ADVERTISEMENT

ವಿಧಾನಸೌಧದ ಗಾಂಧಿಪ್ರತಿಮೆ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಪ್ರತಿಭಟನೆ

ಬಿಸಿಲಲ್ಲಿ ಬೆವರಿಳಿಸುತ್ತಿರುವ ನಾಯಕರು

​ಪ್ರಜಾವಾಣಿ ವಾರ್ತೆ
Published 17 ಮೇ 2018, 5:44 IST
Last Updated 17 ಮೇ 2018, 5:44 IST
ಪ್ರತಿಭಟನೆ ನಡೆಸುತ್ತಾ ಪತ್ರಿಕೆಗಳನ್ನು ಓದುವಲ್ಲಿ ತಲ್ಲೀನರಾಗಿದ್ದ ನಾಯಕರು ಪ್ರಜಾವಾಣಿ ಚಿತ್ರ
ಪ್ರತಿಭಟನೆ ನಡೆಸುತ್ತಾ ಪತ್ರಿಕೆಗಳನ್ನು ಓದುವಲ್ಲಿ ತಲ್ಲೀನರಾಗಿದ್ದ ನಾಯಕರು ಪ್ರಜಾವಾಣಿ ಚಿತ್ರ   

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್‌. ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಇತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದೆ.

ರಾಜಭವನದಲ್ಲಿ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ ಅರ್ಧಗಂಟೆ ಗಳಿಕ ಸಿದ್ದರಾಮಯ್ಯ, ಜಿ. ಪರಮೇಶ್ವರ್‌, ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ನಾಯಕ ಗುಲಾಂ ನಭಿ ಆಜಾದ್‌ ಅವರ ನೇತೃತ್ವದಲ್ಲಿ ಪ್ರತಿಭಟನೆಗೆ ಕುಳಿತಿದ್ದಾರೆ.

ಎಚ್.ಕೆ.ಪಾಟೀಲ, ಮಲ್ಲಿಕಾರ್ಜುನ ಪಾಟೀಲ,ಹ್ಯಾರಿಸ್, ಕೃಷ್ಟ ಭೈರೇಗೌಡ, ಜಮಿರ್ ಅಹ್ಮದ್, ಎಚ್.ಡಿ.ರೇವಣ್ಣ, ರಮೇಶ್ ಜಾರಕಿಹೊಳಿ, ಅಶೋಖ್‌ ಗೆಹ್ಲೋಟ್, ಸಂಸದ ರಾಜೀವ ಗೌಡ, ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಇದ್ದಾರೆ. ಪ್ರತಿಭಟನೆಗೆ ಜೆಡಿಎಸ್‌ನ ಸದಸ್ಯರೂ ಸಾಥ್‌ ನೀಡಿದ್ದಾರೆ.

ADVERTISEMENT

ರಾಣೆಬೆನ್ನೂರಿನ ಕೆಪಿಜೆಪಿ ಶಾಸಕ ಶಂಕರ್ ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಈ ವೇಳೆ ಸಿದ್ದರಾಮಯ್ಯ ಸೇರಿದಂತೆ ಮುಖಂಡರು ಅಲ್ಲಿ ಕುಳಿತು ಪತ್ರಿಕೆಗಳನ್ನು ಓದುತ್ತಿದ್ದಾರೆ. ಮುಖಂಡರು ಕಪ್ಪು ಪಟ್ಟಿ ಧರಿಸಿ, ಗಾಂಧಿ ಟೋಪಿ ಹಾಕಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಒಂದೆಡೆ ಸರ್ಕಾರ ರಚನೆಯ ಬಿಸಿಯಾದರೆ, ಈಗ ಇಲ್ಲಿ ಬಿಸಿಲಲ್ಲಿ ಕುರಿತಿರುವ ಶಾಸಕರು ಬೆವರಿಳಿಸುತ್ತಿದ್ದಾರೆ. ನೀರು ತಂದು ಕೊಡಲು ಬಂದ ಕಾರ್ಯಕರ್ತರಿಗೆ 'ಐಷಾರಾಮಿ ವಸ್ತುಗಳನ್ನು ಇಲ್ಲಿ ತರಬೇಡಿ' ಎಂದು ಗುಲಾಂ ನಬಿ ಆಜಾದ್ ಗದರಿದರು. ಬಿಸಿಲಿನ ಝಳಕ್ಕೆ ಬಸವಳಿದ ನಾಯಕರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ವಿಧಾನಸೌಧ ಪಶ್ಚಿಮ ಗೇಟ್ ಎದುರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯಪಾಲ, ಪ್ರಧಾನಿ, ಬಿಎಸ್‌ವೈ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

‘ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು’

ರಾಜಭವನ ಬಿಜೆಪಿ ಭವನ ಆಗಿದೆ. ರಾತ್ರೋರಾತ್ರಿ ಪ್ರಮಾಣ ವಚನಕ್ಕೆ ಅವಕಾಶ ನೀಡುವ ಮೂಲಕ ರಾಜ್ಯಪಾಲರು ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ನೀಡಿದ್ದಾರೆ. ಕುಮಾರಸ್ವಾಮಿ ಸಿಎಂ ಆಗುವವರೆಗೂ ಪ್ರತಿಭಟನೆ ನಡೆಸಲಿದ್ದೇವೆ. ರಾಜ್ಯಾದ್ಯಂತ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಿದ್ದಾರೆ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್‌ ಪ್ರಕಾಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.