ADVERTISEMENT

‘ಕನಕ’ ಚಿತ್ರದ ಹಾಡುಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ದುನಿಯಾ ವಿಜಯ್
ದುನಿಯಾ ವಿಜಯ್   

‘ಕನಕ’ ಚಿತ್ರದ ಪ್ರತಿ ದೃಶ್ಯದಲ್ಲಿಯೂ ನಿರ್ದೇಶಕರ ಶ್ರಮ ಕಾಣಿಸುತ್ತದೆ. ನನಗೆ ರಾಜಕೀಯದಲ್ಲಿ ಮನಸ್ಸಿದೆ. ನಾಯಕನಾಗುವ ಶಕ್ತಿಯೂ ಇದೆ. ಆದರೆ, ದುರಾಸೆ ಇಲ್ಲ. ಯಾರೊಂದಿಗೂ ನಾನು ವೈರತ್ವ ಬೆಳೆಸಿಕೊಂಡಿಲ್ಲ ಎಂದು ಮಾತಿಗಿಳಿದರು ನಟ ದುನಿಯಾ ವಿಜಯ್.

ಅದು ‘ಕನಕ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ. ಚಿತ್ರರಂಗದ ಹಲವು ಗಣ್ಯರು ಅಲ್ಲಿ ನೆರೆದಿದ್ದರು. ಚಿತ್ರದ ನಿರ್ದೇಶಕ ಆರ್. ಚಂದ್ರು ಅವರ ಮೊಗದಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ ಖುಷಿ ಇತ್ತು. ಚಿತ್ರದ ಹಾಡುಗಳನ್ನು ಕೇಳಿದ ಗಣ್ಯರು ಸಂತಸ ಹಂಚಿಕೊಂಡರು.

‘ಚಂದ್ರು ಹೇಳಿದಂತೆ ನಾನು ಗುರು ಅಲ್ಲ. ಕೊನೆಯ ಬೆಂಚಿನ ಪೋಲಿ ಶಿಷ್ಯ’ ಎಂದ ನಿರ್ದೇಶಕ ಯೋಗರಾಜ್‍ ಭಟ್ ಮಾತಿಗೆ ಸಭಿಕರು ಚಪ್ಪಾಳೆ ತಟ್ಟಿ ನಕ್ಕರು.

ADVERTISEMENT

‘ಚಿನ್ನವನ್ನು ಯಾವ ಕಡೆ ಹುಡುಕಿದರೂ ಕನಕ ಆಗುತ್ತದೆ. ನಿರ್ದೇಶಕರು ತಲೆ ಕೆಡಿಸಿಕೊಂಡು ಮೇಕಿಂಗ್ ಮಾಡುತ್ತಾರೆ. ವಿಜಿ ಅವರು ದುನಿಯಾ ಚಿತ್ರ ಮಾಡುವ ವೇಳೆ ಹದಿನೈದು ಲಕ್ಷ ರೂಪಾಯಿ ನೀಡಿದ್ದರಿಂದಲೇ ಚಿತ್ರ ಶುರುವಾಯಿತು‘ ಎಂದು ಭಾವುಕರಾದರು ನಿರ್ದೇಶಕ ಸೂರಿ.

‘ನಾವು ಎಷ್ಟು ಸಿನಿಮಾ ಮಾಡಿದ್ದೇವೆ. ಎಷ್ಟು ದೂರ ಹೋಗಿದ್ದೇವೆ ಎನ್ನುವುದು ಮುಖ್ಯವಲ್ಲ. ಜನರ ಮನಸ್ಸಿನಲ್ಲಿ ಎಷ್ಟು ಸಿನಿಮಾಗಳು ಅಚ್ಚೊತ್ತಿವೆ ಎಂಬುದು ಮುಖ್ಯ. ಜರಾಸಂಧ ಗಂಭೀರ ಚಿತ್ರವಾಗಿತ್ತು. ಆದರೆ, ಸೆಟ್‌ನಲ್ಲಿ ವಿಜಯ್ ಎಲ್ಲರನ್ನು ನಗಿಸುತ್ತಿದ್ದರು. ತಂಡಕ್ಕೆ ಕನಕವೃಷ್ಟಿ ಆಗಲಿ’ ಎಂದು ಶುಭ ಕೋರಿದರು ನಿರ್ದೇಶಕ ಶಶಾಂಕ್.

‘ನಿರ್ದೇಶಕನಾದವನು ಖುದ್ದಾಗಿ ದುಡ್ಡು ಹಾಕಿ ಚಿತ್ರ ನಿರ್ಮಾಣ ಮಾಡುವುದು ಸುಲಭವಲ್ಲ. ಅವರ ಮೇಲೆ ಅವರಿಗೆ ನಂಬಿಕೆ ಇದೆ. ಹಾಗಾಗಿ, ಮೂರು ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಉತ್ತಮ ಹಿನ್ನೆಲೆ ಸಂಗೀತ ಒದಗಿಸಿದ್ದೇನೆ’ ಎಂದರು ಸಂಗೀತ ನಿರ್ದೇಶಕ ಗುರುಕಿರಣ್.

ಮಾನ್ವಿತಾ ಹರೀಶ್ ಮತ್ತು ಹರಿಪ್ರಿಯಾ ನಾಯಕಿಯರು. ರೂಪಿಕಾ ಈ ಚಿತ್ರದಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನವೀನ್‍ ಸಜ್ಜು ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸತ್ಯ ಹೆಗಡೆ ಅವರದ್ದು. ಸಾಧುಕೋಕಿಲ, ರಂಗಾಯಣ ರಘು, ರವಿಶಂಕರ್, ಶ್ರೀನಿವಾಸಮೂರ್ತಿ, ಅಚ್ಯುತರಾವ್, ಸುಧಾ, ಪದ್ಮಜಾ ರಾವ್, ಸುಧಾ ಬೆಳವಾಡಿ, ಯುಗ ಚಂದ್ರು ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.