ADVERTISEMENT

ವ್ಯವಸ್ಥೆ ವಿರುದ್ಧದ ಸಿಟ್ಟು

​ಪ್ರಜಾವಾಣಿ ವಾರ್ತೆ
Published 12 ಮೇ 2014, 19:30 IST
Last Updated 12 ಮೇ 2014, 19:30 IST

ಯುವ ಸಮೂಹಕ್ಕೆ ರಾಹುಲ್‌ ಗಾಂಧಿ ಪ್ರತಿನಿಧಿ ಆಗಬೇಕಾಗಿತ್ತು. ಆದರೆ, ನರೇಂದ್ರ ಮೋದಿ ಯುವ ಜನಾಂಗದ ‘ಐಕಾನ್‌’ ಆಗಿರು­ವು­ದಕ್ಕೆ ವ್ಯವಸ್ಥೆಯ ವಿರುದ್ಧ ಅವರಿಗೆ ಇರುವ ಸಿಟ್ಟು ಕಾರಣ. ಸರ್ಕಾರದ ಮೇಲಿನ ಸಿಟ್ಟು ಬಿಜೆಪಿ ಬೆಂಬಲಿಸುವಂತೆ ಮಾಡಿದೆ.
-ಪ್ರೊ.ಮುಜಾಫರ್‌ ಅಸಾದಿ, ರಾಜಕೀಯ ತಜ್ಞ, ಮೈಸೂರು

ಕಾಂಗ್ರೆಸ್‌ಗೆ ಪರ್ಯಾಯ ವ್ಯವಸ್ಥೆ ಇಲ್ಲದೆ ಇದ್ದಾಗ ಯುವ ಸಮುದಾಯದಲ್ಲಿನ ಅಲ್ಪಭಾಗ ಬಿಜೆಪಿಯತ್ತ ಒಲವು ತೋರಿರಬಹುದು. ಎಲ್ಲ ಸಮುದಾಯಗಳ ಯುವಕರು ಬಿಜೆಪಿಗೆ ಮಾರು ಹೋಗಿದ್ದಾರೆಯೇ ಎನ್ನುವ ಪ್ರಶ್ನೆಯೂ ಸಹ ಇಲ್ಲಿ ಮೂಡುತ್ತದೆ. ಮುಖ್ಯ­ವಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮತದಾರರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಮಾಡಿಲ್ಲ’
-ಪ್ರೊ. ಎಸ್‌. ಜಾಫೆಟ್‌, ರಾಷ್ಟ್ರೀಯ ಕಾನೂನು ಶಾಲೆ

ಮಧ್ಯಮ ವರ್ಗದವರನ್ನು ಗುರಿಯಾಗಿರಿಸಿಕೊಂಡು ಬಿಜೆಪಿ ಪ್ರಚಾರ ಮಾಡಿತು. ಈಗಿರುವ ಪಕ್ಷಗಳಲ್ಲೇ ಸ್ವಲ್ಪ ಉತ್ತಮವಾಗಿರುವ ಪಕ್ಷವನ್ನು ಆಯ್ಕೆ ಮಾಡಿಕೊಳ್ಳುವು­ದನ್ನು ಬಿಟ್ಟರೆ ಪರ್ಯಾಯ ದಾರಿ ಇಲ್ಲ. ಹೀಗಾಗಿ ಯುವಕರು, ಮಧ್ಯಮ ವರ್ಗದವರು ಬಿಜೆಪಿಯತ್ತ ಒಲವು ತೋರಿರಬಹುದು
-ಡಾ. ಎಂ ಚಂದ್ರ ಪೂಜಾರಿ, ಅಧ್ಯಾಪಕರು, ಕರ್ನಾಟಕ ಜನಪದ ವಿಶ್ವವಿದ್ಯಾಲಯ

ADVERTISEMENT

ಸಂಸ್ಕೃತಿಯ ರಕ್ಷಣೆಯ ಹೆಸರಿನಲ್ಲಿ ಕೋಮುವಾದಿ ಪಕ್ಷ ಮಹಿಳೆಯ ಸ್ವಾತಂತ್ರ್ಯ ದಮನ ಮಾಡಲು ಪ್ರಯತ್ನಿ­ಸು­ತ್ತದೆ. ಜಾಗೃತ ಮಹಿಳೆ­ಯರು ಅನಿವಾರ್ಯವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಮತ ಚಲಾಯಿಸಿ­ದ್ದಾರೆ.  ರಾಜ­ಕೀಯ ಇತಿಹಾಸವನ್ನು ಅರಿಯದ  ಯುವಕರು ಬಿಜೆಪಿ ಕಡೆ ಒಲವು ತೋರಿದ್ದಾರೆ.
-ರೂಪಾ ಹಾಸನ, ಸಾಹಿತಿ

ಬಿಜೆಪಿ ನವ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸಿಕೊಂಡಿರುವುದು ಯುವಕರು ಅದರತ್ತ ಹೆಚ್ಚು ಒಲವು ತೋರಲು ಕಾರಣ. ಆದರೆ, ಎಲ್ಲ ಯುವಕರು ಸೈದ್ಧಾಂತಿಕ ಕಾರಣವನ್ನೇ ಆಧರಿಸಿ ಮತ ಚಲಾಯಿಸಿದ್ದಾರೆ ಎಂದು ಹೇಳಲಾಗದು
-ಡಾ.ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞರು

ಯುವ ಜನಾಂಗ ಬಿಜೆಪಿಯತ್ತ ಆರ್ಕಷಿತ­ವಾಗು­ವುದು ನಿರೀಕ್ಷಿತ. ಜಾಗತೀಕರಣ­ದಿಂದ ಪ್ರಗತಿ ಸಾಧಿಸು­ತ್ತಿರುವ ಈ ದೇಶಕ್ಕೆ ಉತ್ತಮ ಆಡಳಿತ ಇಲ್ಲ ಎಂದು ಯುವ ಜನಾಂಗ ಅಭಿಪ್ರಾಯ­ಪಟ್ಟ ರೀತಿ ಇದೆ. ಯುವಕರಿಗೆ ಸಿದ್ಧಾಂತ­ವಾಗಲಿ; ಹಣ ದುಬ್ಬರವಾಗಲಿ ಅಷ್ಟಾಗಿ ಪರಿಣಾಮ ಬೀರದು.
-ಪ್ರೊ.ರಾಜೇಂದ್ರ ಚೆನ್ನಿ, ವಿರ್ಮಶಕ, ಶಿವಮೊಗ್ಗ

ಯುವ ಮತದಾರರ ಒಲವು ಗಳಿಸುವಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ದೊಡ್ಡ ಕಂದರ ಸೃಷ್ಟಿಯಾಗಿದೆ. ರಾಹುಲ್‌ಗಾಂಧಿ ಯುವಜನತೆ ಮೇಲೆ ಪ್ರಭಾವ ಬೀರಿಲ್ಲ ಹಾಗೂ ಇಂದಿರಾಗಾಂಧಿ ಪ್ರಭಾವದ ಕಾರಣಕ್ಕೆ ಮಹಿಳಾ ಮತದಾರರು ಕಾಂಗ್ರೆಸ್‌ ಪಕ್ಷದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ ಎಂಬುದು ಸಮೀಕ್ಷೆಯಿಂದ ವೇದ್ಯವಾಗುತ್ತಿದೆ.
-ಮತ್ತಿಹಳ್ಳಿ ಮದನಮೋಹನ್, ಹಿರಿಯ ಪತ್ರಕರ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.