ADVERTISEMENT

ಸಾರಸ್ವತ ಲೋಕದ ಸ್ವಪ್ನ ರಾಜಕೀಯ!

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2014, 19:30 IST
Last Updated 4 ಏಪ್ರಿಲ್ 2014, 19:30 IST

ಧಾರವಾಡ: ಸಾಹಿತಿಗಳ ರಾಜಕಾರಣ ಬೇರೆ. ಚುನಾವಣಾ ರಾಜಕೀಯ­ದಲ್ಲಿ ಸಾಹಿತಿಗಳ ಪಾತ್ರ ಬೇರೆ. ಸಾಹಿತಿಗಳ ತವರೂರಿನಲ್ಲಿ ಸಾರಸ್ವತ ಲೋಕದ ರಾಜಕೀಯ ದೃಷ್ಟಿಕೋನ­ವನ್ನು ಹುಡು­ಕುತ್ತಾ ಹೋದರೆ ಸಿಕ್ಕಿದ್ದು ಅಪರೂಪದ ಕತೆಗಳು, ವಿದ್ಯಮಾನಗಳು. ಕೆಲವು ಹೇಳಬಹುದಾಗಿದ್ದು, ಇನ್ನು ಕೆಲವು ಹೇಳಬಾರದ್ದು.

ಧಾರವಾಡ ಸಾಂಸ್ಕೃತಿಕ ಕೇಂದ್ರ. ಇಲ್ಲಿ ಚುನಾವಣೆ ಎಂಬುದು ಬೇರೆ ರೀತಿ ಇರಬೇಕಲ್ಲ. ಇಲ್ಲಿನ ಜನರು ಈ ಲೋಕ­ಸಭಾ ಚುನಾವಣೆ­ಯನ್ನು ಹೇಗೆ ನೋಡು­ತ್ತಾರೆ ಎಂದು ತಿಳಿಯಲು ಸಾಧನಕೇರಿ­ಯಿಂದ ಹಿಡಿದು ವಿಶ್ವವಿದ್ಯಾ­ಲಯದ ಸುತ್ತ­ಮುತ್ತಲಿನ ಪ್ರದೇಶಗಳಲ್ಲಿ ಸುತ್ತಿ­ದಾಗ ಸಿಕ್ಕದ್ದು ಮಜಬೂತ ಅನುಭವ.

ಕರ್ನಾಟಕದಲ್ಲಿ ಸಾಹಿತಿಗಳು ಚುನಾವಣಾ ರಾಜಕೀಯಕ್ಕೆ ಇಳಿದಿದ್ದು ಹೊಸತೇನೂ ಅಲ್ಲ. ಆದರೆ ಕಡಿಮೆ. ಶಿವರಾಮ ಕಾರಂತ, ದಿನಕರ ದೇಸಾಯಿ, ಗೋಪಾಲಕೃಷ್ಣ ಅಡಿಗ, ತರಾಸು, ಚದುರಂಗ, ಕೆ.ಮರುಳಸಿದ್ದಪ್ಪ ಮುಂತಾ­ದ­­ವರು ಚುನಾವಣೆಗೆ ಸ್ಪರ್ಧಿಸಿದ್ದರು.

ಲಂಕೇಶ್‌ ಪ್ರಗತಿ ರಂಗ ಸ್ಥಾಪಿಸಿಕೊಂಡು ರಾಜಕೀಯ ಜಾಗೃತಿಗೆ ದುಡಿದಿದ್ದರು. ಪೂರ್ಣಚಂದ್ರ ತೇಜಸ್ವಿ ಅದಕ್ಕೆ ಸಾಥ್‌ ನೀಡಿದ್ದರು.

ಪ್ರಗತಿರಂಗ ಚುನಾವಣಾ ರಾಜಕೀಯಕ್ಕೂ ಮುಂದಾ­ಗಿತ್ತು. ಡಾ.­ಯು.ಆರ್‌.­ಅನಂತಮೂರ್ತಿ ರಾಜ್ಯಸಭೆಗೆ ಸ್ಪರ್ಧಿ­ಸಿ­ದ್ದರು. ದೇವನೂರು ಮಹಾದೇವ ಕರ್ನಾಟಕ ಸರ್ವೋದಯ ಪಕ್ಷದ ಕಾರ್ಯಾಧ್ಯಕ್ಷರಾಗಿದ್ದರು.

ಪ್ರೊ.ಚಂದ್ರ­ಶೇಖರ ಪಾಟೀಲ ಅವರು ಚುನಾವಣೆಗ ಸ್ಪರ್ಧಿಸುವುದಾಗಿ ಹೇಳಿ ಈಗ ಹಿಂದೆ ಸರಿ­ದಿದ್ದಾರೆ. ಗಿರೀಶ್‌ ಕಾರ್ನಾಡ್‌ ಅವರು ಬೆಂಗಳೂರಿನಲ್ಲಿ ನಂದನ್‌ ನಿಲೇಕಣಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುತ್ತಲು ಸಾಕಷ್ಟು ಸಾಹಿತಿಗಳು ಇದ್ದಾರೆ. ಈಗ ಕೆಲವು ಸಾಹಿತಿಗಳು ಬಹಿರಂಗವಾಗಿಯೇ ಕಾಂಗ್ರೆಸ್‌ ಪಕ್ಷ ಬೆಂಬಲಿಸಿದ್ದಾರೆ. ಹೀಗಿರು­ವಾಗ ಇಲ್ಲಿನ ಸಾಹಿತಿಗಳು ರಾಜಕೀಯ­ವಾಗಿ ಯಾವ ಧೋರಣೆ ಹೊಂದಿ­ದ್ದಾರೆ? ಎಂದು ಹುಡುಕಲು ಆರಂಭಿಸಿದೆ.

ಧಾರವಾಡದಲ್ಲಿ ಸಾಕಷ್ಟು ಸಾಹಿತಿ­ಗಳಿದ್ದಾರೆ. ಹದಗೆಟ್ಟ ರಾಜಕೀಯ ಪರಿಸ್ಥಿತಿಗೆ ಔಷಧಿ ಹುಡುಕುವ ಕೆಲಸ­ವನ್ನು ಮಾಡಿದವರು ಕಡಿಮೆ. ಅಲ್ಲದೆ ಕೆಲವರು ಈಗಾಗಲೇ ಒಂದೊಂದು ರಾಜಕೀಯ ಪಕ್ಷದ ಜೊತೆ ಗುರುತಿಸಿ­ಕೊಂಡಿದ್ದಾರೆ. ಕೆಲವರು ಬಹಿರಂಗವಾಗಿ ಗುರುತಿಸಿಕೊಂಡರೆ ಇನ್ನು ಕೆಲವರು ಗುಟ್ಟಿನ ಪ್ರೀತಿ ಇಟ್ಟುಕೊಂಡಿದ್ದಾರೆ. ಒಬ್ಬ ಸಾಹಿತಿ ಇನ್ನೊಬ್ಬ ಸಾಹಿತಿಯ ಕನ್ನಡಿ-­ಯಂತೆ ಕಾಣುತ್ತಿದ್ದಾರೆ. ಅವರ ಬಳಿ ಇವರ ಗುಟ್ಟು, ಇವರ ಬಳಿ ಅವರ ಗುಟ್ಟು­ಗಳು ಇವೆ. ಅವರ ಬಳಿಗೆ ಹೋದರೆ ಇವರ ಗುಟ್ಟನ್ನು ಹೇಳುತ್ತಾರೆ. ಇವರ ಬಳಿಗೆ ಬಂದಾಗ ಅವರ ಗುಟ್ಟು ರಟ್ಟಾಗುತ್ತದೆ.

ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಅವರಿಗೆ, ‘ಸಾಹಿತಿಗಳು ಜನರಿಗೆ ಮಾರ್ಗ­ದರ್ಶನ ಮಾಡಬೇಕು’ ಎಂಬ ಭಾವನೆ ಇದೆ. ‘ಜೆ.ಪಿ. ಅವರ ಸಮಗ್ರ ಆಂದೋಲ­ನ­ದಲ್ಲಿ ಸಾಹಿತಿಗಳು ಸಕ್ರಿಯ­ವಾಗಿ ಭಾಗಿ­ಯಾ­ಗಿದ್ದರು.

ಆದರೆ ನಂತರದ ದಿನ­ಗಳಲ್ಲಿ ರಾಜಕಾರಣಿಗಳು ಸಾಹಿತಿಗಳನ್ನು ಹತ್ತಿರಕ್ಕೆ ಬಿಟ್ಟು­ಕೊಂ­ಡಿದ್ದು ಕಡಿಮೆ. ಇವರು ಹೋಗಿದ್ದೂ ಕಡಿಮೆ. ಆಗಾಗ ಅಲೆ­ಗಳು ಎದ್ದಿದ್ದರೂ ಕರ್ನಾಟಕದಲ್ಲಿ ಸಾಹಿತಿಗಳು ನೇರ ರಾಜಕಾರಣ ಮಾಡಿದ್ದು ಅತ್ಯಲ್ಪ’ ಎಂದರು.

‘ಏನು ಮಾಡಿದರೂ ರಾಜಕೀಯ ವ್ಯವಸ್ಥೆ ಬದಲಾಗುವುದಿಲ್ಲ ಎಂಬ ಸಿನಿಕತನ ಸಾಹಿತಿಗಳಲ್ಲಿ ಬಂದುಬಿಟ್ಟಿದೆ. ಜನಾಂದೋಲನಗಳಲ್ಲಿಯೂ ಸಾಹಿತಿ­ಗಳು ಭಾಗಿಯಾಗಿದ್ದು ಸಾಕಷ್ಟಿಲ್ಲ’ ಎಂಬುದು ಅವರ ಅಭಿಪ್ರಾಯ.
‘ಸಾಹಿತಿಗಳು ಚಳವಳಿಗಾರ­ರಾಗ­ಬೇಕು’ ಎನ್ನುವುದು ಡಾ.ಎಂ.ಎಂ.­ಕಲ­ಬುರ್ಗಿ ಅವರ ಅಭಿಮತ. ‘ಕ್ರಿಯೆ­ಯಿಂದ ಸೃಷ್ಟಿ­ಯಾದ ಜ್ಞಾನವೇ ನಿಜ­ವಾದ ಜ್ಞಾನ. ಬಸವಣ್ಣ ಊರಿನಲ್ಲಿ ಜನರ ಮಧ್ಯೆಯೇ ಇದ್ದು ಅನುಭವವನ್ನು ಪಡೆದು ಜಗತ್ತಿಗೆಲ್ಲಾ ಹಂಚಿದವನು. ಕುವೆಂಪು ಚಳವಳಿಗಾರ­ರಾಗಿದ್ದರು. ಅಂಬೇ­ಡ್ಕರ್‌, ಗಾಂಧಿ, ಲೋಹಿಯಾ ಅವರು ಹಾಗೆಯೇ ಮಾಡಿದರು’ ಎಂದರು.

‘ಈಗ ಹಣ, ಜಾತಿ, ತೋಳ್ಬಲದ ಮೇಲೆ ಚುನಾವಣೆಗಳು ನಡೆಯುತ್ತವೆ. ಸಾಹಿತಿಗಳು ಸಮಕಾಲೀನ ವಿಚಾರಗಳ ಜೊತೆಗೆ ಸಂಘರ್ಷಕ್ಕೆ ಇಳಿಯಬೇಕು. ಜೊತೆಗೆ ಸ್ನೇಹವನ್ನೂ ಇಟ್ಟುಕೊಳ್ಳ­ಬೇಕು’ ಎಂದು ಹೇಳಿದರು.

‘ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಸಾಹಿತಿಗಳು ಎಡಪಂಥೀಯರನ್ನು ಅನುಸ­ರಿಸಬೇಕು. ಅದೊಂದೇ ದಾರಿ. ಆದರೆ ಎಡಪಂಥೀಯರಿಗೆ ಸಾಹಿತಿ, ಕಲಾವಿದರ ಬಗ್ಗೆ ನಂಬಿಕೆ ಇಲ್ಲ’ ಎಂಬ ಬೇಸರ ಡಾ.ಶ್ಯಾಮಸುಂದರ ಬಿದರಕುಂದಿ ಅವರಿಗೆ.

‘ಸಾಹಿತ್ಯದಿಂದ ಹೋರಾಟ ಎಂಬುದು ಒಂದು ಸುಂದರ ಕಲ್ಪನೆ. ಆದರ್ಶದ ಕಲ್ಪನೆಯೂ ಹೌದು. ನವೋದಯದ ಕಾಲದಲ್ಲಿ ಅದು ಇತ್ತು. ನವ್ಯ ಬಂದಾಗ ಗೊಂದಲ ಸೃಷ್ಟಿ­ಯಾಯಿತು. ಬಂಡಾಯ ಬಂದಾಗ ಚಳವಳಿ ಹುಟ್ಟಿಕೊಂಡಿತು. ಈಗ ಖಾಲಿ ಖಾಲಿ ಆಗಿದೆ’ ಎಂದರು.

‘ದ.ರಾ.ಬೇಂದ್ರೆ ಬದುಕಿದ್ದಾಗ ರಾಜ­ಕಾರಣದ ಬಗ್ಗೆ ಮಾತನಾಡು­ತ್ತಿದ್ದರು. ಆದರೆ ಯಾವುದೇ ರಾಜಕಾರ­ಣಿಯ ಸ್ನೇಹ ಮಾಡಲಿಲ್ಲ. ಕೆ.ಮರುಳಸಿದ್ದಪ್ಪ ಅವರು ಹೇಮಾಮಾಲಿನಿ ವಿರುದ್ಧ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ತಮ್ಮದು ಸಾಂಕೇತಿಕ ಸ್ಪರ್ಧೆ ಎಂದೂ ಹೇಳಿದ್ದರು. ಆದರೂ ನಮ್ಮ ಸಾಹಿತಿಗಳು ಇನ್ನೂ ಬುದ್ಧಿವಂತರಾಗಿಲ್ಲ. ರಾಜಕೀಯ  ಹೀಗೆಯೇ ಇರಬೇಕು ಎಂಬ ದೃಷ್ಟಿಕೋನ ಸಾಹಿತಿಗಳಿಗೆ ಇಲ್ಲ. ಯಾರು ಗೆದ್ದರೂ ಇವ ನಮ್ಮವ ಇವ ನಮ್ಮವ ಎನ್ನುತ್ತಾರೆ’ ಎಂದು ಅವರು ವಿಷಾದಿಸಿದರು.

ದಲಿತ ಕವಿ ಮೋಹನ ನಾಗಮ್ಮನವರ ಅವರಿಗೆ ಸಾಹಿತಿಗಳ ಬಗ್ಗೆ ಆಕ್ರೋಶ. ‘ಧಾರವಾಡದಲ್ಲಿ ಸಾಹಿತಿಗಳ ಬದುಕು ಜಕಣಿ ಬಾವಿ (ಧಾರವಾಡದ ಪುರಾತನ ಬಾವಿ. ಈಗ ಕೊಳಚೆ ತುಂಬಿಕೊಂಡು ನಾರುತ್ತಿದೆ) ಆಗಿದೆ. ಬದುಕುವುದಕ್ಕಾಗಿ ಜೋತು ಬಿದ್ದು ಎಲ್ಲ ಸಾಹಿತಿಗಳೂ ತಮ್ಮ ತಮ್ಮ ಉಪ ಜಾತಿಗಳಿಗೆ ಸೀಮಿತ­ವಾಗಿದ್ದಾರೆ. ರೆಡ್ಡಿ ಸಾಹಿತಿ, ಪಂಚಮ­ಸಾಲಿ ಸಾಹಿತಿ, ಬಣಜಿಗ ಸಾಹಿತಿ, ಬ್ರಾಹ್ಮಣ ಸಾಹಿತಿ ಹೀಗೆ ಎಲ್ಲ ಬಗೆಯ ಸಾಹಿತಿಗಳೂ ಇಲ್ಲಿದ್ದಾರೆ. ಬಹುತೇಕ ಸಾಹಿತಿಗಳು ‘ಬಿಲ್‌’ ವಿದ್ಯೆ ಪ್ರವೀಣ­ರಾಗಿದ್ದಾರೆ. ಸಾರಸ್ವತ ಲೋಕದಲ್ಲಿ ಅಣಕು ವೈಚಾರಿಕತೆ ಮೆರೆಯುತ್ತಿದೆ. ಹಿಂದಿನ ಸಾಹಿತಿಗಳಲ್ಲಿ ಕೊಂಚ ಸಂಕೋಚ­­ವಾದರೂ ಇತ್ತು. ಈಗ ವಿಜೃಂಭಣೆ ಇದೆ. ಹಿಂದಿನ ಸಾಹಿತಿಗಳು ಹಳೆಯ ಪಾತಿವ್ರತ್ಯದ ಪ್ರಮಾಣ ಪತ್ರ ಇಟ್ಟುಕೊಂಡು ಈಗಲೂ ಚಲಾವಣೆ­ಯಾಗಲು ಪ್ರಯತ್ನಿ­ಸುತ್ತಿ­ದ್ದಾರೆ. ಎಲ್ಲ ಸಿದ್ಧಾಂತಗಳನ್ನೂ ತಮ್ಮ ತಮ್ಮ ಸೈಜಿಗೆ ಕಟ್‌ ಮಾಡಿಕೊಳ್ಳು­ತ್ತಿದ್ದಾರೆ’ ಎಂದು ಒಂದೇ ಉಸುರಿನಲ್ಲಿ ತಮ್ಮ ಸಿಟ್ಟನ್ನು ಹೊರಹಾಕಿದರು.

ಗಿರಡ್ಡಿ ಗೋವಿಂದ­ರಾಜು ಮಾತ್ರ ತಣ್ಣನೆಯ ದನಿ­ಯಲ್ಲಿಯೇ ಸಾಹಿತಿಗಳ ಅಸಹಾಯ­ಕತೆಯನ್ನು ಬಿಚ್ಚಿಟ್ಟರು. ರಾಜಕಾರಣಕ್ಕೆ ಸೇರುವ ಜನರ ಬಗ್ಗೆ ಸಾರ್ವಜನಿಕರಿಗೆ ಈಗ ನಂಬಿಕೆಯೇ ಇಲ್ಲ ಎಂದರು. ಚುನಾವಣಾ ರಾಜಕೀಯಕ್ಕೆ ಇಳಿಯದೇ ಇದ್ದರೂ ಮತದಾರರನ್ನು ಜಾಗೃತಿಗೊಳಿ­ಸುವ ಕೆಲಸಕ್ಕೆ ಸಾಹಿತಿಗಳು ಮುಂದಾಗ­ಬಹುದು ಎಂಬ ಸಲಹೆ ನೀಡಿದರು.
ಮೈಸೂರಿನಲ್ಲಿ ಪಾಲಿಕೆ ಚುನಾವಣೆಗ ತರಾಸು, ಚದುರಂಗ ಸ್ಪರ್ಧೆ ಮಾಡಿದ ಪ್ರಸಂಗವನ್ನು ನೆನಪಿಸಿಕೊಂಡರು. ರಾಜ­ಕಾರಣದ ಬಗ್ಗೆ ಸಾಹಿತಿಗಳಲ್ಲಿ ಸಿನಿಕತನ ಬೆಳೆದಿದೆ ಎಂದು ವಿಷಾದಿಸಿದರು.

ಹೀಗೆ ಚುನಾವಣಾ ರಾಜಕಾರಣಗಳ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ನೋಟ. ಸಾಹಿತಿಗಳು ರಾಜಕೀಯ ಸ್ವಪ್ನದಿಂದ ಹೊರಬಂದಂತೆ ಕಾಣಲಿಲ್ಲ. ಆದರೆ ಅವರು ಈ ಬಾರಿ ಯಾರಿಗೆ ಮತ ಚಲಾಯಿಸುತ್ತಾರೆ ಎನ್ನುವುದು ಗುಟ್ಟಾಗಿ ಉಳಿಯಲಿಲ್ಲ.

ಕಲಬುರ್ಗಿ ಮನದ ನೋವು!

ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವ­ರನ್ನು ಬಿಟ್ಟು ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು ಡಾ.ಎಂ.ಎಂ.­ಕಲಬುರ್ಗಿ ಅವರಿಗೆ ನೋವು ತಂದಿದೆಯಂತೆ. ‘ದೇಶದಲ್ಲಿ ಬಿಜೆಪಿಯನ್ನು ಕಟ್ಟಿದ್ದು ಅಡ್ವಾಣಿ. ಅವರಿಗೇ ಪ್ರಧಾನಿ ಸ್ಥಾನ ಸಿಗಬೇಕು. ರಾಮಕೃಷ್ಣ ಹೆಗಡೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದಾಗಲೂ ನನಗೆ ಇದೇ ರೀತಿ ನೋವಾಗಿತ್ತು. ಈ ದೇಶದ ಪ್ರಧಾನಿಯಾಗುವ ಯೋಗ್ಯತೆ ಅವರಿ­ಗಿತ್ತು. ಅವರೇ ಕಟ್ಟಿದ ಪಕ್ಷದಿಂದ ಅವರನ್ನು ಹೊರಕ್ಕೆ ಹಾಕಿದಾಗ ಕನ್ನಡಿಗರು ಪ್ರತಿಭಟನೆ ಮಾಡ­ಬೇಕಿತ್ತು. ಇನ್ನೊಂದು ಇತ್ತೀಚಿನ ನೋವು. ಬಿ.ಎಸ್‌.­ಯಡಿಯೂರಪ್ಪ ಯಾವುದೇ ಕಾರಣಕ್ಕೂ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಬಾರದಿತ್ತು. ಕೆಜೆಪಿ ನಾಶ ಆಗಿದ್ದು ಬೇಸರ ತರಿಸಿತು. ಕೆಜೆಪಿಯನ್ನು ಉಳಿಸಿಕೊಂಡಿ­ದ್ದರೆ ಅದೊಂದು ಉತ್ತಮ ಪ್ರಾದೇಶಿಕ ಪಕ್ಷವಾಗಿ ಬೆಳೆಯ­ಬಹುದಾಗಿತ್ತು. ಅದಕ್ಕೆ ಬೇಕಾದ ಜಾತಿ, ಹಣ, ದುಡಿ­ಯುವ ಜನ ಎಲ್ಲರೂ ಇದ್ದರು. ಹೈಕಮಾಂಡ್‌ ಸಂಸ್ಕೃತಿ­ಯನ್ನು ನಾಶ ಮಾಡು­ವುದಕ್ಕೆ ಅದೊಂದು ಮಾರ್ಗ­ವಾಗಿತ್ತು’ ಎಂದು ಅವರು ಹೇಳುತ್ತಾರೆ.

ADVERTISEMENT

ಮಾತು ಮುಗಿಸುವ ಮುನ್ನ ಅವರು ಹೇಳಿದ್ದು ‘ಬಿಜೆಪಿ ಅಧಿಕಾರಕ್ಕೆ ಬಂದರೆ ಅಡ್ವಾಣಿ ಪ್ರಧಾನಿ ಆಗಬೇಕು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.