ADVERTISEMENT

ಕತ್ರಿನಾಗೆ ಮೂವತ್ತು; ಮಾಹಿತಿಯ ಗಮ್ಮತ್ತು

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

‘ಬೂಮ್’ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಕತ್ರಿನಾ ಕೈಫ್‌ಗೆ ಈಗ 30 ವಸಂತಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಕತ್ರಿನಾ ಕೈಫ್‌ ಅವರ ಜೀವನಕ್ಕೆ ಸಂಬಂಧಿಸಿದ ಸಂಗತಿಗಳ ಮೇಲೆ ಒಂದು ಸಿಂಹಾವಲೋಕನ.

ಕತ್ರಿನಾ ಕೈಫ್‌ ಅಭಿನಯಿಸಿದ ಮೊದಲ ಸಿನಿಮಾ ‘ಬೂಮ್‌’ ಅಲ್ಲ. ಅದಕ್ಕೂ ಮುಂಚೆಯೇ ಆಕೆ ನಿರ್ದೇಶಕ ಮಹೇಶ್‌ ಭಟ್‌ರ ‘ಸಾಯಾ’ ಎನ್ನುವ ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಆದರೆ, ಹಿಂದಿ ಬರುವುದಿಲ್ಲ ಎಂಬ ಕಾರಣಕ್ಕೆ ಈ ಚಿತ್ರದಿಂದ ಕತ್ರಿನಾ ಅವರನ್ನು ಕೈಬಿಡಲಾಗಿತ್ತು.

ಆಮೇಲೆ ‘ಬೂಮ್‌’ ಸಿನಿಮಾಗೆ ಬಣ್ಣ ಹಚ್ಚಿದರು. 2004ರಲ್ಲಿ ತೆರೆಕಂಡ ಟಾಲಿವುಡ್‌ ಚಿತ್ರ ‘ಮಲ್ಲೀಶ್ವರಿ’ ಚಿತ್ರಕ್ಕೆ ₨75 ಲಕ್ಷ ಸಂಭಾವನೆ ಪಡೆದು, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಎನಿಸಿಕೊಂಡರು.

ಕತ್ರಿನಾ ತಂದೆ ಮಹಮದ್‌ ಕೈಫ್‌ ವ್ಯಾಪಾರಸ್ಥ. ಈಕೆಗೆ ಆರು ಮಂದಿ ಸಹೋದರಿಯರು ಮತ್ತು ಒಬ್ಬ ಸಹೋದರ ಇದ್ದಾನೆ. ಕತ್ರಿನಾ ಹುಟ್ಟಿದ್ದು ಹಾಂಕಾಂಗ್‌ನಲ್ಲಿ. 14 ತುಂಬುವವರೆಗೂ ಹವಾಯಿಯಲ್ಲಿ ವಾಸವಿದ್ದರು. ಆಮೇಲೆ ಇಂಗ್ಲೆಂಡ್‌ಗೆ ಸ್ಥಳಾಂತರಗೊಂಡರು. ಕತ್ರಿನಾ ಮಾಡೆಲಿಂಗ್‌ ಪ್ರಾರಂಭಿಸಿದ್ದು ಲಂಡನ್‌ನಲ್ಲಿ. ಲಂಡನ್‌ ಫ್ಯಾಷನ್‌ ವೀಕ್‌ನಲ್ಲಿ ಕ್ಯಾಟ್‌ವಾಕ್‌ ಮಾಡುವಾಗ ಚಿತ್ರ ನಿರ್ಮಾಪಕ ಕೈಜಾದ್‌ ಗಸ್ತದ್‌ ಕಣ್ಣಿಗೆ ಬಿದ್ದರು. ಕ್ಯಾಟ್‌ ನೋಡಿ ಇಂಪ್ರೆಸ್‌ ಆದ ಕೈಜಾದ್‌ ಅಲ್ಲೇ ‘ಬೂಮ್‌’ ಚಿತ್ರದಲ್ಲಿ ನಟಿಸುವ ಆಫರ್‌ ಇಟ್ಟರು.

ಕತ್ರಿನಾಳ ಸರ್‌ನೇಮ್‌ ಬದಲಾಯಿಸಿದ್ದು ‘ಬೂಮ್’ ಚಿತ್ರದ ನಿರ್ಮಾಪಕರಾದ ಆಯೇಷಾ ಶ್ರಾಫ್. ಉಚ್ಚಾರಣೆ ಸುಲಭವಾಗುತ್ತದೆ ಎಂಬ ಕಾರಣದಿಂದ ಕತ್ರಿನಾ ಟರ್‌ಕೋಟ್ ಎಂದಿದ್ದ ಹೆಸರನ್ನು ಅವರು ಕತ್ರಿನಾ ಕೈಫ್‌ ಎಂದು ಬದಲಿಸಿದರು.

ಕತ್ರಿನಾ ತಮ್ಮ ಚಿತ್ರಗಳು ಬಿಡುಗಡೆಯಾಗುವ ವೇಳೆ ಮುಂಬೈನಲ್ಲಿರುವ ಸಿದ್ಧಿ ವಿನಾಯಕ ದೇವಸ್ಥಾನ, ಮೌಂಟ್‌ ಮೇರಿ ಚರ್ಚ್‌ ಮತ್ತು ಅಜ್ಮೀರ್‌ನಲ್ಲಿರುವ ಷರೀಪ್‌ ದರ್ಗಾಕ್ಕೆ ಮೇಲಿಂದ ಮೇಲೆ ಹೋಗುತ್ತಾರೆ. ಹೆಣ್ಣು ಭ್ರೂಣ ಹತ್ಯೆ ವಿರುದ್ಧದ ಹೋರಾಟದಲ್ಲೂ ತೊಡಗಿಸಿಕೊಂಡಿದ್ದರು. ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಲು ಜತೆಗೆ ಡೇಟಿಂಗ್‌ ನಡೆಸುತ್ತಿದ್ದ ಕತ್ರಿನಾ ಅದನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದು 2011ರಲ್ಲಿ. ಇಂಗ್ಲೆಂಡ್‌ನಲ್ಲಿ ಕತ್ರಿನಾಗೆ ಆಸ್ತಿ ಇದೆ. ಆದರೆ, ಭಾರತದಲ್ಲಿ ಯಾವುದೇ ಆಸ್ತಿ ಇಲ್ಲ. ಸದ್ಯ ಅವರು ಮುಂಬೈ ಉಪನಗರದ ಬಾಂದ್ರಾದಲ್ಲಿ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ. ಹತ್ತು ವರ್ಷಗಳಿಂದ ಅವರು ಬ್ರಿಟಿಷ್‌ ಪ್ರಜೆಯಾಗಿ ಭಾರತದಲ್ಲಿ ವಾಸಿಸುತ್ತಿದ್ದಾರೆ.

2003ರಲ್ಲಿ ತೆರೆಕಂಡಿದ್ದ ಕತ್ರಿನಾ ಅವರ ‘ಬೂಮ್‌’ ಚಿತ್ರ ನೆಲ ಕಚ್ಚಿತ್ತು. ‘ನಾನು ಇಂಗ್ಲೆಂಡ್‌ನಲ್ಲಿ ವಾಸವಾಗಿದ್ದೆ. ಚುಂಬನ ಮತ್ತು ಬಿಕಿನಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ತಪ್ಪು ಅನಿಸಿರಲಿಲ್ಲ. ಆದರೆ, ಭಾರತದ ಸಂದರ್ಭಕ್ಕೆ ಅಂತಹ ದೃಶ್ಯಗಳು ಸರಿ ಹೊಂದುವುದಿಲ್ಲ. ಮೊದಲ ಚಿತ್ರದ ಮೂಲಕ ಪ್ರೇಕ್ಷಕರ ಮೇಲೆ ಪ್ರಭಾವ ಬೀರಬೇಕೆಂಬುದು ಮನವರಿಕೆಯಾಗಿದೆ. ಆ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಾನು ಬಯಸಿರಲಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು.

ಕತ್ರಿನಾ ಇಲ್ಲಿಯವರೆಗೆ 21 ಬಾಲಿವುಡ್‌ ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ಅಕ್ಷಯ್‌ ಕುಮಾರ್‌ ಜೊತೆ ಅತಿ ಹೆಚ್ಚು (ಆರು) ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಲಯಾಳಿ ಸೂಪರ್‌ಸ್ಟಾರ್‌ ಮಮ್ಮುಟ್ಟಿ ಅವರಿಗೆ ಜೋಡಿಯಾಗಿಯೂ ನಟಿಸಿದ್ದಾರೆ.

‘ನಾನು ಬಹಳ ಖಾಸಗಿ ವ್ಯಕ್ತಿ’ ಎಂದು ಹೇಳಿಕೊಂಡಿರುವ ಕತ್ರಿನಾ, ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ನಂತಹ ಪ್ರಮುಖ ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿಲ್ಲ. ಅವರನ್ನು ಹೋಲುವ ಬೊಂಬೆಯು ಮಾರುಕಟ್ಟೆಗೆ ಬಂದಿದೆ. ಈ ಕೀರ್ತಿಗೆ ಪಾತ್ರವಾದ ಮೊದಲ ಬಾಲಿವುಡ್‌ ನಟಿ ಕತ್ರಿನಾ. ಇಲ್ಲಿಯವರೆಗೆ 23 ವಿವಿಧ ಪ್ರಶಸ್ತಿಗಳು ಸಂದಿದ್ದು, ಸದ್ಯ ಅವರು ಚಿತ್ರವೊಂದಕ್ಕೆ ಪಡೆಯುವ ಸಂಭಾವನೆ ಐದು ಕೋಟಿ ರೂಪಾಯಿ.

2011ರಲ್ಲಿ ಅಂತರ್ಜಾಲದಲ್ಲಿ ಅತಿ ಹೆಚ್ಚು ಜನ ನೋಡಿದ ಸೆಲೆಬ್ರಿಟಿ ಎಂಬ ಖ್ಯಾತಿ ಕತ್ರಿನಾ ಅವರದು. ಹಾಲಿವುಡ್‌ ನಟರಾದ ಲಿಯೊನಾರ್ಡೊ ಡಿ ಕ್ಯಾಪ್ರಿಯೊ, ಜಾನಿ ಡೆಪ್‌, ಬಾಲಿವುಡ್‌ ನಟಿಯರಾದ ಮಾಧುರಿ ದೀಕ್ಷಿತ್‌, ಕಾಜೋಲ್‌ ಅಂದರೆ ಕತ್ರಿನಾಗೆ ಅಚ್ಚುಮೆಚ್ಚು. ಕತ್ತಲೆಂದರೆ ಭಯ. ಚೆಸ್‌ ಆಡುವುದು ಇಷ್ಟ. ಪೇಂಟಿಂಗ್‌ ಅಚ್ಚುಮೆಚ್ಚು.

‘ವೆಲ್‌ಕಂ’ ಚಿತ್ರದಲ್ಲಿ ಅವರು ತೊಟ್ಟಿದ್ದ ₨2 ಲಕ್ಷ ಬೆಲೆಬಾಳುವ ಸಂಪೂರ್ಣ ಬೆಳ್ಳಿಯಿಂದಲೇ ತಯಾರಿಸಿದ್ದ ಉಡುಪನ್ನು ಹೆಸರಾಂತ ವಸ್ತ್ರ ವಿನ್ಯಾಸಕ ಮತ್ತು ಗೆಳೆಯ ಎಮಿಲಿ ಪುಸ್ಸಿ ಅವರು ಕತ್ರಿನಾಗೆ ಉಡುಗೊರೆಯಾಗಿ ನೀಡಿದ್ದರು. ಮ್ಯೂಸ್‌, ರೇಡಿಯೊ ಹೆಡ್‌ ಮತ್ತು ಕೊಲ್ಡ್‌ಪ್ಲೇ ನೆಚ್ಚಿನ ಬ್ಯಾಂಡ್‌ಗಳು. ‘ಇಂಗ್ಲಿಷ್‌ ಆಹಾರ’ ಬಲು ಇಷ್ಟ.

ಅಂದಹಾಗೆ, ‘ಕ್ಯಾಟ್‌’ ಎಂದು ಕರೆದರೆ ಕತ್ರಿನಾಗೆ ವಿಪರೀತ ಕೋಪ ಬರುತ್ತದೆ. ‘ಯಾರಾದರೂ ನನ್ನನ್ನು ಕ್ಯಾಟ್‌ ಎಂಬ ಹೆಸರಿನಿಂದ ಕರೆದರೆ ಬಹಳ ಸಿಟ್ಟು ಬರುತ್ತದೆ. ಯಾರು ಈ ಹೆಸರನ್ನಿಟ್ಟಿದ್ದರು ಎಂಬುದು ಗೊತ್ತಿಲ್ಲ’ ಎಂದು ತಮ್ಮ ಅಡ್ಡಹೆಸರಿನ ಕುರಿತು ಪ್ರತಿಕ್ರಿಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.