ADVERTISEMENT

ಅಲ್ಲಮ ಬರುವನೆಂದು...

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST
ಟಿ.ಎಸ್. ನಾಗಾಭರಣ
ಟಿ.ಎಸ್. ನಾಗಾಭರಣ   
‘ಸಿನಿಮಾಗಳಿಗೆ ಅದ್ದೂರಿತನದಷ್ಟೆ ಅಚ್ಚುಕಟ್ಟುತನವೂ ಮುಖ್ಯ. ಚಿತ್ರದ ಆಶಯ ಏನೆಂಬುದು ಎದ್ದು ಕಾಣಬೇಕು. ಇದೆಲ್ಲ ಫಲಿಸಲು ಸ್ವಲ್ಪ ಸಮಯ ಹಿಡಿಯುತ್ತದೆ. ಇದೆಲ್ಲದರ ಪ್ರಯೋಗಾವಾಗಿ ಅಲ್ಲಮ ಮೂಡಿ ಬಂದಿದ್ದಾನೆ’ – ಮೂರು ವರ್ಷದ ಹಿಂದೆಯೇ ಸೆಟ್ಟೇರಿದ್ದ ‘ಅಲ್ಲಮ’ ಚಿತ್ರದ ಕುರಿತು ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದ್ದು ಹೀಗೆ. 
 
‘ಇಂತಹದ್ದೊಂದು ಮೌಲ್ಯಾತ್ಮಕ ಕಥೆಯನ್ನು ಸಿನಿಮಾವಾಗಿಸುವ ಕನಸು ಕಂಡು ಬಂಡವಾಳ ಹಾಕಿದ್ದ ನಿರ್ಮಾಪಕ ಶ್ರೀಹರಿ ಖೋಡೆ ಅವರ ನಿಧನವೂ ಚಿತ್ರ ವಿಳಂಬವಾಗುವುದಕ್ಕೆ ಕಾರಣವಾಯಿತು. ಬಳಿಕ ಅವರ ಮಗ ಶ್ರೀನಿವಾಸ್ ತಂದೆಯ ಕನಸಿಗೆ ಮರುಚಾಲನೆ ನೀಡಿದರು. ಇದೇ ಜ. 26ರಂದು ಅಲ್ಲಮ ತೆರೆಗೆ ಬರಲಿದ್ದಾನೆ’ ಎಂದರು. 
 
‘ಅಲ್ಲಮ’ನ ಸಂಭ್ರಮದಲ್ಲಿರುವಾಗಲೇ ತಮ್ಮ ಮುಂದಿನ ಚಿತ್ರದ ಬಗ್ಗೆಯೂ ನಾಗಾಭರಣ ಸುಳಿವು ಬಿಟ್ಟುಕೊಟ್ಟರು. ‘ಖ್ಯಾತ ತತ್ವಜ್ಞಾನಿ ಉಮರ್ ಖಯಾಮ್ ಬಗ್ಗೆ ಸಿನಿಮಾ ಮಾಡಲಿದ್ದೇನೆ’ ಎಂದ ಅವರು, ಚಿತ್ರ ಯಾವಾಗ ಆರಂಭವಾಗಲಿದೆ? ನಿರ್ಮಾಪಕರ್‍ಯಾರು? ಮುಖ್ಯಭೂಮಿಕೆಯಲ್ಲಿ ಯಾರ್‍ಯಾರಿರುತ್ತಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ನೀಡದೆ, ಸಮಯ ಬಂದಾಗ ಎಲ್ಲವನ್ನೂ ಹೇಳುವೆ ಎಂಬ ಧಾಟಿಯಲ್ಲಿ ನಗೆ ಬೀರಿದರು.
 
ಅಲ್ಲಮನಾಗಿ ಧನಂಜಯ, ತಾಯಿಯಾಗಿ ಲಕ್ಷ್ಮೀಗೋಪಾಲಸ್ವಾಮಿ, ಮಾಯೆಯಾಗಿ ಮೇಘನಾರಾಜ್ ಹಾಗೂ ಬಸವಣ್ಣನಾಗಿ ‘ಸಂಚಾರಿ’ ವಿಜಯ್ ನಟಿಸಿದ್ದಾರೆ.
 
‘ನಾಗಾಭರಣ, ಜಿ.ಎಸ್. ಭಾಸ್ಕರ್ ಸೇರಿದಂತೆ ಕನ್ನಡ ಚಿತ್ರರಂಗದ ಘಟಾನುಘಟಿಗಳ ಜತೆ ಕೆಲಸ ಮಾಡುವ ಅವಕಾಶ ಈ ಚಿತ್ರದ ಮೂಲಕ ಸಿಕ್ಕಿದೆ. ಮುಂದೆ ಇವರೊಂದಿಗೆ ಮತ್ತೆ ಕೆಲಸ ಮಾಡುವ ಅವಕಾಶ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಇವರೆಲ್ಲರಿಂದ ನಾನು ಬಹಳ ಕಲಿತಿದ್ದೇನೆ’ ಎಂದ ಧನಂಜಯ, ‘ಈ ಚಿತ್ರದ ಮೂಲಕ ಎಲ್ಲರಿಗೂ ಅಲ್ಲಮನ ದರ್ಶನವಾಗಲಿದೆ’ ಎಂದು ಮಾತು ಮುಗಿಸಿದರು.
 
‘ಈ ಚಿತ್ರದ ಪಾತ್ರ ನನ್ನ ಡ್ರೀಂ ರೋಲ್ ಕೂಡ ಆಗಿತ್ತು’ ಎಂದು ಮೇಘನಾರಾಜ್ ಸಂಭ್ರಮ ವ್ಯಕ್ತಪಡಿಸಿದರು.
 
ಬಾಪು ಪದ್ಮನಾಭ ಅವರು ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಅಲ್ಲಮನ ವಚನಗಳ ಜತೆಗೆ ಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮನ ವಚನಗಳನ್ನೂ ಸಿನಿಮಾಗೆ ಪೂರಕವಾಗಿ ಬಳಸಿಕೊಳ್ಳಲಾಗಿದೆ. ಸಾಹಿತಿ ದೊಡ್ಡರಂಗೇಗೌಡರ ಸಾಹಿತ್ಯ ಸಿಂಚನವೂ ಚಿತ್ರಕ್ಕಿದೆ. 
 
ಚಿತ್ರ ಕರ್ನಾಟಕದಲ್ಲಿ ತೆರೆಕಂಡ ವಾರದ ಬಳಿಕ ಮಲೇಷ್ಯಾ, ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದುಬೈ ಮುಂತಾದ ಕಡೆಯೂ ಬಿಡುಗಡೆ ಮಾಡಲು ನಿರ್ಮಾಪಕರು ಉತ್ಸುಕರಾಗಿದ್ದಾರೆ. ಜಿ.ಎಸ್.ಭಾಸ್ಕರ್ ಕ್ಯಾಮೆರಾ ಕೈಚಳಕ, ಶಶಿಧರ ಅಡಪ ಕಲಾ ನಿರ್ದೇಶನ ಚಿತ್ರಕ್ಕಿದೆ.
 
ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಕ್ಕೂ ಮುಂಚೆಯೇ ಗೋವಾ ಚಲನಚಿತ್ರೋತ್ಸವ, ಪನೋರಮಾದಲ್ಲಿ ‘ಅಲ್ಲಮ’ ಪ್ರದರ್ಶನ ಕಂಡಿದೆ. ಭಾರತೀಯ ಅಂತರರಾಷ್ಟ್ರೀಯ ಸಿನಿಮೋತ್ಸವದ ಐಸಿಎಫ್‌ಟಿ ಯುನೆಸ್ಕೊ ಗಾಂಧಿ ಪದಕ ವಿಭಾಗಕ್ಕೆ ದೇಶದಿಂದ ನಾಮಕರಣಗೊಂಡಿದ್ದ ಏಕೈಕ ಚಿತ್ರ ಎಂಬ ಹೆಗ್ಗಳಿಕೆಯೂ ಈ ಚಿತ್ರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.