ADVERTISEMENT

‘ಇದು ಗಂಧದ ಗುಡಿಯಲ್ಲ, ಮಾಸ್ತಿ ಗುಡಿ...

​ಪ್ರಜಾವಾಣಿ ವಾರ್ತೆ
Published 12 ಮೇ 2017, 14:24 IST
Last Updated 12 ಮೇ 2017, 14:24 IST
‘ಇದು ಗಂಧದ ಗುಡಿಯಲ್ಲ, ಮಾಸ್ತಿ ಗುಡಿ...
‘ಇದು ಗಂಧದ ಗುಡಿಯಲ್ಲ, ಮಾಸ್ತಿ ಗುಡಿ...   

*ಮಾಸ್ತಿಗುಡಿ ಸಿನಿಮಾದ ಬಗ್ಗೆ ಹೇಳಿ?
ನಿರಂತರವಾಗಿ ಸಿನಿಮಾಗಳನ್ನು ಮಾಡುತ್ತಿರುತ್ತೇನೆ. ಆ ಪ್ರಯತ್ನಗಳ ಮಧ್ಯವೇ ಒಂದಿಷ್ಟು ಮಾಹಿತಿ, ಒಳ್ಳೆಯ ಸಂದೇಶಗಳನ್ನು ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂದು ನನಗೆ ಯಾವಾಗಲೂ ಅನಿಸುತ್ತಿರುತ್ತದೆ. ಹಾಗಾಗಿ ‘ಕಾಡು ಉಳಿಸಿ ಮತ್ತು ಹುಲಿಗಳನ್ನು ಕೊಲ್ಲಬೇಡಿ’ ಎಂಬ ಸಂದೇಶವನ್ನು ಹೇಳುವ ಹಾಗೆ ಕಥೆಯನ್ನು ಹೆಣೆದು ‘ಮಾಸ್ತಿ ಗುಡಿ’ ಮಾಡಿದ್ದೇವೆ.

*ಕಾಡು ನಿಮಗೆ ಯಾಕಷ್ಟು ಕಾಡಿತು?
ರಾಜ–ಮಹಾರಾಜರ ಕಾಲದಿಂದಲೂ ಹುಲಿಯನ್ನು ಹವ್ಯಾಸಕ್ಕಾಗಿ ಕೊಂದಿದ್ದಾರೆ. ಅದೊಂದು ಪ್ರತಿಷ್ಠೆಯ ವಿಷಯವೂ ಆಗಿಬಿಟ್ಟಿತ್ತು. ಹುಲಿ ಕೊಂದವನು ಶೂರ ಎನ್ನುವ ನಂಬಿಕೆ ಇತ್ತು. ಅದರ ಪರಿಣಾಮ ಎಷ್ಟು ವಿಕೋಪಕ್ಕೆ ಹೋಗಿದೆ ಎಂದರೆ, ಇಂದು ಹುಲಿಗಳ ಸಂತತಿಯೇ ಕಡಿಮೆಯಾಗಿಬಿಟ್ಟಿದೆ. ಹುಲಿ ಒಂದೇ ಅಲ್ಲ, ಯಾವುದೋ ಕಾಡುಪ್ರಾಣಿಯನ್ನು ಬೇಟೆಯಾಡಿ ತಿನ್ನುವುದು ಹೆಮ್ಮೆಯ ವಿಷಯವಾಗಿಬಿಟ್ಟಿದೆ. ಅದನ್ನೆಲ್ಲ ನಿಲ್ಲಿಸಬೇಕು ಎಂಬುದನ್ನು ಹೇಳುವ ಉದ್ದೇಶಕ್ಕಾಗಿಯೇ ಈ ‘ಮಾಸ್ತಿ ಗುಡಿ’ ಕಥೆಯನ್ನು ಮಾಡಿದ್ದೆ. 

ಹುಲಿಗೂ ನಮ್ಮ ಮನೆಯ ನೀರಿಗೂ ಸಂಬಂಧವಿದೆ. ಈ ಸಂಬಂಧವನ್ನು ಸಿನಿಮಾದಲ್ಲಿ ತೋರಿಸಿದ್ದೇವೆ. ಮಕ್ಕಳಿಗೆ ಪರಿಸರ ಕಾಳಜಿಯ ವಿಷಯವನ್ನು ರಂಜನೆಯ ಮಾಧ್ಯಮದಲ್ಲಿಯೇ ತಿಳಿಸಿಕೊಡಬೇಕು ಎಂಬ ಉದ್ದೇಶವೂ ಈ ಸಿನಿಮಾಕ್ಕಿದೆ. ಪಾಠ ಮಾಡಿದರೆ ಅದು ಮಕ್ಕಳಿಗೆ ಬೋರ್‌ ಹೊಡೆಸುತ್ತದೆ.

ಸಿನಿಮಾದಂಥ ಮಾಧ್ಯಮದ ಮೂಲಕ ಹೇಳಿದರೆ ಅದನ್ನು ಇಷ್ಟಪಡುತ್ತಾರೆ. ಮಕ್ಕಳು ನೋಡಲೇಬೇಕಾದ ಸಿನಿಮಾ ಇದು. ಹಾಗೆಂದು ಮಕ್ಕಳು ಮಾತ್ರವಲ್ಲ, ಕುಟುಂಬದ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ನೋಡಬಹುದಾದ ಸಿನಿಮಾ ಮಾಡಿದ್ದೇವೆ.

*ಈ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?
ಈ ಚಿತ್ರದಲ್ಲಿ ನಾನು ನಾಲ್ಕು ಛಾಯೆಗಳಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಅವುಗಳಲ್ಲಿ ಎರಡು ಛಾಯೆಗಳನ್ನು ಈಗಾಗಲೇ ಪ್ರೋಮೊ, ಟೀಸರ್‌ಗಳಲ್ಲಿ ನೋಡಿರುತ್ತೀರಿ. ಇನ್ನೆರಡು ಛಾಯೆಗಳನ್ನು ತೆರೆಯ ಮೇಲೆ ನೋಡಿ.

*‘ಮಾಸ್ತಿ ಗುಡಿ’ಯಲ್ಲಿ ‘ಗಂಧದ ಗುಡಿ’ ಸಿನಿಮಾದ ಸ್ಫೂರ್ತಿ ಇದೆಯೇ?
ಖಂಡಿತ ಇಲ್ಲ. ಇದು ಪೂರ್ತಿಯಾಗಿ ಸ್ವಂತ ಕಥೆ. ಬಹುತೇಕ ತೆಲುಗು ಸಿನಿಮಾಗಳಲ್ಲಿ ಕುಟುಂಬದ ಪ್ರತಿಷ್ಠೆಯ ಕಥೆ ಇರುತ್ತದಲ್ಲ, ಹಾಗೆಯೇ ಕನ್ನಡದಲ್ಲಿ ಕಾಡಿನ ಕುರಿತಾದ ಕಥೆಗಳನ್ನು ಮಾಡಿದಾಗಲೆಲ್ಲ ಕಾಡನ್ನು ರಕ್ಷಿಸಿ ಅಂತಲೇ ಹೇಳುತ್ತೇವೆ. ಅಷ್ಟನ್ನು ಬಿಟ್ಟರೆ ‘ಗಂಧದ ಗುಡಿ’ಗೂ ‘ಮಾಸ್ತಿ ಗುಡಿ’ಗೂ ಯಾವ ಸಾಮ್ಯತೆಯೂ ಇಲ್ಲ.

ADVERTISEMENT

*‘ಮಾಸ್ತಿ ಗುಡಿ’ ಚಿತ್ರೀಕರಣದ ಅನುಭವ ಹೇಗಿತ್ತು?
ಬಹುತೇಕ ಕಾಡಿನಲ್ಲಿಯೇ ಚಿತ್ರೀಕರಣ ಮಾಡಿದ್ದು. ಅನುಭವ ತುಂಬ ಚೆನ್ನಾಗಿತ್ತು. ಕಾಡು ನನಗೆ ಹೊಸತೇನೂ ಅಲ್ಲ. ಕಾಡಿನಲ್ಲಿಯೇ ಬೆಳೆದವನು. ಒಂದು ರೀತಿಯಲ್ಲಿ ಕಾಡುಮನುಷ್ಯನೇ. ಆದ್ದರಿಂದ ತುಂಬ ಕಷ್ಟವೇನೂ ಆಗಲಿಲ್ಲ. ನಾಯಕಿ ಅಮೂಲ್ಯಾ ತುಂಬ ಸಹಕಾರ ನೀಡಿದರು. ಪ್ರತಿಭಾವಂತ ನಟಿ ಆಕೆ.

*ಈ ಪಾತ್ರಕ್ಕೆ ನಿಮ್ಮ ಸಿದ್ಧತೆ ಹೇಗಿತ್ತು?
ನಾಲ್ಕು ಛಾಯೆಯ ಪಾತ್ರವಾಗಿದ್ದರಿಂದ ಅದರ ನಿರ್ವಹಣೆ ಸವಾಲಿನದಾಗಿತ್ತು. ಮನಸ್ಥಿತಿ, ದೇಹಸ್ಥಿತಿ, ಹಾವಭಾವ ಎಲ್ಲವೂ ಭಿನ್ನವಾಗಿಯೇ ಇದೆ. ಅದೆಲ್ಲದಕ್ಕೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧತೆ ಮಾಡಿಕೊಂಡಿದ್ದೆ.

*‘ಮಾಸ್ತಿ ಗುಡಿ’ ಸಿನಿಮಾದ ಖುಷಿಯ ಜೊತೆಗೇ ನಟರಾದ ಅನಿಲ್‌ ಮತ್ತು ಉದಯ್‌ ಸಾವಿನ ನೋವೂ ಹೆಣೆದುಕೊಂಡಿದೆಯಲ್ಲವೇ?
ನಿಜ. ಆ ಬಗ್ಗೆ ನನಗೆ ಏನು ಹೇಳಲೂ ತೋಚುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

*ಅವರ ಕುಟುಂಬಕ್ಕಾಗಿ ಏನಾದರೂ ಸಹಾಯ ಮಾಡಿದ್ದೀರಾ?
ಅದೆಲ್ಲವೂ ನಡೆಯುತ್ತಿದೆ. ಸದ್ಯಕ್ಕೆ ಏನೂ ಹೇಳುವುದಿಲ್ಲ. ಸ್ವಲ್ಪ ದಿನ ಬಿಟ್ಟು ನಾವೇ ತಿಳಿಸುತ್ತೇವೆ.

*‘ಮಾಸ್ತಿ ಗುಡಿ’ ಸಿನಿಮಾ ನೋಡಲು ಬರುವ ಪ್ರೇಕ್ಷಕನಿಗೆ ಯಾವ ಭರವಸೆ ನೀಡುತ್ತೀರಿ?
ಈಗ ಮಕ್ಕಳಿಗೆ ಡಿಸ್ಕವರಿ ಚಾನೆಲ್‌ನಲ್ಲಿಯೇ ಹುಲಿಗಳನ್ನೂ ಕಾಡನ್ನೂ ತೋರಿಸಬೇಕಾದ ಪರಿಸ್ಥಿತಿ ಇದೆ. ದಯವಿಟ್ಟು ಮಕ್ಕಳನ್ನು ಕರೆದುಕೊಂಡು ಈ ಸಿನಿಮಾಕ್ಕೆ ಬನ್ನಿ. ನೇರವಾಗಿ ಕಾಡಿನಲ್ಲಿಯೇ ಇರುವ ಅನುಭವನ್ನು ಈ ಸಿನಿಮಾ ಕೊಡುತ್ತದೆ. ಅದರಿಂದ ತುಂಬ ಉಪಯೋಗವಿದೆ. ಮಕ್ಕಳ ಮನಸ್ಸಿಗೂ ಒಳ್ಳೆಯದಾಗುತ್ತದೆ.

*
ಎಷ್ಟೇ ಹಣ, ಆಸ್ತಿ ಎಲ್ಲ ಇದ್ದರೂ ಮನುಷ್ಯನಿಗೆ ಮೂಲಭೂತವಾಗಿ ಬೇಕಾಗುವುದು ಉಸಿರಾಟಕ್ಕೆ ಆಮ್ಲಜನಕ. ಅದು ಶುದ್ಧವಾಗಿರಬೇಕಾದರೆ ಕಾಡು ಸಮೃದ್ಧವಾಗಿರಬೇಕು. ಅಂಥ ಕಾಡಿನ ರಕ್ಷಣೆಯ ಸಂದೇಶವನ್ನು ಮಾಸ್ತಿ ಗುಡಿಯ ಮೂಲಕ ಹೇಳುತ್ತಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.