ADVERTISEMENT

ಫಿಸಿಯೊಥೆರಪಿ ಅಧ್ಯಯನಕ್ಕೆ ಬಿಪಿಟಿ, ಎಂಪಿಟಿ ಕೋರ್ಸ್

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2017, 15:16 IST
Last Updated 27 ಏಪ್ರಿಲ್ 2017, 15:16 IST
ಫಿಸಿಯೊಥೆರಪಿ ಅಧ್ಯಯನಕ್ಕೆ ಬಿಪಿಟಿ, ಎಂಪಿಟಿ ಕೋರ್ಸ್
ಫಿಸಿಯೊಥೆರಪಿ ಅಧ್ಯಯನಕ್ಕೆ ಬಿಪಿಟಿ, ಎಂಪಿಟಿ ಕೋರ್ಸ್   

ಬೆಂಗಳೂರು: ಕೈ, ಕಾಲಿಗೆ ಪೆಟ್ಟುಬಿದ್ದು ಸುಲಭವಾಗಿ ಚಲಿಸಲು ಸಾಧ್ಯವಾಗದಿದ್ದರೆ, ಚಿಕ್ಕ ಮಕ್ಕಳ ದೈಹಿಕ ಬೆಳವಣಿಗೆಯಲ್ಲಿ, ಸ್ನಾಯುಗಳ ಚಲನೆಯಲ್ಲಿ ಸರಳವಾಗಿರದಿದ್ದರೆ, ಪಾರ್ಶ್ವವಾಯು ಪೀಡಿತರಾಗಿದ್ದರೆ ಅದಕ್ಕೆ ಸೂಕ್ತ ಔಷಧದ ಜತೆ ‘ಫಿಸಿಯೊಥೆರಪಿ’ ಮಾಡಿಸುವಂತೆ ವೈದ್ಯರು ಸೂಚಿಸುತ್ತಾರೆ.

ಅಲ್ಲದೆ ಕೆಲವು ಶಸ್ತ್ರಚಿಕಿತ್ಸೆಗಳ ನಂತರವೂ ಫಿಸಿಯೊಥೆರಪಿ ಬೇಕಾಗುತ್ತದೆ. ‘ಫಿಸಿಯೊ’ ಎಂದರೆ ದೇಹ, ‘ಥೆರಪಿ’ ಎಂದರೆ ಚಿಕಿತ್ಸೆ ಎಂದರ್ಥ. 
ಒಟ್ಟಾರೆ ಇದನ್ನು ದೈಹಿಕ ಚಿಕಿತ್ಸೆ ಎನ್ನಬಹುದು. ವೈದ್ಯರು ಸೂಚಿಸುವ ಔಷಧಗಳು ದೇಹದ ಒಳಗಿನಿಂದ ಕೆಲಸ ಮಾಡಿದರೆ, ಫಿಸಿಯೊಥೆರಪಿ ಸ್ನಾಯುಗಳ ಚಲನೆಗೆ ಸಹಕಾರಿ. 

ಏನಿದು ಫಿಸಿಯೊಥೆರಪಿ?: ಸಹಜವಾಗಿ ಕಾರ್ಯ ನಿರ್ವಹಿಸಲು ಕಷ್ಟವಾಗುವ ಸ್ನಾಯುಗಳಿಗೆ ಕೆಲ ವ್ಯಾಯಾಮಗಳ ಮೂಲಕ ಅವು ಮತ್ತೆ ಮೊದಲಿನಂತೆ ಕಾರ್ಯ ನಿರ್ವಹಿಸುವಂತೆ ಮಾಡುವ ಚಿಕಿತ್ಸೆಯನ್ನು ‘ಫಿಸಿಕಲ್‌ ಥೆರಪಿ’ ಅಥವಾ ‘ಫಿಸಿಯೊಥೆರಪಿ’ ಎನ್ನಲಾಗುತ್ತದೆ.

ADVERTISEMENT

ಅಧ್ಯಯನ ಹೇಗೆ?: ದ್ವಿತೀಯ ಪಿಯು (ವಿಜ್ಞಾನ) ಉತ್ತೀರ್ಣರಾದವರು ಎರಡು ವರ್ಷ ಅವಧಿಯ ಡಿಪ್ಲೊಮಾ ಇನ್‌ ಫಿಸಿಯೊಥೆರಪಿ (ಡಿಪಿಟಿ), ನಾಲ್ಕೂವರೆ ವರ್ಷದ (6 ತಿಂಗಳ ಇಂಟರ್ನ್‌ಷಿಪ್‌ ಸೇರಿ) ಬ್ಯಾಚುಲರ್‌ ಇನ್‌ ಫಿಸಿಯೊಥೆರಪಿ (ಬಿಪಿಟಿ) ಮತ್ತು ಎರಡು ವರ್ಷ ಅವಧಿಯ ಮಾಸ್ಟರ್‌ ಇನ್‌ ಫಿಸಿಯೊಥೆರಪಿ (ಎಂಪಿಟಿ) ಕೋರ್ಸ್‌ಗಳನ್ನು ಅಧ್ಯಯನ ಮಾಡಬಹುದು. ಡಿಪ್ಲೊಮಾ ಮತ್ತು ಪದವಿ ಪ್ರವೇಶ ಪಡೆಯಲು ಪಿಯು ಉತ್ತೀರ್ಣರಾಗಿರಬೇಕು.

ಪದವಿ ನಂತರ ಹೆಚ್ಚಿನ ಅಧ್ಯಯನ ಮಾಡಬಯಸುವವರು ಸ್ನಾತಕೋತ್ತರ (ಎಂಪಿಟಿ) ಕೋರ್ಸ್‌ಗೆ ದಾಖಲಾಗಬಹುದು.
ಶರೀರ ಶಾಸ್ತ್ರ, ವ್ಯಾಯಾಮ ವಿಜ್ಞಾನ, ಕ್ರೀಡೆಗಳು, ನರವಿಜ್ಞಾನ, ಕ್ಲಿನಿಕಲ್ ಪೆಥಾಲಜಿ, ಬಯೊಮೆಕಾನಿಕ್ಸ್, ವರ್ತನಾ ವಿಜ್ಞಾನ, ಸಂವಹನ, ನೀತಿಶಾಸ್ತ್ರ ಮುಂತಾದ ವಿಷಯಗಳನ್ನು ಕೋರ್ಸ್‌ನ ಪಠ್ಯಕ್ರಮ ಒಳಗೊಂಡಿರುತ್ತದೆ.

ಉದ್ಯೋಗಾವಕಾಶಗಳು
l ಸರ್ಕಾರಿ/ ಖಾಸಗಿ ಆಸ್ಪತ್ರೆಗಳಲ್ಲಿ ಫಿಸಿಯೊಥೆರಪಿಸ್ಟ್‌ ಆಗಿ ವೃತ್ತಿ ಆರಂಭಿಸಬಹುದು.
l ಸ್ಪೋರ್ಟ್ಸ್‌ ಫಿಸಿಯೊಥೆರಪಿ ಅಧ್ಯಯನ ಮಾಡಿದವರು ವಿವಿಧ ಕ್ರೀಡಾ ತಂಡಗಳ ಫಿಸಿಯೊ ಆಗಿ ಕಾರ್ಯ ನಿರ್ವಹಿಸಬಹುದು.
l ಸ್ಪೋರ್ಟ್ಸ್‌ ಅಂಡ್‌ ಫಿಟ್‌ನೆಸ್‌ ಪುನಶ್ಚೇತನ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಬಹುದು ಅಥವಾ ಸ್ವತಂತ್ರವಾಗಿ ಆರಂಭಿಸಬಹುದು.
l ಫಿಟ್‌ನೆಸ್‌ ಸೆಂಟರ್‌, ಸ್ಪೋರ್ಟ್ಸ್‌ ಕ್ಲಬ್‌, ಹೆಲ್ತ್‌ ಕ್ಲಬ್‌ಗಳಲ್ಲಿ ಫಿಸಿಯೊ ಆಗಿ ಉದ್ಯೋಗ ಪಡೆಯಬಹುದು.
l ವಿಶೇಷ ಶಾಲೆಗಳಲ್ಲಿ, ವೃದ್ಧಾಶ್ರಮಗಳಲ್ಲಿಯೂ ಸಾಕಷ್ಟು ಅವಕಾಶಗಳಿವೆ.

l ಫಿಸಿಯೊಥೆರಪಿಸ್ಟ್‌ಗಳನ್ನು ಕೆಲ ರೋಗಿಗಳು ಅವರಿದ್ದಲ್ಲಿಯೇ ಕರೆಸುವುದರಿಂದ  ಈ ಕ್ಷೇತ್ರದಲ್ಲಿ ಅಧ್ಯಯನ ನಡೆಸಿದವರಿಗೆ ಮತ್ತು ಪರಿಣತಿ ಹೊಂದಿದವರಿಗೆ ಬೇಡಿಕೆ ಹೆಚ್ಚು.
l ಪೀಡಿಯಾಟ್ರಿಕ್ಸ್, ಜೀರಿಯಾಟ್ರಿಕ್ಸ್ (ವೃದ್ಧಾಪ್ಯ ಅಧ್ಯಯನ), ನ್ಯೂರಾಲಜಿ (ನರರೋಗ ವಿಜ್ಞಾನ), ಆರ್ಥೊಪೀಡಿಕ್ಸ್ (ಮೂಳೆ ರೋಗಗಳ ಅಧ್ಯಯನ) ವಿಭಾಗಗಳಲ್ಲಿ ಪರಿಣತಿ ಸಾಧಿಸಿದವರಿಗೆ ಆಯಾ ಕ್ಷೇತ್ರಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.
l ಸ್ವಂತವಾಗಿ ಫಿಸಿಯೊಥೆರಪಿ ಕೇಂದ್ರ (ಕ್ಲಿನಿಕ್‌) ಆರಂಭಿಸಬಹುದು.

ಎಲ್ಲೆಲ್ಲಿವೆ ಈ ಕೋರ್ಸ್‌ಗಳು?
ರಾಜ್ಯದ ಬಹುತೇಕ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ, ಆರೋಗ್ಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಅರೆವೈದ್ಯಕೀಯ (ಪ್ಯಾರಾಮೆಡಿಕಲ್) ಕಾಲೇಜುಗಳಲ್ಲಿ ಈ ಕೋರ್ಸ್‌ಗಳನ್ನು ಅಧ್ಯಯನ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.