ADVERTISEMENT

ಒಳ್ಳೇವ್ರ ಸಿನಿಮಾ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ಸೌಜನ್ಯಾ ಮತ್ತು ವಿಜಯ್‌ ಮಹೇಶ್‌
ಸೌಜನ್ಯಾ ಮತ್ತು ವಿಜಯ್‌ ಮಹೇಶ್‌   

‘ಸಮಾಜದಲ್ಲಿ ಎಲ್ಲರೂ ನಾನು ಒಳ್ಳೆಯವರು ಎನ್ನುತ್ತಾರೆ. ಆದ್ರೆ ಕೆಟ್ಟ ಕೆಲಸ ಮಾಡುತ್ತಲೇ ಇರುತ್ತಾರೆ. ನಾನು ಇಷ್ಟಪಟ್ಟು ಈ ಸಿನಿಮಾ ಮಾಡಿದ್ದೇನೆ.

ಜನರಿಗೆ ಸತ್ಯ ತಿಳಿಸುವುದೇ ಇದರ ಹಿಂದಿನ ಉದ್ದೇಶ’ ಎಂದು ಚಿತ್ರದ ಪೀಠಿಕೆ ಹಾಕಿದರು ‘ನಾನೊಬ್ನೆ ಒಳ್ಳೆವ್ನು’ ಸಿನಿಮಾದ ನಿರ್ದೇಶಕ ವಿಜಯ್‌ ಮಹೇಶ್‌.

ಈ ಚಿತ್ರದ ಕಥಾ ನಾಯಕ ಕೂಡ ಅವರೇ. ‘ಕೇಳಿದ್ರೆ ಹೊಡಿತೀನಿ’ ಎಂಬ ಅಡಿಬರಹ ಹೊಂದಿರುವ ಸಿನಿಮಾ ಪೂರ್ಣಗೊಳಿಸಲು ಅವರು ಮೂರು ವರ್ಷ ಸೈಕಲ್‌ ತುಳಿದಿದ್ದಾರೆ.

ADVERTISEMENT

‘ಮೂಡಿಗೆರೆಯಲ್ಲಿ ಚಿತ್ರದ ಕ್ಲೈಮ್ಯಾಕ್ಸ್‌ಗೆ ಸ್ಥಳ ನಿಗದಿ ಮಾಡಿದ್ದೆವು. ಮಳೆ ಸುರಿಯಲಿಲ್ಲ. ಹಾಗಾಗಿ, ಒಂದು ವರ್ಷ ಮಳೆಗಾಲಕ್ಕಾಗಿ ಕಾಯ್ದೆವು. ಸಾಕಷ್ಟು ಅಡೆತಡೆಯ ನಡುವೆ ಚಿತ್ರೀಕರಣ ಪೂರ್ಣಗೊಳಿಸಿದ್ದೇವೆ’ ಎಂದು ಸಂಕಷ್ಟ ತೋಡಿಕೊಂಡರು.

‘ನನ್ನದು ಚಿತ್ರದಲ್ಲಿ ಕಮಿಷನರ್‌ ಮಗನ ಪಾತ್ರ. ನಾಲ್ವರು ನಾಯಕಿಯರು ಚಿತ್ರದಲ್ಲಿದ್ದಾರೆ. ಹಾಸ್ಯಮಿಶ್ರಿತ ಪಕ್ಕಾ ಕಮರ್ಷಿಯಲ್‌ ಚಿತ್ರ ಇದಾಗಿದೆ’ ಎಂದರು.
ಕನ್ನಡದ ನಟಿಯರಲ್ಲಿ ಉತ್ತಮ ಪ್ರತಿಭೆ ಇದೆ.


ರವಿತೇಜ

ಆದರೆ, ಅವರಿಗೆ ಉತ್ತಮ ಅವಕಾಶ ಸಿಗುತ್ತಿಲ್ಲ ಎಂಬ ಬೇಸರ ನಟಿ ಸೌಜನ್ಯಾ ಅವರ ಮಾತಿನಲ್ಲಿ ವ್ಯಕ್ತವಾಯಿತು. ನಾಲ್ಕಾರು ವರ್ಷದಿಂದ ತಮ್ಮ ನಟನೆಯ ಸಾಮರ್ಥ್ಯ ಸಾಬೀತುಪಡಿಸಲು ಹಂಬಲಿಸುತ್ತಿರುವ ಅವರಿಗೆ ಈ ಸಿನಿಮಾದಿಂದ ಒಳ್ಳೆಯ ಬ್ರೇಕ್‌ ಸಿಗಲಿದೆ ಎಂದು ವಿಶ್ವಾಸವಿದೆ.

‘ಮೂಡಿಗೆರೆಯ ಮಳೆಗೆ ನಾನು ಅನಾರೋಗ್ಯಕ್ಕೆ ತುತ್ತಾದೆ. ಸಾಕಷ್ಟು ಶ್ರಮವಹಿಸಿ ಈ ಚಿತ್ರ ಮಾಡಿದ್ದೇನೆ’ ಎಂದರು ಸೌಜನ್ಯಾ.

ನಟ ರವಿತೇಜ, ‘ಪಾರ್ವತಿ ಪರಮೇಶ್ವರ ಧಾರಾವಾಹಿಯಲ್ಲಿ ನಟಿಸಲು ಮೂರು ವರ್ಷದ ಒಪ್ಪಂದ ಮಾಡಿಕೊಂಡಿದ್ದೆ. ಇದರಿಂದ ಹಲವು ಅವಕಾಶಗಳು ಕೈತಪ್ಪಿದ್ದೂ ಉಂಟು. ಈ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಎಲ್ಲರ ವ್ಯಕ್ತಿತ್ವಕ್ಕೆ ಈ ಚಿತ್ರ ಕನ್ನಡಿ ಹಿಡಿಯಲಿದೆ. ನಿರ್ದೇಶಕರು ನನ್ನ ಪ್ರತಿಭೆ ಗುರುತಿಸಿದ್ದಾರೆ’ ಎಂದು ಕೃತಜ್ಞತೆ ಸಲ್ಲಿಸಿದರು.

ಜೆ.ಎಂ. ಬಸವರಾಜು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಿಲಿಯಂ ಡೇವಿಡ್‌ ಛಾಯಾಗ್ರಹಣ ನೀಡಿದ್ದಾರೆ. ಸುಧೀರ್‌ ಶಾಸ್ತ್ರಿ ಅವರ ಸಂಗೀತವಿರುವ ಈ ಸಿನಿಮಾ ಜೂನ್‌ 30ರಂದು ತೆರೆಗೆ ಬರಲು ಸಜ್ಜಾಗಿದೆ.


ಸುಧೀರ್‌ ಶಾಸ್ತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.