ADVERTISEMENT

ಕ್ಷುಲ್ಲಕ ಹೇಳಿಕೆ ಬೇಡ:ಮೋದಿ ತಾಕೀತು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2014, 19:30 IST
Last Updated 22 ಏಪ್ರಿಲ್ 2014, 19:30 IST

ಅಹಮದಾಬಾದ್‌ (ಪಿಟಿಐ): ಸಂಘ ಪರಿವಾರದ ಗುಂಪುಗಳು  ದ್ವೇಷಕಾರಕ ಹೇಳಿಕೆಗಳನ್ನು ಕ್ಷುಲ್ಲಕ ಎಂದು ತಳ್ಳಿಹಾ­ಕಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಬಿಜೆಪಿ ಹಿತ­ಚಿಂತಕರು ಎಂದು ಹೇಳಿಕೊಳ್ಳುವವರು ಇಂತಹ ಕೀಳುಮಟ್ಟದ ಹೇಳಿಕೆಗಳನ್ನು ನೀಡುವ ಮೂಲಕ ಚುನಾವಣಾ ಪ್ರಚಾರ ಕಾರ್ಯದ ದಿಕ್ಕುತಪ್ಪಿಸು­ತ್ತಿ­ದ್ದಾರೆ ಎಂದು ‘ಟ್ವಿಟರ್‌’ನಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಪಕ್ಷದ ಹಿತಚಿಂತಕರೆಂದು ಕರೆದು­ಕೊಳ್ಳುವವರ ಬೇಜವಾಬ್ದಾರಿ ಹೇಳಿಕೆ­ಗಳನ್ನು ನಾನು ಒಪ್ಪುವುದಿಲ್ಲ.  ಅಭಿವೃದ್ಧಿ ಮತ್ತು ದಕ್ಷ ಆಡಳಿತ ವಿಷಯಗಳನ್ನು ಕೇಂದ್ರೀಕರಿಸಿ ನಡೆಸುತ್ತಿರುವ ಪ್ರಚಾರ ಕಾರ್ಯ ಇಂತಹ ಹೇಳಿಕೆಗಳಿಂದ ದಾರಿ ತಪ್ಪುತ್ತದೆ. ಆದ್ದರಿಂದ ಅವರು (ಹಿತಚಿಂತಕರು) ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು ಎಂದು ಕೋರುವೆ’ ಎಂದು ಯಾರ ಹೆಸರನ್ನೂ ಉಲ್ಲೇಖಿಸದೇ ಮೋದಿ ‘ಟ್ವಿಟರ್‌’ನಲ್ಲಿ ಬರೆದಿದ್ದಾರೆ.

ವಿಶ್ವಹಿಂದೂ ಪರಿಷತ್‌ (ವಿಎಚ್‌ಪಿ) ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಗುಜರಾತ್‌ನ ಭಾವನಗರದಲ್ಲಿ ಶನಿವಾರ ‘ಹಿಂದೂಗಳು ವಾಸಿಸುವ ಪ್ರದೇಶಗಳಲ್ಲಿ ಮುಸ್ಲಿಮರು ಆಸ್ತಿ ಖರೀದಿಸದಂತೆ ನೋಡಿಕೊಳ್ಳಬೇಕು’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೂ ಮೊದಲು ಬಿಹಾರದ ಬಿಜೆಪಿ ಮುಖಂಡ ಗಿರಿರಾಜ್‌ ಸಿಂಗ್‌ ಅವರು,‘ಮೋದಿ ಅವರನ್ನು ವಿರೋಧಿಸು­ವವರಿಗೆ ದೇಶದಲ್ಲಿ ಸ್ಥಳವಿಲ್ಲ. ಅವರು ಪಾಕಿಸ್ತಾನಕ್ಕೆ  ಹೋಗಲಿ’ ಎಂಬ ಹೇಳಿಕೆ ನೀಡಿ ಪಕ್ಷದ ನಾಯಕರಿಗೆ ಮುಜುಗರ ಉಂಟು ಮಾಡಿದ್ದರು.

ಈ ಮಧ್ಯೆ, ತಾವು ಸಾಮಾಜಿಕವಾಗಿ ತಪ್ಪು ಎನ್ನುವಂತಹ ಅಥವಾ ಕಾನೂನು ಬಾಹಿರವಾದ ಯಾವುದೇ ಹೇಳಿಕೆ ನೀಡಿಲ್ಲ. ತಮ್ಮ ಹೇಳಿಕೆಯನ್ನು ತಿರುಚಿ ಪ್ರಸಾರ ಮಾಡಿರುವ ಮಾಧ್ಯಮಗಳ ವಿರುದ್ಧ ಕಾನೂನಿನ ಮೊರೆ ಹೋಗು­ವುದಾಗಿ ಪ್ರವೀಣ್‌ ತೊಗಾಡಿಯಾ ಎಚ್ಚರಿಕೆ ನೀಡಿದ್ದಾರೆ.

ಗಿರಿರಾಜ್‌ ಸಿಂಗ್‌ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್‌ ಸಿಂಗ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

ತೊಗಾಡಿಯಾ ವಿರುದ್ಧ ಎಫ್‌ಐಆರ್‌:  ಈ ನಡುವೆ ಕೋಮು ಭಾವ­ನೆ­­ಯನ್ನು ಪ್ರಚೋ­ದಿಸಿದ ಆರೋಪದ ಮೇಲೆ ಪ್ರವೀಣ ತೊಗಾ­ಡಿಯಾ ಅವರ ವಿರುದ್ಧ ಭಾವನಗರದಲ್ಲಿ ಎಫ್‌ಐಆರ್‌ ದಾಖಲಿ­ಸಲಾಗಿದೆ.

ಗಿರಿರಾಜ್‌ ಮೇಲೆ ಮೂರನೇ ಎಫ್‌ಐಆರ್‌: ನರೇಂದ್ರ ಮೋದಿ ಅವರ ವಿರೋಧಿಗಳು ಪಾಕಿಸ್ತಾನಕ್ಕೆ ತೊಲಗಲಿ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ  ಗಿರಿರಾಜ್‌ ಸಿಂಗ್‌ ಅವರ ವಿರುದ್ಧ ಮೂರನೇ ಎಫ್‌ಐಆರ್‌ ದಾಖಲಾಗಿದೆ.

ಬೇನಿ ವಿರುದ್ಧ ದೂರು: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ  ಹೇಳಿಕೆ ನೀಡಿದ ಆರೋಪದ ಮೇಲೆ ಕೇಂದ್ರ ಸಚಿವ ಬೇನಿ ಪ್ರಸಾದ್‌ ವರ್ಮಾ ಅವರ ವಿರುದ್ಧ ಮಂಗಳವಾರ ದೂರು ದಾಖಲಾಗಿದೆ.

ಕಳೆದ ಭಾನುವಾರ ಅಕ್ಬರ್‌ಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜಾರಾಮ್‌ ಪರ ಚುನಾ­ವಣಾ ಪ್ರಚಾರದ ವೇಳೆ ಮೋದಿ­ಯನ್ನು ಕೊಲೆಗಡುಕ ಎಂದು ಆರೋಪಿಸಿದ್ದರು.

ಪಾಕಿಸ್ತಾನ ನಾಶ: ವಿವಾದ ಸೃಷ್ಟಿಸಿದ ಕದಂ 
ಮುಂಬೈ (ಪಿಟಿಐ):
ದೇಶದಲ್ಲಿನ ಮುಸ್ಲಿಮರು ದೊಂಬಿ ನಡೆಸುತ್ತಿದ್ದಾರೆ. ಅವರು ಹುತಾತ್ಮರ ಪ್ರತಿಮೆಗಳನ್ನು ನಾಶ ಮಾಡುತ್ತಿದ್ದಾರೆ ಎಂದು ಶಿವಸೇನಾ ಮುಖಂಡ ರಾಮದಾಸ್‌ ಕದಂ ಅವರು ಎನ್‌ಡಿಎ ಇಲ್ಲಿ ಸೋಮವಾರ ಆಯೋಜಿಸಿದ್ದ ರ್‍ಯಾಲಿಯಲ್ಲಿ ಹೇಳಿದ್ದಾರೆ.

ನರೇಂದ್ರ ಮೋದಿ ಅವರ ಭಾಷಣ ಆರಂಭಕ್ಕೂ ಮೊದಲು ಮಾತನಾಡಿದ ಕದಂ, ಮುಂಬೈನಲ್ಲಿ 1993ರಲ್ಲಿ ನಡೆದ ಸ್ಫೋಟವನ್ನು ನೆನಪಿಸಿಕೊಳ್ಳಿ. ಶಿವಸೇನೆ ಮುಖ್ಯಸ್ಥರಾಗಿದ್ದ ಬಾಳ ಠಾಕ್ರೆ ಮತ್ತು ಶಿವಸೇನೆಯಿಂದಾಗಿ ಹಲವು ಹಿಂದೂಗಳ ಜೀವ ಉಳಿದಿದೆ. ಒಂದು ವೇಳೆ ಮೋದಿ ಅವರು ಅಧಿಕಾರಕ್ಕೆ ಬಂದರೆ ಪಾಕಿಸ್ತಾನವನ್ನು ಆರು ತಿಂಗಳಲ್ಲಿ ನಾಶ ಮಾಡಿಬಿಡುತ್ತಾರೆ ಎಂದು ಆಕ್ರೋಶಭರಿತರಾಗಿ ನುಡಿದಿದ್ದಾರೆ.

ಕದಂ ಅವರ ಹೇಳಿಕೆಯಿಂದ ಶಿವಸೇನೆ ಅಂತರ ಕಾಯ್ದುಕೊಂಡಿದೆ.   ಕದಂ ಅವರ ಮಾತುಗಳು ಬಾಳಾ ಸಾಹೇಬ್‌ ಠಾಕ್ರೆ ಮತ್ತು ಶಿವಸೇನೆಯ ಭಾವನೆಗಳನ್ನು ಬಿಂಬಿಸಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆ. ಹಿಂದುತ್ವ ಕುರಿತ ಪಕ್ಷದ ನಿಲುವು ಸ್ಪಷ್ಟವಾಗಿದೆ’ ಎಂದು ಸೇನಾ ವಕ್ತಾರರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.