ADVERTISEMENT

ಗೂಳಿಹಟ್ಟಿ ಗಾನಬಜಾನ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 19:30 IST
Last Updated 29 ಅಕ್ಟೋಬರ್ 2014, 19:30 IST

ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿ, ನಂತರದ ಕೆಲಸಗಳು ಆರಂಭವಾದ ಉತ್ಸಾಹದಲ್ಲಿತ್ತು ‘ಗೂಳಿಹಟ್ಟಿ’ ಚಿತ್ರತಂಡ. ಅದೇ ಸಂಭ್ರಮದಲ್ಲಿ ಎರಡು ಹಾಡುಗಳನ್ನು ಪ್ರದರ್ಶಿಸಿತು. ಆದರೆ ಆ ಹಾಡುಗಳು ಸೆನ್ಸಾರ್ ಆಗಿವೆಯೋ ಇಲ್ಲವೋ ಎಂಬ ಸುದ್ದಿಮಿತ್ರರ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಲಿಲ್ಲ!

ಐವರು ನಾಯಕರು, ಇಬ್ಬರು ನಾಯಕಿಯರು, ನಿರ್ಮಾಪಕ, ನಿರ್ದೇಶಕ ಸೇರಿದಂತೆ ಚಿತ್ರತಂಡದ ಸದಸ್ಯರಿಂದಾಗಿ ವೇದಿಕೆ ಭರ್ತಿಯಗಿತ್ತು. ಅವರೆಲ್ಲರ ಮಧ್ಯೆ ಋಷಿಕುಮಾರ ಸ್ವಾಮೀಜಿ ಕುಳಿತಿದ್ದರು. ಸಿನಿಮಾದಲ್ಲೊಂದು ಪಾತ್ರವನ್ನು ಅವರಿಗಾಗಿ ಕೊಟ್ಟಿದ್ದಾರೆ ನಿರ್ದೇಶಕ ಶಶಾಂಕ್ ರಾಜ್. ಅದರಲ್ಲೂ ಅವರು ಜೀನ್ಸ್ ಇತ್ಯಾದಿ ಒಂಬತ್ತು ಬಗೆಯ ಪೋಷಾಕು ಧರಿಸಿ ಹಾಡಿಗೆ ಹೆಜ್ಜೆ ಹಾಕಿದ್ದನ್ನು ನಾಯಕ ಪವನ್‌ಸೂರ್ಯ ಮತ್ತೆ ಮತ್ತೆ ಬಣ್ಣಿಸಿದರು.

‘ತಡ ಆದರೂ ಚಿಂತೆಯಿಲ್ಲ. ನಾವು ಅಂದುಕೊಂಡಂತೆ ಎಲ್ಲವೂ ಬಂದಿದೆ’ ಎಂಬ ಸಂತಸ ನಿರ್ಮಾಪಕ ಕಿರಣ್ ಭಾರ್ಗವ್ ಅವರದಾಗಿತ್ತು. ಸಿನಿಮಾದ ಬಗ್ಗೆ ಹೆಚ್ಚೆಚ್ಚು ಜನರಿಗೆ ಮಾಹಿತಿ ಕೊಡುತ್ತಿರುವ ಮಾಧ್ಯಮಗಳಿಗೆ ಥ್ಯಾಂಕ್ಸ್ ಹೇಳಿದ ನಿರ್ದೇಶಕ ಶಶಾಂಕ್‌ರಾಜ್, ತಮ್ಮ ಚಿತ್ರಕ್ಕೆ ಸಿಕ್ಕ ಪ್ರಚಾರ ಕಂಡು ಬೇರೆ ನಿರ್ದೇಶಕ– ನಿರ್ಮಾಪಕರಿಗೆ ದಂಗುಬಡಿದಂತಾಗಿದೆ ಎಂದು ಹೇಳಿದರು.

‘ಇವತ್ತಿನ ಯುವಪೀಳಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಸಂಗೀತ ಸಂಯೋಜಿಸಿದ್ದೇನೆ. ಏಳೂ ಹಾಡುಗಳು ಮಧುರವಾಗಿವೆ’ ಎಂದು ಸಂಗೀತ ನಿರ್ದೇಶಕ ಶ್ರೀಮಂಜು ಹೇಳಿದರು. ಮುಂದಿನ ತಿಂಗಳು ಆಡಿಯೋ ಸೀಡಿ ಬಿಡುಗಡೆ, ಅದಾದ ಬಳಿಕ ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಮಾಹಿತಿ ಕೊಟ್ಟರು. ಹನ್ನೆರಡು ವರ್ಷಗಳ ಹಿಂದಿನಿಂದಲೂ ಪರಿಚಯವಿರುವ ಶಶಾಂಕ್‌ ರಾಜ್ ಮನವಿ ಮೇರೆಗೆ ನಟಿಸಿದ್ದಾಗಿ ಋಷಿಕುಮಾರ ಸ್ವಾಮೀಜಿ ಹೇಳಿಕೊಂಡರು.

‘ನಾನು ಅಭಿನಯಿಸಿಲ್ಲ. ನೀವೆಲ್ಲ ಸೇರಿ ನನ್ನಿಂದ ಅಭಿನಯ ಹೊರತೆಗೆದಿದ್ದೀರಿ’ ಎಂದು ತಮ್ಮ ನಟನೆಯ ಕ್ರೆಡಿಟ್ ಅನ್ನು ಚಿತ್ರತಂಡಕ್ಕೆ ಸಲ್ಲಿಸಿದರು. ನಿರ್ದೇಶಕರ ಕಲ್ಪನೆಯನ್ನು ಸಾಧ್ಯವಾದಷ್ಟರ ಮಟ್ಟಿಗೆ ಚೆನ್ನಾಗಿ ಸೆರೆಹಿಡಿದಿದ್ದಾಗಿ ಛಾಯಗ್ರಾಹಕ ನಾಗೇಶ್ವರರಾವ್ ತಿಳಿಸಿದರು. ನಾಯಕರಾದ ಮಹೇಶ, ಅಪ್ಪು ಸೂರ್ಯ, ರಾಘವ, ನಾಯಕಿಯರಾದ ತೇಜಸ್ವಿನಿ, ಮಮತಾ ರಾವುತ್ ಚಿತ್ರೀಕರಣದ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.