ADVERTISEMENT

ಅನುಷ್ಕಾ ಶರ್ಮಗೆ ಬಾಲಿವುಡ್‌ ಬೆಂಬಲ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2015, 19:30 IST
Last Updated 29 ಮಾರ್ಚ್ 2015, 19:30 IST

ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ  ಭಾರತ ಸೆಮಿಫೈನಲ್‌ ಸೋತಿದ್ದು ಅನುಷ್ಕಾ ಅವರಿಂದಲೇ ಎಂದು ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಸಂದೇಶವನ್ನು ವಿರೋಧಿಸಿರುವ ಬಾಲಿವುಡ್‌ ಸೆಲೆಬ್ರಿಟಿಗಳು ಅನುಷ್ಕಾ ಅವರ ಪರ ನಿಂತಿದ್ದಾರೆ. ಇಪ್ಪತ್ತೊಂಬತ್ತು ವರ್ಷದ ನಟಿ ಅನುಷ್ಕಾ ಶರ್ಮ ತನ್ನ ಪ್ರಿಯತಮ ವಿರಾಟ್‌ ಕೊಹ್ಲಿಗೆ ಬೆಂಬಲ ನೀಡಲು ಸಿಡ್ನಿಯಲ್ಲಿ ನಡೆದ ಸೆಮಿಫೈನಲ್‌ ಮ್ಯಾಚ್‌ಗೆ ತೆರಳಿದ್ದರು.

ಅನುಷ್ಕಾ ಇದ್ದ ಕಾರಣದಿಂದಲೇ ವಿರಾಟ್‌ ಕೊಹ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಆದ್ದರಿಂದ ವಿಶ್ವಕಪ್‌ ಕ್ರಿಕೆಟ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಬೇಕಾಯಿತು ಎಂದು  ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಟೀಕೆಗಳು ಹರಿದಾಡುತ್ತಿವೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ, ‘ತನ್ನ ಇನಿಯನಿಗೆ ಬೆಂಬಲವಾಗಿ ನಿಂತು ಅವನ ಆಟ ನೋಡಲು ಹೋಗಿದ್ದ ಅನುಷ್ಕಾ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದನ್ನು ನಾನು ಖಂಡಿಸುತ್ತೇನೆ. ಆಕೆಯನ್ನು ಅಗೌರವದಿಂದ ಕಾಣುವುದನ್ನು ನಿಲ್ಲಿಸಿ’ ಎಂದು  ಟ್ವೀಟ್‌ ಮಾಡಿದ್ದಾರೆ.

‘ಅನುಷ್ಕಾ ಶರ್ಮ ಅವರ ಮೇಲೆ ಈ ರೀತಿ ದೂರುತ್ತಿರುವುದು ಅವರ ಸಣ್ಣತನವನ್ನು ಬಿಂಬಿಸುತ್ತಿದೆ. ಅವರ ಪ್ರತಿಭೆಯನ್ನು ಪ್ರಶಂಸೆ ಮಾಡಬೇಕೇ ಹೊರತು ಇದೆಲ್ಲಾ ಅನವಶ್ಯಕ’ ಎಂದು ನಿರ್ದೇಶಕ ಸುಭಾಷ್‌ ಘಾಯ್‌ ಟ್ವೀಟ್‌ ಮಾಡಿದ್ದಾರೆ. ‘ಅವಿದ್ಯಾವಂತ ಬುದ್ಧಿಗೇಡಿಗಳು ಮಾಡುತ್ತಿರುವ ನೀಚ ಕೆಲಸ ಇದು. ಅನುಷ್ಕಾ ನಾನು ನಿನ್ನೊಂದಿಗೆ ಇದ್ದೇನೆ’ ಎಂದು ಅನುಭವಿ ನಟ ರಿಷಿ ಕಪೂರ್‌ ತಮ್ಮ ಟ್ವಿಟರ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಅವರನ್ನು ಅವಮಾನಿಸುವುದನ್ನು ನಿಲ್ಲಿಸಿ. ನಾವು ಬಲಿಷ್ಠ ತಂಡದ ಎದುರು ಸೋತಿದ್ದೇವೆಎನ್ನುವ ಸತ್ಯವನ್ನು ಅರಿತುಕೊಳ್ಳಿ’ ಎಂದು ನಿರ್ದೇಶಕ ರಾಹುಲ್‌ ಢೊಲಾಕಿಯ ಟ್ವೀಟ್‌ ಮಾಡಿದ್ದಾರೆ. ‘ತನ್ನ ಗೆಳಯನ ಆಟ ನೋಡಲು ಸಿಡ್ನಿಯವರೆಗೂ ತೆರಳಿದ ಅನುಷ್ಕಾ ಅವರ ಮೇಲೆ ನಿಜಕ್ಕೂ ಹೆಮ್ಮೆಯ ಭಾವ ಮೂಡುತ್ತದೆ. ಅವರನ್ನು ಅಪಹಾಸ್ಯ ಮಾಡುವುದನ್ನು ನಿಲ್ಲಿಸಿ.

ಕ್ರೀಡಾ ಸ್ಫೂರ್ತಿ  ಇಲ್ಲದ ನಿಮ್ಮಂಥವರಿಗೆ ಕ್ರಿಕೆಟ್‌ ಸೂಕ್ತ ಆಟವಲ್ಲ’ ಎನ್ನುವ ಮೂಲಕ ಮಾಜಿ ವಿಶ್ವಸುಂದರಿ ಹಾಗೂ ನಟಿ ಸುಶ್ಮಿತಾ ಸೇನ್‌ ಅನುಷ್ಕಾ ಪರ ನಿಂತಿದ್ದಾರೆ. ನಟಿಯರಾದ ದಿಯಾ ಮಿರ್ಜಾ, ಸುರ್ವಿನ್‌ ಚಾವ್ಲಾ ಹಾಗೂ ಸೋನಲ್‌ ಚೌಹಾಣ್‌ ಕೂಡ ಅನುಷ್ಕಾ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.