ADVERTISEMENT

ಅಮೃತ ಮತ್ತು ಮುತ್ತು!

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2014, 19:30 IST
Last Updated 28 ಆಗಸ್ಟ್ 2014, 19:30 IST

ಸಿನಿಮಾದ ಚಿತ್ರೀಕರಣ ಮುಕ್ತಾಯವಾದ ಮೇಲೆ ಕಂಪ್ಯೂಟರ್‌ ಗ್ರಾಫಿಕ್ಸ್, ಹಿನ್ನೆಲೆ ಸಂಗೀತ, ಪ್ರೊಮೋ, ಟ್ರೈಲರ್‌ನಂಥ ಕೆಲಸಗಳು ಶುರುವಾಗುತ್ತವೆ. ಆದರೆ ಚಿತ್ರೀಕರಣಕ್ಕೂ ಮೊದಲೇ ಈ ಎಲ್ಲ ಕೆಲಸ ಆರಂಭಿಸಿದ ಹೆಗ್ಗಳಿಕೆ ನಿರ್ದೇಶಕ ನಿವಾಸ್‌ಕುಮಾರ್‌ ಅವರದು. ‘ಅಮೃತ’ ಚಿತ್ರದ ಮುಹೂರ್ತ ಇನ್ನೂ ಎಷ್ಟೋ ದಿನ ದೂರವಿದೆ. ಆದರೂ ಕೆಲಸಗಳು ಭರದಿಂದ ಸಾಗಿವೆ.

ಈ ಸಿನಿಮಾದ ಚಟುವಟಿಕೆಗಳ ಕುರಿತು ಸುದ್ದಿಮಿತ್ರರ ಜತೆ ಮಾತಿಗಿಳಿದ ನಿವಾಸ್‌ಕುಮಾರ್‌ ಅವರನ್ನು ಹಿಂದಿನ ದಿನಗಳ ಕಹಿ ಅನುಭವ ಕಾಡುತ್ತಿದ್ದವು. ಅಂದುಕೊಂಡಂತೆ ಚಿತ್ರ ರೂಪುಗೊಳ್ಳುವವರೆಗೆ ಬಿಡುವುದಿಲ್ಲ ಎಂಬ ಛಲದಿಂದಾಗಿ ಅನುಭವಿಸಿದ ಹಲವು ಕಷ್ಟಗಳನ್ನು ಅವರು ತೆರೆದಿಟ್ಟರು. ‘ಸ್ಕ್ರಿಪ್ಟ್‌ ಹಿಡಿದುಕೊಂಡು ಎಷ್ಟೋ ನಿರ್ಮಾಪಕರ ಮನೆಗೆ ಅಲೆದಿದ್ದೇನೆ.

ಈ ಸಮಯದಲ್ಲಿ ಅವಮಾನ ಅನುಭವಿಸಿದ್ದೇನೆ’ ಎನ್ನುವ ನಿವಾಸ್‌ಕುಮಾರ್‌ ಅವರಿಗೆ ಹೃದಯವಂತನ ರೂಪದಲ್ಲಿ ಮುಂದೆ ಬಂದಿದ್ದು ನಿರ್ಮಾಪಕ ಹಿಸೈಕಿ ಮುತ್ತು. ‘ಸಿನಿಮಾ ಹೀಗೆಯೇ ಬರಬೇಕು ಅಂದರೆ ಅದಕ್ಕೆ ಬಜೆಟ್‌ ಅಡ್ಡ ಬರಬಾರದು. ಹಿಸೈಕಿ ಮುತ್ತು ಆ ಮನೋಭಾವದವರು. ಚಿತ್ರಕ್ಕೆ ಏನು ಬೇಕೋ ಅದನ್ನೆಲ್ಲ ಒದಗಿಸಲು ಅವರು ಸಿದ್ಧರಿದ್ದಾರೆ’ ಎಂದು ನಿರ್ಮಾಪಕರ ಉದಾರತೆಯನ್ನು ಅವರು ಕೊಂಡಾಡಿದರು.

ತಮ್ಮ ಸಿನಿಮಾದ ಆಧಾರಸ್ತಂಭಗಳು ಕಥೆ, ಚಿತ್ರಕಥೆ, ಪಾತ್ರಗಳಲ್ಲ; ಬದಲಾಗಿ ತಂತ್ರಜ್ಞರು ಎನ್ನುತ್ತಾರೆ ನಿವಾಸ್‌ಕುಮಾರ್. ಅದಕ್ಕಾಗಿಯೇ ಅವರು ಹಾಲಿವುಡ್‌ನ ಖ್ಯಾತ ಅನಿಮೇಟರ್ ಬ್ರಯಾನ್ ಎಂ. ಜೆನ್ನಿಂಗ್ಸ್ ಅವರನ್ನು ಕರೆತಂದಿದ್ದಾರೆ. ಬ್ರಯಾನ್ ಅವರದು ಇದು ಕನ್ನಡದಲ್ಲಿ ಮೊದಲ ಹಾಗೂ ಭಾರತದಲ್ಲಿ ಮೂರನೇ ಚಿತ್ರ.

ಕಾರ್‌ ಡಿಕ್ಕಿ, ರಾಕೆಟ್ ಅಪ್ಪಳಿಸುವುದು, ಕಟ್ಟಡಗಳ ಧ್ವಂಸದಂಥ ದೃಶ್ಯಗಳನ್ನು ಪರಿಣಾಮಕಾರಿಯಾಗಿ ತೋರಿಸಲು ಅನಿಮೇಶನ್ ಬಳಸಿಕೊಳ್ಳುವುದು ಸಹಜ. ಆದರೆ ಅಮೃತ ಚಿತ್ರದಲ್ಲಿ ರೊಮ್ಯಾಂಟಿಕ್ ಹಾಡುಗಳಿಗೆ ಅನಿಮೇಶನ್ ಬಳಸುವ ನಿವಾಸ್‌ಕುಮಾರ್ ನಿರ್ಧಾರ ಬ್ರಯಾನ್ ಅವರನ್ನು ಅಚ್ಚರಿಗೊಳಿಸಿದೆಯಂತೆ. ‘ನಿರ್ದೇಶಕರ ಹೊಸ ಕಲ್ಪನೆಗಳು ನನಗೆ ಇಷ್ಟವಾದವು. ಹೀಗಾಗಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದೇನೆ’ ಎಂದು ಬ್ರಯಾನ್ ಹೇಳಿದರು. ಹದಿನೈದು ನಿಮಿಷಗಳ ಕಾಲ ಕಾಣಿಸಿಕೊಳ್ಳುವ ಅನಿಮೇಶನ್‌ಗೆ 33 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂಬ ಮಾಹಿತಿಯನ್ನೂ ಕೊಟ್ಟರು.

ಈ ಮೊದಲು ತಮಿಳಿನ ಹಲವು ಸಿನಿಮಾಗಳಿಗೆ ಸಹ ನಿರ್ಮಾಪಕರಾಗಿದ್ದ ಹಿಸೈಕಿ ಮುತ್ತು, ನಾಲ್ಕು ಕೋಟಿ ರೂಪಾಯಿ ಬಜೆಟ್‌ನಲ್ಲಿ ‘ಅಮೃತ’ ನಿರ್ಮಿಸಲಿದ್ದಾರೆ. ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್, ಸಂಕಲನಕಾರ ಲೆನಿನ್, ಸಹ ನಿರ್ಮಾಪಕ ಪ್ರೇಮ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.