ADVERTISEMENT

ಅಪ್ಪ–ಮಗನ ‘ಅರ್ಜುನ’

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

‘ಅಪ್ಪನನ್ನು ಡೈನಮಿಕ್ ಥರ ನೋಡಿದೆ’ ಎಂಬ ಮಗನ ಹೇಳಿಕೆಗೆ, ‘ಮಗನ ಜತೆ ತೆರೆ ಮೇಲೆ ಕಾಣಿಸಿಕೊಳ್ಳುವುದು ಅದ್ಭುತ ಅನುಭವ’ ಎಂಬ ಪ್ರತಿನುಡಿ ಅಪ್ಪನದು! ದೇವರಾಜ್ ಹಾಗೂ ಪ್ರಜ್ವಲ್ ಜತೆಯಾಗಿ ನಟಿಸಿರುವ ‘ಅರ್ಜುನ’ ಚಿತ್ರೀಕರಣ ಸಂಪೂರ್ಣ ಮುಗಿದಿದೆ.

ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ತೋರಿಸಲು ಸುದ್ದಿಮಿತ್ರರನ್ನು ನಿರ್ದೇಶಕ ಪಿ.ಸಿ. ಶೇಖರ್ ಆಹ್ವಾನಿಸಿದ್ದರು. ಕೆಲಸವೇ ಮಾತಾಡಬೇಕು ಎಂಬ ನಿಲುವಿನಿಂದಾಗಿ ತಾವು ಈತನಕ ಈ ಸಿನಿಮಾದ ಬಗ್ಗೆ ಹೆಚ್ಚು ಮಾತಾಡಿಲ್ಲ ಎಂಬುದು ಅವರ ಸಮರ್ಥನೆ.

ಒಂದು ವರ್ಷದ ಹಿಂದೆಯೇ ಚಿತ್ರೀಕರಣ ಮುಗಿದಿದ್ದರೂ ‘ಅರ್ಜುನ’ನನ್ನು ತಡವಾಗಿ ತೆರೆ ಕಾಣಿಸಲು ಹಲವು ಕಾರಣಗಳಿವೆ. ಆ ಸಮಯದಲ್ಲಿ ಪ್ರಜ್ವಲ್ ಅವರ ಅಭಿನಯದ ಎರಡು– ಮೂರು ಚಿತ್ರಗಳು ಸಾಲುಗಟ್ಟಿ ನಿಂತಿದ್ದವು. ಆ ಮಧ್ಯೆ ಇದೂ ಒಂದು ಸ್ಪರ್ಧೆ ತಂದೊಡ್ಡಬಾರದು ಎಂಬುದು ಮುಖ್ಯ ಉದ್ದೇಶ.

ಪ್ರಜ್ವಲ್‌ ಅವರ ಅಭಿನಯ ಸಾಮರ್ಥ್ಯವನ್ನು ಶೇಕಡ ನೂರರಷ್ಟು ಯಾರೂ ಬಳಸಿಕೊಂಡಿಲ್ಲ ಎಂಬುದು ಶೇಖರ್ ಶಂಕೆ. ‘ಆದರೆ ಅರ್ಜುನ ಅದಕ್ಕೆ ಅಪವಾದ. ಈ ಸಿನಿಮಾ, ಕಮರ್ಷಿಯಲ್ ಮಿತಿಯನ್ನು ದಾಟಿ ಆಚೆ ಹೋಗಿ ಸದ್ದು ಮಾಡುವುದು ಖಂಡಿತ’ ಎಂಬ ಆತ್ಮವಿಶ್ವಾಸದ ನುಡಿ ಅವರದು.

ನಟ ದೇವರಾಜ್ ಅವರಿಗೆ ಶೇಖರ್ ಹೆಣೆದ ಕಥನ ಅಚ್ಚರಿ ಮೂಡಿಸಿದೆ; ಆ ಕುಸುರಿ ಕಲೆಯ ಒಂದು ಭಾಗವಾಗಿ ತಾವೂ ಅಭಿನಯಿಸಿದ್ದು ಖುಷಿ ಕೊಟ್ಟಿದೆ. ‘ಪಾತ್ರ, ವಸ್ತ್ರವಿನ್ಯಾಸ, ಸಂಭಾಷಣೆ... ಹೀಗೆ ಪ್ರತಿಯೊಂದು ಸಂಗತಿಯನ್ನೂ ತುಂಬ ಸೂಕ್ಷ್ಮವಾಗಿ ಗಮನಿಸುವ ಶೇಖರ್ ಪ್ರತಿಭಾವಂತ ನಿರ್ದೇಶಕಸ ಸಾಲಿಗೆ ಸೇರುತ್ತಾರೆ’ ಎಂದು ದೇವರಾಜ್ ಹೊಗಳಿದರು.

‘ನಮ್ಮ ತಂದೆ ಅಭಿನಯಿಸಿದ್ದ ಹುಲಿಯಾ ಮಾದರಿಯ ಪಾತ್ರ ಮಾಡುವ ಆಸೆ ನನ್ನಲ್ಲಿತ್ತು. ಅಂಥ ಪಾತ್ರ ಅರ್ಜುನನಲ್ಲಿ ಸಿಕ್ಕಿದೆ’ ಎಂದ ಪ್ರಜ್ವಲ್‌, ಈ ಸಿನಿಮಾದ ಮೂಲಕ ತಮಗೆ ವೃತ್ತಿಜೀವನಕ್ಕೆ ದೊಡ್ಡ ತಿರುವು ಸಿಕ್ಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಡು ಬರೆದ ಬಳಿಕ ಚಿತ್ರೀಕರಣ ಮಾಡುವ ಬದಲಿಗೆ, ಮೊದಲೇ ಹಾಡಿನ ಚಿತ್ರೀಕರಣ ಮಾಡಿ, ಬಳಿಕ ಅದಕ್ಕೆ ತಕ್ಕಂತೆ ಸಾಹಿತ್ಯ ಬರೆಸಿದ ನಿರ್ದೇಶಕರ ಕಾರ್ಯವೈಖರಿಯನ್ನು ಕವಿರಾಜ್ ಹೊಗಳಿದರು. ದೇವರಾಜ್ ಅವರಂಥ ಹಿರಿಯ ನಟರ ಜತೆ ಅಭಿನಯಿಸಲು ಅವಕಾಶ ಸಿಕ್ಕಿದ್ದು ಸಂತಸದ ಸಂಗತಿ ಎಂದು ನಾಯಕಿ ಭಾಮಾ ಹೇಳಿದರು. ನಟ ಗಣೇಶ್ ಟ್ರೇಲರ್ ಬಿಡುಗಡೆ ಮಾಡಿದರು. ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ನಾಗೇಂದ್ರಸ್ವಾಮಿ ಹಾಗೂ ಚಿತ್ರದ ತಂತ್ರಜ್ಞರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.