ADVERTISEMENT

ಆಲಿಯಾ ಎಂಬ ಕಾಮನಬಿಲ್ಲು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ಸಭಾಂಗಣದಲ್ಲಿ ವರ್ಣರಂಜಿತ ಪೋಷಾಕು ತೊಟ್ಟ ಬಣ್ಣದ ಚಿಟ್ಟೆಗಳಂಥ ಲಲನೆಯರು. ಎಲ್ಲರ ಕಣ್ಣು ಸಭಾಂಗಣದ ಬಾಗಿಲಿನತ್ತ. ಎಲ್ಲರಿಗೂ ಮುಖ್ಯಮಂತ್ರಿಗಳ ಆಗಮನದ ನಿರೀಕ್ಷೆ. ವೇದಿಕೆ ರಂಗುರಂಗು ಆಗಿರುವಂತೆ ನಿರ್ದೇಶಕ ಇಂದ್ರಜಿತ್‌ ಸಹ ಕಲರ್‌ಫುಲ್‌ ಆಗಿದ್ದರು. ಸಂಜೆ ಇಳಿದು ವಾತಾವರಣ ಕಪ್ಪಡರುವ ಹೊತ್ತಿನಲ್ಲಿ ನಡೆದ ಆ ಕಾರ್ಯಕ್ರಮ ‘ಲವ್‌ ಯು ಆಲಿಯಾ’ ಚಿತ್ರದ್ದು. ಇಂದ್ರಜಿತ್ ಲಂಕೇಶ್‌ ನಿರ್ದೇಶನದ, ರವಿಚಂದ್ರನ್ ನಟನೆಯ ಈ ಚಿತ್ರಕ್ಕೆ ವಿಧ್ಯುಕ್ತ ಚಾಲನೆ ದೊರಕಿದ ಸಮಾರಂಭ ಅದು.

ರವಿಚಂದ್ರನ್‌ ಅವರಿಗೆ ಆಕ್ಷನ್‌ ಕಟ್ ಹೇಳಲು ಸಿಕ್ಕ ಅವಕಾಶದಿಂದ ಇಂದ್ರಜಿತ್ ಬಹು ಖುಷಿಯಲ್ಲಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಉಮಾಶ್ರೀ, ರೋಷನ್ ಬೇಗ್‌ ‘ಲವ್‌ ಯು ಆಲಿಯಾ’ ಚಿತ್ರತಂಡಕ್ಕೆ ಶುಭ ಹಾರೈಸಿದವರ ಪಟ್ಟಿಯಲ್ಲಿದ್ದರು. ‘ಇಂದ್ರಜಿತ್ ಲಂಕೇಶ್‌ ಅವರು ಆಲ್‌ರೌಂಡರ್‌ ಪತ್ರಿಕೆ ಆರಂಭಿಸಿದ ದಿನದಿಂದ ನನಗೆ ಪರಿಚಯ. ಆಗ ಅವರಿಗೆ ಕೂದಲು ಇತ್ತು, ಈಗ ಇಲ್ಲ. ಆಗಲೂ ನಗುವಿತ್ತು, ಈಗಲೂ ನಗುವಿದೆ. ಕೂದಲನ್ನು ಕಳೆದುಕೊಂಡರೂ ನಗು ಉಳಿಸಿಕೊಂಡಿರುವುದು ವಿಶೇಷ’ ಎಂದು ರವಿಚಂದ್ರನ್‌ ತಮಾಷೆಯಾಗಿ ಹೇಳಿದರು.

‘ನೀವು ಚಿತ್ರದಲ್ಲಿ ಡಾಕ್ಟರ್‌; ನಿಮಗೊಬ್ಬಳು ಡಾಟರ್‌– ಇದಿಷ್ಟೇ ನನಗೆ ಇಂದ್ರಜಿತ್‌ ಹೇಳಿರುವ ಚಿತ್ರದ ಕಥೆ. ಅವರು ಎಷ್ಟು ಕಲರ್‌ಫುಲ್‌ ಎನ್ನುವುದು ಎಲ್ಲರಿಗೂ ಗೊತ್ತು. ಕಲರ್‌ಫುಲ್‌ ಆಗಿಯೇ ಸಿನಿಮಾ ತೆಗೆಯುತ್ತಾರೆ’ ಎಂದು ರವಿಚಂದ್ರನ್‌ ಬಣ್ಣಿಸಿದರು.

ಇಂದ್ರಜಿತ್‌ ಲಂಕೇಶ್‌ ಕೂಡ ರವಿಚಂದ್ರನ್‌ ಅವರೊಂದಿಗಿನ ತಮ್ಮ ನಂಟನ್ನು ಮೆಲುಕು ಹಾಕಿದರು. ‘ನಾನು ಆಲ್ ರೌಂಡರ್ ಪತ್ರಿಕೆ ಆರಂಭಿಸಿದ ಸಂದರ್ಭದಲ್ಲಿಯೇ ರವಿಚಂದ್ರನ್ ಪರಿಚಿತರು. ಪತ್ರಿಕೆಯ ಆರಂಭಕ್ಕೆ ಅತಿಥಿಯಾಗಿ ಯಾರನ್ನು ಕರೆಸಬೇಕು ಎಂದಾಗ, ವೀರಸ್ವಾಮಯ್ಯ ಅವರ ಮಗನನ್ನು ಕರೆಸೋಣ ಎಂದು ಅಪ್ಪ ಹೇಳಿದ್ದರು. ನಮ್ಮ ಆಹ್ವಾನಕ್ಕೆ ರವಿಚಂದ್ರನ್ ಕ್ಷಣಮಾತ್ರದಲ್ಲಿ ಓಕೆ ಎಂದಿದ್ದರು’ ಎಂದು ತಮ್ಮ ಮತ್ತು ಕ್ರೇಜಿಸ್ಟಾರ್‌ನ ಗೆಳೆತನವನ್ನು ಇಂದ್ರಜಿತ್‌ ನೆನಪಿಸಿಕೊಂಡರು.

‘ತುಂಟಾಟ ಸಿನಿಮಾವನ್ನು ಮೊದಲು ವಿಮರ್ಶೆ ಮಾಡಿದ್ದು ರವಿ ಸರ್. ನನ್ನ ಎಲ್ಲ ಸಿನಿಮಾಗಳಿಗೂ ಅವರ ಬೆಂಬಲವಿದೆ. ಅವರು ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ– ಹೀಗೆ ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಡಾಕ್ಟರ್ ಮಾತ್ರ ಆಗಿರಲಿಲ್ಲ. ಅವರನ್ನು ಡಾಕ್ಟರ್ ಮಾಡುವ ಅವಕಾಶ ನನಗೆ ದೊರೆತಿದೆ’ ಎಂದರು.

ರವಿಚಂದ್ರನ್ ಅವರಿಗೆ ಜೋಡಿಯಾಗಿ ಭೂಮಿಕಾ ಚಾವ್ಲಾ ನಟಿಸುತ್ತಿದ್ದಾರೆ. ‘ತಾವು ಈ ಚಿತ್ರದಲ್ಲಿ ಕೆಲಸ ಮಾಡಲು ಖುಷಿಯಾಗುತ್ತಿದೆ’ ಎಂದರು ಭೂಮಿಕಾ. ಮೈಸೂರಿನ ಚಂದನ್ ಮತ್ತು ಸಂಗೀತಾ ಚಿತ್ರದಲ್ಲಿನ ಮತ್ತೊಂದು ಜೋಡಿ. ಕಿರುತೆರೆ ನಟನಾಗಿರುವ ಚಂದನ್ ‘ಕಟ್ಟೆ’ ಚಿತ್ರದಲ್ಲೂ ನಟಿಸಿದ್ದಾರಂತೆ. ಸಂಗೀತಾ ‘ಕನ್ನಡ ಸ್ವಲ್ಪ ಸ್ವಲ್ಪ ಬರುತ್ತದೆ’ ಎಂದು ಒಂದು ಡೈಲಾಗ್‌ ಅನ್ನು ತೊದಲುತ್ತ ಹೇಳಿದರು. ಅತಿಥಿ, ಪವಿತ್ರಾ ಲೋಕೇಶ್ ಮತ್ತಿತರರು ನಟಿಸುತ್ತಿದ್ದು ವೇದಿಕೆಯಲ್ಲಿದ್ದರು.

ಕವಿರಾಜ್ ಸಾಹಿತ್ಯ, ಜೆಸ್ಸಿಗಿಫ್ಟ್‌ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ. ನಿರ್ಮಾಪಕ ಕೆ. ಮಂಜು, ಸಿನಿಮಾ ಹಂಚಿಕೆದಾರ ಭಾಷಾ, ನಟಿ ಸಂಜನಾ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.