ADVERTISEMENT

ಕ್ಲಾಸು–ಮಾಸು ಮತ್ತು ಮಾಧುರ್ಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

‘ಮಾಸ್‌ಗೆ ಮಾದ; ಕ್ಲಾಸ್‌ಗೆ ಮಾನಸಿ’ ಎಂದ ನಿರ್ದೇಶಕ ಸತೀಶ್ ಪ್ರಧಾನ್ ಅವರಲ್ಲಿ, ಎರಡೂ ವರ್ಗದ ಪ್ರೇಕ್ಷಕರನ್ನು ತಮ್ಮ ಸಿನಿಮಾ ಸೆಳೆಯಲಿದೆ ಎಂಬ ವಿಶ್ವಾಸವಿದೆ. ಪ್ರೇಮಕಥೆಯ ಸಿನಿಮಾಗಳೇ ತುಂಬಿ ತುಳುಕುತ್ತಿರುವ ಗಾಂಧಿನಗರಕ್ಕೆ ಅವರ ‘ಮಾದ ಮತ್ತು ಮಾನಸಿ’ ಚಿತ್ರ ಮತ್ತೊಂದು ಸೇರ್ಪಡೆ.

ಸಂಗೀತ ನಿರ್ದೇಶಕ ಮನೋ ಮೂರ್ತಿ ನಿರ್ಮಾಣ ಮಾಡುತ್ತಿರುವ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆಯಿತು. ಬಳಿಕ ಸುದ್ದಿಮಿತ್ರರ ಜತೆ ಮಾತಿಗೆ ಬಂದು ಕುಳಿತ ಚಿತ್ರತಂಡದಲ್ಲಿ ಅತೀವ ಉತ್ಸಾಹ ಕಾಣುತ್ತಿತ್ತು.

ಈ ಸಿನಿಮಾ ನಿರ್ಮಾಣ ತಮ್ಮ ನಾಲ್ಕೈದು ತಿಂಗಳ ಹಿಂದಿನ ಕನಸು ಎಂದು ತೆರೆದಿಟ್ಟರು ಮನೋ ಮೂರ್ತಿ. ಅವರು ಈ ಮೊದಲು ಸತೀಶ್ ಪ್ರಧಾನ್ ಅವರ ‘ಅಭಿನೇತ್ರಿ’ ಚಿತ್ರವನ್ನು ನೋಡಿದ್ದರಂತೆ. ‘ಈ ಹಿಂದೆ ಪ್ರೀತಿ ಪ್ರೇಮ ಪ್ರಣಯ ಸಿನಿಮಾ ಮಾಡಿದ್ದೆ. ಅದಾದ ಬಳಿಕ ಒಳ್ಳೆಯ ಕಥಾವಸ್ತು ಇರುವ ಮತ್ತೊಂದು ಚಿತ್ರ ನಿರ್ಮಾಣದ ಆಸೆಯಿತ್ತು. ಸತೀಶ್ ನನ್ನನ್ನು ಭೇಟಿಯಾಗಿ ಕಥೆ ಹೇಳಿದಾಗ, ಅರ್ಥವೇ ಆಗಲಿಲ್ಲ. ಮತ್ತೊಮ್ಮೆ ಬಂದು ವಿವರಿಸಿದಾಗ ಅದರಲ್ಲಿನ ವಿಶೇಷತೆ ಅರ್ಥವಾಯಿತು. ಸಿನಿಮಾ ನಿರ್ಮಾಣದ ಹಿಂದಿರುವ ಕಥೆ ಇದು’ ಎಂದು ಮನೋ ಮೂರ್ತಿ ವಿವರ ನೀಡಿದರು. ‘ಇದು ಮ್ಯೂಸಿಕಲ್ ಸಿನಿಮಾ ಆಗಿರುತ್ತದೆಯೇ’ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಇಲ್ಲ. ಸಿನಿಮಾಕ್ಕೆ ಪೂರಕವಾಗಿ ಹಾಡುಗಳು ಇರುತ್ತವೆ ಅಷ್ಟೇ’ ಎಂಬ ಉತ್ತರ ಬಂತು!

‘ಒಂದು ನವಿರಾದ ಪ್ರೇಮಕಥೆ ಇದು. ಮಧ್ಯೆ ದಿಢೀರಾಗಿ ಒಂದು ತಿರುವು ಪಡೆಯುತ್ತದೆ. ಅದರಿಂದ ಮಾದ ಹಾಗೂ ಮಾನಸಿ ಎಂಬ ಎರಡು ಪಾತ್ರಗಳ ಬದುಕು ಏನಾಗುತ್ತದೆ ಎಂಬುದು ಸಿನಿಮಾದ ತಿರುಳು’ ಎಂದು ಸತೀಶ್ ಹೇಳಿದರು. ಮನೋ ಮೂರ್ತಿ ಅವರು ತಮಗೆ ಕಥೆಯನ್ನು ವಿವರಿಸಿದಾಗ ಇಷ್ಟವಾಗಿ ಮರುಕ್ಷಣವೇ ಒಪ್ಪಿಕೊಂಡ ಪ್ರಜ್ವಲ್‌ಗೆ, ಈ ಸಿನಿಮಾದ ಮೂಲಕ ತಮ್ಮ ‘ಲುಕ್’ ಬದಲಾಗಬಹುದು ಎಂಬ ಭರವಸೆಯಿದೆ. ‘ರಾಟೆ’ ಬಳಿಕ ಸ್ವಲ್ಪ ದಿನ ಖಾಲಿಯಿದ್ದ ತಮಗೆ ಒಳ್ಳೆಯ ಬ್ಯಾನರ್‌ನಲ್ಲಿ ಅವಕಾಶ ಸಿಕ್ಕಿದೆ ಎಂದು ನಾಯಕಿ ಶ್ರುತಿ ಹರಿಹರನ್ ಖುಷಿಪಟ್ಟರು. ಛಾಯಾಗ್ರಾಹಕ ಕೆ.ಎಸ್. ಚಂದ್ರಶೇಖರ ಮಾತನಾಡಿದರು.

ಮಾದ ಹಾಗೂ ಮಾನಸಿಯನ್ನು ಪರಿಚಯಿಸುವ ಹಾಡೊಂದನ್ನು ಚಿತ್ರೀಕರಿಸಿ, ಮುಹೂರ್ತದ ದಿನವೇ ಬಿಡುಗಡೆ ಮಾಡಲಾಯಿತು. ಮೊದಲ ಹಂತದಲ್ಲಿ ಬೆಂಗಳೂರು ಹಾಗೂ ಮಡಿಕೇರಿಯಲ್ಲಿ ಶೂಟಿಂಗ್‌ ನಡೆಸಲಾಗುವುದು. ಬಳಿಕ ಹಾಡುಗಳ ಚಿತ್ರೀಕರಣಕ್ಕೆ ಬೇರೆಡೆ ತೆರಳುವ ಉದ್ದೇಶವಿದೆ ಎಂದು ನಿರ್ದೇಶಕರು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.