ADVERTISEMENT

ಎಳೆಯರು ಮತ್ತೆ ಬರುವರು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಎಳೆಯರು ಮತ್ತೆ ಬರುವರು
ಎಳೆಯರು ಮತ್ತೆ ಬರುವರು   

ಡ್ರಾಮಾ ಜ್ಯೂನಿಯರ್ಸ್ ಮೊದಲ ಆವೃತ್ತಿಯಲ್ಲಿ ಪಾಲ್ಗೊಂಡಿದ್ದ ಮಕ್ಕಳೆಲ್ಲ ಸೇರಿಸಿಕೊಂಡು ವಿಕ್ರಮ್ ಸೂರಿ ‘ಎಳೆಯರು ನಾವು ಗೆಳೆಯರು’ ಸಿನಿಮಾ ಮಾಡಿದ್ದು, ಅದು ಕಳೆದ ಜೂನ್ ತಿಂಗಳಲ್ಲಿ ಬಿಡುಗಡೆಯಾಗಿ ಹೋದ ಪುಟ್ಟ ಬಂದ ಪುಟ್ಟ ಎಂಬಂತೆ ಎರಡನೇ ವಾರವೇ ಮರೆಯಾಗಿದ್ದು ಎಲ್ಲ ಈಗ ಹಳೆ ಸುದ್ದಿ. ಆದರೆ ಹೊಸ ಸುದ್ದಿ ಏನೆಂದರೆ ಅದೇ ಸಿನಿಮಾ ಮತ್ತೆ ಈಗ ತೆರೆಯ ಮೇಲೆ ಕಲರವ ಮೂಡಿಸಲು ಬರುತ್ತಿದೆ.

ಹೌದು. ‘ಎಳೆಯರು ನಾವು ಗೆಳೆಯರು’ ಇದೇ ತಿಂಗಳ 29ರಂದು ಮರುಬಿಡುಗಡೆ ಆಗುತ್ತಿದೆ. ಈ ವಿಷಯವನ್ನು ಹಂಚಿಕೊಳ್ಳಲಿಕ್ಕಾಗಿಯೇ ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು.

'ಏಪ್ರೀಲ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡಬೇಕು ಎಂದು ಅಂದುಕೊಂಡಿದ್ದೆವು. ಆದರೆ ಯಾವ್ಯಾವುದೋ ಕಾರಣಗಳಿಂದ ಸಾಧ್ಯವಾಗಲೇ ಇಲ್ಲ. ಕೊನೆಗೆ ಜೂನ್‌ನಲ್ಲಿ ಬಿಡುಗಡೆ ಮಾಡಿದೆವು. ಆದರೆ ಅದು ಶಾಲೆ ಪ್ರಾರಂಭವಾಗುವ ಸಮಯ. ಮಕ್ಕಳು ಚಿತ್ರಮಂದಿರಕ್ಕೆ ಬರಲೇ ಇಲ್ಲ. ಬಿಡುಗಡೆಯಾದ ಎರಡನೇ ದಿನಕ್ಕೇ ನಮ್ಮ ತಪ್ಪಿನ ಅರಿವಾಯ್ತು. ಆದ್ದರಿಂದ ರೀ ರಿಲೀಸ್ ಮಾಡಲು ನಿರ್ಧರಿಸಿ, ಎರಡನೇ ವಾರಕ್ಕೆ ಎಲ್ಲ ಚಿತ್ರಮಂದಿರಗಳಿಂದ ಚಿತ್ರವನ್ನು ತೆಗೆದುಕೊಂಡುಬಿಟ್ಟೆವು. ಈಗ ಸೆ. 29 ರಿಂದ ವಾರದಲ್ಲಿ ಐದು ದಿನ ರಜ ಇದೆ. ಆದ್ದರಿಂದ ರೀ ರಿಲಿಸ್‌ಗೆ ಇದೇ ಸರಿಯಾದ ಸಮಯ ಎಂದುಕೊಂಡು ಮತ್ತೆ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಸುದೀರ್ಘವಾಗಿಯೇ ವಿವರಣೆ ಕೊಟ್ಟರು ನಿರ್ಮಾಪಕ ನಾಗರಾಜ್ ಗೋಪಾಲ್.

ADVERTISEMENT

ಈಗಾಗಲೇ ಚಿತ್ರ ನೋಡಿದ ಜನರು ಮೊದಲರ್ಧ ಸ್ವಲ್ಪ ಜಾಳಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಚಿತ್ರದ ಮೊದಲರ್ಧದ ಹನ್ನೊಂದು ನಿಮಿಷ ಕಡಿತಗೊಳಿಸಿ ಇನ್ನಷ್ಟು ಚುರುಕುಗೊಳಿಸಿದ್ದಾರೆ.

ಮರುಬಿಡುಗಡೆ ಆದರೂ ಹಲವು ಚಿತ್ರಮಂದಿರಗಳು ಮುಂದೆ ಬಂದಿರುವುದು ನಿರ್ಮಾಪಕರ ವಿಶ್ವಾಸ ಹೆಚ್ಚಿಸಿದೆ. ‘ಆದ್ರೆ ರೀರಿಲೀಸ್ ಎಂಬ ಕಾರಣಕ್ಕೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಕೊಡ್ತಿಲ್ಲ’ ಎಂದೂ ಅವರು ಬೇಸರದಿಂದ ಹೇಳಿಕೊಂಡರು.

ಚಿತ್ರ ಬಿಡುಗಡೆಯಾದ ಎರಡನೇ ವಾರದಿಂದ ಮಕ್ಕಳಿಗೆ ವಿಶೇಷ ರಿಯಾಯ್ತಿ ಕೊಡಲೂ ನಿರ್ಮಾಪಕರು ನಿರ್ಧರಿಸಿದ್ದಾರೆ. ಈಗಾಗಲೇ 30- 35 ಚಿತ್ರಮಂದಿರಗಳು ಖಚಿತವಾಗಿದೆ. ಮುಂದೆ ಅವುಗಳ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.

‘ನಡೆಯುವವರು ಎಡವುವುದು ಸಹಜ. ಈ ಸಿನಿಮಾ ಬಗ್ಗೆ ಎಲ್ಲ ಕಡೆಗಳಿಂದಲೂ ಒಳ್ಳೆ ಮಾತುಗಳು ಕೇಳಿಬಂದವು. ಆದರೆ ಆರ್ಥಿಕವಾಗಿ ತಾಳಿಕೆಯಾಗಲಿಲ್ಲ. ಈಗ ಇನ್ನೊಮ್ಮೆ ಬಿಡುಗಡೆಯಾಗುತ್ತಿದೆ. ಡ್ರಾಮಾ ಜ್ಯೂನಿಯರ್ಸ್ ಅನ್ನು ಎಲ್ಲರೂ ಮನೆಯಲ್ಲಿ ಕೂತು ನೋಡಿ ಖುಷಿಪಟ್ಟಿದ್ದೀರಿ. ಈಗ ಅದೇ ಮಕ್ಕಳು ಸಿನಿಮಾ ಮಾಡಿದ್ದಾರೆ. ಜನರು ಚಿತ್ರಮಂದಿರಕ್ಕೆ ಬಂದು ನೋಡಬೇಕು’ ಎಂದು ನಿರ್ದೇಶಕ ವಿಕ್ರಮ್‌ ಸೂರಿ ಕೇಳಿಕೊಂಡರು.

‘ಒಳ್ಳೆಯ ಸಿನಿಮಾವನ್ನು ಹೇಗಾದ್ರೂ ಮಾಡಿ ಜನರಿಗೆ ತಲುಪಿಸಬೇಕು ಎಂಬ ನಿರ್ಮಾಪಕರ ಹಟ ಮೆಚ್ಚತಕ್ಕದ್ದು’ ಎಂದು ಪ್ರಶಂಸಿಸಿದರು ಸಂಗೀತ ನಿರ್ದೇಶಕ ಅನೂಪ್ ಸೀಳಿನ್. ಅವರು ಈ ಚಿತ್ರಕ್ಕಾಗಿ ಸಂಯೋಜಿಸಿದ ಒಂದು  ಪ್ರಾರ್ಥನಾ ಗೀತೆಯನ್ನು ಅನೇಕ ಶಾಲೆಗಳಲ್ಲಿ ಬಳಸಿಕೊಳ್ಳಲು ಕೇಳುತ್ತಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.