ADVERTISEMENT

ಬಳ್ಳಾರಿಯಲ್ಲಿ ‘ಮಾದರಿ’ ಮತಗಟ್ಟೆಗಳು

ಎ.ಸಿ, ಕೂಲರ್‌, ಕುಡಿಯುವ ನೀರು, ನೆರಳು

ಸಿದ್ದಯ್ಯ ಹಿರೇಮಠ
Published 16 ಏಪ್ರಿಲ್ 2014, 19:30 IST
Last Updated 16 ಏಪ್ರಿಲ್ 2014, 19:30 IST

ಬಳ್ಳಾರಿ: ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕ ಸಾಲು. ಸರದಿಗಾಗಿ ಕಾಯುವವರಿಗೆ ಕುಳಿತುಕೊಳ್ಳಲು ಕುರ್ಚಿ. ನೆರಳಿಗಾಗಿ ಶಾಮಿಯಾನಾ,  ಸೆಖೆಯಿಂದ ಬಳಲುವ ಸಿಬ್ಬಂದಿ ಹಾಗೂ ಮತದಾರರಿಗೆ ಏರ್‌ ಕಂಡೀಷನರ್‌ (ಎ.ಸಿ) ಅಥವಾ ಕೂಲರ್‌ ವ್ಯವಸ್ಥೆ. ಕುಡಿಯಲು ಶುದ್ಧ, ತಂಪಾದ ನೀರಿನ ವ್ಯವಸ್ಥೆ...  ಇದು ಜಿಲ್ಲೆಯಲ್ಲಿ ಸ್ಥಾಪಿಸಲಾಗಿ­ರುವ 12 ‘ಮಾದರಿ’ ಮತಗಟ್ಟೆಗಳಲ್ಲಿ  ಕಲ್ಪಿಸಿರುವ ಸೌಲಭ್ಯೆಗಳ ವಿವರ.

ಬಳ್ಳಾರಿಯಲ್ಲಿನ ಒಟ್ಟು 8, ಹೊಸ­ಪೇಟೆಯ ಎರಡು ಹಾಗೂ ತೋರಣ­ಗಲ್‌­ನಲ್ಲಿ ಎರಡು ಮತಗಟ್ಟೆ­ಗಳು ಸೇರಿ­ದಂತೆ ಜಿಲ್ಲೆಯಲ್ಲಿ ಒಟ್ಟು 12 ಕಡೆ ಈ ಸೌಲಭ್ಯ ಕಲ್ಪಿಸಲಾಗಿದೆ.

ಈ ಮತಗಟ್ಟೆಗಳಿಗೆ ಬುಧವಾರವೇ ಬಂದಿರುವ ಚುನಾವಣಾ ಸಿಬ್ಬಂದಿಗಾಗಿ ಹಾಸಿಗೆ, ಹೊದಿಕೆ, ತಲೆದಿಂಬು, ವಿದ್ಯುತ್‌ ದೀಪ, ಶೌಚಾಲಯ ವ್ಯವಸ್ಥೆ ಮಾಡಲಾಗಿದ್ದು, ಮತದಾನದ ಪೂರ್ಣ ಪ್ರಕ್ರಿಯೆ ಸೆರೆಹಿಡಿಯಲು ಇಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ. ಜತೆಗೆ ಕೆಂಪು, ನೀಲಿ, ಹಸಿರು ಹಾಸು (ಕಾರ್ಪೆಟ್‌) ಹಾಕಲಾಗಿದೆ. ಭದ್ರತಾ ಸಿಬ್ಬಂದಿಗೂ ಬಿಸಿಲಿನಿಂದ ರಕ್ಷಣೆ ನೀಡಲು ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಸಾಲಿನಲ್ಲಿ ನಿಲ್ಲುವ ಮತದಾರರಿಗೆ ಕೂರಲು ಬೆಂಚ್‌ ಇದೆ. ಅಲ್ಲದೆ, ಮಹಿಳೆಯರು ಮತ್ತು ಪುರುಷರು ಪ್ರತ್ಯೇಕವಾಗಿ ಸಾಗಲು ಬ್ಯಾರಿಕೇಡ್‌ ಅಳವಡಿಸಲಾಗಿದೆ. ಆಗಮನ ಮತ್ತು ನಿರ್ಗಮನಕ್ಕೂ ಪ್ರತ್ಯೇಕ ಮಾರ್ಗ ಇದೆ. ಮತದಾನದ ಅಂತಿಮ ಪ್ರಕ್ರಿಯೆ ಕಾಣಿಸದಂತೆ ಗೋಪ್ಯತೆ ಕಾಪಾಡಲು ಪೂರ್ಣ ಮರೆ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.

ಕಡುಬೇಸಿಗೆಯಲ್ಲಿ ನಡೆಯುತ್ತಿರುವ ಚುನಾವಣೆಯ ಸಂದರ್ಭ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಮತಗಟ್ಟೆಗಳು ಕಲ್ಯಾಣ ಮಂಟಪದ ಮಾದರಿಯಲ್ಲಿ ಸಿಂಗಾರಗೊಂಡಿವೆ.

ಜಿಲ್ಲಾಡಳಿತದ ಬಳಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಈ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೆಚ್ಚಿನ ಪ್ರಮಾಣದ ಖರ್ಚು ಇಲ್ಲ. ಕೇವಲ ಜನರೇಟರ್‌ ಮತ್ತು ಶಾಮಿಯಾನಾ ಬಾಡಿಗೆಗೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾದರಿ ಮತಗಟ್ಟೆಗಳಲ್ಲದೆ, ಜಿಲ್ಲೆಯ ಎಂಟು ಸೂಕ್ಷ್ಮ ಮತಗಟ್ಟೆಗಳಲ್ಲಿ ‘ವೆಬ್‌ ಕಾಸ್ಟಿಂಗ್‌’ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಮತದಾನದ ಪ್ರಕ್ರಿಯೆಯನ್ನು ನೇರವಾಗಿ ನಿಯಂತ್ರಣ ಕೊಠಡಿಯಲ್ಲಿ ಹಾಗೂ ದೇಶದೆಲ್ಲೆಡೆ ಚುನಾವಣಾ ಆಯೋಗದ ಅಧಿಕಾರಿಗಳು ವೀಕ್ಷಿಸಬಹುದಾಗಿದೆ ಎಂದು ಅವರು ಹೇಳಿದರು.

ಈ ಹಿಂದೆ ಚಂಡೀಗಡ ಹಾಗೂ ನವದೆಹಲಿಯಲ್ಲಿನ ಕೆಲವು ಮತಗಟ್ಟೆಗಳಲ್ಲಿ ಚುನಾವಣಾ ಆಯೋಗ ಈ ವ್ಯವಸ್ಥೆ ಮಾಡಿತ್ತು. ಮತದಾರರು ಮುಕ್ತವಾಗಿ, ಹಿಂಜರಿಕೆ, ಬೇಸರ ಇಲ್ಲದೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ರಾಜ್ಯದಲ್ಲೂ ಮೊದಲ ಬಾರಿಗೆ ‘ಮಾದರಿ’ ಮತಗಟ್ಟೆ ನಿರ್ಮಿಸಲು ಆಯೋಗ ಸೂಚಿಸಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.