ADVERTISEMENT

ಬಿಎಸ್‌ವೈ ಓಟಕ್ಕೆ ಮೋದಿ, ಶಾ ಲಗಾಮು

‘ವಂಶಪಾರಂಪರ್ಯ’ ಆಡಳಿತಕ್ಕೆ ಕೊನೆಹಾಡಲು ವರಿಷ್ಠರ ಕಠಿಣ ನಿರ್ಣಯ

ವೈ.ಗ.ಜಗದೀಶ್‌
Published 24 ಏಪ್ರಿಲ್ 2018, 19:29 IST
Last Updated 24 ಏಪ್ರಿಲ್ 2018, 19:29 IST
ಬಿಎಸ್‌ವೈ ಓಟಕ್ಕೆ ಮೋದಿ, ಶಾ ಲಗಾಮು
ಬಿಎಸ್‌ವೈ ಓಟಕ್ಕೆ ಮೋದಿ, ಶಾ ಲಗಾಮು   

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಟಿಕೆಟ್ ನಿರಾಕರಿಸುವ ಕಠಿಣ ನಿರ್ಧಾರ ಕೈಗೊಳ್ಳುವ ಮೂಲಕ ‘ಯಾರೊಬ್ಬರೂ ನಮ್ಮ ಅಂಕೆ ಮೀರಿ ಹೋಗಬಾರದು’ ಎಂಬ ಸ್ಪಷ್ಟ ಸಂದೇಶವನ್ನು ಪಕ್ಷದ ವರಿಷ್ಠರು ರವಾನಿಸಿದ್ದಾರೆ.

‘ವಂಶಪಾರಂಪರ್ಯ ಆಡಳಿತಕ್ಕೆ ವಿರೋಧ’ ಎಂಬ ಕಾಂಗ್ರೆಸ್‌ ವಿರುದ್ಧದ ತಮ್ಮ ಪ್ರಬಲಾಸ್ತ್ರವನ್ನು ಉಳಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಈ ರೀತಿ ನಿರ್ದಾಕ್ಷಿಣ್ಯ ಧೋರಣೆ ತಳೆದಿದ್ದಾರೆ ಎಂದು ಕೆಲವು ನಾಯಕರು ಪ್ರತಿಪಾದಿಸುತ್ತಿದ್ದಾರೆ.

ಆದರೆ, ಗೋವಿಂದ ಕಾರಜೋಳ, ರಾಮಚಂದ್ರಗೌಡ, ವೈ. ಸಂಪಂಗಿ ಮಕ್ಕಳಿಗೆ ಟಿಕೆಟ್‌ ನೀಡಲಾಗಿದೆ.

ADVERTISEMENT

ಈ ಆಯಾಮದಲ್ಲಿ ನೋಡಿದರೆ, ‘ವಂಶವಾದಕ್ಕೆ ವಿರುದ್ಧ’ ಎಂಬುದು ಪಕ್ಷದ ‘ನಿಜದ ನಿಲುವು’ ಎಂದು ಹೇಳಲು ಹೇಗೆ ಸಾಧ್ಯ. ಒಂದು ನಿಯಮ ಎಲ್ಲರಿಗೂ ಅನ್ವಯವಾಗಬೇಕಲ್ವವೇ ಎಂಬ ಪ್ರಶ್ನೆಗಳು ಪಕ್ಷದ ಆಂತರಿಕ ವಲಯದಲ್ಲಿ ಉದ್ಭವಿಸಿವೆ.

‘ಕಾಂಗ್ರೆಸ್ ಮುಕ್ತ ಭಾರತ’ ನಿರ್ಮಾಣ ಮಾಡಬೇಕು ಎಂದು ಮೋದಿ ಅವರು ಕರೆ ನೀಡುವಾಗ ಭ್ರಷ್ಟಾಚಾರಕ್ಕೆ ಕಡಿವಾಣ, ವಂಶವಾದ ನಿರ್ಮೂಲನೆ ಸೇರಿದಂತೆ ಕೆಲವು ಪ್ರಮುಖ ಆಶಯಗಳನ್ನು ಉಲ್ಲೇಖಿಸುತ್ತಾರೆ. ಹಾಗಂತ ಇದೊಂದು ತಾತ್ವಿಕತೆಯಾಗಿ ಉಳಿದಿದೆ ವಿನಃ ಪಕ್ಷದ ನೀತಿ ಸಂಹಿತೆಯಾಗಿ ಇನ್ನೂ ರೂಪುಗೊಂಡಿಲ್ಲ.ತೀವ್ರ ಒತ್ತಡ ಬಂದಾಗ ಹಿರಿಯ ನಾಯಕರ ಮಕ್ಕಳಿಗೆ ಟಿಕೆಟ್ ನೀಡಲಾಗಿದೆ. ಕೆಲವೊಮ್ಮೆ ನಿರಾಕರಿಸಿದ್ದುಂಟು.

ಮುಖ್ಯಮಂತ್ರಿ ಅಭ್ಯರ್ಥಿ ಮಕ್ಕಳಿಗೆ ಟಿಕೆಟ್ ನೀಡುವಾಗ ಇಂತಹ ತೀರ್ಮಾನ ಕೈಗೊಂಡ ನಿದರ್ಶನಗಳಿವೆ. ಇದು ಯಡಿಯೂರಪ್ಪ ಅವರಿಗೂ ಅನ್ವಯವಾಗಿದೆ ಎಂದು ಆರ್‌ಎಸ್ಎಸ್ ಪ್ರಮುಖರೊಬ್ಬರು ತಿಳಿಸಿದರು.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪುತ್ರ ಪಂಕಜ್ ಸಿಂಗ್‌ ಗೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇತ್ತು. ರಾಜನಾಥ್‌ ಒತ್ತಡಕ್ಕೆ ಮಣಿದು ಪುತ್ರನಿಗೆ ಟಿಕೆಟ್ ನೀಡಲಾಯಿತು.

ರಾಜಸ್ಥಾನದ ವಿಧಾನಸಭಾ ಚುನಾವಣೆ ವೇಳೆ ಈಗಿನ ಮುಖ್ಯಮಂತ್ರಿ ವಸುಂದರರಾಜೇ ಅವರು, ಸಂಸದರಾದ ತಮ್ಮ ಪುತ್ರ ದುಷ್ಯಂತ ಸಿಂಗ್ ಅವರಿಗೆ ಟಿಕೆಟ್ ನೀಡಲೇಬೇಕು ಎಂದು ಹಟಕ್ಕೆ ಬಿದ್ದಿದ್ದರು. ಸಂಸದರಾಗಿರುವ ತಮ್ಮ ಪುತ್ರ ಅನುರಾಗ್ ಠಾಕೂರ್‌ಗೆ ಟಿಕೆಟ್ ಕೊಡಲೇಬೇಕು ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಪ್ರೇಮಕುಮಾರ್ ಧುಮಾಲ್, ವಿಧಾನಸಭೆ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದರು. ಸಂಸದ ವರುಣ್ ಗಾಂಧಿ ಅವರಿಗೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವೇಳೆ, ರಾಜ್ಯ ರಾಜಕಾರಣಕ್ಕೆ ಮರಳಬೇಕು ಎಂದು ಅಲ್ಲಿನ ನಾಯಕರೇ ಆಗ್ರಹಿಸಿದ್ದರು. ಆದರೆ, ಇವರು ಯಾರಿಗೂ ಪಕ್ಷ ಟಿಕೆಟ್ ನೀಡಿರಲಿಲ್ಲ.

ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಈ ಹಿಂದೆ ಸಂಸದರಾಗಿದ್ದರು. ಈಗ ಯಡಿಯೂರಪ್ಪ ಗೆದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಮತ್ತೆ ನಡೆಯುವ ಉಪಚುನಾವಣೆಯಲ್ಲಿ ರಾಘವೇಂದ್ರಗೆ ಟಿಕೆಟ್ ನೀಡುವುದು ಅನಿವಾರ್ಯ. ಅದೇ ಕುಟುಂಬದ ಮತ್ತೊಬ್ಬರಿಗೆ ಟಿಕೆಟ್ ನೀಡುವುದು ಸರಿಯಲ್ಲ ಎಂಬ ಕಾರಣಕ್ಕೆ ಮೋದಿ–ಅಮಿತ್ ಶಾ, ವಿಜಯೇಂದ್ರ ವಿಷಯದಲ್ಲಿ ಸ್ಪಷ್ಟ ನಿಲುವು ತಳೆದಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.

‘ಸಂಘ’ನಿಷ್ಠರ ಭಿನ್ನವಾದ: ಆದರೆ, ಈ ವಿಷಯದಲ್ಲಿ ಆರ್ಎಸ್ಎಸ್ ನಿಷ್ಠ ಬಿಜೆಪಿ ನಾಯಕರು ತಮ್ಮದೇ ಆದ ಭಿನ್ನ ವಾದ ಮಂಡಿಸುತ್ತಾರೆ.

ಟಿಕೆಟ್ ನೀಡುವ ವಿಷಯದಲ್ಲಿ ಯಡಿಯೂರಪ್ಪ ಮೇಲುಗೈ ಸಾಧಿಸಿದ್ದಾರೆ. ಕಳಂಕಿತರಿಗೆ ಹಾಗೂ ಬಿಜೆಪಿ ತೊರೆದು ಕೆಜೆಪಿಗೆ ಹೋಗಿದ್ದ ಎಲ್ಲ
ರಿಗೂ ಟಿಕೆಟ್ ಕೊಡುವುದು ಬೇಡ ಎಂಬ ಬೇಡಿಕೆ ಇತ್ತು. ಆದರೆ, ಗೆಲ್ಲುವುದೊಂದೇ ಮಾನದಂಡ ಮಾಡಿಕೊಂಡು ತಮ್ಮ ಆಪ್ತರಿಗೆಲ್ಲ ಯಡಿಯೂರಪ್ಪ ಟಿಕೆಟ್ ಕೊಡಿಸಿದ್ದಾರೆ.

ಕಾರಜೋಳ, ರಾಮಚಂದ್ರಗೌಡ, ವಿ.ಸೋಮಣ್ಣ(ಅರುಣ್‌ ಸೋಮಣ್ಣ ಈಗ ಕಣದಿಂದ ಹಿಂದೆ ಸರಿದಿದ್ದಾರೆ) ಮಕ್ಕಳಿಗೆ ಟಿಕೆಟ್ ಕೊಟ್ಟರೆ ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಯಾರ ವಿರೋಧವೂ ವ್ಯಕ್ತವಾಗುವುದಿಲ್ಲ ಎಂಬ ಭಾವನೆಯಿಂದ ತಮ್ಮ ಪುತ್ರ ವ್ಯಾಮೋಹವನ್ನು ಉಳಿದವರಿಗೂ ಯಡಿಯೂರಪ್ಪ ಹಂಚಿದರು ಎಂದು ಅವರ ವಿರೋಧಿ ಬಣ ಟೀಕಿಸುತ್ತಿದೆ.

ಯಡಿಯೂರಪ್ಪನವರ ಏಕಸ್ವಾಮ್ಯ ಹಾಗೂ ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಲು ವರಿಷ್ಠರು ಈ ರೀತಿ ನಿಷ್ಠುರ ನಿಲುವು ತೆಗೆದುಕೊಂಡರು. ವಿಜಯೇಂದ್ರಗೆ ಟಿಕೆಟ್‌ ನೀಡಲಾಗದು ಎಂದು ದೂರವಾಣಿಯಲ್ಲಿ ಯಡಿಯೂರಪ್ಪಗೆ ತಿಳಿಸಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮಲಾಲ್‌, 15 ದಿನಗಳ ಹಿಂದೆಯೇ ಅಮಿತ್ ಶಾ ನಿಮಗೆ ಹೇಳಿದ್ದರಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ‘ಯಡಿಯೂರಪ್ಪ ಅವರು ತಮ್ಮ ಮಗ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಪಕ್ಷ ಅವರ ಬೆಂಬಲಕ್ಕೆ ನಿಲ್ಲಲಿದೆ’ ಎಂದು ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಹೇಳಿಕೆಯೂ ಇದನ್ನೇ ಪುಷ್ಟೀಕರಿಸುತ್ತದೆ ಎಂದೂ ಈ ಗುಂಪು ವಾದಿಸುತ್ತಿದೆ.

ರಂಗಕ್ಕೆ ಇಳಿದ ವಿಜಯೇಂದ್ರ: ಪಕ್ಷದ ಟಿಕೆಟ್ ಸಿಗುತ್ತದೆ ಎಂಬ ಖಚಿತವಾಗುವ ಮುನ್ನವೇ ವಿಜಯೇಂದ್ರ ಮೈಸೂರಿನಲ್ಲಿ ಕಣಕ್ಕೆ ಇಳಿದಿರುವ ಹಿಂದೆ ಅವರ ಸೋದರಿಯರ ಒತ್ತಡ ಹಾಗೂ ಟಿಕೆಟ್ ಸಿಕ್ಕಿದರೆ ಸಿಗಲಿ ಎಂಬ ಯಡಿಯೂರಪ್ಪ ಮನದಾಸೆ ಕೆಲಸ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟ.

20 ದಿನಗಳ ಹಿಂದೆ ವರುಣಾದಲ್ಲಿ ಬಹಿರಂಗವಾಗಿ ಕಾರ್ಯಾಚರಣೆಗೆ ಇಳಿದ ವಿಜಯೇಂದ್ರ, ಅಲ್ಲಿ ಮನೆಯನ್ನೂ ಮಾಡಿದರು. ಅದಕ್ಕೂ ಮೊದಲು ತಮ್ಮದೇ ಆಪ್ತ ಬಳಗದ ಮೂಲಕ ಆಗಾಗ್ಗೆ ಭೇಟಿ ನೀಡಿ, ಪಕ್ಷದ ಸ್ಥಳೀಯ ಪ್ರಮುಖರ ಜತೆ ಸಭೆ ನಡೆಸಿದ್ದರು. ಮೈಸೂರು ಜಿಲ್ಲೆಯಲ್ಲಿ ಬಿಜೆಪಿಗೆ ಒಬ್ಬ ಪ್ರಭಾವಿ ಲಿಂಗಾಯತ ನಾಯಕರಿಲ್ಲದ ಶೂನ್ಯವನ್ನು ತುಂಬುವ ಇರಾದೆ ಅವರದ್ದಾಗಿತ್ತು.

ವಿವಿಧ ಹೋರಾಟಗಳಲ್ಲಿ ಭಾಗಿಯಾಗದೇ ‘ಅಪ‍್ಪ’ನ ಆಶೀರ್ವಾದವೇ ಕೈ ಹಿಡಿದು ಮುನ್ನಡೆಸುತ್ತದೆ ಎಂದು ನಂಬಿದ್ದೇ ಅವರಿಗೆ ಮುಳುವಾಯಿತು. ಅದರ ಬದಲು ಕಳೆದ ಒಂದು ವರ್ಷದಿಂದ ಪಕ್ಷ ಹಮ್ಮಿಕೊಂಡಿದ್ದ ವಿಸ್ತಾರಕ್ ಕಾರ್ಯಕ್ರಮ, ಮತಗಟ್ಟೆ ಮಟ್ಟದಲ್ಲಿ ಪಕ್ಷದ ಸಂಘಟನೆ, ನವಶಕ್ತಿ ಸಮಾವೇಶ. ಯಾವುದರಲ್ಲೂ ಭಾಗಿಯಾಗಿಲ್ಲ. ಏಕಾಏಕಿ ಕಣಕ್ಕೆ ಇಳಿದಿದ್ದು ಟಿಕೆಟ್ ನಿರಾಕರಿಸಲು ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.