ADVERTISEMENT

ತ್ರಿಕೋನ ಸ್ಪರ್ಧೆ; ಅಭ್ಯರ್ಥಿಗಳಿಂದ ಕ್ಷೇತ್ರ ಸುತ್ತಾಟ

ವಿಧಾನಪರಿಷತ್ತಿನ ತಲಾ ಮೂರು ಶಿಕ್ಷಕರ, ಪದವೀಧರ ಕ್ಷೇತ್ರಗಳಿಗೆ ಜೂನ್‌ 8ರಂದು ಚುನಾವಣೆ

​ಪ್ರಜಾವಾಣಿ ವಾರ್ತೆ
Published 27 ಮೇ 2018, 19:30 IST
Last Updated 27 ಮೇ 2018, 19:30 IST
ತ್ರಿಕೋನ ಸ್ಪರ್ಧೆ; ಅಭ್ಯರ್ಥಿಗಳಿಂದ ಕ್ಷೇತ್ರ ಸುತ್ತಾಟ
ತ್ರಿಕೋನ ಸ್ಪರ್ಧೆ; ಅಭ್ಯರ್ಥಿಗಳಿಂದ ಕ್ಷೇತ್ರ ಸುತ್ತಾಟ   

ಬೆಂಗಳೂರು: ವಿಧಾನಪರಿಷತ್ತಿನ ತಲಾ ಮೂರು ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರಗಳಿಗೆ ಜೂನ್‌ 8ರಂದು ಚುನಾವಣೆ ನಡೆಯಲಿದ್ದು, ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಚುರುಕುಗೊಂಡಿದೆ.

ವಿಧಾನಸಭೆ ಚುನಾವಣೆ ಫ‌ಲಿತಾಂಶ ಹೊರಬಿದ್ದು, ಹೊಸ ಸರ್ಕಾರ ರಚನೆಯಾಗುತ್ತಲೇ ಮತ್ತೊಂದು ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಜೂನ್‌ 12ರಂದು ಮತ ಎಣಿಕೆ ನಡೆಯಲಿದೆ.

ಆಗ್ನೇಯ ಶಿಕ್ಷಕರ ಕ್ಷೇತ್ರದ ರಮೇಶ್‌ಬಾಬು (ಜೆಡಿಎಸ್‌), ದಕ್ಷಿಣ ಶಿಕ್ಷಕರ ಕ್ಷೇತ್ರದ ಮರಿತಿಬ್ಬೇಗೌಡ (ಜೆಡಿಎಸ್‌), ನೈರುತ್ಯ ಶಿಕ್ಷಕರ ಕ್ಷೇತ್ರದ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ (ಬಿಜೆಪಿ), ನೈರುತ್ಯ ಪದವೀಧರ ಕ್ಷೇತ್ರದ ಡಿ.ಎಚ್‌. ಶಂಕರಮೂರ್ತಿ (ಬಿಜೆಪಿ- ಸಭಾಪತಿ), ಬೆಂಗಳೂರು ಪದವೀಧರ ಕ್ಷೇತ್ರದ ರಾಮಚಂದ್ರಗೌಡ (ಬಿಜೆಪಿ) ಹಾಗೂ ಈಶಾನ್ಯ ಪದವೀಧರ ಕ್ಷೇತ್ರದ ಅಮರನಾಥ ಪಾಟೀಲ (ಬಿಜೆಪಿ) ಅವರ ಅವಧಿ ಜೂನ್ 21ಕ್ಕೆ ಕೊನೆಗೊಳ್ಳಲಿದ್ದು, ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ADVERTISEMENT

ಮೂರೂ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರ ಸುತ್ತಾಟದಲ್ಲಿ ತೊಡಗಿದ್ದಾರೆ. ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಆರು ಕ್ಷೇತ್ರಗಳ ಪೈಕಿ ಮೂರು ಪದವೀಧರ ಮತ್ತು ಒಂದು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಎರಡು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಾಬಲ್ಯ ಇದೆ. ಈ ಬಾರಿ ಅವುಗಳನ್ನು ಉಳಿಸಿಕೊಳ್ಳಲು ಎರಡೂ ಪಕ್ಷಗಳು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್‌ ಮೂರು ಕ್ಷೇತ್ರಗಳನ್ನಾದರೂ ವಶಕ್ಕೆ ಪಡೆಯುವ ಉಮೇದಿನಲ್ಲಿದೆ.

ಆಗ್ನೇಯ ಶಿಕ್ಷಕರ ಕ್ಷೇತ್ರ ದಾವಣಗೆರೆ (ದಾವಣಗೆರೆ, ಹರಿಹರ, ಜಗಳೂರು), ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ವ್ಯಾಪ್ತಿಯನ್ನು ಒಳಗೊಂಡಿದೆ. ಇಲ್ಲಿ ಮರು ಆಯ್ಕೆ ಬಯಸಿರುವ ರಮೇಶ್‌ ಬಾಬು, ಮಾಜಿ ಶಾಸಕ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಸೇರಿ ಒಟ್ಟು 14 ಅಭ್ಯರ್ಥಿಗಳಿದ್ದಾರೆ. ಆರು ತಿಂಗಳ ಹಿಂದೆಯೇ ಬಿಜೆಪಿ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರಿಂದ ಹಾಲನೂರು ಲೇಪಾಕ್ಷಿ ಅವರು ಕ್ಷೇತ್ರದುದ್ದಕ್ಕೂ ಪ್ರಚಾರ ನಡೆಸಿದ್ದರು. ನಾಮಪತ್ರ ಸಲ್ಲಿಕೆ ಹಂತದಲ್ಲಿ ಪಕ್ಷ ನಾರಾಯಣಸ್ವಾಮಿಗೆ ಟಿಕೆಟ್‌ ನೀಡಿದೆ. ಕ್ಷೇತ್ರದಲ್ಲಿ 19,402 ಮತದಾರರಿದ್ದಾರೆ.

ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ನಡುವೆ ತ್ರಿಕೋನ ಪೈಪೋಟಿ ಏರ್ಪಟ್ಟಿದೆ. ಇಲ್ಲಿ ಒಟ್ಟು 9 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, 20,678 ಮತದಾರರು ಇದ್ದಾರೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ದೋಸ್ತಿಯಾದ ಬೆನ್ನಲ್ಲೇ ಚುನಾವಣೆ ಎದುರಾಗಿದ್ದು, ಈ ಎರಡೂ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆಗಿಳಿದಿರುವುದು ಕುತೂಹಲ ಮೂಡಿಸಿದೆ.

ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ದಾವಣಗೆರೆ (ಹೊನ್ನಾಳಿ ಮತ್ತು ಚೆನ್ನಗಿರಿ) ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ನೈರುತ್ಯ ಪದವೀಧರರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಮೂರೂ ಪಕ್ಷಗಳ ಮಧ್ಯೆ ತ್ರಿಕೋನ ಸ್ಪರ್ಧೆ ಇದೆ.

ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಭಾಪತಿಯಾಗಿದ್ದ ಡಿ.ಎಚ್‌. ಶಂಕರಮೂರ್ತಿ ಅವರ ಬದಲು ಬಿಜೆಪಿಯಿಂದ ಆಯನೂರು ಮಂಜುನಾಥ್‌ ಕಣದಲ್ಲಿದ್ದಾರೆ. ಕಾಂಗ್ರೆಸ್‌ನ ಎಸ್‌.ಪಿ. ದಿನೇಶ್‌ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಪುನರಾಯ್ಕೆ ಬಯಸಿರುವ ಬಿಜೆಪಿಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಸಹಿತ 12 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಇಲ್ಲೂ ತ್ರಿಕೋನ ಸ್ಪರ್ಧೆ ಇದೆ.

ಹೈದರಾಬಾದ್‌ ಕರ್ನಾಟಕದ ಆರು ಜಿಲ್ಲೆಗಳನ್ನು ಒಳಗೊಂಡ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌, ರಾಯಚೂರು ಜಿಲ್ಲೆಯ ಹೋರಾಟಗಾರ ಡಾ.ರಜಾಕ್‌ ಉಸ್ತಾದ್‌ ಸೇರಿ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೀದರ್‌ ಜಿಲ್ಲೆ ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ ಅವರ ಸಹೋದರ ಚಂದ್ರಶೇಖರ ಪಾಟೀಲ ಇಲ್ಲಿ ಕಾಂಗ್ರೆಸ್‌ ಹುರಿಯಾಳು.

ಬೆಂಗಳೂರು ನಗರ ಜಿಲ್ಲೆ, ಗ್ರಾಮಾಂತರ, ರಾಮನಗರ ಜಿಲ್ಲೆ, ಬಿಬಿಎಂಪಿ (ಕೇಂದ್ರ, ಉತ್ತರ ಮತ್ತು ದಕ್ಷಿಣ ವಲಯ) ವ್ಯಾಪ್ತಿಯನ್ನು ಒಳಗೊಂಡ ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಒಟ್ಟು 65,354 ಮತದಾರರಿದ್ದಾರೆ.

ಅಭ್ಯರ್ಥಿಗಳ ವೆಚ್ಚಕ್ಕೆ ಮಿತಿ ಇಲ್ಲ: ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಇಷ್ಟೇ ಮೊತ್ತ ಖರ್ಚು ಮಾಡಬೇಕು ಎಂಬ ಮಿತಿ ಇದೆ. ಆದರೆ, ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಆ ರೀತಿಯ ಮಿತಿ ಇಲ್ಲ. ಅವರು ಎಷ್ಟು ಬೇಕಾದರೂ ಖರ್ಚು ಮಾಡಬಹುದು.

ಮುಖ್ಯಾಂಶಗಳು

* ಬಹುತೇಕ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ

* ಮರು ಆಯ್ಕೆ ಬಯಸಿ ಗಣೇಶ್‌ ಕಾರ್ಣಿಕ್‌, ರಮೇಶ್‌ಬಾಬು, ಮರಿತಿಬ್ಬೇಗೌಡ ಕಣದಲ್ಲಿ

* ಅಭ್ಯರ್ಥಿಗಳ ವೆಚ್ಚಕ್ಕೆ ಮಿತಿ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.