ADVERTISEMENT

ಹಳೆ ವಿಡಿಯೊ ಪ್ರದರ್ಶಿಸಿದ ಕಾಂಗ್ರೆಸ್‌

ಮೋದಿ ವಿನಾಶ ಪುರುಷ: ಉಮಾಭಾರತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ನರೇಂದ್ರ ಮೋದಿ ಅವರು ವಿನಾಶ­ಪುರುಷ ಮತ್ತು ಅವರು ಹೇಳುತ್ತಿರುವ ಅಭಿ­ವೃದ್ಧಿ ಕೃತ್ರಿಮ ಎಂದು ಬಿಜೆಪಿಯ ಹಿರಿಯ ನಾಯಕಿ ಉಮಾ  ಭಾರತಿ ಅವರು ಹೇಳಿರುವ ವಿಡಿಯೊ ಬಿಡುಗಡೆ ಮಾಡುವ ಮೂಲಕ ಮತ್ತೊಂದು ಸುತ್ತಿನ ಕೆಸರೆರ­ಚಾಟಕ್ಕೆ ಕಾಂಗ್ರೆಸ್‌ ಸಜ್ಜಾಗಿದೆ.

ಗುಜರಾತ್‌ನ ಹಿಂದೂಗಳಷ್ಟು ಭೀತರಾದ ಜನರನ್ನು ನಾನು ಬೇರೆಲ್ಲೂ ನೋಡಿಲ್ಲ ಮತ್ತು ಇಡೀ ರಾಜ್ಯವೇ ಭೀತಿ ಸನ್ನಿಗೊಳಗಾಗಿದೆ ಎಂದು ಉಮಾಭಾರತಿ ವಿಡಿಯೊದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಅವರು ವಿಡಿಯೊ ಬಿಡುಗಡೆ ಮಾಡಿ, ಇದು ಮೂರು ವರ್ಷಗಳಷ್ಟು ಹಳೆಯ ವಿಡಿಯೊ ಎಂದು ಹೇಳಿದರು. ಆಗ ಉಮಾಭಾರತಿ ಅವರು ಬಿಜೆಪಿ ತೊರೆದು, ಭಾರತೀಯ ಜನಶಕ್ತಿ ಪಕ್ಷದ ಮುಖ್ಯಸ್ಥೆಯಾಗಿದ್ದರು.

‘1973ರಿಂದಲೇ ನನಗೆ ಅವರು (ಮೋದಿ) ಗೊತ್ತು. ಅವರು ವಿಕಾಸ ಪುರುಷ ಅಲ್ಲ, ವಿನಾಶ ಪುರುಷ. ಬಡತನ ರೇಖೆಗಿಂತ ಕೆಳಗಿನ ಜನರನ್ನು ಮೇಲಕ್ಕೆ ಎತ್ತಿದ್ದೇನೆ ಎಂದು ಅವರು ಹೇಳುತ್ತಿರುವುದು ಸುಳ್ಳು... ಕಳೆದ ಐದು ವರ್ಷಗಳಲ್ಲಿ ಗುಜರಾತ್‌ ದೊಡ್ಡ ಸಾಲಗಾರ ರಾಜ್ಯವಾಗಿದೆ. ಗುಜರಾತ್‌ಗೆ ರಾಮನೂ ಸಿಗಲಿಲ್ಲ, ರೊಟ್ಟಿಯೂ ದೊರೆಯಲಿಲ್ಲ. ರಾಜ್ಯವನ್ನು ವಿನಾಶ ಪುರುಷನ ಹಿಡಿತದಿಂದ ರಕ್ಷಿಸಬೇಕು’ ಎಂದು ಉಮಾ ಭಾರತಿ ಅವರು ವಿಡಿಯೊದಲ್ಲಿ ಹೇಳಿದ್ದಾರೆ.

‘ಮೋದಿ ಅವರು ದೊಡ್ಡ ವ್ಯಕ್ತಿಯಾಗಲು ಮಾಧ್ಯಮವೇ ಕಾರಣ. ಬಲೂನ್‌ನ ಹಾಗೆ ಗಾಳಿ ಹಾಕಿ ಅವರನ್ನು ಉಬ್ಬಿಸ­ಲಾಗಿದೆ. ನೀವೇ ಗಾಳಿ ಹಾಕಿ ಬಲೂನ್‌ ಉಬ್ಬಿಸಿರುವುದರಿಂದ ನೀವೇ ಅದರ ಗಾಳಿ ತೆಗೆಯಬೇಕು’ ಎಂದು ಉಮಾ ಕರೆ ನೀಡಿರುವುದು ವಿಡಿಯೊದಲ್ಲಿ ಇದೆ.

ಈ ಹೇಳಿಕೆಗಳನ್ನು ನೀಡುವಾಗ ಉಮಾ ಅವರು ಬಿಜೆಪಿಯಲ್ಲಿ ಇಲ್ಲ ಎಂಬುದು ಸತ್ಯ. ಹಾಗೆಯೇ ಅವರು ಇದನ್ನು ಚುನಾವಣೆಯ ಸಂದರ್ಭದಲ್ಲಿ ಹೇಳಿಲ್ಲ. ಹಾಗಾಗಿ ಹಿರಿಯ ನಾಯಕಿಯ ಹೇಳಿಕೆಯಲ್ಲಿ ಸ್ವಲ್ಪವಾದರೂ ಸತ್ಯ ಇದ್ದೇ ಇರುತ್ತದೆ ಎಂದು ಅಭಿಷೇಕ್‌ ಸಿಂಘ್ವಿ ಅಭಿಪ್ರಾಯಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ವಿಡಿಯೊ ಬಿಡುಗಡೆ ಮಾಡಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಘ್ವಿ, ಉಮಾ ಅವರ ವಿಡಿಯೊ ಬಿಡುಗಡೆ ಮಾಡುವುದೇ ಪತ್ರಿಕಾಗೋಷ್ಠಿಯ ಮುಖ್ಯ ಉದ್ದೇಶ ಅಲ್ಲ ಎಂದರು.

ಮೋದಿ ಅವರು ಸರ್ವಾಧಿಕಾರಿ, ವಿನಾಶಪುರುಷ ಮತ್ತು ಗುಜರಾತ್‌ನ ಅಭಿವೃದ್ಧಿಯ ಕತೆ ಸುಳ್ಳು ಎಂದು ಹೇಳುವವರು ಬಿಜೆಪಿಯಲ್ಲಿಯೇ ಸಾವಿರಾರು ಜನರಿದ್ದಾರೆ ಎಂದು ಸಿಂಘ್ವಿ ಹೇಳಿದರು.

ಆಯೋಗಕ್ಕೆ ಉಮಾ ದೂರು
ಮೂರು ವರ್ಷ ಹಳೆಯ ವಿಡಿಯೊ ಬಿಡುಗಡೆ ಮಾಡಿರುವ ಕಾಂಗ್ರೆಸ್‌ ಕ್ರಮದ ವಿರುದ್ಧ ಚುನಾವಣಾ ಆಯೋಗಕ್ಕೆ ಉಮಾ ಭಾರತಿ ದೂರು ನೀಡಿದ್ದಾರೆ.

ಪಕ್ಷದಿಂದ ಉಚ್ಚಾಟಿಸಿದ ನಂತರ ಈ ರೀತಿ ಹೇಳಿಕೆ ನೀಡಿರುವುದು ಹೌದು ಎಂಬುದನ್ನು ಉಮಾ ಒಪ್ಪಿಕೊಂಡಿದ್ದಾರೆ. ಅಮೆರಿಕ ಕೂಡ ಮೋದಿ ಅವರ ಬಗೆಗಿನ ನಿಲುವನ್ನು ಬದಲಿಸಿಕೊಂಡಿದೆ ಎಂದು ಅವರು ತಮ್ಮ ಹಳೆಯ ಹೇಳಿಕೆಗೆ ಸಮರ್ಥನೆ ನೀಡಿದ್ದಾರೆ.

ಕಾಂಗ್ರೆಸ್‌ನ ‘ಮೊದಲ ಕುಟುಂಬ’ವನ್ನು ರಕ್ಷಿಸು­ವುದಕ್ಕಾಗಿ ಹಳೆಯ ವಿಡಿಯೊ ಬಿಡುಗಡೆ ಮಾಡಿರುವುದು ಕಾಂಗ್ರೆಸ್‌ನ ಹತಾಶೆಯನ್ನು ತೋರಿಸುತ್ತದೆ ಎಂದು ಬಿಜೆಪಿ ತಿರುಗೇಟು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT