ADVERTISEMENT

ಚೆಸ್‌ ಪ್ರತಿಭೆಗಳ ಕಣಜ

ಮೈಸೂರು

ಕೆ.ಓಂಕಾರ ಮೂರ್ತಿ
Published 11 ಸೆಪ್ಟೆಂಬರ್ 2016, 19:30 IST
Last Updated 11 ಸೆಪ್ಟೆಂಬರ್ 2016, 19:30 IST
ಚೆಸ್‌ ಪ್ರತಿಭೆಗಳ ಕಣಜ
ಚೆಸ್‌ ಪ್ರತಿಭೆಗಳ ಕಣಜ   

ದಾ ಒಂದಿಲ್ಲೊಂದು ಚೆಸ್‌ ಟೂರ್ನಿಗೆ ವೇದಿಕೆ ಒದಗಿಸುತ್ತಿರುವ ಮೈಸೂರು ಜಿಲ್ಲೆ ಚೆಸ್‌ ಪ್ರತಿಭೆಗಳ ಕಣಜ. ಆಟಗಾರರ ಪಾಲಿಗೆ ಸ್ಫೂರ್ತಿಯ ತಾಣ. ನಗರ ಹಾಗೂ ಗ್ರಾಮೀಣ ಭಾಗದ ಪೋಷಕರು ತಮ್ಮ ಮಕ್ಕಳನ್ನು ಚೆಸ್‌ ತರಬೇತಿ ಕೇಂದ್ರಗಳಿಗೆ ಸೇರಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ.

ತರಬೇತಿ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆ ಎತ್ತುತ್ತಿವೆ. ಹೀಗಾಗಿ, ರಾಷ್ಟ್ರದ ಚೆಸ್‌ ಭೂಪಟದಲ್ಲಿ ಮೈಸೂರು ಪದೇಪದೇ ಕಾಣಿಸಿಕೊಳ್ಳುತ್ತಿರುತ್ತದೆ. ಈ ಮೂಲಕ ರಾಜ್ಯದ ಹಿರಿಮೆಯನ್ನು ಎತ್ತಿ ಹಿಡಿದಿದೆ.

ಒಂದು ಕಾಲವಿತ್ತು. ಚೆಸ್‌ ಎಂದರೆ ಅದು ಕೇವಲ ತಮಿಳುನಾಡಿಗೆ ಸೀಮಿತವಾಗಿತ್ತು. ಯಾವುದೇ ಚಾಂಪಿಯನ್‌ ಷಿಪ್‌ ಇರಲಿ, ತಮಿಳುನಾಡು ಆಟಗಾರರಿಗೆ ಪ್ರಶಸ್ತಿ ಖಚಿತ. ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರ ಆಟಗಾರರು ನಂತರದ ಸ್ಥಾನದಲ್ಲಿರುತ್ತಿದ್ದರು.

ಅದು ನಿಜ, ವಿಶ್ವನಾಥನ್‌ ಆನಂದ್‌, ಕೊನೇರು ಹಂಪಿ, ಪಿ.ಹರಿಕೃಷ್ಣ, ಬಿ.ಆಧಿಬನ್‌, ‌‌ಸೇತುರಾಮನ್‌, ಸೂರ್ಯಶೇಖರ್‌ ಗಂಗೂಲಿ, ಕೆ.ಶಶಿಕಿರಣ್‌, ಅಭಿಜಿತ್‌ ಗುಪ್ತಾ, ಅಭಿಜಿತ್‌ ಕುಂಟೆ, ಡಿ.ಹರಿಕಾ, ಸೌಮ್ಯಾ ಸ್ವಾಮಿನಾಥನ್, ಸಹಜ್‌ ಗ್ರೋವರ್, ಮೇರಿ ಆ್ಯನ್ ಗೋಮ್ಸ್‌, ಸ್ವಾತಿ ಘಾಟೆ, ನಿಶಾ ಮೊಹೊತೊ, ಪದ್ಮಿನಿ ರಾವತ್‌... ಹೀಗೆ ಈ ರಾಜ್ಯಗಳ ಆಟಗಾರರ ದೊಡ್ಡ ಪಟ್ಟಿಯೇ ಸಿಗುತ್ತದೆ.

ಈ ಪಟ್ಟಿಯಲ್ಲಿ ಸೇರಿದ್ದು ಕರ್ನಾಟಕದ ಎಂ.ಎಸ್‌. ತೇಜ್‌ಕುಮಾರ್‌ ಹಾಗೂ ಗಿರೀಶ್‌ ಕೌಶಿಕ್‌. ವಿಶೇಷವೆಂದರೆ ಇವರೆಲ್ಲಾ ಮೈಸೂರಿನವರು.

ಕೆಲ ತಿಂಗಳ ಹಿಂದೆ ಎಂಟು ವರ್ಷದ ಕೆ.ಜಿ.ಆರ್‌ ಅನಘಾ ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ ಆದಳು. ಚೆನ್ನೈನಲ್ಲಿ ನಡೆದ ಏಳು ವರ್ಷದೊಳಗಿನವರ  ಟೂರ್ನಿಯಲ್ಲಿ ಆತಿಥೇಯ ಆಟಗಾರ್ತಿಯರನ್ನೇ  ಸೋಲಿಸಿ ಅಪೂರ್ವ ಪ್ರದರ್ಶನ ತೋರಿದಳು.

ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮದ ಈ ಹುಡುಗಿ ರಷ್ಯಾದ ಜಾರ್ಜಿಯಾದಲ್ಲಿ ಅಕ್ಟೋಬರ್‌ ನಲ್ಲಿ ನಡೆಯಲಿರುವ ವಿಶ್ವ ಕೆಡೆಟ್‌ ಚೆಸ್‌ ಟೂರ್ನಿಯಲ್ಲಿ ಆಡಲು ಸಿದ್ಧತೆ ನಡೆಸುತ್ತಿದ್ದಾಳೆ.

ರಾಜ್ಯದ ವಿವಿಧ ನಗರಗಳಿಗೆ ಹೋಲಿಸಿದರೆ ಹೆಚ್ಚಿನ ಟೂರ್ನಿಗಳು ನಡೆಯುತ್ತಿರುವುದು ಮೈಸೂರಿನಲ್ಲಿ. ಹಿಂದೆ ಶಿವಮೊಗ್ಗ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಹೆಚ್ಚು ಟೂರ್ನಿಗಳು ನಡೆಯುತ್ತಿದ್ದವು. ಆ ಖ್ಯಾತಿ ಈಗ ಸಾಂಸ್ಕೃತಿಕ ನಗರಿಗೆ ಲಭಿಸಿದೆ.

‘ಸಂಘ ಸಂಸ್ಥೆಗಳು, ತರಬೇತಿ ಕೇಂದ್ರಗಳು, ಜಿಲ್ಲಾ ಚೆಸ್‌ ಸಂಸ್ಥೆಗಳು ಸಕ್ರಿಯವಾಗಿವೆ. ಅಪಾರ ಸಂಖ್ಯೆಯಲ್ಲಿ ನಡೆಯುತ್ತಿರುವ  ವಿವಿಧ  ವಯೋಮಿತಿಯ  ಟೂರ್ನಿಗಳು, ಇಲ್ಲಿನ ಪ್ರತಿಭೆಗಳು ವಿವಿಧ  ಟೂರ್ನಿಗಳಲ್ಲಿ  ಪಾಲ್ಗೊಂಡು ಪ್ರಶಸ್ತಿ  ಜಯಿಸುತ್ತಿರುವುದು ಇದಕ್ಕೆ ಸಾಕ್ಷಿ.

ಹೀಗಾಗಿ, ಈ ಭಾಗದಲ್ಲಿ ಚೆಸ್‌ ಜನಪ್ರಿಯ ಕ್ರೀಡೆಯಾಗಿ ಹೊರಹೊಮ್ಮಿದೆ. ಚೆಸ್ ಸೆಂಟರ್‌ನಲ್ಲಿ 70 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ’ ಎನ್ನುತ್ತಾರೆ ಮೈಸೂರು ಚೆಸ್‌ ಸೆಂಟರ್‌ನ ನಾಗೇಂದ್ರ. ಕೆಲ ವರ್ಷಗಳ ಹಿಂದೆ ಗಿರೀಶ್‌ ಕೌಶಿಕ್‌ ಅವರು 10 ವರ್ಷದೊಳಗಿ ನವರ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್‌ ಆಗಿದ್ದು ಹೊಸ ಅಲೆಯನ್ನೇ ಸೃಷ್ಟಿಸಿತ್ತು.

ಅಂತರರಾಷ್ಟ್ರೀಯ ಮಾಸ್ಟರ್‌ ಎಂ.ಎಸ್‌.ತೇಜ್‌ ಕುಮಾರ್‌, ಹಿರಿಯ ಆಟಗಾರರಾದ ಎಂ.ಪಿ.ಅಜಿತ್‌, ಶ್ರೀರಾಮ್‌ ಸರ್ಜಾ, ರಾಜ್ಯದ ಮಾಜಿ ಚಾಂಪಿಯನ್‌ಗಳಾದ ಎಂ.ಕವನಾ, ವೈ.ಜಿ.ವಿಜಯೇಂದ್ರ, ಜೂನಿಯರ್‌ ಚಾಂಪಿಯನ್‌ಗಳಾದ ಎಚ್‌.ಆರ್‌.ಮಾನಸಾ, ಎಂ.ತುಳಸಿ, ಮಾಧುರಿ, ಧಾತ್ರಿ ಉಮೇಶ್‌, ಎಸ್‌.ಎನ್‌.ಜತಿನ್‌, ವಿ.ದೀಕ್ಷಾ, ಅಕ್ಷತಾ ರಾಜು, ಪ್ರಸಿದ್ಧಿ ಭಟ್‌, ಅನಘಾ ಅವರಂಥ ಪ್ರತಿಭೆಗಳು ಈ ಜಿಲ್ಲೆಯಲ್ಲಿದ್ದಾರೆ.

ಗ್ರೀಸ್‌ನಲ್ಲಿ ನಡೆದ ವಿಶ್ವ ಅಮೆಚೂರ್‌ ಚೆಸ್‌ ಚಾಂಪಿಯನ್‌ಷಿಪ್‌ಗೆ ಅಖಿಲ ಭಾರತ ಚೆಸ್‌ ಫೆಡರೇಷನ್‌ ಆಯ್ಕೆ ಮಾಡಿದ್ದ ಏಕೈಕ ಆಟಗಾರ ಎಂ.ಪಿ.ಅಜಿತ್‌. 2000 ರೇಟಿಂಗ್‌ನೊಳಗಿನವರ ವಿಭಾಗದಲ್ಲಿ ಅವರು ಎರಡನೇ ಸ್ಥಾನ ಪಡೆದಿದ್ದರು.

ಇದೇ ಟೂರ್ನಿಯ 1700 ರೇಟಿಂಗ್‌ನೊಳಗಿನವರ ವಿಭಾಗದಲ್ಲಿ ಜತಿನ್‌ ಚಾಂಪಿಯನ್‌ ಆಗಿದ್ದರು. ‘ವಿದೇಶಗಳಲ್ಲಿ ನಡೆಯುವ ಟೂರ್ನಿಗಳಲ್ಲಿ ಹೆಚ್ಚು ಪಾಲ್ಗೊಂಡಂತೆ ಕೌಶಲ ಹೆಚ್ಚುತ್ತದೆ. ಆದರೆ, ಪ್ರಾಯೋಜಕರ ಕೊರತೆ ಕಾಡುತ್ತಿದೆ. ಗ್ರೀಸ್‌ನಲ್ಲಿ ನಡೆದ ಟೂರ್ನಿಗೆ ಹೋಗಿ ಬರಲು ಪುತ್ರನಿಗೆ 2 ಲಕ್ಷ ರೂಪಾಯಿ ಖರ್ಚಾಯಿತು’ ಎನ್ನುತ್ತಾರೆ ಜತಿನ್‌ ತಂದೆ ನಾಗಭೂಷಣ್‌.

ಕೌಶಿಕ್‌ ಎಂಬ ಪ್ರತಿಭೆ
ದೇಶ ಕಂಡ ಪ್ರತಿಭಾವಂತ ಚೆಸ್‌ ಆಟಗಾರರಲ್ಲಿ ಗಿರೀಶ್‌ ಕೌಶಿಕ್ ಕೂಡ ಒಬ್ಬರು. ಅವರು ಹಣಕಾಸಿನ ಕೊರತೆಯಿಂದಾಗಿ 2–3 ವರ್ಷಗಳಿಂದ ಯಾವುದೇ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಬದಲಾಗಿ ವ್ಯಾಸಂಗಕ್ಕೆ ಆದ್ಯತೆ ನೀಡಿದ್ದರು. ಅವರೀಗ ಮತ್ತೆ ಕಣಕ್ಕಿಳಿದಿದ್ದಾರೆ. ಮುಂಬೈನಲ್ಲಿ ಈಚೆಗೆ ನಡೆದ ಮೇಯರ್‌ ಕಪ್‌ ಇಂಟರ್‌ನ್ಯಾಷನಲ್‌ ಚೆಸ್‌ ಟೂರ್ನಿಯಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದಾರೆ.

‘ಚೆಸ್‌ನಿಂದ ದೂರ ಉಳಿಯಲು ಸಾಧ್ಯವೇ ಇಲ್ಲ. ಇಷ್ಟು ದಿನ ವ್ಯಾಸಂಗಕ್ಕೆಂದು ಸಮಯ ಮೀಸಲಿಟ್ಟಿದ್ದೆ. ಇನ್ನುಮುಂದೆ ವ್ಯಾಸಂಗ ಹಾಗೂ ಆಟ ಎರಡೂ ಒಟ್ಟಿಗೆ ಸಾಗಲಿವೆ’ ಎಂದು ಅವರು ಹೇಳುತ್ತಾರೆ. ಅವರೀಗ ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್‌ ಅಂಡ್‌ ಕಮ್ಯೂನಿಕೇಷನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಮೈಸೂರಿನಲ್ಲಿ ಚೆಸ್‌ ಬಗ್ಗೆ ಆಸಕ್ತಿ ಬೆಳೆಯಲು ಮತ್ತೊಂದು ಕಾರಣವೆಂದರೆ ಇಲ್ಲಿರುವ ಚೆಸ್‌ ತರಬೇತಿ ಕೇಂದ್ರಗಳು. ಅದಕ್ಕೆ ಮೈಸೂರು ಚೆಸ್‌ ಸೆಂಟರ್‌, ಮೈಸೂರು ಪ್ರೊಫೆಷನಲ್‌ ಚೆಸ್‌ ಅಕಾಡೆಮಿ, ಟೆರೇಷಿಯನ್‌ ಸ್ಪೋರ್ಟ್ಸ್‌ ಅಕಾಡೆಮಿ, ಮೈಸೂರು ಚೆಸ್‌ ಕ್ಲಬ್‌, ಮೈಸೂರು ಚೆಸ್‌ ಸ್ಕೂಲ್‌ ಉದಾಹರಣೆ.

ADVERTISEMENT

ಇಲ್ಲಿ ಪ್ರತಿದಿನ ತರಬೇತಿ ನೀಡಲಾಗುತ್ತದೆ. ಅಲ್ಲದೆ, ಆಗಾಗ್ಗೆ ಟೂರ್ನಿಗಳು ನಡೆಯುತ್ತಲೇ ಇರುತ್ತವೆ. ಮೈಸೂರು ಜಿಲ್ಲಾ ಚೆಸ್‌ ಸಂಸ್ಥೆಯೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಅಂಧರ ಟೂರ್ನಿಗಳು ನಡೆಯುತ್ತಿರುತ್ತವೆ.

ನಂಜನಗೂಡಿನ ಕಳಲೆ ಗ್ರಾಮದ ಸುಮಾರು 15 ಮಕ್ಕಳು ರಾಜ್ಯಮಟ್ಟದ ವಿವಿಧ ವಯೋಮಿತಿ ಟೂರ್ನಿಗಳಲ್ಲಿ ಮಿಂಚುತ್ತಿದ್ದಾರೆ. ಖಾಸಗಿ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿರುವ ಕೆ.ಎಂ.ಗೋಪಿನಾಥ್‌ ಎಂಬುವರು ಉಚಿತವಾಗಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.

ಅಷ್ಟೇ ಅಲ್ಲ; ದೊಡ್ಡಮಟ್ಟದ ಟೂರ್ನಿಗಳನ್ನು ಇಲ್ಲಿ ಆಯೋಜಿಸುತ್ತಿರುತ್ತಾರೆ. ಈಚೆಗೆ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಆಶ್ರಯದ ಅಖಿಲ ಭಾರತ ಸಾರ್ವಜನಿಕ ಉದ್ದಿಮೆಗಳ ಚೆಸ್‌ ಟೂರ್ನಿ ನಡೆದಿತ್ತು. ಕೊನೇರು ಹಂಪಿ ಸೇರಿದಂತೆ ದಿಗ್ಗಜ ಆಟಗಾರರು ಪಾಲ್ಗೊಂಡಿದ್ದರು.

‘ಯುವ ಪ್ರತಿಭೆಗಳಿಗೆ ಕಾರ್ಪೊರೇಟ್‌ ಕಂಪೆನಿಗಳು, ಕ್ರೀಡಾ ಸಂಸ್ಥೆಗಳು ಹೆಚ್ಚು ಪ್ರೋತ್ಸಾಹ ನೀಡಬೇಕು. ಹೆಚ್ಚಿನ ತರಬೇತಿಗೆ ಹಾಗೂ ವಿದೇಶದ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಆರ್ಥಿಕ ಸಹಾಯ ನೀಡಬೇಕು. ಆಗ ಈ ನಗರಿಯಿಂದಲೂ ಗ್ರ್ಯಾಂಡ್‌ ಮಾಸ್ಟರ್‌ಗಳು ಹೊರಹೊಮ್ಮಬಹುದು’ ಎಂದು ಹೇಳುತ್ತಾರೆ ಜಿಲ್ಲಾ ಚೆಸ್‌ ಸಂಸ್ಥೆಯ ಕಾರ್ಯದರ್ಶಿ ಕೆ.ಆರ್‌.ಶಿವರಾಮೇಗೌಡ.

ಪಕ್ಕದ ಜಿಲ್ಲೆ ಮಂಡ್ಯದಿಂದಲೂ ಹಲವು ಆಟಗಾರರು ರಾಜ್ಯ, ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಇಲ್ಲೂ ಹೆಚ್ಚು ಟೂರ್ನಿಗಳು ನಡೆಯುತ್ತಿರುತ್ತವೆ. ‘ಚೆಸ್‌ ಬಗ್ಗೆ ಮಕ್ಕಳಿಗೆ ಆಸಕ್ತಿ ಇದೆ. ಆದರೆ, ಅದೇ ಆಸಕ್ತಿ ಸರ್ಕಾರ ಹಾಗೂ ಪ್ರಾಯೋಜಕರಿಗೆ ಇಲ್ಲ.

ಹೀಗಾಗಿ, ಯುವ ಪ್ರತಿಭೆಗಳು ಆರ್ಥಿಕ ಸಮಸ್ಯೆ ಕಾರಣ ಕ್ರೀಡೆಯಿಂದ ಹಿಂದೆ ಸರಿಯುತ್ತಿದ್ದಾರೆ’ ಎಂದು ನುಡಿಯುತ್ತಾರೆ ರಾಷ್ಟ್ರೀಯ ಫಿಡೆ ಆರ್ಬಿಟರ್‌ ಡಿ.ಜಿ.ರವಿಕಿರಣ. ರಾಜ್ಯದಲ್ಲಿ ಮೊದಲ ಬಾರಿ ಮೈಸೂರಿನಲ್ಲಿ ಚೆಸ್‌ ಆರ್ಬಿಟರ್‌ಗಳಿಗೆ ತರಬೇತಿ ನೀಡಲಾಗುತ್ತಿದೆ.

ಒಬ್ಬ ಮಹಿಳಾ ಆರ್ಬಿಟರ್‌ (ಬಬಿತಾ) ಕೂಡ ಇಲ್ಲಿದ್ದಾರೆ. ಹೀಗೆ, ಮೈಸೂರು ಜಿಲ್ಲೆಯು ಚೆಸ್‌ ಆಟಗಾರರ ಪಾಲಿಗೆ ಸ್ಫೂರ್ತಿಯ ತಾಣವಾಗಿ ಪರಿಣಮಿಸಿದೆ.

**
ಗ್ರ್ಯಾಂಡ್‌ಮಾಸ್ಟರ್‌ ಗೌರವಕ್ಕಾಗಿ...

ಮೈಸೂರಿನ ತೇಜ್‌ಕುಮಾರ್‌ ಹಾಗೂ ಗಿರೀಶ್‌ ಕೌಶಿಕ್‌ ಅವರು ಗ್ರ್ಯಾಂಡ್‌ಮಾಸ್ಟರ್‌ ಗೌರವ ಗಿಟ್ಟಿಸುವ ಸನಿಹ ಇದ್ದಾರೆ. ಅಂತರರಾಷ್ಟ್ರೀಯ ಮಾಸ್ಟರ್‌ ಗೌರವ ಗಿಟ್ಟಿಸಿರುವ ತೇಜ್‌ಕುಮಾರ್‌ (2,445 ಪಾಯಿಂಟ್‌) ಮೂರು ಗ್ರ್ಯಾಂಡ್‌ಮಾಸ್ಟರ್‌ ನಾರ್ಮ್ಸ್‌ ಪೂರ್ಣಗೊಳಿಸಿದ್ದಾರೆ.

ಅವರಿಗೆ 45 ಇಎಲ್ಒ ಪಾಯಿಂಟ್‌ಗಳ ಅಗತ್ಯವಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಚೆಸ್‌ ಲೀಗ್‌ ಟೂರ್ನಿ ನಡೆಸಲಾಯಿತು. ಈ ಟೂರ್ನಿಯಲ್ಲಿ ಆಡಿದ ಕರ್ನಾಟಕದ ಏಕೈಕ ಆಟಗಾರ ತೇಜ್‌ಕುಮಾರ್‌.

ಗಿರೀಶ್‌ ಕೌಶಿಕ್‌ ಅವರಿಗೆ ಗ್ರ್ಯಾಂಡ್‌ಮಾಸ್ಟರ್‌ ಗೌರವ ಗಿಟ್ಟಿಸಲು ಇನ್ನು 94 ಇಎಲ್‌ಒ ಪಾಯಿಂಟ್‌ಗಳ ಅಗತ್ಯವಿದೆ. ಅವರೀಗ 2,406 ಇಎಲ್‌ಒ ರೇಟಿಂಗ್‌ ಹೊಂದಿದ್ದಾರೆ.

‘ನನ್ನ ಮುಖ್ಯ ಗುರಿ ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಗಿಟ್ಟಿಸುವುದು. ಆ ಕನಸು ನನಸು ಮಾಡಿಕೊಳ್ಳಲು ಹೆಚ್ಚು ಟೂರ್ನಿಗಳಲ್ಲಿ ಆಡಬೇಕು. ಉತ್ತಮ ಆಟಗಾರರ ಎದುರು ಗೆಲ್ಲಬೇಕು’ ಎನ್ನುತ್ತಾರೆ ಕೌಶಿಕ್‌.

ಓದಿನಲ್ಲೂ ಮುಂದು, ಆಟಕ್ಕೂ ಸೈ
ರಾಷ್ಟ್ರೀಯ ಶಾಲಾ ಚೆಸ್‌ ಚಾಂಪಿಯನ್‌ ಆಗಿರುವ ಎಂ.ತುಳಸಿ ಓದಿಗೂ ಸೈ, ಆಟಕ್ಕೂ ಸೈ. ಕಳೆದ ಮೇನಲ್ಲಿ ಪ್ರಕಟವಾದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ 95.68 ಅಂಕ ಪಡೆದಿರುವ ಅವರು ರಾಜ್ಯಮಟ್ಟದ ವಿವಿಧ ವಯೋಮಿತಿ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದಾರೆ.

‘ಆಟದಿಂದಾಗಿ ಯಾವತ್ತೂ ಓದಿನ ಮೇಲೆ ಪರಿಣಾಮ ಉಂಟಾಗಿಲ್ಲ. ಟೂರ್ನಿಯಲ್ಲಿ ಆಡಲು ವಿವಿಧ ರಾಜ್ಯಗಳಿಗೆ ತೆರಳಿದರೂ ವಾಪಸ್‌ ಬಂದ ಕೂಡಲೇ ತಪ್ಪಿಹೋದ ಪಾಠವನ್ನು ಗೆಳೆಯರು ಹಾಗೂ ಶಿಕ್ಷಕರ ನೆರವಿನಿಂದ ಸರಿದೂಗಿಸಿ ಕೊಳ್ಳುತ್ತೇನೆ’ ಎಂದು ತುಳಸಿ ಹೇಳುತ್ತಾರೆ.

***
ಮೈಸೂರು ಭಾಗದಲ್ಲಿ ಹಿಂದಿನಿಂದಲೂ ಚೆಸ್‌ ಚಟುವಟಿಕೆಗಳು ಜೋರು. ನಗರದ ಮಕ್ಕಳು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವುದಲ್ಲದೆ ಬುದ್ಧಿಶಕ್ತಿ ಹಾಗೂ ಕೌಶಲ ಹೆಚ್ಚುತ್ತದೆ. ಸರ್ಕಾರದಿಂದಲೂ ಹೆಚ್ಚು ಪ್ರೋತ್ಸಾಹ ಸಿಗಬೇಕು.
-ಕೆ.ಆರ್‌.ಶಿವರಾಮೇಗೌಡ, ಕಾರ್ಯದರ್ಶಿ, ಮೈಸೂರು ಜಿಲ್ಲಾ ಚೆಸ್‌ ಸಂಸ್ಥೆ


***
ರಾಜ್ಯದಲ್ಲಿ ಉಳಿದ ನಗರಗಳಿಗೆ ಹೋಲಿಸಿದರೆ ಮೈಸೂರಿನಲ್ಲೇ ಹೆಚ್ಚು ಟೂರ್ನಿಗಳನ್ನು ಆಯೋಜಿಸಲಾಗುತ್ತಿದೆ. ಈ ತಿಂಗಳ ಅಂತ್ಯದಲ್ಲಿ ಅಖಿಲ ಭಾರತ ಚೆಸ್‌ ಟೂರ್ನಿ ಆಯೋಜಿಸುತ್ತಿದ್ದೇವೆ. 1.5 ಲಕ್ಷ ರೂಪಾಯಿ ಬಹುಮಾನ ಮೊತ್ತವಿರಲಿದೆ.
-ನಾಗೇಂದ್ರ, ಮೈಸೂರು ಚೆಸ್‌ ಸೆಂಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.