ADVERTISEMENT

ಕೋಲಾರದಿಂದ ‘ಕೊಳ್ಳೇಗಾಲ’ಕ್ಕೆ...

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2015, 19:52 IST
Last Updated 27 ಆಗಸ್ಟ್ 2015, 19:52 IST

‘ಕೊಳ್ಳೇಗಾಲ’ ಮಾಟ–ಮಂತ್ರ–ವಾಮಾಚಾರಗಳಿಗೆ ಪ್ರಸಿದ್ಧಿಯಾದ ಊರು. ವೆಂಕಟೇಶ್ ದೀಕ್ಷಿತ್ ನಿರ್ದೇಶನದ ‘ಕೊಳ್ಳೇಗಾಲ’ ಸಿನಿಮಾದಲ್ಲಿ ಈ ವಿಷಯಗಳನ್ನು ಕಾಣಬಹುದಂತೆ. ಇತ್ತೀಚೆಗೆ ನಡೆದ ಚಿತ್ರದ ಗೀತೆಗಳ ಧ್ವನಿಮುದ್ರಿಕೆ ಬಿಡುಗಡೆ ಸಂದರ್ಭದಲ್ಲೂ ‘ಕೊಳ್ಳೇಗಾಲ’ದ ಮಾಟ–ಮಂತ್ರ–ವಾಮಾಚಾರದ ಮಾತುಗಳು ವೇದಿಕೆಯಲ್ಲಿದ್ದವರಿಂದ ಬಂದು ಹೋದವು.

ಅದು ಕೋಲಾರ ಎನ್ನುವ ಒಂದು ಹಳ್ಳಿ. ಅಲ್ಲೊಬ್ಬ ಊರಿನ ಮುಖಂಡ. ತನ್ನ ಸ್ವಾರ್ಥ ಸಾಧನೆಗಾಗಿ ಕೊಳ್ಳೇಗಾಲದಲ್ಲಿನ ಕೆಲವು ವಾಮಾಚಾರಿಗಳ ನೆರವು ಪಡೆಯುತ್ತಾನೆ. ಇದು ಆ ಹಳ್ಳಿಯಲ್ಲಿರುವ ಹುಡುಗರ (ನಾಯಕರ) ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಮತ್ತು ಇದರಿಂದ ಹೊರ ಬರಲು ಅವರು ನಡೆಸುವ ಪ್ರಯತ್ನವೇನು ಎನ್ನುವುದು ‘ಕೊಳ್ಳೇಗಾಲ’ ಸಿನಿಮಾದ ಕಥೆ.

‘ಚಿತ್ರದಲ್ಲಿ ಕೊನೆಯ ಹದಿನೈದು ನಿಮಿಷಗಳಲ್ಲಿ ಮಾಟ–ಮಂತ್ರದ ವಿಷಯಗಳು ಬರಲಿವೆ. ಆದರೆ ಇಡೀ ಚಿತ್ರ ಮಾಟ–ಮಂತ್ರದ ಮೇಲೆಯೇ ಇರುವುದಿಲ್ಲ. ಹಾಗೆ ಇದ್ದಿದ್ದರೆ ಸಿನಿಮಾ ಬೋರ್ ಆಗುತ್ತಿತ್ತು. ಪೂರ್ಣವಾಗಿ ಕೋಲಾರ ಭಾಗದ ಕನ್ನಡ ಸಿನಿಮಾದಲ್ಲಿ ಬಳಕೆಯಾಗಿದೆ’ ಎನ್ನುತ್ತಾರೆ ನಿರ್ದೇಶಕ ಮತ್ತು ನಾಯಕ ವೆಂಕಟೇಶ್ ದೀಕ್ಷಿತ್.

‘ಪೊಲೀಸ್ ಸ್ಟೋರಿ–2’, ‘ಜಂಬದ ಹುಡುಗಿ’ ಸೇರಿದಂತೆ ಕನ್ನಡ ಮತ್ತು ತಮಿಳಿನ ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ವೆಂಕಟೇಶ್ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದವರು. ‘ಕೊಳ್ಳೇಗಾಲ’ ಅವರ ಮೊದಲ ನಿರ್ದೇಶನದ ಪ್ರಯತ್ನ. ವೆಂಕಟೇಶ್ ಜತೆ  ಕಿರಣ್ ಗೌಡ ಮತ್ತು ಧರ್ಮತೇಜ ಮುಖ್ಯಭೂಮಿಯಲ್ಲಿರುವ ನಾಯಕರು.

ಆಡಿಯೊ ಬಿಡುಗಡೆ ಮಾಡಿದ ಶಾಸಕ ಆರ್. ಅಶೋಕ್, ‘ಟೈಟಲ್ ನೋಡಿದರೆ ಚಿತ್ರ ಯಶಸ್ವಿಯಾಗುತ್ತದೆ ಎನ್ನುವ ಭಾವ ಉಂಟಾಗುತ್ತದೆ ಎಂದರು. ಹಳ್ಳಿಯಿಂದ ನಗರಕ್ಕೆ ಓದಲು ಬರಲು ಹುಡುಗಿಯ ಪಾತ್ರ ನಾಯಕಿ ದೀಪಾ ಗೌಡ ಅವರದ್ದು. ಎ.ಟಿ. ರವೀಶ್ ಸಂಗೀತ ನೀಡಿದ್ದು ನಾಲ್ಕು ಹಾಡುಗಳು ಮತ್ತು ಒಂದು ಬಿಟ್ ‘ಕೊಳ್ಳೇಗಾಲ’ದಲ್ಲಿದೆ.

ಕೋಲಾರ, ಟೇಕಲ್, ಕನಕಪುರ, ಕೊಳ್ಳೇಗಾಲ ಮತ್ತಿತರ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಲಹರಿ ಆಡಿಯೊ ಸಂಸ್ಥೆಯ ವೇಲು, ನಿರ್ಮಾಪಕರಾದ ರಘುರಾಜ್, ಎಂ. ನಾಗರಾಜ್, ಆಂಜನಪ್ಪ, ‘ಕೊಳ್ಳೇಗಾಲ’ದಲ್ಲಿ ಮುಖ್ಯ ಖಳನಾಯಕನ ಪಾತ್ರದಲ್ಲಿರುವ ಶ್ರೀನಿವಾಸ್, ವಾಮಾಚಾರಿಯ ರೋಲಿನಲ್ಲಿರುವ ಕರಿಸುಬ್ಬು ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.