ADVERTISEMENT

ಅರ್ಜುನ್, ಅಮೃತಾ ಕಂಡ ಅಂಡಮಾನ್‌

ರೇಷ್ಮಾ ಶೆಟ್ಟಿ
Published 26 ಏಪ್ರಿಲ್ 2018, 19:30 IST
Last Updated 26 ಏಪ್ರಿಲ್ 2018, 19:30 IST
ದೀಪಿಕಾ
ದೀಪಿಕಾ   

ಸಿ ನಿಮಾದ ಹಾಡು ಹಾಗೂ ದೃಶ್ಯಗಳನ್ನು ನಮ್ಮ ದೇಶದ ದೂರದ ದ್ವೀಪಗಳಲ್ಲಿ ಚಿತ್ರೀಕರಿಸುವುದು ಸಾಮಾನ್ಯ. ಕೆಲ ಸಿನಿಮಾಗಳ ಚಿತ್ರೀಕರಣವಂತೂ ವಿದೇಶಗಳಲ್ಲೇ ನಡೆಯುವುದೂ ಇದೆ. ಭಾರತದಲ್ಲೇ ಇರುವ ಪ್ರೇಕ್ಷಣೀಯ ಸ್ಥಳಗಳಲ್ಲಿ ಧಾರಾವಾಹಿಯ ಕೆಲ ಪ್ರಮುಖ ಕಂತುಗಳ ಚಿತ್ರೀಕರಣ ನಡೆಸಿ, ಅಲ್ಲಿನ ದೃಶ್ಯಗಳನ್ನು ವೀಕ್ಷಕರಿಗೆ ಕಂತುಗಳ ಮೂಲಕ ತೋರಿಸುವುದು ಈಗ ಕನ್ನಡದಲ್ಲಿ ಕೂಡ ಚಾಲ್ತಿಗೆ ಬರುತ್ತಿದೆ. ಹೀಗೆ ಈ ಬಾರಿ ಅಂಡಮಾನ್‌ನಲ್ಲಿ ಚಿತ್ರೀಕರಣ ನಡೆಸುವ ಮೂಲಕ ಸುದ್ದಿಯಾಗಿದ್ದು ಜೀ ಕನ್ನಡ ವಾಹಿನಿಯ ‘ನಾಗಿಣಿ’ ಧಾರಾವಾಹಿ ತಂಡ.

ಕಥಾನಾಯಕಿ ಅಮೃತಾಳನ್ನು ಅಪಹರಿಸುವ ದುಷ್ಟರು ಅವಳನ್ನು ಅಂಡಮಾನ್ ಕಾಡಿನಲ್ಲಿ ಕೂಡಿಡುತ್ತಾರೆ. ನಾಯಕಿಯನ್ನು ಹುಡುಕಿಕೊಂಡು ಹೋಗುವ ನಾಯಕ ಅರ್ಜುನ್ ಅಲ್ಲಿ ದುಷ್ಟರೊಡನೆ ಹೋರಾಡಿ ಗೆಲ್ಲುತ್ತಾನೆ. ಈ ಸನ್ನಿವೇಶಗಳನ್ನು ಅಂಡಮಾನ್‌ನಲ್ಲಿ ಚಿತ್ರೀಕರಣ ಮಾಡಿದೆ ನಾಗಿಣಿ ತಂಡ. ತಮ್ಮ ಅಭಿನಯದ ಮೂಲಕ ಜನರ ಮನ ಗೆದ್ದಿರುವ ದೀಪಿಕಾ ದಾಸ್ (ಅಮೃತಾ ಪಾತ್ರಧಾರಿ) ಹಾಗೂ ದೀಕ್ಷಿತ್ ಶೆಟ್ಟಿ (ಅರ್ಜುನ್ ಪಾತ್ರಧಾರಿ) ಅಂಡಮಾನ್‌ನಲ್ಲಿ ನಡೆದ ಶೂಟಿಂಗ್‌ನ ಅನುಭವಗಳನ್ನು ‘ಚಂದನವನ’ದ ಜೊತೆ ಹಂಚಿಕೊಂಡಿದ್ದಾರೆ. ಅವರ ಮಾತುಗಳ ಆಯ್ದ ಭಾಗ ಇಲ್ಲಿದೆ:

ದೀಪಿಕಾ ಕಣ್ಣಲ್ಲಿ ಅಂಡಮಾನ್‌
ಅಂಡಮಾನ್‌ನಲ್ಲಿ ನಡೆದ ಶೂಟಿಂಗ್ ಅನೇಕ ರೋಚಕ ಅನುಭವಗಳನ್ನು ನೀಡಿದೆ ಎನ್ನುತ್ತಾ ಮಾತು ಆರಂಭಿಸುವ ದೀಪಿಕಾ ‘ಧಾರಾವಾಹಿ ಆರಂಭವಾದಾಗಿನಿಂದಲೂ ಎಲ್ಲಾದರೂ ದೂರದ ಪ್ರದೇಶಕ್ಕೆ ಹೋಗಿ ಶೂಟಿಂಗ್ ಮಾಡಬೇಕು ಎಂಬ ಬಯಕೆ ನಿರ್ದೇಶಕರ ಮನದಲ್ಲಿತ್ತು. ಆದರೆ ಇಂಥದ್ದೇ ಜಾಗ ಎಂಬುದನ್ನು ಆಗ ನಿರ್ಧಾರ ಮಾಡಿರಲಿಲ್ಲ. ಧಾರಾವಾಹಿಯ ಹನಿಮೂನ್ ಎಪಿಸೋಡ್‌ಗಳನ್ನು ಐಲ್ಯಾಂಡ್‌ನಲ್ಲಿ ಚಿತ್ರೀಕರಿಸಬೇಕು ಎಂದುಕೊಂಡಿದ್ದರು. ಕೊನೆಗೆ ಅಮೃತಾಳ ಅಪಹರಣದ ದೃಶ್ಯಗಳ ಶೂಟಿಂಗ್‌ಗೆ ಅಂಡಮಾನ್‌ ಆಯ್ಕೆ ಮಾಡಿಕೊಳ್ಳಲಾಯಿತು’ ಎನ್ನುತ್ತಾರೆ.

ADVERTISEMENT

‘ಹತ್ತು ದಿನಗಳ ಕಾಲ ನಡೆದ ಶೂಟಿಂಗ್‌ ಅನುಭವ ನಿಜಕ್ಕೂ ಅದ್ಭುತವಾಗಿತ್ತು. ಅನೇಕ ದೃಶ್ಯಗಳನ್ನು ಅಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಮುಖ್ಯವಾಗಿ ಹೀರೋ ಫೈಟ್ ಮಾಡುವ ದೃಶ್ಯ, ಕೆಲವೊಂದು ರೊಮ್ಯಾಂಟಿಕ್ ದೃಶ್ಯಗಳು ಅಲ್ಲಿನ ಚಿತ್ರೀಕರಣದ ಹೈಲೈಟ್ ಆಗಿದ್ದವು. ಅಲ್ಲಿನ ಜೀವನಶೈಲಿ, ಬೀಚ್‌ಗಳು ಕೂಡ ಧಾರಾವಾಹಿಯಲ್ಲಿ ಅಡಕವಾಗಿವೆ.

ಕರ್ನಾಟಕದಲ್ಲಾದರೆ ನಾವು ನಟ–ನಟಿ ಎಂಬುದು ಎಲ್ಲರಿಗೂ ತಿಳಿದಿರುತ್ತದೆ, ಆದರೆ ಅಲ್ಲಿನ ಜನರಿಗೆ ನಾವು ಹೊಸಬರು. ಅವರು ನಮ್ಮನ್ನು ನೋಡುವ ರೀತಿಯೇ ಬೇರೆಯಾಗಿತ್ತು. ಕೆಲವರು ನಮ್ಮ ತಂಡದ ಬಳಿ ಬಂದು ಏನು, ಎತ್ತ ಎಂದು ವಿಚಾರಿಸುತ್ತಿದ್ದರು. ಇದರಿಂದ ಕೆಲವೊಮ್ಮೆ ತೊಂದರೆಯಾಗುತ್ತಿತ್ತು. ಅದಲ್ಲದೇ, ಇಲ್ಲಿಯಾದರೆ ಸಂಪೂರ್ಣ ಧಾರಾವಾಹಿ ತಂಡ ಇರುತ್ತಿತ್ತು, ಅಲ್ಲಿ ಸ್ವಲ್ಪ ಜನರಷ್ಟೇ ಇದ್ದರು. ಕೆಲವೊಮ್ಮೆ ಜನರನ್ನು ನಿಯಂತ್ರಿಸುವುದೂ ಸ್ವಲ್ಪ ಮಟ್ಟಿಗೆ ಕಷ್ಟ ಎನ್ನಿಸಿತ್ತು.

ಅಲ್ಲಿನ ಬಿಸಿಲು, ಬೀಚ್‌ಗಳು, ಪ್ರವಾಸಿ ಸ್ಥಳಗಳು ಎಲ್ಲವೂ ನನಗೆ ಹೊಸ ಅನುಭವವನ್ನೇ ನೀಡಿದವು. ಅಲ್ಲಿ ನನಗೆ ತುಂಬಾ ಇಷ್ಟವಾಗಿದ್ದು ಸ್ಕೂಬಾ ಡೈವಿಂಗ್‌. ಬೇರೆ ಕಡೆ ಡೈವಿಂಗ್ ಮಾಡಿದಕ್ಕಿಂತ ಭಿನ್ನವಾಗಿ ಸ್ವಲ್ಪ ಮಟ್ಟಿಗೆ ಪ್ರೊಫೆಷನಲ್‌ ಆಗಿ ಮಾಡಿದೆವು. ನೀರಿನ ಆಳದಲ್ಲಿ ಚಿತ್ರೀಕರಣ ನಡೆಸಿದ್ದು ಕೂಡ ಭಿನ್ನ ಅನುಭವ ನೀಡಿತು. ಕ್ರೂಸ್‌ನಲ್ಲಿ ಪ್ರಯಾಣ ಮಾಡಿದ್ದು ನಿಜಕ್ಕೂ ರೋಚಕ.

ಅಂಡಮಾನ್‌ನ ಕಾಡಿನಲ್ಲಿ ಸೆಟ್‌ ಹಾಕಿ ಶೂಟಿಂಗ್ ಮಾಡಿದ್ದು ಕೂಡ ನನಗೆ ಭಿನ್ನ ಅನುಭವ ನೀಡಿದೆ. ಜೊತೆಗೆ ಅಲ್ಲಿನ ಬಹುತೇಕ ಜಾಗಗಳು ಆಕರ್ಷಣೀಯವಾಗಿದ್ದವು. ಅದರಲ್ಲಿ ನನಗೆ ಹೆಚ್ಚು ಇಷ್ಟವಾಗಿದ್ದು ಕಾಲಾ ಪತ್ತರ್‌ ಬೀಚ್‌, ರಾಧಾ ನಗರ್ ಬೀಚ್‌, ಹ್ಯಾವ್‌ಲಾಕ್.

ಭಾರತದ ಅತಿ ಸುಂದರ ಜಾಗವನ್ನು ಶೂಟಿಂಗ್‌ಗೆ ಆಯ್ಕೆ ಮಾಡಿಕೊಂಡಿರುವುದು ವೈಯಕ್ತಿಕವಾಗಿ ನನಗೆ ಸಂತಸ ತಂದಿದೆ. ಆ ಜಾಗವನ್ನು ನೋಡಬೇಕು, ಅಲ್ಲಿ ಏನೇನಿರಬಹುದು ಎಂಬುದನ್ನು ತಿಳಿಯುವ ಕುತೂಹಲ ನನಗಿತ್ತು. ಅಲ್ಲಿ ಹೋಗಿ ನೋಡಿದಾಗ ನಮ್ಮ ದೇಶದಲ್ಲೂ ಇಂತಹ ಸುಂದರ ಜಾಗಗಳು ಇವೆ ಎಂದು ತಿಳಿದಾಗ ನಿಜಕ್ಕೂ ಹೆಮ್ಮೆಯಾಯಿತು.

ಅನುಭವ ಚೆನ್ನಾಗಿರಲಿಲ್ಲ...
‘ನನಗೆ ಅಂಡಮಾನ್‌ನಲ್ಲಿ ಶೂಟಿಂಗ್ ಇರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಅಂಡಮಾನ್‌ನಲ್ಲಿ ಶೂಟಿಂಗ್ ಮಾಡಬೇಕು ಎಂದು ನಿರ್ದೇಶಕರು ಹೇಳಿದಾಗ ಖುಷಿ ಆಯಿತು’ ಎನ್ನುತ್ತಾರೆ ದೀಕ್ಷಿತ್.

‘ಅಲ್ಲಿ ನಾನು ಕಂಡುಕೊಂಡ ಅಂಶಗಳು ಬಹಳಷ್ಟಿವೆ. ಅಂಡಮಾನ್‌ನಲ್ಲಿ ತಮಿಳು ಮಾತನಾಡುವ ಜನ ಜಾಸ್ತಿ ಇದ್ದರು. ನಮ್ಮಲ್ಲೂ ಕೆಲವರಿಗೆ ತಮಿಳು ಬರುತ್ತಿದ್ದ ಕಾರಣ ನಮಗೆ ಹೇಳಿಕೊಳ್ಳುವಂತಹ ತೊಂದರೆಯೇನೂ ಆಗಲಿಲ್ಲ. ಅಲ್ಲಿಗೆ ಹೋಗಿ ಶೂಟಿಂಗ್ ಮಾಡಿದ್ದು ಖುಷಿ ತಂದಿದೆ. ವೃತ್ತಿಯ ನೆಲೆಯಲ್ಲಿ ಹೇಳುವುದಾದರೆ, ಇದೊಂದು ಒಳ್ಳೆಯ ಅನುಭವ ಎನ್ನಬೇಕು. ಆದರೆ ವೈಯಕ್ತಿಕವಾಗಿ ಹೇಳಬೇಕು ಎಂದರೆ, ಅಲ್ಲಿನ ಅನುಭವ ಅಷ್ಟೊಂದು ಚೆನ್ನಾಗಿರಲಿಲ್ಲ. ಕಾರಣ ನನ್ನ ಕಾಲಿಗೆ ಏಟಾಗಿತ್ತು. ಆ ನೋವಿನಲ್ಲೇ ಶೂಟಿಂಗ್ ಮಾಡಬೇಕಿತ್ತು. ಎಪಿಸೋಡ್ ಮುಗಿಯಲೇ ಬೇಕಿತ್ತು. ಹಾಗಾಗಿ ಆ ನೋವಿನಲ್ಲೂ ಕೆಲಸ ಮಾಡಿದ್ದೆ. ಅಲ್ಲಿನ ನೋಟ, ಪರಿಸರ ಎಲ್ಲವೂ ಚೆನ್ನಾಗಿತ್ತು. ಅಲ್ಲಿನ ಜಾಗಕ್ಕೆ ತಕ್ಕ ಹಾಗೆ ಕತೆಯೂ ಇತ್ತು.’

‘ಅಂಡಮಾನ್‌ನಲ್ಲಿ ಬೋಟ್ ಓಡಿಸಿದ್ದು, ಒಬ್ಬನೇ ದೋಣಿಯ ಹುಟ್ಟು ಹಾಕಿದ್ದು ಎಲ್ಲವೂ ಥ್ರಿಲ್ ಎನ್ನಿಸಿತ್ತು. ಅವೆಲ್ಲಾ ಮರೆಯಲಾಗದ ಅನುಭವಗಳು.’

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.