಷೆ ಎಂಬ ಭಾವನೆ. ಈ ಹೆದರಿಕೆಯನ್ನು ನಿವಾರಿಸುವುದಕ್ಕಾಗಿಯೇ ಸಂಸ್ಥೆ ಅಂತಹ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ ತರಬೇತಿಯನ್ನು ನೀಡಲಾಗುತ್ತದೆ.  
 
ಕ್ವಿಜ್, ಗುಂಪಿನ ಚರ್ಚೆ, ವಿಷಯತಜ್ಞ ಅಧಿಕಾರಿಗಳಿಂದಲೂ ಪಾಠ–ಪ್ರವಚನದ ಜೊತೆಗೆ, ನಿತ್ಯ ಹೋಮ್‌ವರ್ಕನ್ನು ನೀಡಲಾಗುತ್ತದೆ. ಅಭ್ಯರ್ಥಿಗಳ ಪ್ರಗತಿಯ ವಿಶ್ಲೇಷಣೆಗಾಗಿ ವಾರಕ್ಕೊಮ್ಮೆ ಪರೀಕ್ಷೆ ನಡೆಸಲಾಗುತ್ತದೆ. 
 
ಅಭ್ಯರ್ಥಿಗಳು ಯಾವ ಹುದ್ದೆಯ ಪರೀಕ್ಷೆಗೆ ತರಬೇತಿ ತೆಗೆದುಕೊಳ್ಳಲು ಬರುತ್ತಾರೊ, ಅದೇ ಹುದ್ದೆಯಲ್ಲಿರುವ ಅಧಿಕಾರಿಗಳು ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿ ತರಬೇತಿಗೆ ಆಯ್ಕೆ ಮಾಡುತ್ತಾರೆ. ಈಗಾಗಲೇ ಸೇವೆಯಲ್ಲಿರುವ ಅಧಿಕಾರಿಗಳು ಅಭ್ಯರ್ಥಿಗಳ ಸಾಮರ್ಥ್ಯವನ್ನು ಪರಿಶೀಲಿಸಿ ಸಮರ್ಥರನ್ನು ಮಾತ್ರ ಆಯ್ಕೆ ಮಾಡುತ್ತಾರೆ.
 
ಪ್ರಮಾಣ ಮತ್ತು ವೈಯಕ್ತಿಕ ವರದಿ: ಅಭ್ಯರ್ಥಿಯನ್ನು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಸೇರಿಸಿಕೊಳ್ಳುವುದಕ್ಕೂ ಮೊದಲು ಅವರ ತಂದೆ–ತಾಯಿಯ ಸಮ್ಮುಖದಲ್ಲಿ, ‘ಗುರಿ ಸಾಧನೆಯ ಹೊರತು, ಬೇರಾವ ಕಡೆಗೂ ಗಮನ ಹರಿಸುವುದಿಲ್ಲ. ನಿಮ್ಮ  ಬೆವರಿನ ಶ್ರಮವನ್ನು ವ್ಯರ್ಥ ಮಾಡುವುದಿಲ್ಲ’ ಎಂದು ಪ್ರಮಾಣ ಮಾಡಿಸಿಕೊಳ್ಳುವ ಮೂಲಕ ಅವರಲ್ಲಿ ಗುರಿಪ್ರಜ್ಞೆ ಸದಾ ಜಾಗೃತವಾಗಿರುವಂತೆ ಮಾಡಲಾಗುತ್ತದೆ.  
 
ಅಧಿಕಾರಿಗಳಿಗೆ ಕಡತಪ್ರಜ್ಞೆ ಜೊತೆಗೆ ವಾಸ್ತವದ ಅರಿವೂ ಇದ್ದೂ, ಜನಾನುರಾಗಿಯಾಗಿರಬೇಕು ಎಂಬ ಉದ್ದೇಶದಿಂದ ಸಾಮಾಜಿಕ ಅರಿವು ಮತ್ತು ಸೇವೆಯಂತಹ ಕಾರ್ಯಕ್ರಮಗಳನ್ನು ಸಂಸ್ಥೆ ಆಯೋಜಿಸುತ್ತದೆ. ಇದರ ಭಾಗವಾಗಿ ವಾರಾಂತ್ಯದಲ್ಲಿ ಅನಾಥಾಶ್ರಮ, ವೃದ್ಧಾಶ್ರಮ, ಸರ್ಕಾರಿ ಶಾಲೆ, ಆಸ್ಪತ್ರೆಗಳಿಗೆ ಅಭ್ಯರ್ಥಿಗಳು ಭೇಟಿ ನೀಡಬೇಕಾಗುತ್ತದೆ. 
 
250 ಮಂದಿಯ ಉದ್ಯೋಗಕ್ಕೆ ಮೆಟ್ಟಿಲು: 2015–16ನೇ ಸಾಲಿನಲ್ಲಿ ‘ಹೊಸಬೆಳಕು’ ಸಂಸ್ಥೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪಿ.ಎಸ್‌.ಐ (ಸಬ್‌ ಇನ್‌ಸ್ಪೆಕ್ಟರ್‌) ಹುದ್ದೆಗೆ ತರಬೇತಿ ಪಡೆದವರಲ್ಲಿ ಮಹಿಳೆಯರು ಸೇರಿದಂತೆ 40 ಮಂದಿ ಆಯ್ಕೆಯಾಗಿದ್ದಾರೆ. ಉಳಿದಂತೆ ಪ್ರಥಮ ದರ್ಜೆ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ (ಎಸ್‌ಡಿಎ) ಸಹಾಯಕ ಹುದ್ಧೆಗಳಿಗೆ 157 ಹಾಗೂ ಗ್ರೂಪ್ ‘ಸಿ’ ಹುದ್ಧೆಗೆ ಪರೀಕ್ಷೆ ಬರೆದವರಲ್ಲಿ 56 ಮಂದಿಗೆ ಕೆಲಸ ದೊರೆತಿದೆ. 
 
ಇದುವರೆಗೆ ಒಟ್ಟು 250 ಮಂದಿ ಸರ್ಕಾರಿ ಉದ್ಯೋಗ ಪಡೆಯಲು ಸಂಸ್ಥೆ ಮೆಟ್ಟಿಲಾಗಿದೆ. ಅಲ್ಲದೆ, ಕೆ.ಎ.ಎಸ್‌. ಪರೀಕ್ಷೆ ತರಬೇತಿ ಪಡೆದವರ ಪೈಕಿ 19 ಅಭ್ಯರ್ಥಿಗಳ ಅಂತಿಮ ಸಂದರ್ಶನಕ್ಕೆ ಆಯ್ಕೆಯಾಗಿರುವುದು ಸಂಸ್ಥೆಯ ಹೆಗ್ಗಳಿಕೆ.
 
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳ ಪೈಕಿ, ಮಹಿಳೆಯರಿಗಾಗಿಯೇ ಪ್ರತ್ಯೇಕ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವನ್ನು ಆರಂಭಿಸಿದ ಮೊದಲ ಸಂಸ್ಥೆ ‘ಹೊಸ ಬೆಳಕು’. ಇಲ್ಲಿ ತರಬೇತಿ ಪಡೆದವರ ಪೈಕಿ 18 ಮಂದಿ ಪಿಎಸ್‌ಐಗಳಾಗಿ ಆಯ್ಕೆಯಾಗಿದ್ದಾರೆ. ಇದೀಗ ‘ಮಹಿಳಾ ಸೂಪರ್–100 ಎಂಬ ಯೋಜನೆಯನ್ನು ಕೈಗೆತ್ತಿಕೊಂಡಿದೆ. 
****
ವಿಳಾಸ: ಹೊಸ ಬೆಳಕು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಮತ್ತು ಮಹಿಳಾ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, ನಂ. 280, 1ನೇ ಮಹಡಿ, 20ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು – 560040
ಸಂಪರ್ಕ ಸಂಖ್ಯೆ: 9686134266/ 9731394366

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.