ADVERTISEMENT

ಒಂದು ಕಾಡಿನ ಮಧ್ಯದೊಳಗೆ ‘ಪುಟಾಣಿ ಸಫಾರಿ’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 19:30 IST
Last Updated 20 ಏಪ್ರಿಲ್ 2017, 19:30 IST
ಒಂದು ಕಾಡಿನ ಮಧ್ಯದೊಳಗೆ  ‘ಪುಟಾಣಿ ಸಫಾರಿ’
ಒಂದು ಕಾಡಿನ ಮಧ್ಯದೊಳಗೆ ‘ಪುಟಾಣಿ ಸಫಾರಿ’   

ಕನ್ನಡದಲ್ಲಿ ಮಕ್ಕಳ ಚಿತ್ರಗಳು ಹೆಚ್ಚಾಗಿ ತಯಾರಾಗುತ್ತಿಲ್ಲ. ಹಾಗೊಮ್ಮೆ ತಯಾರಾಗುತ್ತಿರುವ ಸಿನಿಮಾಗಳಲ್ಲಿಯೂ ಪ್ರಶಸ್ತಿಗಳ ಆಸೆಯಿಂದ ಮಾಡಿದವೇ ಹೆಚ್ಚಿನ ಪಾಲು ಇರುತ್ತವೆ. ಈ ಕೊರತೆಯನ್ನು ನೀಗುವ ಪ್ರಯತ್ನವಾಗಿಯೇ ‘ಪುಟಾಣಿ ಸಫಾರಿ’ ಚಿತ್ರ ರೂಪುಗೊಂಡಿದೆ.

ಈ ಚಿತ್ರದ ನಿರ್ದೇಶಕ ರವೀಂದ್ರ ವಂಶಿ. ರಿಯಲ್‌ಎಸ್ಟೇಟ್‌ ಉದ್ಯಮಿ ಬಿ.ಎಸ್‌. ಚಂದ್ರಶೇಖರ್‌ ಬಂಡವಾಳ ಹೂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

‘ಕನ್ನಡದಲ್ಲಿ ಮಕ್ಕಳ ಸಿನಿಮಾ ಪ್ರಕಾರ ಬೆಳೆಯುತ್ತಿಲ್ಲ. ಇಂದು ಮಕ್ಕಳಿಗೆ ತೋರಿಸುವಂಥ ಸಿನಿಮಾಗಳೂ ನಮ್ಮ ಮುಂದೆ ವಿರಳವಾಗಿವೆ. ಹಾಗೆಯೇ ತಯಾರಾಗುವ ಮಕ್ಕಳ ಸಿನಿಮಾಗಳೂ ದೊಡ್ಡವರ ದೃಷ್ಟಿಕೋನದಿಂದಲೇ ಆರಂಭವಾಗುತ್ತದೆವೇ ವಿನಾ, ಮಕ್ಕಳ ಪ್ರಪಂಚವನ್ನು ಕಟ್ಟಿಕೊಡುವುದಿಲ್ಲ. ಈ ದೃಷ್ಟಿಯಿಂದ ನಮ್ಮ ‘ಪುಟಾಣಿ ಸಫಾರಿ’ ಸಿನಿಮಾ ಪೂರ್ತಿಯಾಗಿ ಮಕ್ಕಳ ಚಿತ್ರ’ ಎಂದರು ನಿರ್ದೇಶಕ ರವೀಂದ್ರ.

ADVERTISEMENT

ನಿರ್ಮಾಪಕ ಚಂದ್ರಶೇಖರ್‌ ಮಾತನಾಡಿ, ‘ಇದು ಕನ್ನಡದ ಜಂಗಲ್‌ ಬುಕ್‌ ರೀತಿಯ ಸಿನಿಮಾ. ಪೂರ್ತಿ ಶಿರಸಿ, ಸಿದ್ದಾಪುರದ ದಟ್ಟ ಕಾಡುಗಳಲ್ಲಿ ಚಿತ್ರಿಸಿದ್ದೇವೆ. ಇಬ್ಬರು ಮಕ್ಕಳು ಕ್ರೂರಪ್ರಾಣಿಗಳು ಇರುವ ಕಾಡುಗಳಲ್ಲಿ ದಾರಿ ತಪ್ಪಿಸಿಕೊಂಡು ನಂತರ ಹೇಗೆ ಪಾರಾಗಿ ಬರುತ್ತಾರೆ ಎನ್ನುವುದೇ ಚಿತ್ರದ ಕಥೆ’ ಎಂದು ವಿವರಿಸಿದರು. ಅವರು ಈ ಚಿತ್ರಕ್ಕಾಗಿ ಎಪ್ಪತ್ತು ಲಕ್ಷ ರೂಪಾಯಿಗಳನ್ನು ವ್ಯಯಿಸಿದ್ದಾರಂತೆ.

ಈ ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಮನೀಶ್‌ ನಟಿಸಿದ್ದಾರೆ. ‘ನಾನು ಈ ಸಿನಿಮಾದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಪಾತ್ರ ಮಾಡಿದ್ದೇನೆ. ಮಗನನ್ನು ಯಾಂತ್ರಿಕವಾಗಿ ಬೆಳೆಸುವ ಶಿಸ್ತಿನ ತಂದೆಯ ಪಾತ್ರ’ ಎಂದು ಪಾತ್ರದ ಬಗ್ಗೆ ಹೇಳಿಕೊಂಡ ಅವರು, ‘ಈ ಚಿತ್ರವನ್ನು ತುಂಬ ಕಷ್ಟಪಟ್ಟು ಮಾಡಿದ್ದೇವೆ. ಒಳ್ಳೆಯ ಚಿತ್ರವನ್ನು ಜನರು ನೋಡಿ ಗೆಲ್ಲಿಸಬೇಕು’ ಎಂದು ವಿನಂತಿಸಿಕೊಂಡರು.

ಧ್ವನಿಮುದ್ರಿಕೆ ಬಿಡುಗಡೆ ಮಾಡಿದ ನಿರ್ಮಾಪಕ ಮುನಿರತ್ನ, ‘ನಿರ್ಮಾಪಕರು ಅನ್ನದಾತರು. ಕಾಡಿನಲ್ಲಿರುವ ಪ್ರಾಣಿಗಳನ್ನು ಬೇಟೆಯಾಡಬಹುದು. ಆದರೆ ಸಿನಿಮಾಕ್ಕೆ ನಿರ್ಮಾಪಕರನ್ನು ಬೇಟೆಯಾಡುವುದು ಕಷ್ಟ. ನಿರ್ಮಾಪಕರನ್ನು ಬೇಟೆಯಾಡಲು ಕಲಿತರೆ ಸಿನಿಮಾ ಯಶಸ್ವಿ ಆದಂತೆ’ ಎಂದರು.

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಿಗೆ ಎಸಿ ಚಾಲನೆ ಮಾಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕನ್ನಡ ಚಿತ್ರಗಳನ್ನು ಕಡೆಗಣಿಸಿದರೆ ಮಲ್ಟಿಪ್ಲೆಕ್ಸ್‌ಗಳಿಗೆ ಕರ್ನಾಟಕದಲ್ಲಿ ಉಳಿಗಾಲವಿಲ್ಲ. ಮೊದಲು ಕನ್ನಡ ಚಿತ್ರಗಳಿಗೆ ಆದ್ಯತೆ ನೀಡಲಿ. ನಂತರ ಬೇರೆ ಭಾಷಾ ಚಿತ್ರಗಳು’ ಎಂದು ಎಚ್ಚರಿಕೆಯನ್ನೂ ನೀಡಿದರು.

‘ಪುಟಾಣಿ ಸಫಾರಿ’ ಚಿತ್ರದಲ್ಲಿ ರಾಜೀವ್‌ ಪ್ರಥಮ್‌ ಮತ್ತು ರಾಕಿನ್‌ ಎಂಬ ಪುಟಾಣಿಗಳು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಯೋಗರಾಜ ಭಟ್ಟರು ಬರೆದುಕೊಟ್ಟಿರುವ ಹಾಡಿಗೆ ವೀರ್‌ ಸಮರ್ಥ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

ಜೀವನ್‌ ಗೌಡ ಛಾಯಾಗ್ರಹಣ, ರವಿಚಂದ್ರನ್‌ ಅವರ ಸಂಕಲನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.