ADVERTISEMENT

ಜ್ಞಾನ ದಾಸೋಹಿ

ಕೆಎಲ್‌ಇಗೆ ನೂರರ ಸಂಭ್ರಮ

ವಿನಾಯಕ ಭಟ್ಟ‌
Published 22 ನವೆಂಬರ್ 2015, 19:30 IST
Last Updated 22 ನವೆಂಬರ್ 2015, 19:30 IST

ಏಳು ಜನ ವಿದ್ಯಾರ್ಥಿಗಳು ಹುಟ್ಟೂರು ಬಿಟ್ಟು ಕಲಿಯಬೇಕಾದಾಗ ಹುಟ್ಟಿದ ಕನಸಿನ ಬೀಜ ಅದು. ‘ನಾವು ಪಡುವ ಕಷ್ಟ ನಮ್ಮ ಮಕ್ಕಳು ಪಡಬಾರದು. ನಮ್ಮ ಪ್ರಾಂತ್ಯದಲ್ಲಿಯೇ ಶಿಕ್ಷಣ ದೊರೆಯಬೇಕು. ಮನೆ ಬಿಟ್ಟು ಓದುವ ಕಷ್ಟ ಮಕ್ಕಳಿಗೆ ಬೇಡ, ಓದಿಸುವ ಖರ್ಚು ಹಿರಿಯರಿಗೆ ಬೇಡ’ ಹೀಗೆ ಅನಿಸಿದ್ದೇ ಏಳೂ ಜನರು ತಮ್ಮ ಊರಿನಲ್ಲಿಯೇ ಶಿಕ್ಷಣ ಸಂಸ್ಥೆ ತೆರೆಯಬೇಕೆಂದು ಪಣ ತೊಟ್ಟರು. ಇವರಿಗೆ ಪ್ರೇರಣೆಯಾಗಿದ್ದು ಡೆಕ್ಕನ್‌ ಎಜುಕೇಶನ್‌ ಸೊಸೈಟಿಯ ಶೈಕ್ಷಣಿಕ ಚಟುವಟಿಕೆಗಳು. ಆ ಏಳು ಜನರು   ಪಂಡಿತಪ್ಪ ಚಿಕ್ಕೋಡಿ, ಶಿ.ಶಿ. ಬಸವನಾಳ, ಎಂ.ಆರ್ ಸಾಖರೆ, ಬಿ.ಬಿ. ಮಮದಾಪುರ, ಬಿ.ಎಸ್.ಹಂಚಿನಾಳ, ಎಚ್.ಎಫ್ ಕಟ್ಟಿಮನಿ ಹಾಗೂ ಸರದಾರ ವೀರನಗೌಡ ಪಾಟೀಲ.

ಶಿಕ್ಷಣ ಮುಗಿಸಿದ ಬಳಿಕ ಈ ಏಳು ಸ್ನೇಹಿತರು ಬೆಳಗಾವಿಗೆ ಬಂದು ರಾವ್‌ ಬಹಾದ್ದೂರ್‌ ಅರಟಾಳ ರುದ್ರಗೌಡರ ಅಧ್ಯಕ್ಷತೆಯಲ್ಲಿ 1916ರ ನವೆಂಬರ್‌ 13ರಂದು ‘ಕರ್ನಾಟಕ ಲಿಂಗಾಯತ ಎಜ್ಯುಕೇಶನ್‌ (ಕೆ.ಎಲ್‌.ಇ) ಸೊಸೈಟಿ’ಯನ್ನು ಆರಂಭಿಸಿದರು. ಕೋಟೆ ಆವರಣದಲ್ಲಿ ಬಾಡಿಗೆ ಕಟ್ಟಡದಲ್ಲಿ ಗಿಲಗಂಚಿ ಅರಟಾಳ ಪ್ರೌಢಶಾಲೆಯನ್ನು ಆರಂಭಿಸಿದರು. ಈ ಸಂಸ್ಥೆಯ ಉದ್ದೇಶ ‘ಜ್ಞಾನ ದಾಸೋಹ’ವೇ ಆಗಿತ್ತು. ಸಂಸ್ಥಾಪಕರೇ ಶಿಕ್ಷಕರಾಗಿ ಕಾಯಕವನ್ನಾರಂಭಿಸಿದರು. ಇದೀಗ ಬೋಧಿ ವೃಕ್ಷದಂತೆ ಹೆಮ್ಮರವಾಗಿ ಬೆಳೆದಿದೆ.

ಇದರ ನೆರಳಿನಲ್ಲಿ ಹಲವಾರು ಜನ ಮಹನೀಯರು ಜ್ಞಾನದಾಸೋಹವನ್ನು ಸವಿದಿದ್ದಾರೆ. ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಬಳಿಕ ಊರೂರು ಅಲೆದು ದಾನಿಗಳಿಂದ ನಿಧಿ ಸಂಗ್ರಹಿಸಿ ಸಂಸ್ಥೆಯನ್ನು ಕಟ್ಟಿದರು. ಸಂಸ್ಥೆಯ ಪಾಲಿಗೆ ಸಪ್ತರ್ಷಿಗಳಾದ ಇವರು ಬಿತ್ತಿದ ಬೀಜ ಸಸಿಯಾಗಿ ಬೆಳೆದು ಇಂದು ಬೃಹತ್‌ ಆಲದ ಮರದಂತೆ ಬೆಳೆದು ನಿಂತಿದೆ. ಶತಮಾನದ ಸಂಭ್ರಮದಲ್ಲಿರುವ ಕೆಎಲ್‌ಇ ಸೊಸೈಟಿ 250 ಅಂಗ ಸಂಸ್ಥೆಗಳನ್ನು ಹೊಂದಿದೆ. ಸದ್ಯ 1.25 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ.

ಶತಮಾನದ ಹಾದಿ 
ಈ ಭಾಗದ ಜನರಿಗೆ ಉನ್ನತ ಶಿಕ್ಷಣವನ್ನು ನೀಡಬೇಕು ಎಂಬ ಉದ್ದೇಶದಿಂದ 1933ರಲ್ಲಿ ಬೆಳಗಾವಿಯಲ್ಲಿ ಲಿಂಗರಾಜ ಕಾಲೇಜನ್ನು ಆರಂಭಿಸಲಾಯಿತು. 1944ರಲ್ಲಿ ಬೆಳಗಾವಿಯಲ್ಲಿ ರಾಜಾ ಲಖಮಗೌಡ ವಿಜ್ಞಾನ ಕಾಲೇಜು; 1947ರಲ್ಲಿ ಹುಬ್ಬಳ್ಳಿಯಲ್ಲಿ ಜೆ.ಜಿ. ವಾಣಿಜ್ಯ ಕಾಲೇಜು ಹಾಗೂ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್‌ ಕಾಲೇಜು ತೆರೆಯಲಾಯಿತು. ಇದೀಗ ಬಿವಿಬಿ ಕಾಲೇಜು ತಾಂತ್ರಿಕ ಸ್ವಾಯತ್ತ ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿದೆ.

1963ರಲ್ಲಿ ಬೆಳಗಾವಿಯಲ್ಲಿ ಜವಾಹರಲಾಲ್‌ ನೆಹರು ವೈದ್ಯಕೀಯ ಮಹಾವಿದ್ಯಾಲಯವನ್ನು ಆರಂಭಿಸುವ ಮೂಲಕ ಆರೋಗ್ಯ ವಿಜ್ಞಾನ ಶಿಕ್ಷಣ ಕ್ಷೇತ್ರಕ್ಕೂ ಸಂಸ್ಥೆ ಪದಾರ್ಪಣೆ ಮಾಡಿತು. ಜೆಎನ್‌ಎಂಸಿಯು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. 1986 ಆರಂಭಗೊಂಡ ಕೆ.ಎಲ್‌.ಇ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯು ಉತ್ತರ ಕರ್ನಾಟಕ ಭಾಗದಲ್ಲಿ ಆರೋಗ್ಯ ಸೇವೆಗೆ ಖ್ಯಾತಿ ಪಡೆದಿದೆ.

ವಿವಿಧ ಸರ್ಕಾರಿ ಯೋಜನೆಗಳಡಿ ಬಡ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಸೌಲಭ್ಯ ಲಭಿಸುತ್ತಿದೆ. ಇದೀಗ ಡಾ. ಪ್ರಭಾಕರ ಕೋರೆ ಅವರ ಹೆಸರನ್ನಿಡಲಾಗಿದೆ. ಬೆಳಗಾವಿಯಲ್ಲಿ ಬಿ.ಎಂ. ಕಂಕಣವಾಡಿ ಆಯುರ್ವೇದ ಕಾಲೇಜು, ಡಾ. ಎಂ.ಎಸ್‌. ಶೇಷಗಿರಿ ಎಂಜಿನಿಯರಿಂಗ್‌ ಹಾಗೂ ಚಿಕ್ಕೋಡಿಯಲ್ಲಿ ಕೆಎಲ್‌ಇ ಎಂಜಿನಿಯರಿಂಗ್‌ ಕಾಲೇಜನ್ನು ತೆರೆದು ಜಿಲ್ಲೆಯನ್ನು ‘ಎಜ್ಯುಕೇಶನ್‌ ಹಬ್‌’ ಅನ್ನಾಗಿ ಮಾಡಿದೆ. 2006ರಲ್ಲಿ ಕೆಎಲ್‌ಇ ಸ್ವಾಯತ್ತ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂತು. ಇದೀಗ ಕೃಷಿ ವಿಜ್ಞಾನ ಕೇಂದ್ರವನ್ನೂ ಆರಂಭಿಸಲಾಗಿದೆ.

ದುಬೈನಲ್ಲಿ ಬಿಲ್ವಾ ಅಂತರರಾಷ್ಟ್ರೀಯ ಶಾಲೆ, ನವದೆಹಲಿಯಲ್ಲಿ ಬಸವಾ ಅಂತರರಾಷ್ಟ್ರೀಯ ಶಾಲೆಯನ್ನೂ ತೆರೆಯಲಾಗಿದೆ. ಸೇನ್ಸ್‌ ಮಲೇಷ್ಯಾ ವಿಶ್ವವಿದ್ಯಾಲಯದ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಮಲೇಷ್ಯಾದ ವಿದ್ಯಾರ್ಥಿಗಳಿಗಾಗಿ ವೈದ್ಯಕೀಯ ಶಿಕ್ಷಣ ಯೋಜನೆಯನ್ನು ಆರಂಭಿಸಿದೆ. ಶತಮಾನೋತ್ಸವದ ಸ್ಮರಣೆಗಾಗಿ ಬೆಳಗಾವಿಯಲ್ಲಿ 500 ಹಾಸಿಗೆ ಸಾಮರ್ಥ್ಯವುಳ್ಳ ಚಾರಿಟಿ ಆಸ್ಪತ್ರೆಯನ್ನು ಇದೇ ವರ್ಷ ಆರಂಭಿಸಲಾಗಿದೆ. ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಸಮುದಾಯ ಬಾನುಲಿ ಕೇಂದ್ರವನ್ನು ನಡೆಸಲಾಗುತ್ತಿದೆ.

ಕೋರೆ ಸಾರಥ್ಯ
1984ರಲ್ಲಿ ಡಾ. ಪ್ರಭಾಕರ ಕೋರೆ ಅವರು ಕೆಎಲ್‌ಇ ಸೊಸೈಟಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ ಕೇವಲ 38 ಅಂಗ ಸಂಸ್ಥೆಗಳಿದ್ದವು. ಶಿಕ್ಷಣದ ಬಗ್ಗೆ ದೂರದೃಷ್ಟಿ, ನಾಯಕತ್ವ ಗುಣ ಹೊಂದಿದ್ದ ಕೋರೆ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದರು. ಈಗ 250 ಅಂಗ ಸಂಸ್ಥೆಗಳನ್ನು ಹೊಂದುವ ಮೂಲಕ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಕಳೆದ 32 ವರ್ಷಗಳಿಂದ ನಿರಂತರವಾಗಿ ಸಂಸ್ಥೆಯ ಸಾರಥ್ಯ ವಹಿಸಿರುವ ಕೋರೆ ಅವರು ಶತಮಾನೋತ್ಸವದ ಸಂದರ್ಭದಲ್ಲಿ ಸಂಸ್ಥೆಯನ್ನು ಪ್ರಗತಿ ಪಥದಲ್ಲಿ ಮುನ್ನಡೆಸಿ ಕೀರ್ತಿ ಶಿಖರವನ್ನೇರಿಸುವ ಉತ್ಸಾಹ ಹೊಂದಿದ್ದಾರೆ.

ವಿದ್ಯಾರ್ಥಿಗಳೇ ಆಸ್ತಿ; ದಾನಿಗಳೇ ಜೀವಾಳ!
ಕೆಎಲ್‌ಇ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಹಲವರು ಉನ್ನತ ಹದ್ದೆಗಳನ್ನು ಅಲಂಕರಿಸಿದ್ದಾರೆ; ಜಾಗತಿಕ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಉದ್ಯಮಿ ಸುಧಾ ಮೂರ್ತಿ, ಅಮೆರಿಕಾದ ಲೊವಾ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಶಿವಾನಂದ ಪಾಟೀಲ, ಸರಸ್ವತಿ ಸಮ್ಮಾನ ಪುರಸ್ಕೃತ ಎಸ್‌.ಎಲ್‌. ಭೈರಪ್ಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಕೇಂದ್ರ ಸಚಿವ ಅನಂತಕುಮಾರ್‌ ಸೇರಿದಂತೆ ಹಲವು ಗಣ್ಯರು ಸಂಸ್ಥೆ ಹಳೆ ವಿದ್ಯಾರ್ಥಿಗಳಾಗಿದ್ದಾರೆ.

‘ವಿದ್ಯಾರ್ಥಿಗಳೇ ಸಂಸ್ಥೆಯ ನಿಜವಾದ ಆಸ್ತಿ. ಇವರೇ ಸಂಸ್ಥೆಯ ಪ್ರಚಾರ ರಾಯಭಾರಿಗಳು. ದಾನಿಗಳೇ ಸಂಸ್ಥೆಯ ಜೀವಾಳ. ಸಂಸ್ಥೆ ಮೇಲಿನ ವಿಶ್ವಾಸದಿಂದ ದಾನಿಗಳು ನೀಡಿದ ದೇಣಿಗೆಯಿಂದಲೇ ಸಂಸ್ಥೆ ಈ ಮಟ್ಟಕ್ಕೆ ಬೆಳೆದುನಿಂತಿದೆ’ ಎನ್ನುತ್ತಾರೆ ಡಾ. ಪ್ರಭಾಕರ ಕೋರೆ.

‘ಬಿವಿಬಿ ಕಾಲೇಜಿನಲ್ಲಿ ಓದುತ್ತಿದ್ದಾಗ ಸಿಕ್ಕ ಪ್ರಾಧ್ಯಾಪಕರ ಮಾರ್ಗದರ್ಶನ, ಉತ್ತಮ ಮೂಲಸೌಲಭ್ಯದಿಂದಾಗಿ ಒಳ್ಳೆಯ ಶಿಕ್ಷಣ ಪಡೆದಿದ್ದರಿಂದ ಇಂದು ಉದ್ಯಮಿಯಾಗಿ ಬೆಳೆದಿದ್ದೇನೆ. ಸಂಪನ್ಮೂಲವನ್ನು ಉತ್ತಮವಾಗಿ ನಿರ್ವಹಣೆ ಮಾಡುವಂತಹ ನಾಯಕತ್ವ ಸಂಸ್ಥೆಗೆ ಸಿಕ್ಕಿದೆ. ಹೀಗಾಗಿ ಇನ್ನೂ ನೂರು ವರ್ಷಗಳ ಕಾಲ ಇದೇ ರೀತಿ ಪ್ರಗತಿ ಪಥದಲ್ಲಿ ನಡೆದು, ಭವಿಷ್ಯದಲ್ಲಿ ವಿಶ್ವದ ನಂ. 1 ಶಿಕ್ಷಣ ಸಂಸ್ಥೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ಬೆಳಗಾವಿಯ ‘ಸರ್ವೋ ಕಂಟ್ರೋಲ್ಸ್‌ ಇಂಡಿಯಾ’ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ದೀಪಕ ದಢೋತಿ.

ಕೆಎಲ್‌ಇ ಸೊಸೈಟಿಯ ಅಂಗ ಸಂಸ್ಥೆಗಳ ವಿವರ
* ಕಲೆ, ವಿಜ್ಞಾನ, ವಾಣಿಜ್ಯ ಕಾಲೇಜು 27
* ಆರೋಗ್ಯ ವಿಜ್ಞಾನ ಸಂಸ್ಥೆ 21
* ಆರೋಗ್ಯ ಆರೈಕೆ ಸಂಸ್ಥೆ 16
* ತಾಂತ್ರಿಕ ಸಂಸ್ಥೆ 32
* ವ್ಯವಸ್ಥಾಪನಾ ಸಂಸ್ಥೆ 15
* ಕೃಷಿ ವಿಜ್ಞಾನ ಸಂಸ್ಥೆ 02
* ಕಾನೂನು ಕಾಲೇಜು 05
* ಶಿಕ್ಷಣ ಕಾಲೇಜು 06
* ಶಿಕ್ಷಕರ ತರಬೇತಿ ಸಂಸ್ಥೆ 15
* ಜ್ಯೂನಿಯರ್‌ ಕಾಲೇಜು 33
* ಪ್ರೌಢಶಾಲೆ 35
* ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆ 30
* ಇತರ ಸಂಸ್ಥೆಗಳು 13

ಸಂಶೋಧನೆಗೆ ಆದ್ಯತೆ
ಸಂಸ್ಥೆಯು ಈಗಾಗಲೇ ಶಿಕ್ಷಣ, ಆರೋಗ್ಯ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದೆ. ಶತಮಾನೋತ್ಸವದ ಸಂದರ್ಭದಲ್ಲಿ ಸಂಶೋಧನಾ ಕ್ಷೇತ್ರಕ್ಕೆ ಆದ್ಯತೆ ಕೊಡುತ್ತೇವೆ. ಶಿಕ್ಷಣ, ಆರೋಗ್ಯ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಸಂಶೋಧನೆಗೆ ಸಂಬಂಧಿಸಿದಂತೆ ಹೊಸ ಹೊಸ ಕೋರ್ಸ್‌ಗಳನ್ನು ಆರಂಭಿಸಲು ಆದ್ಯತೆ ನೀಡಲಾಗುವುದು.ಗ್ರಾಮೀಣ ಜನತೆಗೆ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದಲೇ ಸಂಸ್ಥೆ ಹುಟ್ಟಿಕೊಂಡಿದೆ. ಹೀಗಾಗಿ ಶಾಲೆ– ಕಾಲೇಜುಗಳನ್ನು ಹಳ್ಳಿಯ ಮಟ್ಟಕ್ಕೆ ತೆಗೆದುಕೊಂಡು ಹೋಗಿ, ಸಂಸ್ಥೆಯನ್ನು ಇನ್ನಷ್ಟು ವಿಸ್ತರಿಸುವ ಗುರಿ ಹೊಂದಿದ್ದೇನೆ.
– ಡಾ. ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷ, ಕೆಎಲ್‌ಇ ಸೊಸೈಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT