ADVERTISEMENT

ಕನ್ನಡಿಗರು ಅಭಿಮಾನ ಶೂನ್ಯರು: ನಿರ್ದೇಶಕ ರಾಮ್‌ಗೋಪಾಲ್‌ ವರ್ಮ ಟ್ವೀಟ್

​ಪ್ರಜಾವಾಣಿ ವಾರ್ತೆ
Published 19 ಮೇ 2017, 20:15 IST
Last Updated 19 ಮೇ 2017, 20:15 IST
ಕನ್ನಡಿಗರು ಅಭಿಮಾನ ಶೂನ್ಯರು: ನಿರ್ದೇಶಕ ರಾಮ್‌ಗೋಪಾಲ್‌ ವರ್ಮ ಟ್ವೀಟ್
ಕನ್ನಡಿಗರು ಅಭಿಮಾನ ಶೂನ್ಯರು: ನಿರ್ದೇಶಕ ರಾಮ್‌ಗೋಪಾಲ್‌ ವರ್ಮ ಟ್ವೀಟ್   

ಬೆಂಗಳೂರು: ‘ಕನ್ನಡಿಗರು ಅಭಿಮಾನಶೂನ್ಯರು’ ಎಂದು ನಿರ್ದೇಶಕ ರಾಮ್‌ಗೋಪಾಲ್‌ ವರ್ಮ ಮಾಡಿರುವ ಟ್ವೀಟ್‌ಗೆ ಕನ್ನಡಪರ ಸಂಘಟನೆಗಳು, ಚಿತ್ರರಂಗ ಮತ್ತು ಸಾಮಾಜಿಕ ಜಾಲತಾಣಗಳಲ್ಲಿಯೂ ವಿರೋಧ ವ್ಯಕ್ತವಾಗಿದೆ.

ಗುರುವಾರ ರಾತ್ರಿ ತಮ್ಮ ಟ್ವಿಟರ್‌ ಖಾತೆಯಲ್ಲಿ ವರ್ಮ, ‘ಬಾಹುಬಲಿ 2’ ಸಿನಿಮಾದ ಯಶಸ್ಸಿಗೆ ಸಂಬಂಧಿಸಿದಂತೆ ಕನ್ನಡಿಗರನ್ನು ಹಳಿದು ಮೂರು ಟ್ವೀಟ್‌ ಪೋಸ್ಟ್‌ ಮಾಡಿದ್ದರು.

‘ಬಾಹುಬಲಿ 2’ ಸಿನಿಮಾ ಕರ್ನಾಟಕದಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಕನ್ನಡದ ಯಾವುದೇ ದೊಡ್ಡ ಸಿನಿಮಾಗಿಂತ ಎಷ್ಟೋ ಪಟ್ಟು ಹೆಚ್ಚು ‘ಬಾಹುಬಲಿ 2’ ಯಶಸ್ವಿಯಾಗಿರುವುದು ಕನ್ನಡಿಗರು ಅಭಿಮಾನಶೂನ್ಯರು ಎಂಬುದನ್ನು ಸಾಬೀತುಗೊಳಿಸಿದೆ’ ಎಂದು ಅವರು ಬರೆದಿದ್ದರು.

ADVERTISEMENT

ಈ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿರುವ  ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್‌. ರಮೇಶ್‌, ‘ರಾಮ್‌ ಗೋಪಾಲ್‌ ವರ್ಮ ಒಬ್ಬ ಹುಚ್ಚ. ಮಾರುಕಟ್ಟೆಯಲ್ಲಿ ತಮ್ಮ ಸಿನಿಮಾ ಯಶಸ್ವಿಯಾಗುತ್ತಿಲ್ಲ ಎಂಬ ಸಂಕಟಕ್ಕೆ ಬಾಯಿಗೆ ಬಂದದ್ದೆಲ್ಲವನ್ನೂ ಮಾತನಾಡುತ್ತಿದ್ದಾರೆ’ ಎಂದಿದ್ದಾರೆ.

‘ಒಲಿಂಪಿಕ್‌ ಪದಕ ಗೆದ್ದಾಗಲೂ ಅಪಸ್ವರ ತೆಗೆದಿದ್ದ ಅವರ ಬಗ್ಗೆ ನನ್ನಲ್ಲಿ ಯಾವ ಗೌರವವೂ ಉಳಿದಿಲ್ಲ. ಯಾವುದೋ ಸಿನಿಮಾ ನಿರ್ದೇಶಕನ ಬಗ್ಗೆ, ಇನ್ಯಾವುದೋ ಸಿನಿಮಾ ಬಗ್ಗೆ ಮಾತನಾಡುವ ಅವರು ಯಾವ ಬಗೆಯ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದನ್ನು ನೋಡಿಕೊಳ್ಳಲಿ’ ಎಂದು ಹೇಳಿದ್ದಾರೆ.

‘ಇತ್ತೀಚೆಗೆ ಅವರ ನಿರ್ದೇಶನದ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಯಿತು. ಅದನ್ನು ಕನ್ನಡದ ಜನ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಹಾಗಿರುವಾಗ ಕನ್ನಡದ ಜನ ಅಭಿಮಾನ ಇರುವವರೇ ಅಭಿಮಾನಶೂನ್ಯರೇ ಎಂದು ನಿರ್ಧರಿಸಲು ಅವರಿಗೆ ಯಾವ ಹಕ್ಕೂ ಇಲ್ಲ. ಅವರ ಸಿನಿಮಾಗಳ ಗತಿ ಏನಾಗುತ್ತಿದೆ ಎನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಲಿ’ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಉಮೇಶ್‌ ಬಣಕಾರ.

‘ಡಬ್ಬಿಂಗ್‌ ಹೋರಾಟ ಛಿದ್ರವಾಗಿದೆ’ ಎಂಬ ಮಾತಿಗೂ ಪ್ರತಿಕ್ರಿಯಿಸುವ ಉಮೇಶ್‌, ‘ಕರ್ನಾಟಕದಲ್ಲಿ ಡಬ್ಬಿಂಗ್‌ ಸಿನಿಮಾ ಬಿಡುಗಡೆಯಾದಾಗ ಕೆಲವು ಕಡೆ ಪ್ರತಿಭಟನೆ ನಡೆದವು. ಆದರೆ ಪ್ರತಿಭಟನೆ ನಡೆಯದ ಸ್ಥಳಗಳಲ್ಲಿಯೂ ಪ್ರೇಕ್ಷಕರು ಬರದೇ ಪ್ರದರ್ಶನ ರದ್ದುಗೊಳಿಸಬೇಕಾಯ್ತು. ಆದ್ದರಿಂದ ಡಬ್ಬಿಂಗ್‌ ಹೋರಾಟದ ಬಗ್ಗೆ ವರ್ಮಾ ತಿಳಿದುಕೊಂಡಿರುವುದು ಸಂಪೂರ್ಣ ತಪ್ಪು’ ಎನ್ನುವ ಅವರು, ‘ಕನ್ನಡಿಗರಿಗೆ ಯಾವ ಸಿನಿಮಾ ಗೆಲ್ಲಿಸಬೇಕು ಎನ್ನುವುದು ಚೆನ್ನಾಗಿ ತಿಳಿದಿದೆ’ ಎನ್ನುತ್ತಾರೆ.

‘ವರ್ಮ ಟ್ವೀಟ್‌ ಬಾಲಿಶ ಅಷ್ಟೆ’ ಎನ್ನುವ ನಟ ನೀನಾಸಂ ಸತೀಶ್‌, ‘ಟೈಟಾನಿಕ್‌, ಜುರಾಸಿಕ್‌ ಪಾರ್ಕ್, ಅವತಾರ್‌ಗಳಂಥ ಅನೇಕ ಹಾಲಿವುಡ್‌ ಸಿನಿಮಾಗಳನ್ನು ಭಾರತದ ಜನ ನೋಡಿ ಗೆಲ್ಲಿಸಿದ್ದಾರೆ. ಹಾಗಾದರೆ ಭಾರತೀಯರೆಲ್ಲ ಅಭಿಮಾನಶೂನ್ಯರು ಎನ್ನಲಾದೀತೆ?’ ಎಂದು ಪ್ರಶ್ನಿಸುತ್ತಾರೆ.

‘ಬೇರೆ ಭಾಷೆಯ ಒಳ್ಳೆಯ ಸಿನಿಮಾವನ್ನೂ ನೋಡುತ್ತಾರೆ ಎಂದರೆ ಅದು ಕನ್ನಡಿಗರ ಶ್ರೇಷ್ಠತೆಯನ್ನು ತೋರಿಸುತ್ತದೆಯೇ ಹೊರತು ಅಭಿಮಾನಶೂನ್ಯತೆಅಲ್ಲ. ಕನ್ನಡಿಗರು ತಮ್ಮ ಭಾಷೆಯ ಸಿನಿಮಾ ನೋಡುವುದಿಲ್ಲ ಎಂದಾದರೆ ಇತ್ತೀಚೆಗೆ ಬಿಡುಗಡೆಯಾದ ‘ರಾಜಕುಮಾರ’ ದೊಡ್ಡ ಗೆಲುವು ಪಡೆಯುವುದು ಸಾಧ್ಯವಾಗುತ್ತಿತ್ತೆ?. ವರ್ಮ, ತಮ್ಮ ಸಿನಿಮಾಗಳನ್ನು ಗೆಲ್ಲಿಸಿಕೊಳ್ಳುವುದು ಹೇಗೆ ಎಂಬುದನ್ನು ನೋಡಿಕೊಳ್ಳಲಿ. ಆಮೇಲೆ ಕನ್ನಡಿಗರ ಅಭಿಮಾನ ಅಳತೆ ಮಾಡಲಿ’ ಎನ್ನುತ್ತಾರೆ ಸತೀಶ್‌.

ಟ್ವಿಟರ್‌, ಫೇಸ್‌ಬುಕ್‌ಗಳಲ್ಲಿಯೂ ವರ್ಮ ಅವರ ಹೇಳಿಕೆಯ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ವರ್ಮ ಟ್ವೀಟ್‌ಗಳು
‘ತಮ್ಮದೇ ಭಾಷೆಯ ಸಿನಿಮಾಗಳನ್ನು ಬಿಟ್ಟು, ತೆಲುಗು ಭಾಷೆಯ ಸಿನಿಮಾವೊಂದನ್ನು ಹಲವು ಸಲ ನೋಡುತ್ತಿರುವುದಕ್ಕೆ ‘ಹೆಮ್ಮೆಯ ಕನ್ನಡಿಗರು’ ಉಳಿದ ಕನ್ನಡಿಗರ ವಿರುದ್ಧ ಪ್ರತಿಭಟನೆ ಮಾಡಬೇಕು’

‘ಕನ್ನಡಿಗರಿಗೆ ಭಾಷಾಭಿಮಾನ ಮುಖ್ಯವಲ್ಲ, ಅವರಿಗೆ ಒಳ್ಳೆಯ ಸಿನಿಮಾ ಬೇಕು ಎನ್ನುವುದನ್ನು ತೆಲುಗಿನ ಈ ಸಿನಿಮಾ ಸಾಬೀತುಗೊಳಿಸಿದೆ. ಇದರಿಂದ ಡಬ್ಬಿಂಗ್‌ ವಿರುದ್ಧದ ಕನ್ನಡಿಗರ ಹೋರಾಟ ಛಿದ್ರಗೊಂಡಿದೆ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.