ADVERTISEMENT

ಎಲ್ಲವೂ ತಾವಾಗಿಯೇ ಆಗಿಹೋದವು...

ವಿಜಯ ಜೋಷಿ
Published 10 ನವೆಂಬರ್ 2017, 14:50 IST
Last Updated 10 ನವೆಂಬರ್ 2017, 14:50 IST
ಶಾಲಿನಿ
ಶಾಲಿನಿ   

ಶಾಲಿನಿ ಅವರು ನಾಯಕಿಯಾಗಿ ಅಭಿನಯಿಸಿರುವ ‘ರಾಜರು’ ಸಿನಿಮಾ ಇಂದು ತೆರೆಗೆ ಬರುತ್ತಿದೆ. ಇದು ಅವರ ಎರಡನೆಯ ಕನ್ನಡ ಸಿನಿಮಾ. ತಾವು ಸಿನಿಮಾ ಕ್ಷೇತ್ರಕ್ಕೆ ಬಂದ ಬಗ್ಗೆ, ಪಾತ್ರಗಳ ಬಗ್ಗೆ ಶಾಲಿನಿ ‘ಚಂದನವನ’ದ ಜೊತೆ ಮಾತನಾಡಿದ್ದಾರೆ. ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ

* ‘ರಾಜರು’ ಸಿನಿಮಾದಲ್ಲಿ ನಿಮ್ಮ ಪಾತ್ರ ಏನು?

ನನ್ನದು ದೀಪಾ ಎನ್ನುವ ಪಾತ್ರ. ದೀಪಾ ಈಗಿನ ತಲೆಮಾರಿನ ಹುಡುಗಿ, ಜೀವನವನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಿರುವುದಿಲ್ಲ ಆಕೆ. ಗಮ್ಮತ್ತು ಮಾಡುವತ್ತಲೇ ಹೆಚ್ಚಿನ ಗಮನ ನೀಡಿರುತ್ತಾಳೆ. ಆದರೆ ಸಿನಿಮಾದ ಕೊನೆಯಲ್ಲಿ ಆ ಪಾತ್ರ ಒಂದು ಸಂದೇಶ ನೀಡುತ್ತದೆ. ಈಗಿನ ತಲೆಮಾರಿನವರು ಜೀವನ, ಪ್ರೀತಿ ಸೇರಿದಂತೆ ಎಲ್ಲವನ್ನೂ ಹಗುರವಾಗಿ ಸ್ವೀಕರಿಸಿಬಿಡುತ್ತಾರೆ ಎಂಬುದಕ್ಕೆ ಸಂಬಂಧಿಸಿದ ಸಂದೇಶ ಅದು.

ADVERTISEMENT

* ದೀಪಾ ಪಾತ್ರ ನಿಮಗೆ ಇಷ್ಟವಾಯಿತಾ? ಕಾರಣ ಏನು?

ನಾನು ಎರಡು ಸಿನಿಮಾಗಳನ್ನು ಪೂರ್ಣಗೊಳಿಸಿದ ನಂತರ ಸಿಕ್ಕ ಅವಕಾಶ ‘ರಾಜರು’. ನನ್ನ ಮೊದಲ ಸಿನಿಮಾ ‘ಪ್ಲಸ್’. ಯೋಗರಾಜ ಭಟ್ ಅವರ ಜೊತೆ ಕೆಲಸ ಮಾಡುವ ಅವಕಾಶ ಅಲ್ಲಿ ಸಿಕ್ಕಿತು. ತಮಿಳಿನಲ್ಲಿ ಕೂಡ ಒಂದು ಸಿನಿಮಾ ಮಾಡಿದ್ದೆ. ಆಗ ನನಗೆ ಗಿರೀಶ್ (‘ರಾಜರು’ ನಿರ್ದೇಶಕ) ಅವರಿಂದ ಕರೆ ಬಂತು. ಈ ಸಿನಿಮಾದ ಕಥೆಯನ್ನು ಕೇಳಿದೆ. ನಿರ್ದೇಶಕರಿಗೆ ಈ ಕಥೆಯ ಬಗ್ಗೆ ಅಗಾಧ ವಿಶ್ವಾಸ ಇತ್ತು. ತಾವು ಸೃಷ್ಟಿಸಿದ ಪಾತ್ರವನ್ನು ನಾನು ನಿಭಾಯಿಸಬಲ್ಲೆ ಎಂಬ ಭರವಸೆ ಅವರಲ್ಲಿ ಇತ್ತು. ನನಗೆ ಕಥೆ ಇಷ್ಟವಾಯಿತು. ಪಾತ್ರವನ್ನು ಒಪ್ಪಿಕೊಂಡೆ.

* ಯಾವ ಬಗೆಯ ಪಾತ್ರಗಳು ನಿಮಗೆ ಇಷ್ಟ?

ಸದ್ಯಕ್ಕೆ ನಾನು ‘ಇದು ಇಷ್ಟ, ಅದು ಇಷ್ಟವಿಲ್ಲ’ ಎಂಬಂತಹ ವರ್ಗೀಕರಣ ಮಾಡಿಕೊಂಡಿಲ್ಲ. ನನ್ನಲ್ಲಿ ಆಸಕ್ತಿ ಮೂಡಿಸುವ ‍ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ. ಈ ಹಂತದಲ್ಲಿ ನಾನು, ನನಗೆ ಇದೇ ಬೇಕು ಎಂಬ ನೆಲೆಯಲ್ಲಿ ಆಲೋಚನೆಯನ್ನೇ  ಮಾಡುತ್ತಿಲ್ಲ. ನಾನು ಈಗ ಪ್ರತಿ ಪಾತ್ರವನ್ನೂ ವಿಭಿನ್ನವಾಗಿ ಕಾಣುತ್ತಿದ್ದೇನೆ. ದೀಪಾ ಪಾತ್ರ ಒಂದು ಬಗೆಯದ್ದು, ಹಾಗೆಯೇ ತಮಿಳಿನಲ್ಲಿ ಸಿಕ್ಕ ಇನ್ನೊಂದು ಪಾತ್ರ ಮತ್ತೊಂದು ಬಗೆಯದ್ದು. ‘ಪ್ಲಸ್’ ಸಿನಿಮಾದಲ್ಲಿನ ಪಾತ್ರ ಕೂಡ ವಿಭಿನ್ನವಾದದ್ದು ನನಗೆ.

* ಸಿನಿಮಾಕ್ಕೆ ಬಂದಿದ್ದು ಏಕೆ?

ಸಿನಿಮಾ ಬರಲು ನಾನು ಪೂರ್ಣ ಪ್ರಮಾಣದ ಸಿದ್ಧತೆ ನಡೆಸಿರಲಿಲ್ಲ. ನಾನು ಫ್ಯಾಷನ್ ಟೆಕ್ನಾಲಜಿ ಪದವಿ ಪೂರ್ಣಗೊಳಿಸಿದ್ದೆ. ಕೆಲವು ಫೋಟೊಶೂಟ್‌ಗಳಿಗೆ ಪೋಸ್‌ ಕೊಟ್ಟಿದ್ದೆ. ಆ ಚಿತ್ರಗಳು ಚೆನ್ನೈ ತಲುಪಿದವು. ನಂತರ ತಮಿಳು ನಿರ್ದೇಶಕ ಅಭಿನಂದನ್ ಅವರಿಂದ ಕರೆ ಬಂತು. ಅದಾದ ನಂತರ ಕನ್ನಡ ಸಿನಿಮಾ ರಂಗ ನನ್ನನ್ನು ಕರೆಯಿತು. ಹಾಗೆ ನೋಡಿದರೆ ನಾನು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಸಿದ್ಧತೆಯನ್ನೇ ನಡೆಸಿರಲಿಲ್ಲ. ಇವೆಲ್ಲ ತಾವಾಗಿಯೇ ಆಗಿಹೋದವು! ಆದರೆ, ಅವಕಾಶಗಳು ಸಿಕ್ಕ ನಂತರ ನಾನು ಕಷ್ಟಪಟ್ಟು ಕೆಲಸ ಮಾಡಲು ಆರಂಭಿಸಿದೆ.

* ಸಿನಿಮಾದಲ್ಲಿ ರೋಲ್‌ ಮಾಡೆಲ್‌ ಯಾರು?

‘ಪ್ಲಸ್‌’ನಲ್ಲಿ ಅನಂತ್ ನಾಗ್‌ ಅವರನ್ನು ಕಂಡೆ. ಡಾ. ರಾಜ್‌ಕುಮಾರ್‌, ಅನಂತ್ ಸೇರಿದಂತೆ ಹಲವರು ಇದ್ದಾರೆ. ಆದರೆ, ಯಾವುದೇ ನಟನನ್ನು, ನಟಿಯನ್ನು ನಾನು ಮಾದರಿಯಾಗಿಯೇ ಕಾಣುತ್ತೇನೆ. ಅವರಿಂದ ಏನಾದರೂ ಕಲಿಯಲು ಯತ್ನಿಸುತ್ತೇನೆ. ರೋಲ್‌ ಮಾಡೆಲ್‌ ಎಂಬುದು ಕೊನೆಯಿಲ್ಲದ ಪಟ್ಟಿ.

* ಯಾವ ಬಗೆಯ ಸಿನಿಮಾ ಇಷ್ಟ?

ನಾನು ಎಲ್ಲ ಬಗೆಯ ಸಿನಿಮಾಗಳನ್ನೂ ಇಷ್ಟಪಡುತ್ತೇನೆ. ಪ್ರತಿ ಸಿನಿಮಾ ಕೂಡ ವಿಭಿನ್ನ ಅನುಭವಗಳನ್ನು ನೀಡುತ್ತದೆ. ಪ್ರತಿ ಪಾತ್ರವೂ ಹೊಸತನ್ನು ಕಲಿಸಿಕೊಡುತ್ತದೆ. ಕಲಾವಿದರು ಎಲ್ಲ ವಿಷಯಗಳ ಬಗ್ಗೆಯೂ ಮುಕ್ತ ಮನಸ್ಸು ಹೊಂದಿರಬೇಕು. ನಾನು ಮುಂದೇನಾಗಬೇಕು ಎಂಬುದರ ಬಗ್ಗೆ ಭವಿಷ್ಯ ಹೇಳಲಾರೆ. ಆದರೆ ಕಷ್ಟಪಟ್ಟು ಕೆಲಸ ಮಾಡುವೆ ಎಂದಷ್ಟೇ ಹೇಳಬಲ್ಲೆ.

* ಕನ್ನಡ ಸಿನಿಮಾ ಉದ್ಯಮದಲ್ಲಿನ ಅನುಭವಗಳು ಏನು?

ನನಗೆ ಇದು ಕಲಿಕೆಯ ಹಂತ. ಕನ್ನಡ ಸಿನಿಮಾ ಉದ್ಯಮ ನನಗೆ ಒಳ್ಳೆಯದನ್ನೇ ಕಲಿಸಿದೆ.

* ಹೊಸಬರಿಗೆ ವೃತ್ತಿಯಲ್ಲಿ ಮೇಲೆ ಬರಲು ಯಾವ ಭಾಷೆಯ ಸಿನಿಮಾ ಉತ್ತಮ?

ನನಗೆ ಯಾವ ಭಾಷೆಯಲ್ಲೂ ವ್ಯತ್ಯಾಸ ಕಾಣಲಿಲ್ಲ. ಎಲ್ಲ ಕಡೆಯೂ ಒಂದೇ. ಭಾಷೆ ಮಾತ್ರ ಬೇರೆ. ಕಲಾ ಪ್ರಕಾರಗಳಿಗೆ ಗೋಡೆಗಳು ಇರುವುದಿಲ್ಲ. ಕನ್ನಡದಲ್ಲಿ ವೀಕ್ಷಕರು ನನ್ನನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬುದು ಇನ್ನೂ ನನಗೆ ಗೊತ್ತಿಲ್ಲ. ಈ ಸಿನಿಮಾ ಬಂದ ನಂತರ ಗೊತ್ತಾಗಬಹುದು!

* ವಿಭಿನ್ನ ಬಗೆಯ ಪಾತ್ರಗಳನ್ನು ಮಾಡುವುದು ಇಷ್ಟವೇ?

ಹಾಗೆ ವಿಭಿನ್ನ ಬಗೆಯ ಪಾತ್ರಗಳು ಸಿಗುವುದು ಕಲಾವಿದೆಯ ಅದೃಷ್ಟ ಎನ್ನುವೆ. ಯಾವುದೇ ಕಲಾವಿದೆ ಖುಷಿಪಡುತ್ತಾಳೆ ಅಂತಹ ಪಾತ್ರಗಳು ಸಿಕ್ಕಾಗ. ಎಲ್ಲ ಬಗೆಯ ಪಾತ್ರಗಳಿಗೆ ನಾನು ಮುಕ್ತ ಮನಸ್ಸು ಹೊಂದಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.