ADVERTISEMENT

ಬ್ಯಾಂಕ್ ವಂಚನೆಗೆ ಕಾಂಗ್ರೆಸ್ ಕಾರಣ: ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವ್‌ ಪ್ರತಾಪ್‌ ಶುಕ್ಲಾ ಆರೋಪ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 10:51 IST
Last Updated 23 ಏಪ್ರಿಲ್ 2018, 10:51 IST
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಡಾ.ಜಿ.ವಿ.ಮಂಜುನಾಥ್ ಅವರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವ್‌ ಪ್ರತಾಪ್‌ ಶುಕ್ಲಾ (ಎಡದಿಂದ ಎರಡನೆಯವರು).
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಡಾ.ಜಿ.ವಿ.ಮಂಜುನಾಥ್ ಅವರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವ್‌ ಪ್ರತಾಪ್‌ ಶುಕ್ಲಾ (ಎಡದಿಂದ ಎರಡನೆಯವರು).   

ಚಿಕ್ಕಬಳ್ಳಾಪುರ: ‘ಉದ್ಯಮಿಗಳಾದ ವಿಜಯ ಮಲ್ಯ, ನೀರವ್ ಮೋದಿ ಅವರು ಬಹುಕೋಟಿ ಸಾಲ ಪಡೆದು ಬ್ಯಾಂಕ್‌ಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಲು ಈ ಹಿಂದೆ ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್‌ ಸರ್ಕಾರವೇ ಕಾರಣ. ಅದರಲ್ಲಿ ನಮ್ಮ ಸರ್ಕಾರದ ಕೈವಾಡ ಇಲ್ಲ’ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವ್‌ ಪ್ರತಾಪ್‌ ಶುಕ್ಲಾ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಜಯ ಮಲ್ಯ ಮತ್ತು ನೀರವ್ ಮೋದಿ ಅವರು ಅಷ್ಟು ದೊಡ್ಡ ಪ್ರಮಾಣದ ಸಾಲ ಪಡೆದಾಗ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು, ಪಿ.ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದರು. ಆದರೆ ಅವರು ಆಗ ಎಚ್ಚೆತ್ತುಕೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಲಿಲ್ಲ’ ಎಂದು ದೂರಿದರು.

‘ನರೇಂದ್ರ ಮೋದಿ ಅವರು ಅಧಿಕಾರ ಹಿಡಿಯುವುದಕ್ಕೂ, ಕಾಕತಾಳೀಯ ಎನ್ನುವಂತೆ ಆ ಉದ್ಯಮಿಗಳು ದೇಶ ತೊರೆದಿದ್ದಾರೆ. ಹೀಗಾಗಿ ಇವತ್ತು ಕಾಂಗ್ರೆಸ್ ಅವಧಿಯಲ್ಲಿ ನಡೆದ ಹಗರಣಗಳನ್ನೆಲ್ಲ ತಂದು ಬಿಜೆಪಿ ತಲೆ ಕಟ್ಟಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ಕೆಲವೊಂದು ಎಟಿಎಂಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಜತೆಗೆ ಎಟಿಎಂಗಳಿಗೆ ಹಣ ತುಂಬುವ ಅನೇಕ ಖಾಸಗಿ ಏಜೆನ್ಸಿಗಳು ತಮ್ಮ ಕೆಲಸದಲ್ಲಿ ವಿಫಲವಾಗಿದ್ದವು. ಆ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದ್ದು, ಕ್ರಮಕೈಗೊಳ್ಳುತ್ತೇವೆ. ಶೀಘ್ರದಲ್ಲಿಯೇ ಎಲ್ಲ ಸರಿ ಹೋಗಲಿದೆ. ಕರ್ನಾಟಕದಲ್ಲಿ ಈಗಾಗಲೇ ಕಾಂಗ್ರೆಸ್‌ ನೆಲೆ ಕಳೆದುಕೊಳ್ಳುತ್ತಿದ್ದು, ಬಿಜೆಪಿ ನೆಲೆ ಕಂಡುಕೊಳ್ಳುತ್ತಿದೆ. ಈ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಉತ್ತಮ ಫಲಿತಾಂಶ ದೊರೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.