ADVERTISEMENT

ಮುಲಾಯಂ, ಲಾಲು ಪುತ್ರರು ‘ಕೈ’ಗೆ ‘ಸ್ಟಾರ್‌’ ಪ್ರಚಾರಕರು!

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 19:30 IST
Last Updated 21 ಏಪ್ರಿಲ್ 2018, 19:30 IST
ಅಖಿಲೇಶ್‌ ಯಾದವ್‌
ಅಖಿಲೇಶ್‌ ಯಾದವ್‌   

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕೆಪಿಸಿಸಿ ಪ್ರಚಾರ ಸಮಿತಿ ಸಿದ್ಧಪಡಿಸಿರುವ ‘ಸ್ಟಾರ್‌’ ಪ್ರಚಾರಕರ ಪಟ್ಟಿಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಪುತ್ರ ತೇಜಸ್ವಿ ಯಾದವ್ ಹೆಸರುಗಳಿವೆ!

ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಯಾರಿಸಿರುವ 25 ‘ಸ್ಟಾರ್‌’ ಪ್ರಚಾರಕರ ಪಟ್ಟಿಯಲ್ಲಿ, ಈ ಇಬ್ಬರ ಜೊತೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಹೆಸರೂ ಇದೆ.

ಚುನಾವಣಾ ಪ್ರಚಾರಕ್ಕೆ ಈ ಮೂವರನ್ನು ರಾಜ್ಯಕ್ಕೆ ಕರೆ ತರುವ ಕುರಿತು ಎಐಸಿಸಿ ಜೊತೆ ಚರ್ಚಿಸಬಹುದು. ಅಲ್ಲದೆ, ಪಟ್ಟಿಗೆ ಇನ್ನಷ್ಟು ಹೆಸರುಗಳನ್ನು ಸೇರಿಸುವಂತೆ ಸೂಚಿಸಿ ಈ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರಿಗೆ ಶಿವಕುಮಾರ್‌ ಕಳುಹಿಸಿಕೊಟ್ಟಿದ್ದಾರೆ.

ADVERTISEMENT

ಈ ಮಧ್ಯೆ, ಕೆಪಿಸಿಸಿ ಕೂಡ 40 ‘ಸ್ಟಾರ್‌’ ಪ್ರಚಾರಕರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ, ಕ್ರಿಕೆಟಿಗ ಮೊಹಮ್ಮದ್‌ ಅಜರುದ್ದೀನ್‌, ಬಹುಭಾಷಾ ತಾರೆಯರಾದ ಚಿರಂಜೀವಿ, ಖುಷ್ಬೂ ಈ ಪಟ್ಟಿಯಲ್ಲಿದ್ದಾರೆ.

ಶಿವಕುಮಾರ್‌ ಸಿದ್ಧಪಡಿಸಿದ ಪಟ್ಟಿಯಲ್ಲಿರುವ ಬಹುತೇಕ ‘ಸ್ಟಾರ್‌’ಗಳು ಈ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ. ಆದರೆ, ಅಖಿಲೇಶ್‌ ಯಾದವ್‌, ತೇಜಸ್ವಿ ಯಾದವ್, ಶರದ್‌ ಪವಾರ್‌ ಹೆಸರು ಇಲ್ಲ. ಅಲ್ಲದೆ, ರಾಜ್‌ ಬಬ್ಬರ್‌, ನಗ್ಮಾ ಹೆಸರು ಕೂಡ ಈ ಪಟ್ಟಿಯಲ್ಲಿ ಇಲ್ಲ.

ಪಕ್ಷದ ಹಿರಿಯ ನಾಯಕರಾದ ಗುಲಾಂ ನಬಿ ಅಜಾದ್‌, ಸುಶೀಲ್‌ ಕುಮಾರ್‌ ಶಿಂಧೆ, ಯುವ ನಾಯಕ ಸಚಿನ್‌ ಪೈಲಟ್‌, ಜ್ಯೋತಿರಾದಿತ್ಯ ಸಿಂಧಿಯಾ ಹೆಸರುಗಳು ಕೆಪಿಸಿಸಿ ಪಟ್ಟಿಯಲ್ಲಿವೆ. ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸೇರಿರುವ ವಿ. ಧನಂಜಯ ಕುಮಾರ್‌, ಜೆಡಿಎಸ್‌ ತ್ಯಜಿಸಿ ‘ಕೈ’ ಹಿಡಿದ ಜಮೀರ್‌ ಅಹ್ಮದ್‌ ಖಾನ್‌ ಅವರನ್ನೂ ಕೆಪಿಸಿಸಿ ತನ್ನ ಪಟ್ಟಿಯಲ್ಲಿ ಸೇರಿಸಿಕೊಂಡಿದೆ.

ನಟರಾದ ಅಂಬರೀಷ್‌, ಮುಖ್ಯಮಂತ್ರಿ ಚಂದ್ರು, ರಮ್ಯಾ, ಮಾಲಾಶ್ರೀ ಅವರನ್ನೂ ಪಕ್ಷದ ಪರ ತಾರಾ ಪ್ರಚಾರಕರಾಗಿ ಬಳಸಿಕೊಳ್ಳಲು ಕೆಪಿಸಿಸಿ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.