ADVERTISEMENT

ಅಂಬರೀಶ ಸುಖ–ದುಃಖ ಮತ್ತು ಗುಣಗಾನ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2014, 19:30 IST
Last Updated 21 ಆಗಸ್ಟ್ 2014, 19:30 IST

‘ಒಂದು ಸಣ್ಣ ಪಕ್ಷಿ ಗೂಡುಕಟ್ಟಬೇಕಾದರೆ ಆ ಮರದ ರೆಂಬೆ–ಕೊಂಬೆ ಗಟ್ಟಿಯಾಗಿದೆಯಾ; ಮಳೆ ಬಂದರೆ ಏನಾಗುತ್ತದೆ ಎಂದು ನೋಡುತ್ತದೆ. ಮಧ್ಯಮ ವರ್ಗದ ಕುಟುಂಬ ಪುಟ್ಟದಾದ ಒಂದು ಸೈಟ್‌ ಕೊಳ್ಳುತ್ತದೆ. ಸಾಲ ಮಾಡಿ ಮನೆಯನ್ನೂ ಕಟ್ಟಿಕೊಳ್ಳುತ್ತದೆ. ಆದರೆ ಬಿಬಿಎಂಪಿ ಅವರು ಇಲ್ಲಿ ರೋಡ್ ಬರಬೇಕು ಎಂದು ಆ ಮನೆಯನ್ನು ಹೊಡೆಯುವರು...’. ಇದು ‘ಅಂಬರೀಶ’ ಚಿತ್ರದ ಒನ್‌ಲೈನ್ ಕಥೆ. ಹೀಗೆ ಗೂಡಿಗೂ ಮತ್ತು ಮನೆಗೂ ಉಪಮೆ ಕೊಟ್ಟು ತಮ್ಮ ಚಿತ್ರದ ಒನ್‌ಲೈನ್ ಕಥೆಯನ್ನು ನವಿರಾಗಿ ಹೇಳಿದರು ನಟ ದರ್ಶನ್.

ದರ್ಶನ್ ಅಭಿಮಾನಿಗಳನ್ನು ಕುತೂಹಲದ ಕಡಲಿಗೆ ದೂಡಿರುವ ‘ಅಂಬರೀಶ’ ಚಿತ್ರದ ಆಡಿಯೊ ಬಿಡುಗಡೆ ನೆಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತಿನ ಮಳೆಗರೆದರು. ದರ್ಶನ್ ಚಿತ್ರಗಳು ಬಿಡುಗಡೆಯಾಗಿ ಸರಿ ಸುಮಾರು ಒಂದು ವರ್ಷ ಉರುಳಿದೆ. ಈ ಕಾಲಾವಧಿಯ ವ್ಯಯಕ್ಕೆ ಯಾವುದೇ ನಿರ್ದೇಶಕರನ್ನಾಗಲೀ, ನಿರ್ಮಾಪರನ್ನಾಗಲೀ ಅವರು ಹೊಣೆ ಮಾಡುವುದಿಲ್ಲ. ‘ವರ್ಷದ ನಂತರ ನಿಮ್ಮ ಮುಂದೆ ಬಂದಿದ್ದೇನೆ. ಇಷ್ಟು ಕಾಲ ವ್ಯಯ ನನ್ನಿಂದಲೇ ಆದದ್ದು. ‘ಅಂಬರೀಶ’ ಚಿತ್ರದ ನಿರ್ಮಾಪಕರು ನನ್ನಿಂದಾಗಿ ಆರು ತಿಂಗಳು ಹೆಚ್ಚು ಬಡ್ಡಿ ಕಟ್ಟಿದ್ದಾರೆ, ದಯವಿಟ್ಟು ಕ್ಷಮಿಸಿ’ ಎಂದು ಹೇಳಿದರು.  ‘ಅಂಬರೀಶ್’ ಟೈಟಲ್ ಕಾರಣದಿಂದ ದರ್ಶನ್ ಅಭಿಮಾನಿಗಳಂತೆ ಅಂಬರೀಷ್ ಅಭಿಮಾನಿಗಳೂ ಆಸೆಗಣ್ಣಿನ ವಾರೆ ನೋಟ ಬೀರಿದ್ದಾರೆ.

‘ನನ್ನ ಒಂದೇ ಪ್ರೀತಿಯ ಮಾತಿಗೆ ತಮ್ಮ ಹೆಸರನ್ನು ಟೈಟಲ್‌ ಕಾರ್ಡಿನಲ್ಲಿ ಬಳಸಿಕೊಳ್ಳಲು ಅಪ್ಪಾಜಿ (ಅಂಬರೀಷ್) ಹಸಿರು ನಿಶಾನೆ ತೋರಿದರು. ಮೂವತ್ತೈದು ನಲವತ್ತು ವರುಷ ಕಷ್ಟಪಟ್ಟು ಬೆಳೆಸಿರುವ ಆ ಹೆಸರಿಗೆ ಸ್ವಲ್ಪವೂ ಚ್ಯುತಿ ಬರದಂತೆ ಚಿತ್ರಕಥೆ ಮಾಡಲಾಗಿದೆ’ ಎಂದು ದರ್ಶನ್ ‘ಅಂಬರೀಶ’ನ ಗುಣಗಾನ ಮಾಡಿದರು. ತಮ್ಮ ಮುಂದಿನ ಚಿತ್ರ ‘ಐರಾವತ’ದ ನಿರ್ದೇಶಕ ಎ.ಪಿ. ಅರ್ಜುನ್ ಅಂಬರೀಶನಿಗೆ ಕೊಟ್ಟ ಸಹಕಾರ ಮತ್ತು ಚಿತ್ರ ತಂಡದ ಎಲ್ಲರನ್ನು ಮನದುಂಬಿ ಹೊಗಳಿದರು.

ಕಾರ್ಯಕ್ರಮದ ಹಂತಿಮ ಕ್ಷಣದಲ್ಲಿ ವೇದಿಕೆಗೆ ಬಂದ ಅಂಬರೀಷ್, ‘ಇಲ್ಲಿನ ಒಂದು ಹಾಡಿನಲ್ಲಿ ಕೃಷ್ಣದೇವರಾಯನ ಕಾಲದ ಕರ್ನಾಟಕದ ವೈಭವ; ಸಂಪತ್ತು ಮತ್ತು ಮಾಗಡಿ ಕೆಂಪೇಗೌಡರ ಬಗ್ಗೆ ತೋರಿಸಲಾಗುತ್ತದೆ. ಸಿನಿಮಾವನ್ನು ನನ್ನ ಹೆಸರಿನಲ್ಲಿ ಮಾಡಿದ್ದಾರೆ. ನನ್ನ ಮತ್ತು ಕುಟುಂಬದ ಪರವಾಗಿ ಧನ್ಯವಾದ ಅರ್ಪಿಸುವೆ’ ಎಂದರು. ನಿರ್ಮಾಪಕಿ ಶೈಲಜಾ ನಾಗ್ ಆಡಿಯೊ ಬಿಡುಗಡೆಗೊಳಿಸಿದರು.

‘ರೆಬೆಲ್ ಮತ್ತು ಚಾಲೆಂಜಿಂಗ್ ಚಹರೆಯ ದರ್ಶನ್ ಅವರಿಗೆ ಒಳ್ಳೆಯ ಕಥೆ ಹೆಣೆಯಲಾಗಿದೆ. ಉತ್ತಮ ಮಾರುಕಟ್ಟೆ ಇರುವ ನಟ ಒಂದೇ ಚಿತ್ರದಲ್ಲಿ ಒಂದು ವರ್ಷ ತೊಡಗಿದ್ದು ಅವರ ಸಿನಿಮಾ ಪ್ರೇಮ ತೋರುತ್ತದೆ’ ಎಂದರು ನಿರ್ದೇಶಕ ಮತ್ತು ನಿರ್ಮಾಪಕರ ಮಹೇಶ್ ಸುಖಧರೆ. ಟೈಟಲ್‌ಗಾಗಿ ಅಂಬರೀಶ್ ಅವರನ್ನು ಭೇಟಿ ಮಾಡಿದ್ದನ್ನು ಸುಖಧರೆ ನೆನಪಿಸಿಕೊಂಡರು.

ಹರಿಕೃಷ್ಣ ಅವರ ಡಿ ಬಿಟ್ಸ್ ಹಾಡಿನ ಹಕ್ಕುಗಳನ್ನು ಪಡೆದಿದೆ. ‘ಡಿ ಅಂದ್ರೆ ದುಡ್ಡು ಡಿ ಅಂದ್ರೆ ದರ್ಶನ್. ದರ್ಶನ್ ಇದ್ದ ಕಡೆ ದುಡ್ಡು ಬಂದೇ ಬರುತ್ತದೆ’ ಎಂದರು ಸಾಧುಕೋಕಿಲ. ಚಿತ್ರದಲ್ಲಿ ಆರು ಹಾಡುಗಳಿದ್ದು ಕೆಂಪೇಗೌಡರ ಬಗೆಗಿನ ಒಂದು ಹಾಡಿನ ಮೇಲೆ 14 ದಿನ ಕೆಲಸ ಮಾಡಲಾಗಿದೆಯಂತೆ. ನಾಯಕಿ ರಚಿತಾ ರಾಮ್, ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್, ನೃತ್ಯ ನಿರ್ದೇಶಕ ಈಶ್ವರ್ ಕುಮಾರ್ ಮತ್ತಿತರರು ವೇದಿಕೆಯಲ್ಲಿ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT