ADVERTISEMENT

ಸುರಪುರ: ಕಣದಲ್ಲಿ ಮೂರನೇ ತಲೆಮಾರಿನ ಕುಡಿ

1957ರಿಂದ ರಾಜಕೀಯದಲ್ಲಿ ಸಕ್ರಿಯವಾಗಿರುವ ಕುಟುಂಬ

ಅಶೋಕ ಸಾಲವಾಡಗಿ
Published 22 ಏಪ್ರಿಲ್ 2024, 6:02 IST
Last Updated 22 ಏಪ್ರಿಲ್ 2024, 6:02 IST
ರಾಜಾ ಕುಮಾರನಾಯಕ
ರಾಜಾ ಕುಮಾರನಾಯಕ   

ಸುರಪುರ: 1957 ರಿಂದ ರಾಜಕೀಯದಲ್ಲಿ ಸಕ್ರಿಯವಾಗಿರುವ ರಾಜಾ ಕುಮಾರನಾಯಕ ಕುಟುಂಬಸ್ಥರು ಹಲವು ಏಳು ಬೀಳು ಕಂಡರೂ ಮತ್ತೆ ಗೆದ್ದು ಜನ ಸೇವೆ ಮಾಡುತ್ತಿದ್ದಾರೆ. ಈಗ ಸುರಪುರ ವಿಧಾನಸಭೆಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಜಾ ವೇಣುಗೋಪಾಲ ನಾಯಕ 3ನೇ ತಲೆಮಾರು.

ಆಂಧ್ರಪ್ರದೇಶದ ಪ್ಯಾಪ್ಲಿ ಸಂಸ್ಥಾನಿಕ ರಾಜಾ ಕುಮಾರನಾಯಕ ಹೈದರಾಬಾದ್‍ನಲ್ಲಿ ವಾಸವಿದ್ದರು. ಸುರಪುರದ ಸಂಸ್ಥಾನಿಕ ಬ್ಯಾರಿಸ್ಟರ್ ರಾಜಾ ವೆಂಕಟಪ್ಪನಾಯಕ ಅವರ ಪತ್ನಿ ರಾಜಾ ಕುಮಾರನಾಯಕ ಅವರ ಸಹೋದರಿ.

ಜನಾನುರಾಗಿಯಾಗಿದ್ದ ಇಲ್ಲಿನ ಅರಸರಿಗೆ ದೇಶದ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಆಹ್ವಾನ ನೀಡುತ್ತದೆ. ರಾಜರಾಗಿ ಆಡಳಿತ ನಡೆಸಿದ್ದ ಸಂಸ್ಥಾನಿಕರಿಗೆ ಪ್ರಜಾಪ್ರಭುತ್ವಕ್ಕೆ ಒಗ್ಗಿಕೊಳ್ಳುವುದು ಇಷ್ಟವಿರಲಿಲ್ಲ. ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷ ಪಕ್ಕದ ಯಾದಗಿರಿಯ ಕೋಲೂರು ಮಲ್ಲಪ್ಪ ಅವರಿಗೆ ಟಿಕೆಟ್ ನೀಡಿತು.

ADVERTISEMENT

ಸುರಪುರ ಶಾಸಕರಾಗಿದ್ದ ಮಲ್ಲಪ್ಪ ಇಲ್ಲಿನ ಅರಸರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದರಿಂದ ನಮ್ಮವರನ್ನೇ ಶಾಸಕರನ್ನಾಗಿ ಮಾಡಬೇಕು ಎಂದು ನಿಶ್ಚಯಿಸಿದ ಸಂಸ್ಥಾನಿಕರು ಎರಡನೇ ಚುನಾವಣೆ 1957ರಲ್ಲಿ ತಮ್ಮ ಅಳಿಯ ರಾಜಾ ಕುಮಾರನಾಯಕ ಅವರನ್ನು ಕರೆ ತಂದು ನಿಲ್ಲಿಸಿ ಆರಿಸಿ ತರುತ್ತಾರೆ.

ಅಲ್ಲಿಂದ ನಡೆದಿದ್ದೆಲ್ಲ ಇತಿಹಾಸ. ರಾಜಾ ಕುಮಾರನಾಯಕ ಸುರಪುರದವರೇ ಆಗಿ ಬಿಡುತ್ತಾರೆ. ಕ್ರಮೇಣ ಪ್ರಜಾಪ್ರಭುತ್ವದ ಮರ್ಮವನ್ನು ಅರಿಯತೊಡಗಿದ ಸಂಸ್ಥಾನಿಕರಾದ ರಾಜಾ ಪಿಡ್ಡನಾಯಕ ಮತ್ತು ಬ್ಯಾರಿಸ್ಟರ್ ರಾಜಾ ವೆಂಕಟಪ್ಪನಾಯಕ ತಾವೇ ಸ್ಪರ್ಧಿಸಲು ನಿರ್ಧರಿಸುತ್ತಾರೆ.

1962 ರಲ್ಲಿ ರಾಜಾ ಪಿಡ್ಡನಾಯಕ ಸುರಪುರದಿಂದ, ಬ್ಯಾರಿಸ್ಟರ್ ರಾಜಾ ವೆಂಕಟಪ್ಪನಾಯಕ ಶಹಾಪುರದಿಂದ ಸ್ಪರ್ಧಿಸಿ ಶಾಸಕರಾಗುತ್ತಾರೆ. ತಮ್ಮ ಮಾವಂದಿರಿಗೆ ಬೆಂಬಲಿಸಿದ್ದ ರಾಜಾ ಕುಮಾರನಾಯಕ ಸ್ಪರ್ಧೆ ಮಾಡಿರಲಿಲ್ಲ. 1967 ರಲ್ಲಿ ಪಕ್ಕದ ಲಿಂಗಸುಗೂರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 1972 ರಲ್ಲಿ ಕಣಕ್ಕಿಳಿದಿರಲಿಲ್ಲ. 1978 ರಲ್ಲಿ ಮಾವ ರಾಜಾ ಪಿಡ್ಡನಾಯಕ ಅವರ ವಿರುದ್ಧವೇ ಸ್ಪರ್ಧಿಸಿ ಸುರಪುರದ ಶಾಸಕರಾಗುತ್ತಾರೆ. 1983 ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋಲುಂಡರು. ಅದುವೆ ಅವರ ಕೊನೆ ಚುನಾವಣೆ. 1988 ರಲ್ಲಿ ಮರಣ ಹೊಂದುತ್ತಾರೆ.

ಅವರ ಹಿರಿಯ ಪುತ್ರ ರಾಜಾ ವೆಂಕಟಪ್ಪನಾಯಕ 1994 ಕೆಸಿಪಿಯಿಂದ, 1999, 2013, 2023 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾದರು. ಕಿರಿಯ ಪುತ್ರ ರಾಜಾ ರಂಗಪ್ಪನಾಯಕ 1996 ರಲ್ಲಿ ಜೆಡಿಎಸ್‍ನಿಂದ ರಾಯಚೂರು ಸಂಸದರಾಗಿದ್ದರು.

ಇನ್ನೊಬ್ಬ ಕಿರಿಯ ಸಹೋದರ ರಾಜಾ ಮೌನೇಶ್ವರ ನಾಯಕ ತಾಲ್ಲೂಕು ಪಂಚಾಯಿತಿ ಮತ್ತು ಎಪಿಎಂಸಿ ಅಧ್ಯಕ್ಷರಾಗಿದ್ದರು. ಅವರ ಪುತ್ರ ರಾಜಾ ಕುಮಾರನಾಯಕ ಈಗ ಯಾದಗಿರಿ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ. ಕೊನೆಯ ಸಹೋದರ ರಾಜಾ ಶ್ರೀರಾಮನಾಯಕ ಚುನಾವಣೆಗೆ ಸ್ಪರ್ಧಿಸದಿದ್ದರೂ ಹಿಂದಿನ ಶಕ್ತಿಯಾಗಿ ಕೆಲಸ ಮಾಡುತ್ತಿದ್ದರು.

ರಾಜಾ ರಂಗಪ್ಪನಾಯಕ ಕಲ್ಮಲಾ ವಿಧಾನಸಭೆಗೆ ಸ್ಪರ್ಧಿಸಿ ಅಲ್ಪ ಮತಗಳಿಂದ ಪರಾಭವಗೊಂಡಿದ್ದರು. ಖಾನಾಪುರ ಮಂಡಲ ಪ್ರಧಾನರಾಗಿ, ಕಲಬುರಗಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರ ಪುತ್ರ ರಾಜಾ ರೂಪಕುಮಾರ ನಾಯಕ ಖಾನಾಪುರ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ರಾಜಾ ಮೌನೇಶ್ವರ ನಾಯಕ ಅವರ ಇನ್ನೊಬ್ಬ ಪುತ್ರ ರಾಜಾ ವಿಜಯಕುಮಾರ ನಾಯಕ, ರಾಜಾ ಶ್ರೀರಾಮನಾಯಕ ಅವರ ಪುತ್ರ ರಾಜಾ ಸುಶಾಂತನಾಯಕ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ.

ರಾಜಾ ವೆಂಕಟಪ್ಪನಾಯಕ ಅವರ ಅಕಾಲಿಕ ನಿಧನದಿಂದ ಸುರಪುರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈ ಮೊದಲು ಹುಣಸಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರ ಕಿರಿಯ ಸಹೋದರ ರಾಜಾ ಸಂತೋಷನಾಯಕ ಅಣ್ಣನಿಗೆ ಬೆಂಬಲವಾಗಿದ್ದಾರೆ.

ರಾಜಾ ವೆಂಕಟಪ್ಪನಾಯಕ
ರಾಜಾ ರಂಗಪ್ಪನಾಯಕ
ರಾಜಾ ಮೌನೇಶ್ವರನಾಯಕ
ರಾಜಾ ವೇಣುಗೋಪಾಲನಾಯಕ
ರಾಜಾ ಕುಮಾರನಾಯಕ
ಬ್ಯಾರಿಸ್ಟರ್ ರಾಜಾ ವೆಂಕಟಪ್ಪನಾಯಕರ ಪತ್ನಿಯ ತಮ್ಮ ರಾಜಾ ಕುಮಾರನಾಯಕ ಹೈದರಾಬಾದ್‌ನಿಂದ್ ಬಂದು ಸುರಪುರದಲ್ಲಿ ಗೆಲುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.