ADVERTISEMENT

ಆಹಾ, ‘ಸುಂದರ’ ದ್ವಿಶತಕ!

​ಪ್ರಜಾವಾಣಿ ವಾರ್ತೆ
Published 11 ಮೇ 2017, 19:30 IST
Last Updated 11 ಮೇ 2017, 19:30 IST
ಸುಂದರ್‌ ರಾಜ್‌
ಸುಂದರ್‌ ರಾಜ್‌   

‘ಸಿನಿಮಾ ಗೆಲ್ಸಿ... ಸಿನಿಮಾ ಗೆಲ್ಸಿ...’
ಪಿಸುದನಿಯಲ್ಲೆಂಬಂತೆ ಎರಡೆರಡು ಬಾರಿ ಹೇಳಿ, ಇನ್ನು ಮಾತನಾಡಲಾರೆ ಎಂಬಂತೆ ನಟ ಸುಂದರ್‌ರಾಜ್‌ ಕೈಲಿದ್ದ ಮೈಕ್‌ ಅನ್ನು ಪಕ್ಕಕ್ಕೆ ವರ್ಗಾಯಿಸಿದರು. ಕಣ್ಣು ತುಂಬಿದ ನೀರು ಕನ್ನಡಕದ ಕಟ್ಟೆಯನ್ನೂ ದಾಟಿ ಕೆನ್ನೆಯನ್ನು ತೋಯಿಸುತ್ತಿತ್ತು.

ಮಾತಿಗಾರಂಭಿಸಿದಾಗ ಅವರು ತುಸು ಹೆಚ್ಚೇ ಉತ್ಸಾಹದಿಂದಿದ್ದರು. ಅದಕ್ಕೆ ಕಾರಣವೂ ಇತ್ತು. ‘ಲಿಫ್ಟ್‌ ಮ್ಯಾನ್‌’ ಸಿನಿಮಾದ ಮೂಲಕ ಅವರು 200 ಸಿನಿಮಾಗಳ ಗಡಿಯನ್ನು ಮುಟ್ಟುತ್ತಿದ್ದಾರೆ. ಈ ಗಡಿ ತಲುಪಿದ್ದಷ್ಟೇ ಅಗ್ಗಳಿಕೆಯಲ್ಲ, ಬದಲಿಗೆ ತಮ್ಮ 200 ನೇ ಸಿನಿಮಾದಲ್ಲಿ ನಟಿಸಲು ಸಿಕ್ಕಿರುವ ಅಪರೂಪದ ಪಾತ್ರದ ಬಗ್ಗೆಯೂ ಅವರಿಗೆ ಅಪಾರ ಹೆಮ್ಮೆಯಿತ್ತು.

ಈ ಚಿತ್ರಕ್ಕೆ ಚಿತ್ರರಂಗದ ಘಟಾನುಘಟಿಗಳೆಲ್ಲ ಶುಭಕೋರಿರುವ ವಿಡಿಯೊ ತುಣುಕುಗಳನ್ನು ತೋರಿಸುತ್ತಿದ್ದಂತೆಯೇ ತಮ್ಮ ಮೇಲಿನ ಪ್ರೀತಿಯ ಭಾರವನ್ನು ತಡೆದುಕೊಳ್ಳಲಾರದೇ ಅವರ ಕತ್ತಿನ ಸೆರೆಯುಬ್ಬಿತ್ತು. ಮಾತು ಗದ್ಗದಿತವಾಗಿ ಬಿಕ್ಕು ಉಕ್ಕಳಿಸಿತ್ತು.

ಅವರ ಪ್ರಕಾರ ಈ ಸಿನಿಮಾ ಆಗಿದ್ದೇ ಒಂದು ವಿಸ್ಮಯ. ಈ ಕಥೆಯ ಪಾತ್ರ ಅವರನ್ನು ವಿಪರೀತ ವಿಚಲಿತಗೊಳಿಸಿದೆಯಂತೆ. ಎಡೆಬಿಡದೆ ಕಾಡಿದೆಯಂತೆ. ಈ ಸಿನಿಮಾದ ಕಥೆ ಹೇಳುತ್ತ ಹೇಳುತ್ತಲೇ ತಮ್ಮ ಅಭಿನಯದ ಮೊದಲನೇ ಸಿನಿಮಾ ಗಿರೀಶ ಕಾರ್ನಾಡ ನಿರ್ದೇಶನದ ‘ಕಾಡು’ವಿನ ನೆನಪುಗಳ ದಟ್ಟ ಅಡವಿಗೆ ಜಾರಿದರು.

1973ರಲ್ಲಿ ತಯಾರಾದ ಆ ಸಿನಿಮಾದಲ್ಲಿ ಅವರದು ಕೇವಲ ಐದಾರು ನಿಮಿಷಗಳ ಪುಟ್ಟ ಪಾತ್ರ. ಆದರೆ ಆ ಸಿನಿಮಾಕ್ಕಾಗಿ ಅವರು ಐವತ್ತಾರು ದಿನಗಳ ಕಾಲ ನಿರ್ದೇಶಕರಿಗೆ ಸಹಾಯಕನಾಗಿ ಕೆಲಸ ಮಾಡಿದ್ದಾರಂತೆ!

ಬಾಲ್ಯದಿಂದಲೇ ಸಿನಿಮಾ ವ್ಯಮೋಹದ ಬೀಜಗಳನ್ನು ಬಿತ್ತಿಕೊಂಡೇ ಬೆಳೆದ ಸುಂದರ್‌ರಾಜ್‌ ಅವರೊಳಗಿನ ನಟನನ್ನು ಪಳಗಿಸಿದ್ದು ರಂಗಭೂಮಿ. ‘ಬೆನಕ’ ರಂಗತಂಡ ಅವರ ಅಖಾಡ. ಬಿ.ವಿ. ಕಾರಂತ ಅನುದಿನವೂ ಸ್ಮರಿಸಿಕೊಳ್ಳುವ ಗುರುಗಳು. ಚಿಕ್ಕಂದಿನಿಂದ ನೋಡಿಕೊಂಡು ಬಂದಿದ್ದ ಸಿನಿಮಾಗಳು ಅವರೊಳಗೆ ಇನ್ನೂ ಮಿಸುಕಾಡುತ್ತಿವೆ.

ಮೊದಲ ಅವಕಾಶಕ್ಕಾಗಿ ಅವರು ಪಡೆದ ಸಂಭಾವನೆ ಮುನ್ನೂರು ರೂಪಾಯಿ. ನಂತರ 43 ವರ್ಷಗಳ ಕಾಲ ಚಿತ್ರರಂಗದಲ್ಲಿದ್ದು ಹಲವು ಭಿನ್ನ ಪಾತ್ರಗಳನ್ನು ಮಾಡಿದರೂ ಇದುವರೆಗೆ ಸಿನಿಮಾವೊಂದಕ್ಕೆ ಸುಂದರ್‌ ಪಡೆದ ಗರಿಷ್ಠ ಸಂಭಾವನೆ ಎರಡು ಲಕ್ಷ ರೂಪಾಯಿ ಮಾತ್ರ!

‘ನಾನು ತಮಿಳು ಚಿತ್ರಗಳಲ್ಲಿ ಖಳನಟನಾಗಿ ನಟಿಸುತ್ತಿದ್ದಾಗ ಹದಿನೈದು ಸಾವಿರ ರೂಪಾಯಿ ಸಂಭಾವನೆ ಕೊಡುತ್ತಿದ್ದರು. ಅದೇ ಸಮಯದಲ್ಲಿ ಇಲ್ಲಿ ಮೂರು ಸಾವಿರ ರೂಪಾಯಿ ಕೊಡುತ್ತಿದ್ದರು. ಆದರೂ ಕನ್ನಡದ ಮೇಲಿನ ಪ್ರೀತಿಯಿಂದ ಅಲ್ಲಿನ ಅವಕಾಶಗಳನ್ನು ಬಿಟ್ಟು ಇಲ್ಲಿಯೇ ಉಳಿದುಕೊಂಡೆ’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಹಾಗೆಂದು ಈ ಬಗ್ಗೆ ಅವರಿಗೆ ಯಾವ ಪಶ್ಚಾತಾಪವೂ ಇಲ್ಲ. ಬದಲಿಗೆ ‘ನಾನು ಕರ್ನಾಟದಲ್ಲಿಯೇ ಉಳಿದಿದ್ದರಿಂದ ಲಿಫ್ಟ್‌ ಮ್ಯಾನ್‌ನಂಥ ಸಿನಿಮಾದಲ್ಲಿ ನಟಿಸಲು ಸಾಧ್ಯವಾಯ್ತು. 200ರ ಗಡಿ ತಲುಪುವುದು ಸಾಧ್ಯವಾಯ್ತು’ ಎಂದು ಧನ್ಯತೆ ವ್ಯಕ್ತಪಡಿಸುತ್ತಾರೆ.

ಹೀಗೆ ಸಿನಿಮಾದ ಬಗ್ಗೆ ಮಾತನಾಡುತ್ತ ಬಣ್ಣದೊಟ್ಟಿಗೇ ಹಾಸುಹೊಕ್ಕಾಗಿರುವ ತಮ್ಮ ಬದುಕಿನ ಕುರಿತಾಗಿಯೂ ಅವರ ಸ್ಮೃತಿಲಹರಿ ಹರಿಯಿತು.
ಅವರ ಬಾಳ ಸಂಗಾತಿ ಪ್ರಮೀಳಾ ಜೋಷಾಯ್‌ ಅವರ ಸಾಂಗತ್ಯವನ್ನು ದೊರಕಿಸಿಕೊಟ್ಟಿದ್ದೂ ರಂಗಭೂಮಿಯೇ. ನಾಟಕ ಕಂಪೆನಿಯಲ್ಲಿ ಕೆಲಸ ಮಾಡುತ್ತ ಅದರಲ್ಲಿಯೇ ಇದ್ದ ಪ್ರಮೀಳಾ ಜೋಷಾಯ್‌ ಅವರ ಮನಸ್ಸನ್ನೂ ಗೆದ್ದರು. ‘ನಮ್ಮದು ಒಂದು ರೀತಿಯ ಪ್ಲೆಟಾನಿಕ್‌ ಲವ್‌’ ಎನ್ನುವ ಅವರು ‘ಅವಳಲ್ಲಿನ ವಾತ್ಸಲ್ಯ, ತನಗಾಗಿ ಏನನ್ನೂ ಇಟ್ಟುಕೊಳ್ಳದೇ ಕುಟುಂಬವನ್ನು ಪೊರೆಯವ ಗುಣದಿಂದ ಆಕರ್ಷಿತನಾಗಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ.

ಸುಂದರ್‌ ಮತ್ತು ಪ್ರಮೀಳಾ ಅವರದು ಅಂತರ್‌ಧರ್ಮೀಯ ವಿವಾಹ. ಆದರೆ ಭಿನ್ನ ಜೀವನಕ್ರಮ, ನಂಬಿಕೆಗಳು ಅವರ ಪ್ರೀತಿಯ ಝರಿಗೆ ಎಂದಿಗೂ ತಡೆಯಾಗಲೇ ಇಲ್ಲ. ‘ಪರಸ್ಪರ ಆಳವಾಗಿ ಅರಿತುಕೊಳ್ಳುವುದು ಮುಖ್ಯ. ಹಾಗಿರುವಾಗ ಯಾವ ಭಿನ್ನಾಭಿಪ್ರಾಯವೂ ಬದುಕಿನಲ್ಲಿ ಬಿರುಕು ಮುಟ್ಟುವಷ್ಟು ಬೆಳೆಯುವುದಿಲ್ಲ’ ಎಂಬ ಅನುಭವಜನ್ಯ ಮಾತನ್ನೂ ಅವರು ಹೇಳುತ್ತಾರೆ.

ಮತ್ತೆ ಸಿನಿಮಾ ಬದುಕಿನ ನೆನಪಿನ ಹಳಿಗೇ ಮರಳಿದ ಅವರು ‘ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಪ್ರೀತಿ, ಬೆಂಬಲ ದೊರೆಯಿತು. ಆದರೆ ಕಮರ್ಷಿಯಲ್‌ ಆಗಿ ನಾನು ಸ್ಟಾರ್‌ ಆಗಲು ಸಾಧ್ಯವಾಗಲಿಲ್ಲ’ ಎನ್ನುವ ಅವರು ‘ಯಾಕೆಂದರೆ ಅದಕ್ಕೆ ಬೇಕಾದ ಲಕ್ಷಣಗಳು ಇರಲಿಲ್ಲ’ ಎಂದು ಒಪ್ಪಿಕೊಳ್ಳುತ್ತಾರೆ.

‘ನಾನು ಕಮರ್ಷಿಯಲ್‌ ದೃಷ್ಟಿಯಿಂದ ಹೀರೊ ಅಲ್ಲದೇ ಇರಬಹುದು. ಆದರೆ ಜನರ ಮನಸ್ಸಿನಲ್ಲಿ ನಾಯಕನಾಗಿಯೇ ಉಳಿದಿದ್ದೇನೆ’ ಎಂಬ ಖುಷಿ ಅವರಿಗಿದೆ. ‘ಈ ಪ್ರಯಾಣ ಎನ್ನುವುದು ಯಾವಾಗಲೂ ಅನಿಶ್ಚಿತವಾಗಿರುತ್ತದೆ’ ಎಂದು ತಮ್ಮ ಮಾತನ್ನು ರೂಪಕದ ಭಾಷೆಗೆ ಬದಲಾಯಿಸಿದರು ಸುಂದರ್‌.

‘ನಾವೆಲ್ಲರೂ ಹಿಮಾಲಯ ಪರ್ವತ ಹತ್ತಬೇಕು ಎಂತಲೇ ಹೊರಡುವುದು. ಆದರೆ ಆ ಹಿಮಾಲಯ ಪರ್ವತ ಹತ್ತಬೇಕಾದ ಸಾಮರ್ಥ್ಯ, ವಾತಾವರಣ ಎಲ್ಲವೂ ಕೂಡಿಬರುತ್ತದೆಯೇ ಎನ್ನುವುದು ಯಾರಿಗೂ ಗೊತ್ತಿಲ್ಲ. ಈ ವೃತ್ತಿಬದುಕೂ ಹಾಗೆಯೇ. ಇನ್ನೂರು ಸಿನಿಮಾ ಮಾಡುತ್ತೇನೆ ಎಂದು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆ ಇನ್ನೂರನೇ ಸಿನಿಮಾ ಲಿಫ್ಟ್‌ಮ್ಯಾನ್‌ ಆಗಲಿದೆ ಎಂದೂ ಗೊತ್ತಿರಲಿಲ್ಲ. ಎಷ್ಟು ಸಿನಿಮಾ ಮಾಡಿದ್ದೇವೆ ಅನ್ನುವಷ್ಟೇ ಎಷ್ಟು ಒಳ್ಳೆಯ ಸಿನಿಮಾ ಮಾಡಿದ್ದೇವೆ ಮತ್ತು ಅದರಲ್ಲಿ ನಾವು ಎಷ್ಟು ಚೆನ್ನಾಗಿ ನಟಿಸಿದ್ದೇವೆ ಎನ್ನುವುದೇ ಹೆಚ್ಚು ಮುಖ್ಯ’ ಎನ್ನುತ್ತಾರೆ.

ಇನ್ನೂರರ ಗಡಿಯನ್ನು ಸಾರ್ಥಕ ಸಿನಿಮಾದ ಮೂಲಕ ಮುಟ್ಟುತ್ತಿರುವ ಖುಷಿ ಅವರಿಗಿದೆ. ಹಾಗೆಯೇ ತಾವು ಕಂಡ, ಆದರೆ ನನಸಾಗದ ಎಷ್ಟೋ ಕನಸುಗಳು ಮಗಳು ಮೇಘನಾ ರಾಜ್‌ ರೂಪದಲ್ಲಿ ಸಾಕಾರಗೊಳ್ಳುತ್ತಿರುವ ಬಗ್ಗೆಯೂ ಅವರಿಗೆ ಸಾಕಷ್ಟು ಹೆಮ್ಮೆಯಿದೆ. 


ಕಾರಂಜಿ ಶ್ರೀಧರ್‌

*
ಏರಿಳಿತಗಳ ಜೀವನಗಾಥೆ
‘ಲಿಫ್ಟ್‌ಮ್ಯಾನ್‌’ ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಮತ್ತು ಚಿತ್ರ ಈ ವಾರ ತೆರೆಕಾಣುತ್ತಿರುವ ಸುದ್ದಿಯನ್ನು ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು. ದಿನಪತ್ರಿಕೆಯಲ್ಲಿ ಬಂದಿರುವ ಸುದ್ದಿಯೊಂದನ್ನು ಆಧರಿಸಿ ಚಂದ್ರ ಬಾರ್ಕೂರ್‌ ಅವರು ಕಾದಂಬರಿ ಬರೆದಿದ್ದಾರೆ. ಈ ಕಾದಂಬರಿ ಆಧರಿಸಿ ಚಿತ್ರ ತಯಾರಿಸಲಾಗಿದೆ. ಕಾರಂಜಿ ಶ್ರೀಧರ್‌ ಸಿನಿಮಾ ನಿರ್ದೇಶಿಸಿದ್ದಾರೆ.

ADVERTISEMENT

‘ಶಕ್ತಿಸೌಧವಾದ ವಿಧಾನಸೌದದಲ್ಲಿ ಮೂವತ್ತು ವರ್ಷಗಳ ಕಾಲ ಲಿಫ್ಟ್‌ ಮ್ಯಾನ್‌ ಆಗಿ ಸೇವೆ ಸಲ್ಲಿಸಿ ನಿವೃತ್ತನಾದ ವ್ಯಕ್ತಿಯ ಬದುಕಿನ ಕಥೆಯನ್ನು ಹೇಳುತ್ತಿದ್ದೇವೆ. ಕನ್ನಡದಲ್ಲಿ ಅಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಇಂಥದ್ದೊಂದು ಸಿನಿಮಾ ಬಂದಿಲ್ಲ’ ಎಂದರು ಶ್ರೀಧರ್‌.

‘ಏರಿಳಿತಗಳ ನಡುವಿನ ಜೀವನ’ ಎಂಬ ಅಡಿಶೀರ್ಷಿಕೆಯನ್ನೂ ಇಟ್ಟಿದ್ದಾರೆ. ಈಗಾಗಲೇ ಬೆಂಗಳೂರು ಮತ್ತು ಗೋವಾ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡಿರುವ ಈ ಸಿನಿಮಾ ಜನರ ಮೆಚ್ಚುಗೆಯನ್ನೂ ಗಳಿಸಿದೆಯಂತೆ. ರಾಮ್‌ ಅವರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ.

ಲಕ್ಷ್ಮೀನಾರಾಯಣ ಅವರ ಛಾಯಾಗ್ರಹಣ ಇರುವ ‘ಲಿಫ್ಟ್‌ ಮ್ಯಾನ್‌’ ಸಿನಿಮಾಗೆ ಪ್ರವೀಣ್‌ ಗೋಡ್ಖಿಂಡಿ ಸಂಗೀತ ಸಂಯೊಜಿಸಿದ್ದಾರೆ. ಸುಂದರ್‌ ರಾಜ್‌ ಮಗಳು ಮೇಘನಾ ರಾಜ್‌ ಒಂದು ಹಾಡನ್ನು ಹಾಡಿರುವುದು ಸಿನಿಮಾದ ವಿಶೇಷತೆಗಳಲ್ಲೊಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.